'ಕೋಯಿ ಮಿಲ್ ಗಯಾ', 'ಕ್ರಿಶ್' ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ರಾಕೇಶ್ ರೋಷನ್, ಇದೀಗ ಆಸ್ತಿ ಖರೀದಿಸುವ ಮತ್ತು ಮಾರಾಟ ಮಾಡುವ ಮೂಲಕ ವ್ಯಾಪಾರ ರಂಗದಲ್ಲೂ ತಾವು 'ಸೂಪರ್ ಹಿಟ್' ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರೋಷನ್ ಕುಟುಂಬ ಸದ್ಯಕ್ಕೆ ಭಾರೀ ಸುದ್ದಿಯಲ್ಲಿದೆ.
ರಾಕೇಶ್ ರೋಶನ್ ಹೊಸ ಹೆಜ್ಜೆ!
ಬಾಲಿವುಡ್‌ನ 'ಗ್ರೀಕ್ ಗಾಡ್' ಎಂದೇ ಖ್ಯಾತಿ ಪಡೆದಿರುವ ನಟ ಹೃತಿಕ್ ರೋಷನ್ (Hrithik Roshan) ಮತ್ತು ಅವರ ಕುಟುಂಬ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಸಿನಿಮಾ, ಫಿಟ್ನೆಸ್, ಫ್ಯಾಷನ್ ಮತ್ತು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿರುವ ರೋಷನ್ ಕುಟುಂಬ, ಇದೀಗ ರಿಯಲ್ ಎಸ್ಟೇಟ್ ಲೋಕದಲ್ಲೂ ಭಾರಿ ಸಂಚಲನ ಮೂಡಿಸಿದೆ. ಹೌದು, ಖ್ಯಾತ ನಿರ್ದೇಶಕ ಹಾಗೂ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ (Rakesh Roshan) ಅವರು ತಮ್ಮ ಒಡೆತನದ ಪುಣೆಯ ದುಬಾರಿ ಜಾಗವೊಂದನ್ನು ಮಾರಾಟ ಮಾಡಿದ್ದಾರೆ. ಈ ಡೀಲ್‌ನ ಮೊತ್ತ ಕೇಳಿದರೆ ಎಂಥವರಿಗೂ ತಲೆ ತಿರುಗುವುದು ಖಂಡಿತ!
ಪುಣೆಯ ಜಾಗಕ್ಕೆ ಸಿಕ್ಕ ಭಾರಿ ಬೆಲೆ!
ಮಾಧ್ಯಮ ವರದಿಗಳ ಪ್ರಕಾರ, ರಾಕೇಶ್ ರೋಷನ್ ಅವರು ಪುಣೆ ಜಿಲ್ಲೆಯ ಹವೇಲಿ ತಾಲೂಕಿನ ಲೋಹೆಗಾಂವ್ ಗ್ರಾಮದಲ್ಲಿರುವ ತಮ್ಮ 1.09 ಹೆಕ್ಟೇರ್ (ಸುಮಾರು 2.7 ಎಕರೆ) ವಿಸ್ತೀರ್ಣದ ಜಾಗವನ್ನು ಮಾರಾಟ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಡೇಟಾ ಅನಾಲಿಟಿಕ್ಸ್ ಸಂಸ್ಥೆಯಾದ 'CRE Matrix' ನೀಡಿರುವ ದಾಖಲೆಗಳ ಪ್ರಕಾರ, ಈ ಬೃಹತ್ ಜಾಗವು ಬರೋಬ್ಬರಿ 15 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.
ಮಾಹಿತಿಯ ಪ್ರಕಾರ, ರಾಕೇಶ್ ರೋಷನ್ ಮತ್ತು ಈ ಜಾಗವನ್ನು ಖರೀದಿಸಿರುವ 'ಸಿಪಿ ಲ್ಯಾಂಡ್ಸ್ ಎಲ್‌ಎಲ್‌ಪಿ' (CP Lands LLP) ನಡುವೆ ಡಿಸೆಂಬರ್ 26 ರಂದು ಅಧಿಕೃತವಾಗಿ ನೋಂದಣಿ (Deed of Conveyance) ಪ್ರಕ್ರಿಯೆ ನಡೆದಿದೆ. ಕೇವಲ ಜಾಗದ ಬೆಲೆ ಮಾತ್ರವಲ್ಲ, ಈ ಬೃಹತ್ ವ್ಯವಹಾರಕ್ಕಾಗಿ ಸರ್ಕಾರಕ್ಕೆ ಬರೋಬ್ಬರಿ 1.05 ಕೋಟಿ ರೂಪಾಯಿಗಳ ಸ್ಟ್ಯಾಂಪ್ ಡ್ಯೂಟಿಯನ್ನು (ಮುದ್ರಾಂಕ ಶುಲ್ಕ) ಪಾವತಿಸಲಾಗಿದೆ. ಬಾಲಿವುಡ್ ಅಂಗಳದಲ್ಲಿ ಇದೀಗ ಈ ಮೆಗಾ ಡೀಲ್ ಬಗ್ಗೆಯೇ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ರಿಯಲ್ ಎಸ್ಟೇಟ್ ಕಿಂಗ್ ಆದ ರೋಷನ್ ಕುಟುಂಬ:
ಕೇವಲ ಜಾಗ ಮಾರಾಟ ಮಾಡುವುದಷ್ಟೇ ಅಲ್ಲ, ರೋಷನ್ ಕುಟುಂಬವು ಮುಂಬೈನ ಐಷಾರಾಮಿ ಪ್ರದೇಶಗಳಲ್ಲಿ ಕೋಟ್ಯಂತರ ರೂಪಾಯಿಗಳ ಆಸ್ತಿಯನ್ನು ಖರೀದಿಸುವ ಮೂಲಕ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ತಾವು 'ಕಿಂಗ್ಸ್' ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ, ರೋಷನ್ ಕುಟುಂಬವು ಮುಂಬೈನ ಪ್ರತಿಷ್ಠಿತ ಅಂಧೇರಿ ವೆಸ್ಟ್ ಪ್ರದೇಶದಲ್ಲಿ ಒಂದೇ ಬಾರಿಗೆ ಬರೋಬ್ಬರಿ 10 ವಾಣಿಜ್ಯ ಕಚೇರಿ (Office units) ಘಟಕಗಳನ್ನು ಖರೀದಿಸಿತ್ತು. ಹೃತಿಕ್ ರೋಷನ್, ತಂದೆ ರಾಕೇಶ್ ರೋಷನ್ ಮತ್ತು ತಾಯಿ ಪಿಂಕಿ ರೋಷನ್ ಒಡೆತನದ ಸಂಸ್ಥೆಗಳು ಒಟ್ಟಾಗಿ ಈ ಕಚೇರಿಗಳನ್ನು 28 ಕೋಟಿ ರೂಪಾಯಿ ನೀಡಿ ಖರೀದಿಸಿವೆ ಎಂದು 'Propstack' ವರದಿ ಮಾಡಿತ್ತು.
ಕೋಟಿ ಕೋಟಿ ಹೂಡಿಕೆ ಮಾಡಿದ ತಾಯಿ ಮತ್ತು ಸಹೋದರಿ:
ರೋಷನ್ ಕುಟುಂಬದ ರಿಯಲ್ ಎಸ್ಟೇಟ್ ಬೇಟೆ ಇಲ್ಲಿಗೆ ನಿಲ್ಲಲಿಲ್ಲ. ಅದೇ ನವೆಂಬರ್ ತಿಂಗಳಲ್ಲಿ, ಹೃತಿಕ್ ರೋಷನ್ ಅವರ ತಂದೆ-ತಾಯಿ (ರಾಕೇಶ್ ಮತ್ತು ಪಿಂಕಿ ರೋಷನ್) ಮುಂಬೈನ ಅಂಧೇರಿಯಲ್ಲಿ ಮತ್ತೆ 5 ವಾಣಿಜ್ಯ ಕಚೇರಿಗಳನ್ನು ಬರೋಬ್ಬರಿ 19.68 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ.
ಇದರ ಜೊತೆಗೆ, ಹೃತಿಕ್ ರೋಷನ್ ಅವರ ಸಹೋದರಿ ಸುನೈನಾ ರೋಷನ್ ಕೂಡ ಹಿಂದೆ ಬಿದ್ದಿಲ್ಲ. 'SquareYards' ವರದಿಯ ಪ್ರಕಾರ, ಸುನೈನಾ ರೋಷನ್ ಅವರು ಮುಂಬೈನ ಅಂಧೇರಿ ಈಸ್ಟ್ ಪ್ರದೇಶದಲ್ಲಿ 2 ವಾಣಿಜ್ಯ ಘಟಕಗಳನ್ನು 6.42 ಕೋಟಿ ರೂಪಾಯಿಗಳಿಗೆ ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ, ಬಾಲಿವುಡ್ ತಾರೆಯರು ಸಿನಿಮಾದಿಂದ ಗಳಿಸಿದ ಹಣವನ್ನು ಅತ್ಯಂತ ಬುದ್ಧಿವಂತಿಕೆಯಿಂದ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
'ಕೋಯಿ ಮಿಲ್ ಗಯಾ'
, 'ಕ್ರಿಶ್' ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ರಾಕೇಶ್ ರೋಷನ್, ಇದೀಗ ಆಸ್ತಿ ಖರೀದಿಸುವ ಮತ್ತು ಮಾರಾಟ ಮಾಡುವ ಮೂಲಕ ವ್ಯಾಪಾರ ರಂಗದಲ್ಲೂ ತಾವು 'ಸೂಪರ್ ಹಿಟ್' ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರೋಷನ್ ಕುಟುಂಬ ಇನ್ಯಾವ ಐಷಾರಾಮಿ ಆಸ್ತಿಯನ್ನು ಖರೀದಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.


