ನೀವು ಬಸ್ ಲಾರಿಗಳ ಟಾಪ್ ಮೇಲೆ ಕುಳಿತು ಜನ ಸಂಚರಿಸುವುದನ್ನು ನೋಡಿರಬಹುದು. ಆದರೆ ಇಲ್ಲೊಂದು ಕಡೆ ರೈಲಿನೊಳಗೆ ಸೀಟು ಹಿಡಿಯಲಾಗದ ಮಹಿಳೆಯೊಬ್ಬಳು ರೈಲಿನ ಟಾಪ್ ಮೇಲೆ ಏರಲು ಯತ್ನಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀವು ಬಸ್ ಲಾರಿಗಳ ಟಾಪ್ ಮೇಲೆ ಕುಳಿತು ಜನ ಸಂಚರಿಸುವುದನ್ನು ನೋಡಿರಬಹುದು. ಆದರೆ ಇಲ್ಲೊಂದು ಕಡೆ ರೈಲಿನೊಳಗೆ ಸೀಟು ಹಿಡಿಯಲಾಗದ ಮಹಿಳೆಯೊಬ್ಬಳು ರೈಲಿನ ಟಾಪ್ ಮೇಲೆ ಏರಲು ಯತ್ನಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಬ್ಬಗಳ ಸಂದರ್ಭದಲ್ಲಿ ನಗರದಲ್ಲಿ ಅಥವಾ ಇನ್ನಾವುದೋ ದೂರದ ಊರಿನಲ್ಲಿ ಇರುವವರೆಲ್ಲಾ ಜೊತೆಯಾಗಿ ತಮ್ಮ ಮೂಲ ಊರಿನತ್ತ ಹೋಗಲು ಹಾತೊರೆಯುವುದರಿಂದ ಬಸ್ ರೈಲುಗಳೆಲ್ಲಾ ತುಂಬಿ ತುಳುಕಾಡುತ್ತಿರುತ್ತದೆ. ಅಂತಹದ್ದೇ ಯಾವುದೋ ಸಂದರ್ಭದ ವಿಡಿಯೋ ಇದಾಗಿದ್ದು, ರೈಲಿನ ಒಳಗೆ ಜಾಗ ಹಿಡಿಯಲಾಗದ ಮಹಿಳೆ ರೈಲಿನ ಕಿಟಕಿಗೆ ಏರಿ ಕಿಟಕಿಯಿಂದ ಟಾಪ್‌ಗೆ ಏರಿ ಕುಳಿತುಕೊಳ್ಳಲು ಹರಸಾಹಸ ಮಾಡುತ್ತಾಳೆ. ಇತ್ತ ಈಗಾಗಲೇ ರೈಲಿನ ಟಾಪ್ ಮೇಲೇರಿ ಕುಳಿತ ಕೆಲವರು ಆಕೆಯನ್ನು ಎರಡು ಕೈಗಳಿಂದ ಹಿಡಿದು ಮೇಲೆತ್ತಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಈಕೆಯನ್ನು ನೋಡಿದ ರೈಲ್ವೆ ಪೊಲೀಸ್ ಒಬ್ಬರು ಲಾಠಿಯನ್ನು ಹಿಡಿದು ಆಕೆಯನ್ನು ಕೆಳಗಿಳಿಯುಂತೆ ಹೇಳುತ್ತಾರೆ. ನಂತರ ಮಹಿಳೆ ರೈಲಿನ ಕಿಟಕಿಯಿಂದ ಕೆಳಗಿಳಿದು ಫ್ಲಾಟ್‌ಫಾರ್ಮ್‌ನತ್ತ ಬರುತ್ತಾಳೆ.
ರೈಲು ಪ್ರಯಾಣವನ್ನು ಬಹುತೇಕರು ಇಷ್ಟಪಡುತ್ತಾರೆ. ಕಿಟಿಕಿಯ ಪಕ್ಕದಲ್ಲಿ ಕುಳಿತು ಹೊರಗಿನ ಸುಂದರ ದೃಶ್ಯಗಳನ್ನು ನೋಡುತ್ತಾ ಸಾಗುವುದೇ ಒಂದು ಚಂದ. ಆದರೆ ಎಲ್ಲಾ ಸಮಯದಲ್ಲಿ ಅದೂ ಸುಲಭವಲ್ಲ. ಒಂದು ವೇಳೆ ನೀವು ಮೊದಲೇ ಸೀಟು ಕಾಯ್ದಿರಿಸದೇ ಇದ್ದಲ್ಲಿ ಅದು ನರಕಸದೃಶವಾಗುವುದು. ಸೀಟು ಕಾಯ್ದಿರಿಸದೇ ರೈಲಿನಲ್ಲಿ ಸೀಟು ಹಿಡಿಯುವುದು ಬಲು ದುಸ್ಸಾಹಸದ ಕೆಲಸವಾಗಿದೆ. ರೈಲಿನೊಳಗೆ ಸೀಟು ಪಡೆಯಲಾಗದ ಜನ ಕೆಲವೊಮ್ಮ ಹೇಗಾದರು ಮಾಡಿ ಊರು ಸೇರಲೇಬೇಕು ಎಂಬ ಹಠದಿಂದ ರೈಲಿನ ಟಾಪ್ ಮೇಲೆಯೂ ಕುಳಿತು ಸಂಚರಿಸುವ ಮೂಲಕ ಜೀವವನ್ನು ಅಪಾಯಕ್ಕೆ ಒಡ್ಡುತ್ತಾರೆ. ಹಾಗೆಯೇ ಈ ಮಹಿಳೆ ಇಲ್ಲಿ ಜನರಿಂದ ಕಿಕ್ಕಿರಿದು ತುಂಬಿದ್ದ ರೈಲನ್ನು ಏರಲು ಮಾಡಿದ ಈ ಸಾಹಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ವಿಶ್ವದ ಅತ್ಯಂತ ರಮಣೀಯ ರೈಲು ಪ್ರಯಾಣಗಳು
ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎನ್ನಲಾಗಿದೆ. fresh_outta-stockz ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಬಾಂಗ್ಲಾದೇಶದ ರೈಲು ನಿಲ್ದಾಣದಲ್ಲಿ ಮತ್ತೊಂದು ದಿನ ಎಂದು ಕ್ಯಾಪ್ಷನ್ ನೀಡಲಾಗಿದೆ. ಬಾಂಗ್ಲಾದೇಶದ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲೊಂದರ ದೃಶ್ಯ ಇದಾಗಿದೆ. ಈ ವಿಡಿಯೋವನ್ನು 12 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಲ್ಲದೇ 3 ಲಕ್ಷಕ್ಕೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಮೆಂಟ್‌ಗಳನ್ನು ಕೂಡ ಮಾಡಿದ್ದು, ಅತೀಯಾದ ಜನಸಂಖ್ಯೆಯ ಪರಿಣಾಮ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಯಾವುದೇ ಹಿಡಿದುಕೊಳ್ಳುವಂತಹ ವಸ್ತುಗಳಿಲ್ಲದೇ ಇಷ್ಟೊಂದು ಜನ ಹೇಗೆ ರೈಲಿನ ಟಾಪ್ ಏರಿ ಕುಳಿತಿದ್ದಾರೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.