ಜೀ ಕನ್ನಡ ವಾಹಿನಿಯು 'ಶಾರ್ಕ್ ಟ್ಯಾಂಕ್' ಮಾದರಿಯ 'ಐಡಿಯಾಬಾಜ್' ಎಂಬ ಹೊಸ ಬ್ಯುಸಿನೆಸ್ ರಿಯಾಲಿಟಿ ಷೋ ಅನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ, ಉದ್ಯಮಿಗಳು ತಮ್ಮ ವ್ಯವಹಾರ ಕಲ್ಪನೆಗಳನ್ನು ಹೂಡಿಕೆದಾರರ ಮುಂದೆ ಮಂಡಿಸಿ, ತಮ್ಮ ಕನಸುಗಳಿಗೆ ಬಂಡವಾಳವನ್ನು ಪಡೆಯಲಿದ್ದಾರೆ.
ಸೋನಿ ಎಂಟರೇನ್ಮೆಂಟ್ ಟಿವಿ ನೋಡುಗರಿಗೆ "ಶಾರ್ಕ್ ಟ್ಯಾಂಕ್" (Shark Tank) ರಿಯಾಲಿಟಿ ಷೋ ಹೊಸತೇನಲ್ಲ. ಇದು ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಭಿನ್ನವಾದದ್ದು. ಇದರಲ್ಲಿ ಹಾಡು, ಡಾನ್ಸು, ಕುಣಿತ, ರೊಮಾನ್ಸು, ತೀರ್ಪುಗಾರರ ಕಿರುಚಾಟ, ಸ್ಪರ್ಧಿಗಳ ಕಣ್ಣೀರಿನ ಆಟ ಇದ್ಯಾವುದೂ ಇರದ ಷೋ ಇದು. ಅದೇ ಬಿಜಿನೆಸ್ ಷೋ. ಇದರಲ್ಲಿ ಉದ್ಯಮಿಗಳು ತಮ್ಮ ವ್ಯವಹಾರ ಕಲ್ಪನೆಗಳನ್ನು ಹೂಡಿಕೆದಾರರ (ಶಾರ್ಕ್ಸ್) ಮುಂದೆ ಪ್ರಸ್ತುತಪಡಿಸುತ್ತಾರೆ. ಅವರು ಹಣ ಮತ್ತು ಮಾರ್ಗದರ್ಶನಕ್ಕಾಗಿ ಶಾರ್ಕ್ಸ್ ಅವರ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಾರೆ. ಈ ಶೋ ಅಮೆರಿಕನ್ ಕಾರ್ಯಕ್ರಮದ ಭಾರತೀಯ ಆವೃತ್ತಿ, ಶಾರ್ಕ್ ಟ್ಯಾಂಕ್ ಇಂಡಿಯಾ ಎನ್ನುವುದು ಈ ಕಾರ್ಯಕ್ರಮದ ಹೆಸರು.
ಉದ್ಯಮಿಗಳಿಗೆ ಮೀಸಲು
ಅಂದಹಾಗೆ ಇದೇ ಮಾದರಿಯ ಕಾರ್ಯಕ್ರಮವೀಗ ಕನ್ನಡದಲ್ಲಿ ಬರುತ್ತಿದೆ. ಕನ್ನಡಿಗರಿಗಾಗಿ, ಉದ್ಯಮದ ಒಳಹೊರವನ್ನು ವೀಕ್ಷಿಸುವುದಕ್ಕಾಗಿ, ಉದ್ಯಮಿಗಳು ತಮ್ಮ ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಪ್ರಸ್ತುತಿ ನೀಡುವುದಕ್ಕಾಗಿ ರೂಪುಗೊಂಡಿರುವ ರಿಯಾಲಿಟಿ ಷೋ ಈಗ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. "ಶಾರ್ಕ್ ಟ್ಯಾಂಕ್" ನಲ್ಲಿ "ಶಾರ್ಕ್ಸ್" ಎಂದು ಕರೆಯಲ್ಪಡುವ ಹೂಡಿಕೆದಾರರು ಅವರ ಕಲ್ಪನೆಗಳನ್ನು ಪರಿಶೀಲಿಸಿ, ಅವರು ಹೂಡಿಕೆ ಮಾಡಲು ಅಥವಾ ಬೆಂಬಲಿಸಲು ನಿರ್ಧರಿಸುತ್ತಾರೆ. ಕನ್ನಡದಲ್ಲಿ ಇದೇ ಕಲ್ಪನೆಯನ್ನು ಹೊತ್ತು ತಂದಿದೆ ಜೀ ಕನ್ನಡ. ಇಲ್ಲಿ ಯಾವ ರೀತಿಯ ಕಲ್ಪನೆ ಎನ್ನುವ ಬಗ್ಗೆ ಪ್ರೊಮೋದಲ್ಲಿ ವಿವರಿಸಲಾಗಿಲ್ಲ. ಆದರೆ ಈಗ ರಿಲೀಸ್ ಆಗಿರೋ ಪ್ರೊಮೋ ನೋಡಿದರೆ ನೆಟ್ಟಿಗರು "ಶಾರ್ಕ್ ಟ್ಯಾಂಕ್ ಇಂಡಿಯಾ"ದ ಸ್ವರೂಪ ಇದು ಎನ್ನುತ್ತಿದ್ದಾರೆ.
ವ್ಯವಹಾರಗಳನ್ನು ಬೆಳೆಸಲು ದೊಡ್ಡ ವೇದಿಕೆ
ಇನ್ನು "ಶಾರ್ಕ್ ಟ್ಯಾಂಕ್" ಕುರಿತು ಹೇಳುವುದಾದರೆ, ಇದು ಮೂಲತಃ ಬ್ರಿಟಿಷ್ ಕಾರ್ಯಕ್ರಮ "ಡ್ರ್ಯಾಗನ್ಸ್ ಡೆನ್" ಅನ್ನು ಆಧರಿಸಿದೆ, ಇದು ಮೊದಲ ಜಪಾನೀಸ್ ಕಾರ್ಯಕ್ರಮ "ದಿ ಟೈಗರ್ಸ್ ಆಫ್ ಮನಿ" ಅನ್ನು ಆಧರಿಸಿತ್ತು. ಅಮೆರಿಕನ್ ಆವೃತ್ತಿಯ ಯಶಸ್ಸಿನ ನಂತರ, ಕೆನಡಾ, ಯುಕೆ, ಆಸ್ಟ್ರೇಲಿಯಾ ಮತ್ತು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇದರ ಆವೃತ್ತಿಗಳು ಬಿಡುಗಡೆಯಾಗಿವೆ. ಈ ಕಾರ್ಯಕ್ರಮವು ಅನೇಕ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಬೆಳೆಸಲು ದೊಡ್ಡ ವೇದಿಕೆಯಾಗಿ ಪರಿಣಮಿಸಿದೆ.
ಕನಸಿಗೆ ರೆಕ್ಕೆ ಪುಕ್ಕ
ಈಗ ವಾಹಿನಿ ರಿಲೀಸ್ ಮಾಡಿರುವ ಪ್ರೋಮೋದಲ್ಲಿ, ಉದ್ಯಮಿಗಳು ಈ ಬಗ್ಗೆ ಐಡಿಯಾ ನೀಡಿದ್ದಾರೆ. ಒಂದು ಹಂತದಲ್ಲಿ ಬಿಡ್ ಶುರುವಾಗಿ ಕೊನೆಗೆ ಅದು 8.5 ಕೋಟಿಗೆ ಬಂದು ನಿಲ್ಲುತ್ತದೆ. ಈ ರೀತಿ ಮಾಡುವ ಮೂಲಕ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಹೇಗೆ ಬೆಳೆಸಲು ಎನ್ನುವುದನ್ನು ತಿಳಿಸಲಾಗಿದೆ. ತಲೆಬುಡ ಇಲ್ಲದ ರಿಯಾಲಿಟಿ ಷೋಗಳಿಗಿಂತ ಇಂಥದ್ದೊಂದು ಷೋ ಮಾಡ್ತಿರೋದು ತುಂಬಾ ಹೆಮ್ಮೆ ಹಾಗೂ ಸಂತೋಷದ ಸಂಗತಿ ಎಂದು ಹಲವರು ಕಮೆಂಟ್ನಲ್ಲಿ ತಿಳಿಸುತ್ತಿದ್ದಾರೆ. ಅಂದಹಾಗೆ ಇದರ ಹೆಸರು IDEABAAZ. ಹೊಸ ಹೊಸ ಐಡಿಯಾಗಳ ಮೂಲಕ ನಿಮ್ಮ ಬ್ಯುಸಿನೆಸ್ ಕನಸಿಗೆ ರೆಕ್ಕೆ ಕಟ್ಟುವ ವಿನೂತನ ಕಾರ್ಯಕ್ರಮ ಎನ್ನುವ ಶೀರ್ಷಿಕೆ ನೀಡಲಾಗಿದೆ.


