ಅಮೃತಧಾರೆಯ ಭಾಗ್ಯಮ್ಮನಿಗೆ ಫೈನಲೀ ಮಾತು ಬಂದಿದೆ. ಇನ್ನಾದ್ರೂ ಭಾಗ್ಯಮ್ಮಂಗೆ ಡೈಲಾಗ್ ಕೊಡಿ ಡೈರೆಕ್ಟ್ರೇ ಅಂತ ವೀಕ್ಷಕರು ಕೇಳುತ್ತಿದ್ದಾರೆ. ಸದ್ಯಕ್ಕಂತೂ ಕಂಪ್ಲೀಟ್ ಫೋಕಸ್ ಅವ್ರ ಮೇಲೇ ಇದೆ. ಮುಂದೇನಾಗಬಹುದು ಅಂದ್ರೆ..
ಅಮೃತಧಾರೆ ಸೀರಿಯಲ್‌ನಲ್ಲಿ ಸದ್ಯಕ್ಕೆ ಕುತೂಹಲ ಓವರ್‌ಲೋಡೆಡ್ ಆಗಿದೆ. ಆದರೆ ಈಗಾಗಲೇ ರಿಲೀಸ್ ಆಗಿರೋ ಪ್ರೊಮೋದಲ್ಲಿ ಈ ಸೀರಿಯಲ್‌ನ ಪ್ರಮುಖ ಪಾತ್ರ ಭಾಗ್ಯಮ್ಮಂಗೆ ಮಾತು ಬಂದಿದೆ. ಮೊನ್ನೆಯಿಂದಲೇ ಈ ಪ್ರೋಮೋ ಓಡಾಡ್ತಿದೆ. ಇದು ವೀಕ್ಷಕರ ಖುಷಿಯನ್ನಂತೂ ಹೆಚ್ಚಿಸಿದೆ. ಯಾಕಂದರೆ ಈ ಭಾಗ್ಯಮ್ಮನ ಪಾತ್ರ ಸೀರಿಯಲ್‌ನಲ್ಲಿ ಬಹಳ ಮುಖ್ಯವಾದದ್ದು. ಈ ಸೀರಿಯಲ್‌ನ ಮಧ್ಯಭಾಗದಿಂದ ಅವರ ಎಂಟ್ರಿ ಆಗಿತ್ತು. ಒಂದು ಹಂತದಲ್ಲಿ ಅವರ ಹಾಗೂ ಗೌತಮ್ ನಡುವೆ ಯಾವ ಲೆವೆಲ್‌ಗೆ ಕಣ್ಣಾಮುಚ್ಚಾಲೆ ನಡೀತು ಅಂದರೆ ಅದನ್ನು ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ನೋಡಿದ್ರು. ಆದರೆ ಆಮೇಲೆ ಕಥೆ ಬೇರೆ ತಿರುವು ಪಡೆದದ್ದೇ ಈ ಪಾತ್ರ ಮೂಲೆ ಗುಂಪಾಯ್ತು. ಹುಷಾರು ತಪ್ಪಿ ಮೂಲೆಯಲ್ಲಿ ಕೂರೋದು ಅಮಾಯಕಳಂತೆ, ಅಸಹಾಯಕಳಂತೆ ಪರಿಸ್ಥಿತಿಯನ್ನು ನೋಡಿ ಏನೂ ಮಾಡೋದಕ್ಕಾಗದೇ ಇರೋದು. ವಿಲನ್‌ಗಳ ಕಪಿಮುಷ್ಠಿಯಲ್ಲಿ ಬಂಧಿಯಾಗಿ ಎಲ್ಲ ಗೊತ್ತಿದ್ದೂ ಏನೂ ಗೊತ್ತಿಲ್ಲದವಳ ಹಾಗೆ ಇರಬೇಕಾಯ್ತು. ಫೈನಲೀ ಎಲ್ಲ ಸರಿಹೋಗ್ತಿದೆ ಅನ್ನುವಾಗ ಸೀರಿಯಲ್‌ನಲ್ಲಿ ಮಹಾ ತಿರುವೇ ಆಗಿಬಿಟ್ಟಿತು. ಆ ಸ್ಫೋಟಕ್ಕೆ ಸೀರಿಯಲ್‌ನ ಅಷ್ಟೂ ಪಾತ್ರಗಳೂ ಚದುರಿಬಿದ್ದವು. ಭಾಗ್ಯಮ್ಮ ಗೌತಮ್ ಗೆಳೆಯ ಆನಂದ್ ಮನೆಯಲ್ಲಿ ಉಳಿಯಬೇಕಾಯ್ತು.
ಇಷ್ಟೂ ದಿನ ಆನಂದ್ ಮನೆಯಲ್ಲಿ ಭೂಮಿಕಾ ಎಲ್ಲಿದ್ದಾಳೆ ಎಂದು ಗೊತ್ತಿಲ್ಲದೇ ಮಗ, ಸೊಸೆ ಎಂದಾದ್ರೂ ಒಂದಾಗ್ಲಿ ಎಂದು ದೇವರಲ್ಲಿ ಬೇಡ್ಕೊಳ್ತಿದ್ದ ಮೂಕ ಜೀವಕ್ಕೆ ಇದೀಗ ಇದ್ದಕ್ಕಿದ್ದ ಹಾಗೆ ಮಾತು ಬಂದುಬಿಟ್ಟಿದೆ. ಕಾರ್ತಿಕ ದೀಪ ನೋಡಲು ದೇವಸ್ಥಾನಕ್ಕೆ ಹೋದ ಭೂಮಿಕಾ ಭಾಗ್ಯಮ್ಮ ಕಣ್ಣಿಗೆ ಬಿದ್ದಿದ್ದಾಳೆ. ಅವಳ ಆಟೋ ಹಿಂಬಾಲಿಸಿಕೊಂಡು ಭಾಗ್ಯಮ್ಮ ದೇವಸ್ಥಾನಕ್ಕೆ ಹೋಗಿದ್ದಾರೆ. ಅಲ್ಲಿ ಅವರಿಗೆ ಮಾತೂ ಬಂದಿದೆ. ಅವರಿಗೆ ಮಾತು ಬಂದಿದ್ದು ಕೇಳಿ ವೀಕ್ಷಕರಿಗೆ ಭಾರೀ ಖುಷಿ ಆಗಿದೆ. ಭಾಗ್ಯಮ್ಮ ಪಾತ್ರ ಮಾಡಿದ ಚಿತ್ಕಳಾ ಬಿರಾದಾರ್ ಪ್ರತಿಭಾವಂತ ಕಲಾವಿದೆ. ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿರೋ ಇವರು ಮನೆ ಮಾತಾದದ್ದು 'ಕನ್ನಡತಿ' ಸೀರಿಯಲ್ ಮೂಲಕ. ಅದರಲ್ಲಿ ದೊಡ್ಡ ಕಂಪನಿಯ ಸ್ಥಾಪಕಿಯಾಗಿ, ಸಿಂಗಲ್ ಪೇರೆಂಟ್ ಆಗಿ ಇವರ ಪಾತ್ರವನ್ನು ಜನ ಬಹಳ ಮೆಚ್ಚಿಕೊಂಡಿದ್ದರು. ಇವರ ಪಾತ್ರದ ಕೊನೆಯಾದಾಗ ಬಹಳ ಮಂದಿ ಕಣ್ಣೀರು ಹಾಕಿದ್ರು.
ಚಿತ್ಕಳಾ ಬಿರಾದಾರ್ ಎಂಬ ಪ್ರತಿಭಾವಂತೆ
ಅಮೃತಧಾರೆ ಸೀರಿಯಲ್‌ಗೆ ಚಿತ್ಕಳಾ ಎಂಟ್ರಿ ಕೊಡ್ತಾರೆ ಅಂದಾಗ ಅವರ ಸೊಗಸಾದ ಡೈಲಾಗ್ ಡೆಲಿವರಿ ಕೇಳಬಹುದು ಎಂಬ ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ಅವರ ಮೂಕಿ ಪಾತ್ರದಿಂದ ನಿರಾಸೆ ಆಗಿತ್ತು. ಒಮ್ಮೆ ಸ್ಕ್ರೀನ್ ಸ್ಪೇಸ್ ಚೆನ್ನಾಗಿ ಸಿಕ್ಕರೂ ಆಮೇಲೆ ಈ ಪಾತ್ರ ಮೂಲೆಗುಂಪಾಗಿತ್ತು. ನಾಯಕ, ನಾಯಕಿ ಪಾತ್ರ, ಮಕ್ಕಳು ಎಲ್ಲ ಬಂದು ಮನರಂಜನೆ ಚೆನ್ನಾಗಿ ಸಿಕ್ಕುತ್ತಿದ್ದ ಕಾರಣ ಇದು ವೀಕ್ಷಕರಿಗೆ ಅಷ್ಟಾಗಿ ಗಮನಕ್ಕೆ ಬರಲಿಲ್ಲ. ಆದರೆ ಇದೀಗ ಭಾಗ್ಯಮ್ಮಂಗೆ ಮಾತು ಬಂದಿರೋದು ಜನರಲ್ಲಿ ನಿರೀಕ್ಷೆ ಹುಟ್ಟಿಸಿದೆ. ಅವರು 'ಕನ್ನಡತಿ' ಸೀರಿಯಲ್‌ನಂತೆ ಇಲ್ಲೂ ಸ್ಟ್ರಾಂಗ್ ಪಾತ್ರ ಮಾಡಲಿ. ಅವರಿಗೆ ಮಾತು ಬಂದಿರೋ ಕಾರಣ ಇಡೀ ಸ್ಟೋರಿಗೆ ತಿರುವು ಸಿಕ್ಕೋ ಕಾರಣ ಅವರ ಪಾತ್ರ ಹೆಚ್ಚೆಚ್ಚು ಹೈಲೈಟ್ ಆಗಲಿ ಎಂದು ವೀಕ್ಷಕರು ಕೇಳ್ತಿದ್ದಾರೆ.
ಈಗಿನ ಸೀರಿಯಲ್ ಕಥೆ ಹೋಗುತ್ತಿರುವ ರೀತಿ ನೋಡಿದ್ರೆ ಅವರ ನಿರೀಕ್ಷೆ ಈಡೇರೋ ಸಾಧ್ಯತೆ ಕಾಣ್ತಿದೆ. ಅಂದರೆ ಭಾಗ್ಯಮ್ಮಂಗೆ ಹೆಚ್ಚೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿ ಅವರು ಸೆಂಟರ್ ಪಾಯಿಂಟ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆ ಒಂದು ಶುಭ ಗಳಿಗೆಗಾಗಿ ವೀಕ್ಷಕರು ಸದ್ಯ ಎದುರು ನೋಡುತ್ತಿದ್ದಾರೆ. ಸೋ ಮುಂದಿನ ದಿನಗಳಲ್ಲಿ ಭಾಗ್ಯಮ್ಮನ ಹಳೇ ವೈಭವ ಮರಳಿ ಬರುವ ಭರವಸೆ ಸದ್ಯ ನಿರೀಕ್ಷೆ ಹೆಚ್ಚಿಸಿದೆ.


