ಬಿಗ್ ಬಾಸ್ ಸೀಸನ್ 12ರ 2ನೇ ರನ್ನರ್ ಅಪ್ ಅಶ್ವಿನಿ ಗೌಡ, ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೋಟ್ ಲೆಕ್ಕವನ್ನು ಬದಿಗಿಟ್ಟರೆ ವ್ಯಕ್ತಿತ್ವದ ಆಧಾರದ ಮೇಲೆ ತಾವೇ ನಿಜವಾದ ವಿಜೇತರು ಎಂದಿರುವ ಅವರು, ವಿನ್ನರ್ ಗಿಲ್ಲಿ ಅವರ ಗೆಲುವು ಒಂದು 'ಪ್ಲ್ಯಾನ್' ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಜ.21): ಬಿಗ್ ಬಾಸ್ ಮನೆಗೆ ಈವರೆಗೆ ನನ್ನಂತಹ ಬೆಸ್ಟ್ ಹಾಗೂ ಟಫ್ ಕಂಟೆಂಡರ್ ಯಾರೊಬ್ಬರೂ ಮನೆಯೊಳಗೆ ಹೋಗಿಲ್ಲ. ಮುಂದೆ ಹೋಗುವುದಾದರೂ ನನ್ನನ್ನು ಮೀರಿಸಿಯೇ ಹೋಗಬೇಕು. ಈ ರಿಯಾಲಿಟಿ ಶೋ ಕೇವಲ ಕಾಮಿಡಿ ಶೋ ಅಲ್ಲ, ವ್ಯಕ್ತಿತ್ವದ ಆಟವಾಗಿದೆ. ಇಲ್ಲಿ ವೋಟ್ ಲೆಕ್ಕವನ್ನು ಕೈಬಿಟ್ಟರೆ ನಾನೇ ವಿನ್ನರ್. ಈ ಬಾರಿಯಾದರೂ ಸುದೀಪ್ ಅಣ್ಣ ಒಬ್ಬ ಮಹಿಳೆಯರ ಕೈ ಎತ್ತುತ್ತಾರೆ ಅಂದುಕೊಂಡಿದ್ದೆ, ಆದರೆ ನನ್ನ ಕೈ ಬಿಡುತ್ತಾರೆ ಎಂದು ನಿರೀಕ್ಷೆಯನ್ನೂ ಮಾಡಿರಲಿಲ್ಲ ಎಂದು ಬಿಗ್ ಬಾಸ್ ಸೀಸನ್ 12ರ 2ನೇ ರನ್ನರ್ ಅಪ್ ಅಶ್ವಿನಿ ಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡು 'ಗಿಲ್ಲಿ' ನಟ ಟ್ರೋಫಿ ಎತ್ತಿ ಹಿಡಿದಿದ್ದರೂ, ಈ ಬಾರಿಯ ಫಲಿತಾಂಶದ ಸುತ್ತಲಿನ ವಿವಾದ ಮಾತ್ರ ತಣ್ಣಗಾಗುತ್ತಿಲ್ಲ. ಮನೆಯೊಳಗೆ ತನ್ನ ನೇರ ನಡೆ-ನುಡಿಯಿಂದಲೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ, ಈಗ ಬಿಗ್‌ಬಾಸ್ ಫಲಿತಾಂಶವನ್ನೇ ಪ್ರಶ್ನಿಸುವ ಮೂಲಕ ಹೊಸ ಹೈಡ್ರಾಮಾಗೆ ನಾಂದಿ ಹಾಡಿದ್ದಾರೆ. 'ವೋಟ್ ಸಂಖ್ಯೆಯನ್ನು ನೋಡಿದರೆ ಸೀಸನ್ 12ರ ಅಸಲಿ ವಿನ್ನರ್ ನಾನೇ" ಎಂದು ಹೇಳುವ ಮೂಲಕ ಅಶ್ವಿನಿ ಸಂಚಲನ ಮೂಡಿಸಿದ್ದಾರೆ.
ಗಿಲ್ಲಿ ಗೆಲುವು 'ಪ್ಲ್ಯಾನ್' ಎಂದ ಅಶ್ವಿನಿ
ಇತ್ತೀಚೆಗೆ ನೀಡಿದ ಖಾಸಗಿ ವಾಹಿನಿ ಫಿಲ್ಮಿ ಬೀಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅಶ್ವಿನಿ ಗೌಡ ಅವರು ವಿನ್ನರ್ ಗಿಲ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಗಿಲ್ಲಿ ಬಡವನ ರೀತಿ ನಾಟಕವಾಡಿ ಜನರ ಅನುಕಂಪ ಗಿಟ್ಟಿಸಿ ಗೆದ್ದಿದ್ದಾರೆ. ಅವರು ಮೊದಲ ವಾರದಲ್ಲೇ ಮನೆಯಲ್ಲಿದ್ದ ಪ್ರತಿಯೊಬ್ಬರ ದೌರ್ಬಲ್ಯವನ್ನು ಅರಿತುಕೊಂಡು, ಅದರ ಮೇಲೆ ತಮ್ಮ ಗೇಮ್ ಪ್ಲ್ಯಾನ್ ರೂಪಿಸಿದ್ದರು. ನನ್ನ ಕೋಪವನ್ನೇ ಬಂಡವಾಳ ಮಾಡಿಕೊಂಡು ಅವರು ಸ್ಟ್ರ್ಯಾಟರ್ಜಿ ಮಾಡಿ ಗೆದ್ದಿದ್ದಾರೆ' ಎಂದು ಅಶ್ವಿನಿ ಗಂಭೀರ ಆರೋಪ ಮಾಡಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲೇ ಈ ಬಾರಿ ದಾಖಲೆ ಮಟ್ಟದ ಮತಗಳು ಚಲಾವಣೆಯಾಗಿದ್ದು, ಗಿಲ್ಲಿಗೆ ಬರೋಬ್ಬರಿ 37 ಕೋಟಿ ಮತಗಳು ಬಂದಿವೆ ಎಂದು ಸುದೀಪ್ ಘೋಷಿಸಿದ್ದರು. ಆದರೆ, ಈ ವೋಟಿಂಗ್ ಮಾನದಂಡವನ್ನೇ ಅಶ್ವಿನಿ ಒಪ್ಪಲು ಸಿದ್ಧರಿಲ್ಲ.
ನನ್ನಂತ ಪ್ರಬಲ ಸ್ಪರ್ಧಿ ಬಂದಿಲ್ಲ!
ತಮ್ಮ ಜರ್ನಿಯನ್ನು ಸಮರ್ಥಿಸಿಕೊಂಡ ಅಶ್ವಿನಿ, 'ನನಗೆ ಬಂದಿರುವ ಮಾಹಿತಿ ಪ್ರಕಾರ ನನಗೂ ಮತ್ತು ಗಿಲ್ಲಿಗೆ ಬಂದಿರುವ ವೋಟ್‌ಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಇದು ಬರಿ ವೋಟ್‌ಗಳ ಅಥವಾ ಕಾಮಿಡಿ ಆಟವಲ್ಲ, ಇದು ವ್ಯಕ್ತಿತ್ವದ ಆಟ. ಇಡೀ ಸೀಸನ್‌ನಲ್ಲಿ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಗಾಯಗೊಂಡರೂ ಕಾರ್ಯಕ್ರಮಕ್ಕಾಗಿ ನನ್ನನ್ನು ನಾನು ಸಮರ್ಪಿಸಿಕೊಂಡಿದ್ದೆ. ಬಿಗ್‌ಬಾಸ್ ಇತಿಹಾಸದಲ್ಲಿ ಇದುವರೆಗೆ ನನ್ನಂತಹ ಪ್ರಬಲ ಸ್ಪರ್ಧಿ ಬಂದೇ ಇಲ್ಲ ಎಂಬ ಹೆಮ್ಮೆ ನನಗಿದೆ' ಎಂದಿದ್ದಾರೆ. ಅಲ್ಲದೆ, ರಕ್ಷಿತಾ ಅವರು ಎರಡನೇ ಸ್ಥಾನಕ್ಕೇರಿ ತಾವು ಮೂರನೇ ಸ್ಥಾನಕ್ಕೆ ಕುಸಿದಿದ್ದರ ಬಗ್ಗೆಯೂ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸುದೀಪ್ ಅಣ್ಣ ಕೈಬಿಡ್ತಾರೆ ಅಂದುಕೊಂಡಿರಲಿಲ್ಲ...
ನಟಿ ಶ್ರುತಿ ಅವರ ಬಳಿಕ ಯಾವ ಮಹಿಳಾ ಸ್ಪರ್ಧಿಯೂ ಟ್ರೋಫಿ ಗೆದ್ದಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅಶ್ವಿನಿ, 'ಈ ಬಾರಿ ಸುದೀಪ್ ಸರ್ ಒಬ್ಬ ಹೆಣ್ಣುಮಗಳ ಕೈ ಮೇಲೆ ಎತ್ತುತ್ತಾರೆ ಎಂದುಕೊಂಡಿದ್ದೆ, ಆದರೆ ಅವರು ಕೈಬಿಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ 'ಕನ್ನಡ ಹೋರಾಟಗಾರ್ತಿಯಾಗಿ ಕನ್ನಡ ಬರೆಯಲು ಬರಲ್ಲ' ಎಂಬ ಟ್ರೋಲ್‌ಗಳಿಗೂ ಉತ್ತರಿಸಿದ ಅವರು, 'ನಾನು ಓದಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಹಾಗಾಗಿ ಬರೆಯುವಾಗ ಸ್ವಲ್ಪ ಕಷ್ಟವಾಗುತ್ತದೆ. ಆದರೆ ನಾನು ಅಪ್ಪಟ ಕನ್ನಡಪರ ಹೋರಾಟಗಾರ್ತಿ' ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ, ಅಶ್ವಿನಿ ಗೌಡ ಅವರ ಈ ಹೇಳಿಕೆಗಳು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.


