ಕಾಲೆಳೆದು ಮೇಲೆ ಬರೋದು ಹಿಂದೆನೂ ಆಗಿಲ್ಲ, ಮುಂದೆನೂ ಆಗಲ್ಲ: 'ಅಂತರಪಟ'ದ ಡೈಲಾಗ್ ಕೇಳಿ...
ಕೆಲವರಿಗೆ ಇತರರ ಕಾಲೆಳೆದು ಮೇಲೆ ಬರುವುದು ಎಂದರೆ ಖುಷಿ... ಆದರೆ? ಅಂತರಪಟದ ಡೈಲಾಗ್ನಲ್ಲಿ ನೆಟ್ಟಿಗರಿಂದ ಶ್ಲಾಘನೆ

ಶಾಲಾ-ಕಾಲೇಜುಗಳಿಂದ ಹಿಡಿದು ಕಚೇರಿಗಳವರೆಗೆ ಕಾಲೆಳೆಯುವುದು ಇದ್ದೇ ಇರುತ್ತದೆ. ಒಬ್ಬರು ಮೇಲೆ ಹೋಗುತ್ತಿದ್ದಾರೆ ಎಂದರೆ ಇಲ್ಲವೇ ಅವರನ್ನು ಯಾರಾದರೂ ಹೊಗಳುತ್ತಿದ್ದಾರೆ ಎಂದರೆ ಸಾಕು ಅವರನ್ನು ಹೇಗೆ ಕೆಳಕ್ಕೆ ಬೀಳಿಸಬೇಕು ಎನ್ನುವ ಕಿತಾಪತಿಯಲ್ಲಿಯೇ ಕೆಲವರು ಇರುವುದು ಬಹುತೇಕ ಎಲ್ಲರ ಗಮನಕ್ಕೂ ಬಂದಿರುತ್ತದೆ, ಜೊತೆಗೆ ಹಲವರಿಗೆ ಇಂಥ ಕೆಟ್ಟ ಅನುಭವಗಳೂ ಆಗಲಿಕ್ಕುಂಟು. ಕೆಲವು ಮನೆಗಳಲ್ಲಿಯೂ ಹೀಗೆಯೇ ಇದ್ದರೆ ಇನ್ನು ಕೆಲವರಿಗೆ ನೆರೆಹೊರೆಯವರಿಂದ ಇಂಥ ಕೆಟ್ಟ ಎಕ್ಸ್ಪೀರಿಯನ್ಸ್ ಆಗಿರಬಹುದು. ಹೀಗೆ ಬೇರೆಯವರ ಕಾಲೆಳೆಯುವವರಿಗೆ ಜಯ ಸಿಕ್ಕಾಗ ಅಯ್ಯೋ ಹೀಗೇಕೆ ಎಂದು ಸಂತ್ರಸ್ತರು ಅಂದುಕೊಂಡರೂ, ಕಾಲೆಳೆಯುವವರ ಈ ಖುಷಿ ಕ್ಷಣಿಕ ಮಾತ್ರ. ಹೀಗೆ ಕೆಲವರ ಕಾಲೆಳೆದು, ಅವರನ್ನು ತುಳಿದು ವಿಕೃತ ಸಂತೋಷ ಪಟ್ಟರೂ ಅವರು ಒಂದಿಲ್ಲೊಂದು ದಿನ ಬಟಾಬಯಲಾಗಲೇಬೇಕು. ಇದು ಮಾತ್ರ ಸತ್ಯ ಎನ್ನುವ ಮಾತಿದೆ. ಇದೇ ಡೈಲಾಗ್ ಒಂದು ಕಲರ್ಸ್ ಕನ್ನಡ ಸೀರಿಯಲ್ನ ಅಂತರಪಟದಲ್ಲಿಯೂ ಕೇಳಿ ಬಂದಿದ್ದು, ಇದಕ್ಕೆ ನೆಟ್ಟಿಗರು ಹೌದು ಹೌದು ಎನ್ನುತ್ತಿದ್ದಾರೆ.
ಈ ಧಾರಾವಾಹಿಯ ವೀಕ್ಷಕರಿಗೆ ಇದರ ಕಥೆ ಚೆನ್ನಾಗಿ ಗೊತ್ತು. ಇದರಲ್ಲಿ ನಾಯಕಿ ಆರಾಧನಾ ಮದುವೆಯ ಈವೆಂಟ್ ಒಂದನ್ನು ಪ್ರದರ್ಶಿಸಲು ಹೋದ ಸಮಯದಲ್ಲಿ ಅವಳಿಗೆ ಪೀರಿಯಡ್ಸ್ ಆಗಿ ಬಟ್ಟೆಗೆ ರಕ್ತ ಅಂಟಿರುತ್ತದೆ. ಅದನ್ನು ನೋಡಿದ ಆಕೆಯ ಗೆಳೆಯ ಸುಶಾಂತ್, ಆಕೆಗೆ ನ್ಯಾಪ್ಕಿನ್ ತಂದುಕೊಡುತ್ತಾನೆ. ಆಕೆಯ ಮಾನ ಕಾಪಾಡಲು ತನ್ನ ಕೋಟನ್ನು ತೆಗೆದು ಕೊಟ್ಟಿದ್ದಾನೆ. ಅದರಿಂದ ಅವಳು ತನ್ನ ಹಿಂಭಾಗವನ್ನು ಮುಚ್ಚಿಕೊಂಡಿದ್ದಾಳೆ. ಈ ಸೀನ್ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಇದರ ಮುಂದುವರೆದ ಭಾಗವಾಗಿ, ಅತ್ತ ಈವೆಂಟ್ ಬಗ್ಗೆ ಪ್ರಸೆಂಟೇಷನ್ ಮಾಡಲು ಇನ್ನೂ ಆರಾಧನ ಬಾರದ ಕಾರಣ, ಅಲ್ಲಿದ್ದವರು ಅದನ್ನು ಬೇರೆಯವರಿಗೆ ಕೊಟ್ಟುಬಿಟ್ಟಿದ್ದರು. ನಂತರ ಲೇಟಾಗಿ ಬರುವ ಆರಾಧನಾ ಕಣ್ಣೀರಿಗೆ ಮದುಮಗಳು ಕಾವ್ಯಾ ಕರಗಿ ಈವೆಂಟ್ ಪ್ರಸೆಂಟೇಷನ್ಗೆ ಇನ್ನೊಂದು ಅವಕಾಶ ಕೊಡಲು ಹೇಳುತ್ತಾಳೆ. ಅದನ್ನು ಎಲ್ಲರೂ ಒಪ್ಪಿ ಆಕೆಗೆ ಇನ್ನೊಂದು ಅವಕಾಶ ಕೊಡುತ್ತಾರೆ.
ಕಣ್ಣೀರು ಮಹಿಳೆಯ ವೀಕ್ನೆಸ್ ಅಲ್ಲ, ಅದು ಶಕ್ತಿ: ಅಂತರಪಟ ಡೈಲಾಗ್ಗೆ ಫ್ಯಾನ್ಸ್ ಫುಲ್ ಖುಷ್
ಆಗ ಆರಾಧನಾ ಮದುಮಗನ ಮೂಲ ಹಳ್ಳಿಯಲ್ಲಿಯೇ ದೇಸಿ ಪದ್ಧತಿಯಲ್ಲಿ ಮದುವೆ ಮಾಡುವ ಬಗ್ಗೆ ಪ್ರಸೆಂಟೇಷನ್ ಕೊಡುತ್ತಾಳೆ. ಸುತ್ತಮುತ್ತಲಿನ ಹತ್ತೂರಿನವರಿಗೆ ಊಟ ಹಾಕಿ ಅವರ ಆಶೀರ್ವಾದ ಪಡೆದರೆ ಅದರಲ್ಲಿರುವ ಸಂತೋಷ ಮತ್ತೊಂದಿಲ್ಲ ಎನ್ನುತ್ತಾಳೆ. ಇದೇ ವೇಳೆ ಆಕೆಯ ಪ್ರಸೆಂಟೇಷನ್ನಲ್ಲಿ ಹಳ್ಳಿಯ ಸೊಗಡನ್ನು ಬಿಂಬಿಸುತ್ತಾಳೆ. ಮದುವೆ ಎಂದರೆ ಅದನ್ನು ಮಹಾನಗರಗಳಲ್ಲಿ ಮಾಡಿದರೆ ಮಾತ್ರ ವೈಭವೋಪೇತವಾಗಿರುತ್ತದೆ ಎನ್ನುವ ಪರಿಕಲ್ಪನೆಯನ್ನು ಮೀರಿದ ಈ ಪ್ರಸೆಂಟೇಷನ್ ಮದುಮಕ್ಕಳ ಕುಟುಂಬದವರಿಗೆ ತುಂಬಾ ಹಿಡಿಸುತ್ತದೆ. ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ಆದರೆ ಇದೇ ವೇಳೆ ಅಲ್ಲಿಗೆ ಪ್ರಸೆಂಟೇಷನ್ ಕೊಡಲು ಬಂದಿದ್ದ ಕಂಪೆನಿಯ ಓನರ್ಗೆ ಹೊಟ್ಟೆಕಿಚ್ಚು ಉಂಟಾಗಿ, ನೀವು ಹೇಳುವುದನ್ನು ನೋಡಿದರೆ ಊರಿಗೆ ಊರಿನವರನ್ನೇ ಕರೆದು ಮದುವೆಯೂಟ ಹಾಕಿಸಬೇಕು ಎನ್ನುವಂತಿದೆ ಎಂದು ಕೊಂಕು ಮಾಡುತ್ತಾಳೆ.
ಆಗ ಕಾವ್ಯಾಳ ಅಪ್ಪ ಇದೇನಮ್ಮಾ, ಈಕೆ ಅದ್ಯಾವ ಥರ ಕಂಪೆನಿ ನಡೆಸುತ್ತಾಳೆ ಎಂದಾಗ, ಕಾವ್ಯ ಮತ್ತು ಅಪ್ಪನ ಡೈಲಾಗ್ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಕಾವ್ಯಾ, ಅದು ಹಾಗೇ ಅಪ್ಪಾ... ಕೆಲವರಿಗೆ ಕಾಲೆಳೆದೇ ಮೇಲೆ ಬರುವುದು ಎಂದುಕೊಂಡಿರುತ್ತಾರೆ ಎಂದಾಗ, ಆಕೆಯ ಅಪ್ಪಾ, ಅದುಆಗಲ್ಲ... ಹಿಂದೆಯೂ ಆಗಿಲ್ಲ... ಮುಂದೆಯೂ ಆಗುವುದಿಲ್ಲ ಎನ್ನುತ್ತಾರೆ. ಇದರ ಪ್ರೊಮೋ ರಿಲೀಸ್ ಆಗಿದ್ದು, ಈ ಡೈಲಾಗ್ ಶ್ಲಾಘನೆಗೆ ಕಾರಣವಾಗಿದೆ. ಅಂದಹಾಗೆ ಆಟೋ ಡ್ರೈವರ್ ಮಗಳಾಗಿರುವ ಕಾವ್ಯಾ ಕಷ್ಟಪಟ್ಟು ಕನ್ನಡ ಮೀಡಿಯಂನಲ್ಲಿಯೇ ಓದಿ ಐಎಎಸ್ ಅಧಿಕಾರಿಯಾಗಿದ್ದು, ಈಗ ಬಹಾದ್ದೂರ್ ಕುಟುಂಬದ ಸೊಸೆಯಾಗಲು ಹೊರಟಿದ್ದಾಳೆ. ಇದರ ಮಧ್ಯೆ ಆರಾಧನಾ ಕಥೆಯಿದೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ ಧಾರಾವಾಹಿ ಪ್ರಿಯರು.
ಅವಳ ಡ್ರೆಸ್ಗೆ ರಕ್ತದ ಕಲೆ, ಮುಂದೆ?... 'ಅಂತರಪಟ' ಕೊಟ್ಟ ಒಳ್ಳೆಯ ಮೆಸೇಜ್ಗೆ ಮೆಚ್ಚುಗೆಗಳ ಮಹಾಪೂರ