ಸಿದ್ದರಾಮಯ್ಯ, ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅವರನ್ನು ಸ್ವತಃ ಗಿಲ್ಲಿ ನಟ ಹೋಗಿ ಭೇಟಿ ಮಾಡಿದ್ದಾರೆ. ಆದರೆ, 'ಗೃಹಮಂತ್ರಿ ಜಿ ಪರಮೇಶ್ವರ್ ಹಾಗೂ ಬಿಗ್ ಬಾಸ್ ವಿಜೇತ ನಟ ಗಿಲ್ಲಿ ಭೇಟಿ ಬಗ್ಗೆ ಸೋಷಿಯಲ್ ಮೀಡಿಯಾ ವಾರ್ ಶುರುವಾಗಿದೆ. ಈ ಹೊಸ ವಿವಾದಕ್ಕೆ ಏನು ಕಾರಣ? ಏನಾಯ್ತು ನೋಡಿ..
ಗಿಲ್ಲಿ ನಟ-ಜಿ ಪರಮಶ್ವರ್ ಭೇಟಿ- ಹೊಸ ವಿವಾದ ಶುರು
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ (BBK 12) ಗಿಲ್ಲಿ ನಟ ನಟರಾಜ್ (Gilli Nata Nataraj) ಎಂಬುದು ಈಗ ಜಗತ್ತಿಗೇ ಗೊತ್ತಿರುವ ಸಂಗತಿ. ಗಿಲ್ಲಿ ನಟ ಇಲ್ಲಿಯವರೆಗೂ ಯಾರೂ ಪಡೆಯದ ದಾಖಲೆಯ ವೋಟ್ ಪಡೆದು ಬಿಗ್ ಬಾಸ್ ಕನ್ನಡ 12ರ ಟ್ರೋಫಿ ಎತ್ತಿಹಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವರಾಜ್‌ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಬಹಳಷ್ಟು ಕಡೆಯಿಂದ ಗಿಲ್ಲಿ ನಟನಿಗೆ ಆಶೀರ್ವಾದವೂ ಸಿಕ್ಕಿದೆ. ಹಲವರು ಈಗ ಗಿಲ್ಲಿಯನ್ನು ನೋಡಲು ಮುಗಿಬಿದ್ದಿದ್ದಾರೆ.
ಗಿಲ್ಲಿ ಗೆದ್ದಿರೋದಕ್ಕೆ ಇಡೀ ಮಂಡ್ಯ ಜಿಲ್ಲೆಯ ಸಂಭ್ರಮಿಸುತ್ತಿದೆ. ತಮ್ಮ ಜಿಲ್ಲೆಯ ಹುಡುಗ ಬಿಗ್ ಬಾಸ್ ಕಪ್ ಗೆದ್ದು, ಬರೋಬ್ಬರಿ 50 ಲಕ್ಷ ಪಡೆದು ಜೊತೆಗೆ ಇನ್ನೊಂದಿಷ್ಟು ಮತ್ತೊಂದಿಷ್ಟು ಹಣ ಪಡೆದು, ಕಾರು ಕೂಡ ಕಾಣಿಕೆಯಾಗಿ ಪಡೆದು ಊರಿಗೆ ಹೆಮ್ಮೆ ತಂದಿದ್ದಾರೆ ಎಂದು ಮಂಡ್ಯ ಜಿಲ್ಲೆ ಹಾಗೂ ಗಿಲ್ಲಿಯ ಹುಟ್ಟೂರು ಸಂತಸ ವ್ಯಕ್ತಪಡಿಸುತ್ತಿದೆ. ಗಿಲ್ಲಿಯ ಹುಟ್ಟೂರಲ್ಲಂತೂ ಈ ಗೆಲುವಿನ ಸಂಭ್ರಮ-ಸಂತೋಷ ಮುಗಿಲು ಮುಟ್ಟಿದೆ.
ಆದರೆ, ಬಿಗ್ ಬಾಸ್‌ನಲ್ಲಿ ಪ್ರತಿಸ್ಪರ್ಧಿಯಾಗಿದ್ದ ಅಶ್ವಿನಿ ಗೌಡ, ಧ್ರುವಂತ್ ಸೇರಿದಂತೆ ಹಲವರು ಗಿಲ್ಲಿಯ ಗೆಲುವಿಗೆ ಖುಷಿಯಾಗಿದ್ದರೂ ಬೇರೆ ಕೆಲವು ಸಂಗತಿಗಳನ್ನು ಇಟ್ಟುಕೊಂಡು ಗಮನ ಸೆಳೆದಿದ್ದಾರೆ, ಈಗ ಈ ಸಾಲಿಗೆ 'ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ' ಸಹ ಸೇರಿಕೊಂಡಿದೆ. ಹೌದು, ಗಿಲ್ಲಿಯ ಗೆಲುವಿನ ಸಂಗತಿಗಿಂತ ಹೆಚ್ಚಾಗಿ ಯೋಚಿಸಬೇಕಾದ ಸಂಗತಿಗಳು ಬೇಕಾದಷ್ಟಿವೆ ಎಂದು ಅಭಿಪ್ರಾಯ ಪಟ್ಟು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪೋಸ್ಟ್ ಮಾಡಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪೋಸ್ಟ್
ಹೌದು, ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, 'ಗಿಲ್ಲಿಯ ಬಗ್ಗೆ ನಮಗೆ ಯಾವುದೇ ಬೇಜಾರಿಲ್ಲ, ಯುವಕ ಬೆಳೆಯಲಿ, ಆದರೆ ನಮ್ಮ ರಾಜ್ಯದಲ್ಲಿ ರೈತರು, ಕಾರ್ಮಿಕರು, ಆಟೋ ಚಾಲಕರು ಹೀಗೆ ಹಲವಾರು ಜನ ನ್ಯಾಯ ಸಿಗದೇ ಒದ್ದಾಡುತ್ತಿದ್ದಾರೆ ಅವರಿಗೆ ಬಿಡುವು ಮಾಡಿಕೊಂಡು ಅವರ ಕಷ್ಟ ಕೇಳಲಾಗದ ಗೃಹ ಸಚಿವರು (G Parameshwar) ಬಿಗ್ ಬಾಸ್ ಮನೆಯಲ್ಲಿ ಗೆದ್ದು ಬಂದ ಗಿಲ್ಲಿಗೆ ಸಮಯ ಕೊಡುತ್ತಾರೆಂದರೆ ನಮ್ಮ ರಾಜಕೀಯ ವ್ಯವಸ್ಥೆ ಎಲ್ಲಿಗೆ ಬಂದಿದೆ..' ಎಂಬ ಪ್ರಶ್ನೆ ಕೇಳಿದೆ.

ಸೋಷಿಯಲ್ ಮೀಡಿಯಾ ಪ್ರಶ್ನೆ!
ಇದೇ ಪ್ರಶ್ನೆಯನ್ನು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಕೇಳುತ್ತಿದ್ದಾರೆ. ಸಿದ್ದರಾಮಯ್ಯ, ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅವರನ್ನು ಸ್ವತಃ ಗಿಲ್ಲಿ ನಟ ಹೋಗಿ ಭೇಟಿ ಮಾಡಿದ್ದಾರೆ. ಆದರೆ, 'ಗೃಹ ಮಂತ್ರಿ ಜಿ ಪರಮೇಶ್ವರ್ ಅವರೂ ಕೂಡ ಬಿಗ್ ಬಾಸ್ ವಿಜೇತ ನಟ ಗಿಲ್ಲಿಗೆ ಸಮಯ ಕೊಡುತ್ತಾರೆ ಎಂದರೆ ಯಾಕೋ ಇದು ಅತಿರೇಕ ಎನ್ನಿಸುತ್ತಿದೆ' ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಕಾಮೆಂಟ್ ಮಾಡಿದ್ದಾರೆ.



