ಅಮೃತಧಾರೆ ಧಾರಾವಾಹಿಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಗೌತಮ್ ಪರವಾಗಿ ಭೂಮಿಕಾ ವಠಾರದವರ ವಿರುದ್ಧ ರೊಚ್ಚಿಗೆದ್ದಿದ್ದಳು. ಆದರೆ, ವೈರಲ್ ಆದ ವಿಡಿಯೋವೊಂದರಲ್ಲಿ, ಗೌತಮ್ ವಿರುದ್ಧ ಹೇಗೆ ಮಾತನಾಡಬೇಕೆಂದು ಭೂಮಿಕಾ ಅವರೇ ಹೇಳಿಕೊಡುತ್ತಿರುವ ದೃಶ್ಯವಿದೆ. ಇದೇನಿದು ಟ್ವಿಸ್ಟ್?
ಅಮೃತಧಾರೆಯಲ್ಲಿ (Amruthadhaare) ಗೌತಮ್ ಅನಾರೋಗ್ಯದಿಂದ ಮಲಗಿದ್ದಾಗ, ಭೂಮಿಕಾ ಆತನ ಸೇವೆ ಮಾಡಿದ್ದಳು. ಗೌತಮ್ ಮತ್ತು ಭೂಮಿಕಾರ ಈ ನಡವಳಿಕೆ ನೋಡ್ತಾ ಇದ್ದ ವಠಾರದವರಿಗೆ ಇಬ್ಬರ ಮೇಲೆ ಅನುಮಾನ ಶುರುವಾಗಿತ್ತು. ಮೊದಲಿಗೆ ಅವರ ಮನೆಯಿಂದ ಹೊರಕ್ಕೆ ಬಂದದ್ದನ್ನು ನೋಡಿದ ಹೆಂಗಸರು ಎಲ್ಲಿ ನಿಮ್ಮ ಗಂಡ ಕಾಣಿಸ್ತಾನೆ ಇಲ್ವಲ್ಲಾ. ಇದೆಲ್ಲಾ ಅವರು ನೋಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದಿದ್ದಾರೆ. ಅದಕ್ಕೆ ಭೂಮಿಕಾ ಕುದಿಯುತ್ತಿದ್ದರೂ ಸುಮ್ಮನಾಗಿದ್ದಳು.
ಸುಸ್ತಾದ ವಠಾರದ ಮಂದಿ
ಬಳಿಕ ಸುಮ್ಮನಾಗದ ವಠಾರದವರು, ಗೌತಮ್ ಹೀಗೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದರು. ಗಂಡನ ವಿರುದ್ಧ ಮಾತನಾಡಿದ್ದನ್ನು ನೋಡಿ ರಣಚಂಡಿ ಅವತಾರ ಎತ್ತೇಬಿಟ್ಟಿದ್ದಾಳೆ ಭೂಮಿಕಾ. ವಠಾರದ ಹೆಂಗಸರಿಗೆ ಚಾಟಿ ಏಟು ನೀಡಿದ್ದಳು. ಅವರು ಬಂದು ಐದು ವರ್ಷವಾಯ್ತು. ಒಮ್ಮೆಯಾದರೂ ಈ ವಠಾರದ ಹೆಣ್ಣುಮಕ್ಕಳ ಮೇಲೆ ಕೆಟ್ಟ ಕಣ್ಣು ಹಾಕಿದ್ದಾರಾ ಎಂದು ಪ್ರಶ್ನಿಸಿದ್ದಳು. ಅವರು ಹೊರಗಡೆ ಕೆಲವು ದಿನಗಳಿಂದ ಬರಲಿಲ್ಲ. ಅದನ್ನು ಯಾರಾದ್ರೂ ಗಮನಿಸಿ ಅವರಿಗೆ ಏನು ಆಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ರಾ ಎಂದು ಪ್ರಶ್ನಿಸಿದ್ದಳು. ಅವಳ ಈ ರೌದ್ರಾವತಾರಕ್ಕೆ ಮಹಿಳೆಯರು ಸುಸ್ತಾಗಿ ತಲೆ ಬಗ್ಗಿಸಿ ನಿಂತಿದ್ದರು. ಅವರು ಎಷ್ಟೆಲ್ಲಾಮಂದಿಗೆ ಹೆಲ್ಪ್ ಮಾಡಿದ್ದಾರೆ. ನೀವು ಅವರಿಗೆ ಏನು ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ ಭೂಮಿಕಾ, ಅವರ ಬಗ್ಗೆ ಮಾತನಾಡಲು ನಿಮಗೆ ಯಾರಿಗೂ ಅರ್ಹತೆ ಇಲ್ಲ ಎಂದಿದ್ದಳು.
ವೈರಲ್ ವಿಡಿಯೋದಲ್ಲಿ ಬದಲು
ಆ ಬಳಿಕ ತಪ್ಪನ್ನು ಅರಿತ ವಠಾರದವರೆಲ್ಲರೂ ಬ್ರೇಡ್ಡು, ಹಣ, ತಿಂಡಿ ಸಹಿತ ಗೌತಮ್ನನ್ನು ನೋಡಲು ಹೋಗಿದ್ದರು. ಅದರೆ ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಗೌತಮ್ ವಿರುದ್ಧ ವಠಾರದ ಹೆಂಗಸರು ಹೇಗೆ ಮಾತನಾಡಬೇಕು ಎಂದು ಖುದ್ದು ಭೂಮಿಕಾನೇ ಹೇಳಿಕೊಟ್ಟಿರೋದು ಕಂಡುಬಂದಿದೆ! ಅಷ್ಟಕ್ಕೂ ಇದು ಅಮೃತಧಾರೆಯ ಮೇಕಿಂಗ್ ವಿಡಿಯೋ. ಶೂಟಿಂಗ್ ಸಮಯದಲ್ಲಿ ಭೂಮಿಕಾ ಅರ್ಥಾತ್ ನಟಿ ಛಾಯಾ ಸಿಂಗ್ (Chaya Singh) ಅವರು, ಡೈಲಾಗ್ ಮರೆತ ವಠಾರದ ಹೆಂಗಸರಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಸಿಟ್ಟಾಗುವ ಬದಲು ಮೊದಲಿಗೆ ಜೋರಾಗಿ ನಕ್ಕಿರುವುದನ್ನು ಕೂಡ ಈ ಮೇಕಿಂಗ್ ವಿಡಿಯೋದಲ್ಲಿ ನೋಡಬಹುದಾಗಿದೆ!
ಇದನ್ನು ನೋಡಿ ಹಲವರು ತಮಾಷೆ ಮಾಡಿದ್ದಾರೆ. ಗಂಡನ ವಿರುದ್ಧ ವಠಾರದ ಹೆಂಗಸರಿಗೆ ಎತ್ತಿ ಕೊಟ್ಟಿದ್ದು ನೀವೇನಾ ಎಂದು ಪ್ರಶ್ನಿಸುತ್ತಿದ್ದಾರೆ. ಹೇಗೆ ಮಾತನಾಡಬೇಕು ಎಂದು ನೀವೇ ಹೇಳಿ, ಕೊನೆಗೆ ನೀವೇ ಸಿಟ್ಟಾದ್ರಲ್ಲ ಎಂದು ಮತ್ತೆ ಕೆಲವರು ತಮಾಷೆ ಮಾಡಿದ್ದಾರೆ.
