ಬಿಗ್ ಬಾಸ್ ಕನ್ನಡ ಸೀಸನ್ 12ರ ಅತಿ ವಿವಾದಿತ ಸ್ಪರ್ಧಿ ಎನಿಸಿಕೊಂಡಿದ್ದ ಅಶ್ವಿನಿ ಗೌಡ, ಎಲ್ಲಾ ಅಡೆತಡೆಗಳನ್ನು ಮೀರಿ ಟಾಪ್-3 ಸ್ಥಾನಕ್ಕೇರಿದ್ದಾರೆ. ಫಿನಾಲೆ ವೇದಿಕೆಯಲ್ಲಿ, ತಾವು ಹೇಗೆ 2ನೇ ರನ್ನರ್ ಸ್ಥಾನ ಲುಪಿದರು ಎಂಬ ಸೀಕ್ರೆಟ್ ಅನ್ನು ಬಹಿರಂಗಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ 16 ವಾರಗಳ ಸುದೀರ್ಘ ಪಯಣದಲ್ಲಿ ಅತಿ ಹೆಚ್ಚು ಏಳುಬೀಳುಗಳನ್ನು ಕಂಡ ಸ್ಪರ್ಧಿ ಎಂದರೆ ಅದು ಅಶ್ವಿನಿ ಗೌಡ. ಮನೆಯ ಒಳಗೆ ಹೋದ ದಿನದಿಂದಲೂ ಒಂದಿಲ್ಲೊಂದು ವಿವಾದದ ಮೂಲಕವೇ ಸುದ್ದಿಯಲ್ಲಿದ್ದ ಅಶ್ವಿನಿ ಗೌಡ, ಇದೀಗ ಎಲ್ಲಾ ಅಡೆತಡೆಗಳನ್ನು ಮೀರಿ ಟಾಪ್-3 ಸ್ಥಾನ ಅಂದರೆ 2ನೇ ರನ್ನರ್ ಅಪ್ ಸ್ಥಾನವನ್ನು ಅಲಂಕರಿಸಿದ್ದಾರೆ. ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರೊಂದಿಗೆ ಅಂತಿಮ ಕಾದಾಟಕ್ಕೆ ಇಳಿದಿರುವ ಅಶ್ವಿನಿ, ತಾವು ಮಾಡಿದ ಎಡವಟ್ಟುಗಳ ನಡುವೆಯೂ ಟಾಪ್-3 ಸ್ಥಾನಕ್ಕೆ ಬಂದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ತಪ್ಪುಗಳ ಸರಮಾಲೆ ಮತ್ತು ವಿವಾದಗಳ ಸುಳಿ

ಬಿಗ್ ಬಾಸ್ ಮನೆಯ 24 ಸ್ಪರ್ಧಿಗಳ ಪೈಕಿ ಅಶ್ವಿನಿ ಗೌಡ ಅವರು ಮಾಡಿದಷ್ಟು ನಿಯಮ ಉಲ್ಲಂಘನೆ ಬಹುಶಃ ಯಾರೂ ಮಾಡಿರಲಿಕ್ಕಿಲ್ಲ. ಜಗಳ, ಕೆಟ್ಟ ಭಾಷೆಯ ಪ್ರಯೋಗ, ಮೈಕ್ ಧರಿಸದೆ ಮಾತನಾಡುವುದು ಮತ್ತು ಸಹ ಸ್ಪರ್ಧಿಗಳ ಕುಟುಂಬದವರನ್ನು ಎಳೆದು ತಂದು ಬೈಯುವ ಮೂಲಕ ಅವರು ಹಲವು ಬಾರಿ ಕೆಂಗಣ್ಣಿಗೆ ಗುರಿಯಾಗಿದ್ದರು. ಹಲವು ಬಾರಿ 'ಕಳಪೆ' ಪಟ್ಟ ಪಡೆದು ಜೈಲು ಪಾಲಾಗಿದ್ದ ಅಶ್ವಿನಿ, ಕಿಚ್ಚ ಸುದೀಪ್ ಅವರಿಂದಲೂ ತೀವ್ರ ತರಾಟೆಗೆ ಒಳಗಾಗಿದ್ದರು.

ವಿಶೇಷವಾಗಿ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಕುರಿತು 'ಎಸ್ ಕೆಟಗರಿ' ಎಂಬ ವಿವಾದಾತ್ಮಕ ಪದ ಬಳಸಿರುವುದು ದೊಡ್ಡ ಮಟ್ಟದ ಕಿಚ್ಚು ಹಚ್ಚಿತ್ತು. ಈ ವಿಚಾರವಾಗಿ ಹೊರಗಡೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದು, ಅಶ್ವಿನಿ ಅವರು ಮನೆಯಿಂದ ಹೊರಬಂದ ನಂತರ ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಆದರೂ, ಚೈತ್ರಾ ಕುಂದಾಪುರ ಅಥವಾ ರಾಶಿಕಾ ಅವರಿಗೆ ಹೋಲಿಸಿದರೆ ಅಶ್ವಿನಿ ಅವರ ಆಟ ಕೊಂಚ ಭಿನ್ನವಾಗಿತ್ತು ಎನ್ನುವುದು ಅಭಿಮಾನಿಗಳ ವಾದವಾಗಿದೆ.

ಟಾಪ್-3 ಹಂತ ತಲುಪಿದ ಸೀಕ್ರೆಟ್ ರಿವೀಲ್

ಫಿನಾಲೆ ವೇದಿಕೆಯಲ್ಲಿ ಅಶ್ವಿನಿ ಗೌಡ ಅವರ ಬಿಗ್ ಬಾಸ್ ಜರ್ನಿಯ ವಿಡಿಯೋ ಟ್ರೇಲರ್ ಪ್ರದರ್ಶಿಸಲಾಯಿತು. ಈ ವೇಳೆ ಮಾತನಾಡಿದ ಅವರು, ತಮ್ಮ ಯಶಸ್ಸಿನ ಹಿಂದಿನ ಗುಟ್ಟನ್ನು ಒಂದೇ ವಾಕ್ಯದಲ್ಲಿ ಬಿಚ್ಚಿಟ್ಟರು. 'ನಾನು ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ತಪ್ಪು ಮಾಡಿದ್ದೇನೋ, ಅದೆಲ್ಲವನ್ನೂ ಅಲ್ಲೇ ತಿದ್ದಿಕೊಂಡಿದ್ದೇನೆ. ಮಾಡಿದ ತಪ್ಪುಗಳು ಮರುಕಳಿಸದಂತೆ ನೋಡಿಕೊಂಡಿದ್ದೇ ನನ್ನ ಸಾಧನೆ. ಎಲ್ಲರೊಂದಿಗೆ ಹೊಂದಾಣಿಕೆಯಿಂದ ನಡೆದುಕೊಂಡು ಹೋಗುವುದನ್ನು ಕಲಿತಿದ್ದರಿಂದಲೇ ಇಂದು ನಾನು ಟಾಪ್-3 ಸ್ಥಾನಕ್ಕೆ ಬರುವುದಕ್ಕೆ ಸಾಧ್ಯವಾಗಿದೆ' ಎಂದು ಭಾವನಾತ್ಮಕವಾಗಿ ನುಡಿದರು.

ಹೊಂದಾಣಿಕೆಯೇ ಯಶಸ್ಸಿನ ಮಂತ್ರ

ಆರಂಭದಲ್ಲಿ ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸುತ್ತಾ, ತಮಗೆ ಮಾತ್ರ ಎಲ್ಲರೂ ಗೌರವ ಕೊಡಬೇಕು ಎಂದು ಹಠ ಹಿಡಿಯುತ್ತಿದ್ದ ಅಶ್ವಿನಿ, ಕಾಲಕ್ರಮೇಣ ಬದಲಾಗುತ್ತಾ ಹೋದರು. ಟಾಸ್ಕ್ ವೇಳೆ ಎಷ್ಟೇ ಎಡವಟ್ಟುಗಳಾದರೂ, ಉಸ್ತವಾರಿಯಲ್ಲಿ ಗೊಂದಲಗಳಿದ್ದರೂ, ಜನರ ಮನ್ನಣೆ ಗಳಿಸಲು ಅವರು ಮಾಡಿದ ಪ್ರಯತ್ನ ಫಲ ನೀಡಿದೆ. ತಪ್ಪುಗಳನ್ನು ಒಪ್ಪಿಕೊಂಡು ಮುನ್ನಡೆಯುವ ಗುಣವೇ ಅವರನ್ನು ಇಂದು ವಿನ್ನರ್ ರೇಸ್‌ಗೆ ತಂದು ನಿಲ್ಲಿಸಿದೆ.