ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನ ಅಭಿಮಾನಿಗಳು ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಟ ಸುದೀಪ್ ಅವರ ಹಳೆಯ ವಿಡಿಯೋವನ್ನು ಬಳಸಿ, ಅದು ಗಿಲ್ಲಿ ನಟನಿಗೆ ಸಿಕ್ಕ ಭದ್ರತೆ ಎಂದು ಬಿಂಬಿಸುತ್ತಿರುವುದು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿಗ್​ಬಾಸ್​ ಈ ಬಾರಿ ಹಿಂದೆಂದಿನ ಸೀಸನ್​ಗಳಿಗಿಂತಲೂ ಭಾರಿ ಹೈಪ್​ ಪಡೆದುಕೊಂಡಿತ್ತು. ಹಲವಾರು ದಾಖಲೆಗಳನ್ನೂ ಮುರಿದಿದೆ ಈ ಸೀಸನ್​. ಎಲ್ಲಾ ಸೀಸನ್​ಗಳಿಗಿಂತಲೂ ವಿನ್ನರ್​ಗೆ ಅತ್ಯಧಿಕ ವೋಟ್​ ಬರುವ ಮೂಲಕವೂ, ಇದರ ಕ್ರೇಜ್​ ತಿಳಿದಿದೆ. 37 ಕೋಟಿಗೂ ಅಧಿಕ ವೋಟ್​ ಗಿಲ್ಲಿ ನಟನಿಗೆ ಬಂದಿದ್ದರೆ, ಅದಕ್ಕಿಂತ ಸ್ವಲ್ಪ ಕಡಿಮೆ ಮತವಷ್ಟೇ ಮೊದಲ ರನ್ನರ್​ ಅಪ್​ ರಕ್ಷಿತಾ ಶೆಟ್ಟಿ ಅವರಿಗೆ ಬಂದಿದೆ. ಇದನ್ನು ನೋಡಿದರೆ ಬಿಗ್​ಬಾಸ್​ ಕ್ರೇಜ್​ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲದೇ ಗಿಲ್ಲಿಯ ಅಭಿಮಾನಿಗಳನ್ನು ಬಿಗ್​ಬಾಸ್​ ಮನೆಯ ಹೊರಗೆ ನಿಯಂತ್ರಿಸಲು ಪೊಲೀಸರು ಹರಸಾಹಸವನ್ನೂ ಪಟ್ಟಿದ್ದು ಆಗಿದೆ.

ಇವೆಲ್ಲವೂ ಸರಿ. ಹಾಗೆಂದು ಅಭಿಮಾನ ಅತಿರೇಕಕ್ಕೆ ಹೋಗುವುದು ಹೊಸ ವಿಷಯವೇನಲ್ಲ. ಇಷ್ಟು ದಿನಗಳವರೆಗೆ ಸಿನಿಮಾ ನಟರ ಬಗ್ಗೆ ಇದೇ ರೀತಿಯ ಅತಿರೇಕದ ಅಭಿಮಾನ ಆಗಿದ್ದೂ ಇದೆ, ಆಗುತ್ತಲೇ ಇದೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸಿನಿಮಾ ನಟರನ್ನೇ ದೇವರೆಂದು ನಂಬಿದವರು ಕೆಲವರು ಇದ್ದಾರೆ ಅನ್ನಿ. ಅದೀಗ ಬಿಗ್​ಬಾಸ್​​ನಲ್ಲಿಯೂ ಕಂಡುಬಂದಿದೆ. ಕೋಟ್ಯಂತರ ಅಭಿಮಾನಿಗಳನ್ನು ಪಡೆಯುವುದು ಸುಲಭದ ಮಾತೂ ಅಲ್ಲ. ಅಂಥ ಅಭಿಮಾನಿಗಳನ್ನು ಪಡೆದವರು ಗಿಲ್ಲಿ ನಟ (Bigg Boss 12 winner Gilli Nata).

ಅಭಿಮಾನಿಗಳಿಂದ ವಿಡಿಯೋ

ಆದರೆ, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಗಿಲ್ಲಿ ನಟನ ಅಭಿಮಾನಿಗಳಿಂದ ವಿಡಿಯೋಗಳು ಶೇರ್​ ಆಗುತ್ತಿವೆ. ಆದರೆ ಇದರಲ್ಲಿ ಕೆಲವು ವಿಡಿಯೋಗಳು ಫೇಕ್​ ವಿಡಿಯೋಗಳಾಗಿವೆ, ಅರ್ಥಾತ್​ ಅದು ಗಿಲ್ಲಿನಟನ ವಿಡಿಯೋಗಳೇ ಅಲ್ಲ. ಯಾವುದಾದರೂ ಪ್ರತಿಭಟನೆ, ರಾಜಕಾರಣಿಗಳ ಮೆರವಣಿಗೆಯ ವೇಳೆಗಳಲ್ಲಿ, ಹೀಗೆ ಯಾವುದೇ ವಿಡಿಯೋ ವೈರಲ್​ ಮಾಡಿ ಇನ್ನೇನೋ ಹೇಳುವುದು ನಡೆದೇ ಇದೆ. ಅದೇ ರೀತಿ ಇದೀಗ ಗಿಲ್ಲಿಯ ಅಭಿಮಾನಿಗಳು ಗಿಲ್ಲಿ ನಟನ ವಿಡಿಯೋ ಎಂದು ಹೇಳುವ ಮೂಲಕ ಲೈಕ್ಸ್ ಪಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಈ ವಿಡಿಯೋ ಇದೀಗ ಸುದೀಪ್​ ಅಭಿಮಾನಿಗಳನ್ನು ಕೆರಳಿಸುತ್ತಿದೆ.

ಸುದೀಪ್​ ವಿಡಿಯೋಗೆ ಗಿಲ್ಲಿ ಹೆಸರು

ಇದಕ್ಕೆ ಕಾರಣ, ಸುದೀಪ್​ ಅವರು, ಮೈಸೂರಿನ ಸಂಗಮ್ ಚಿತ್ರ ಮಂದಿರಕ್ಕೆ ಬಂದಾಗ ಅವರಿಗೆ ಸಹಜವಾಗಿ ಟೈಟ್​ ಸೆಕ್ಯುರಿಟಿ ನೀಡಲಾಗಿತ್ತು. ಹತ್ತಾರು ಭದ್ರತಾ ಕಾರುಗಳು ಬಂದಿದ್ದವು, ನೂರಾರು ಪೊಲೀಸರು ನಿಂತಿದ್ದರು. ಅವರ ಒಂದು ದರ್ಶನ ಪಡೆಯಲು ಸಹಸ್ರಾರು ಮಂದಿ ಬೀದಿಗಳಲ್ಲಿ ನಿಂತಿದ್ದರು. ಆದರೆ ಇದೀಗ ಇದು ಗಿಲ್ಲಿಗೆ ನೀಡುತ್ತಿರುವ ರಕ್ಷಣೆ. ಮುಖ್ಯಮಂತ್ರಿಗಳಿಗೂ ಇಂಥ ರಕ್ಷಣೆ ನೀಡುವುದಿಲ್ಲ ಎಂದೆಲ್ಲಾ ಪುಂಗಾನುಪುಂಗವಾಗಿ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ.

ಸುದೀಪ್​ ಫ್ಯಾನ್ಸ್ ಗರಂ

ಸೋಷಿಯಲ್​ ಮೀಡಿಯಾದಲ್ಲಿ ಫೂಲ್​ ಆಗುವವರು ಹಲವರು ಇದ್ದರೂ, ಕೆಲವರು ನಿಜಾಂಶ ಏನು ಎನ್ನುವುದನ್ನು ನೋಡುತ್ತಾರೆ. ಅದರಲ್ಲಿಯೂ ಸುದೀಪ್​ ಅಭಿಮಾನಿಗಳು ಇದೀಗ ಗರಂ ಆಗಿದ್ದಾರೆ. ಯಾರನ್ನು ಫೂಲ್​ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ಬಾಸ್​ ಸುದೀಪ್​ ಅವರನ್ನು ಫೂಲ್ ಮಾಡುವುದು ಸುಲಭವಲ್ಲ. ಹೀಗೆ ಅವರ ವಿಡಿಯೋ ಹಾಕಿ ಇನ್ನಾರದ್ದೋ ಹೆಸರು ಹೇಳುವುದನ್ನು ನಾವು ಸಹಿಸುವುದಿಲ್ಲ ಎಂದು ವಿಡಿಯೋ ಶೇರ್​ ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.