ಪರ್‌ದೇಸ್, ಧಡ್‌ಕನ್, ದೀವಾನೆಯಂಥ ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್ ಬ್ಯೂಟಿ ಮಹಿಮಾ ಚೌಧರಿ ಮದುವೆಯಾಗಿರುವ ಬಗ್ಗೆ ರೂಮರ್‌ಗಳು ಹಬ್ಬಿದೆ. ಅದರಲ್ಲೂ ತನಗಿಂತ 10 ವರ್ಷ ಹಿರಿಯ 62 ವರ್ಷದ ಸಂಜಯ್ ಮಿಶ್ರಾ ಕೈಹಿಡಿದಿದ್ದಾರೆ ಎನ್ನುವ ವರದಿಯಾಗಿದೆ.
ನಟಿ ಮಹಿಮಾ ಚೌಧರಿಯ ವಿಡಿಯೋವೊಂದು ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅದಕ್ಕೆ ಕಾರಣವೂ ಇದೆ. ಈ ವೈರಲ್ ವಿಡಿಯೋದಲ್ಲಿ, 52 ವರ್ಷದ ಮಹಿಮಾ ಅವರಿಗಿಂತ 10 ವರ್ಷ ದೊಡ್ಡವರಾದ ನಟ ಸಂಜಯ್ ಮಿಶ್ರಾ ಅವರನ್ನು ಮದುವೆಯಾಗುತ್ತಿರುವುದು ಕಂಡು ಬಂದಿದೆ. ಈ ದಂಪತಿಗಳು ಈ ಹಿಂದೆಯೂ ಇದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದರು.
ಮಹಿಮಾ ಮತ್ತು ಸಂಜಯ್ ಪರಸ್ಪರ ಕೊರಳಲ್ಲಿ ಹಾರ ಹಾಕಿಕೊಂಡಿದ್ದು ಮಾತ್ರವಲ್ಲದೆ ಮಾಧ್ಯಮಗಳ ಮುಂದೆಯೇ ವಿವಾಹ ವಿಧಿವಿಧಾನಗಳನ್ನು ನಡೆಸಲಾಯಿತು. ಇದರಿಂದಾಗಿ, ನೆಟ್ಟಿಗರು ಸಹ ಅಲ್ಲಿ ನಿಜವಾಗಿ ಆಗಿದ್ದೇನು ಅನ್ನೋದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ವೀಡಿಯೊದ ಹಿಂದಿನ ನಿಜವಾದ ಸತ್ಯ ಏನೆಂದು ತಿಳಿಯಲು ನೆಟ್ಟಿಗರು ಬಯಸಿದ್ದು, ಅನೇಕರು, ವಿಚ್ಛೇದಿತೆಯಾಗಿರುವ ಮಹಿಮಾ ಚೌಧರಿ 52ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಿದ್ದೇಕೆ ಅನ್ನೋ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ.
ಅಸಲಿಗೆ ವಿಡಿಯೋದಲ್ಲಿ ಇರೋದೇನು?
ಈ ವಿಡಿಯೋದಲ್ಲಿ ಸಂಜಯ್ ಮಿಶ್ರಾ ಮತ್ತು ಮಹಿಮಾ ಚೌಧರಿ ವಿವಾಹ ವಿಧಿವಿಧಾನಗಳನ್ನು ನಿರ್ವಹಿಸಿದ್ದರೂ, ಇಬ್ಬರೂ ನಿಜವಾಗಿಯೂ ಮದುವೆಯಾಗಿಲ್ಲ. ಅವರು ಇದನ್ನೆಲ್ಲಾ ಮಾಡಿದ್ದು ತಮ್ಮ ಮುಂಬರುವ ಚಿತ್ರ 'ದುರ್ಲಭ್ ಪ್ರಸಾದ್ ಕಿ ದುಶ್ರಿ ಶಾದಿ' ಪ್ರಚಾರಕ್ಕಾಗಿ. ಸಿದ್ಧಾಂತ್ ರಾಜ್ ಸಿಂಗ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 19 ರಂದು ಬಿಡುಗಡೆಯಾಗಲಿದೆ.
ಚಿತ್ರದ ಟ್ರೇಲರ್ ಗುರುವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಟ್ರೇಲರ್‌ನಲ್ಲಿ, ದುರ್ಲಭ್ ಪ್ರಸಾದ್ (ಸಂಜಯ್ ಮಿಶ್ರಾ) ತಮ್ಮ ಮಗನ ಮದುವೆಯ ಜೊತೆ ಸ್ವತಃ ತಾವೂ ಮದುವೆಗೆ ಸಿದ್ಧರಾಗುವುದನ್ನು ನಾವು ನೋಡುತ್ತೇವೆ. ಏಕೆಂದರೆ ವಧು-ವರರು ಮನೆಗೆ ಒಬ್ಬ ಮಹಿಳೆ ಬರುವವರೆಗೆ ಆ ಮನೆಯಲ್ಲಿರುವ ಹುಡುಗಿಯನ್ನು ಮದುವೆಯಾಗಬಾರದು ಎಂಬ ಷರತ್ತನ್ನು ಹೊಂದಿದ್ದಾರೆ. ಈ ಸಮಯದಲ್ಲಿ, ಮಹಿಮಾ ಚೌಧರಿ ದುರ್ಲಭ್ ಪ್ರಸಾದ್ ಅವರ ಜೀವನವನ್ನು ಪ್ರವೇಶಿಸುತ್ತಾರೆ. ಆಕೆಗೆ ಮದ್ಯ ಮತ್ತು ಸಿಗರೇಟ್‌ನಂತಹ ಎಲ್ಲಾ ಕೆಟ್ಟ ಅಭ್ಯಾಸಗಳಿವೆ. ಇದರ ನಂತರ, ಅವರಿಬ್ಬರ ಜೀವನದಲ್ಲಿ ಒಂದು ದೊಡ್ಡ ತಿರುವು ಬರುತ್ತದೆ ಇದು ಚಿತ್ರದ ಕಥಾಹಂದರವಾಗಿದೆ.
ಈ ಹಿಂದೆ, ವಧುವಿನ ಲುಕ್‌ನಲ್ಲಿರುವ ಮಹಿಮಾ ಅವರ ವೀಡಿಯೊ ವೈರಲ್ ಆಗಿತ್ತು. ಈ ಕ್ಲಿಪ್ ನೋಡಿದ ನಂತರ, 52 ನೇ ವಯಸ್ಸಿನಲ್ಲಿ ಮಹಿಮಾ ಚೌಧರಿ ಮತ್ತೆ ಮದುವೆಯಾಗಿದ್ದಾರೆಯೇ ಎಂದು ನೆಟ್ಟಿಗರು ಅಚ್ಚರಿಪಟ್ಟದ್ದರು. ಆ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. 'ನನಗೆ ಅರ್ಥವಾಗುತ್ತಿಲ್ಲ, ನನಗೆ ಏನೂ ಅರ್ಥವಾಗುತ್ತಿಲ್ಲ' ಎಂದು ಒಬ್ಬರು ಬರೆದಿದ್ದಾರೆ. 'ಇವರು ಮಹಿಮಾ ಅವರ ಗಂಡನಾ' ಎಂದು ಮತ್ತೊಬ್ಬರು ಬರೆದಿದ್ದರು. 'ಮಹಿಮಾ ಚೌಧರಿ ಇಷ್ಟು ವಯಸ್ಸಾದ ವ್ಯಕ್ತಿಯನ್ನು ಏಕೆ ಮದುವೆಯಾದರು' ಎಂದು ಮತ್ತೊಬ್ಬ ಯೂಸರ್ ಪ್ರಶ್ನೆ ಮಾಡಿದ್ದರು.


