ಲಾಕ್‌ಡೌನ್ ಹೇರಿ ಜನರೆಲ್ಲ ಮನೆಯೊಳಗೇ ಇರಲು ತೊಡಗಿದ ಮೇಲೆ ಪ್ರಕೃತಿಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಮಾಲಿನ್ಯ ತಗ್ಗಿದ್ದರಿಂದ ಹಿಡಿದು, ವನ್ಯಪ್ರಾಣಿಗಳು ನಿರ್ಭಿಡೆಯಿಂದ ರಸ್ತೆಗಿಳಿದು ಓಡಾಡುವವರೆಗೆ. 200 ಕಿಲೋಮೀಟರ್ ದೂರದಿಂದ ಹಿಮಾಲಯ ಕಾಣಿಸುವುದು, ಜಲಚರಗಳು ಹಾಯಾಗಿ ಎಂದೂ ಇಲ್ಲದಂತೆ ಕಡಲತಡಿಯಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿರುವುದು ಹೀಗೆ ಪ್ರತಿದಿನ ಒಂದೊಂದು ಪಾಸಿಟಿವ್ ಬದಲಾವಣೆಗಳನ್ನು ಓದುತ್ತಲೇ ಬಂದಿದ್ದೇವೆ. ಈಗ ಇವುಗಳೊಂದಿಗೆ ಮತ್ತೊಂದು ಸೇರ್ಪಡೆ ಲಾಕ್‌ಡೌನ್ ಎಫೆಕ್ಟಿನಿಂದಾಗಿ ಬದಲಾದ ಕೆರೆಯ ಸ್ವರೂಪ. 

ಹೌದು, ಮಹಾರಾಷ್ಟ್ರದ ಲೋನಾರ್ ಲೇಕ್‌ಗೆ 50,000 ವರ್ಷಗಳ ಇತಿಹಾಸವಿದೆ. 77.69 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಬ್ಬಿರುವ ಈ ಕೆರೆಯು 50,000 ವರ್ಷಗಳ ಹಿಂದೆ ಉಲ್ಕೆಯೊಂದು ಭೂಮಿಗೆ ಬಡಿದಾಗ ಸೃಷ್ಟಿಯಾಗಿದೆ. ಈ ಅತಿ ಪುರಾತನ ಕೆರೆ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪಿಂಕ್ ಬಣ್ಣಕ್ಕೆ ತಿರುಗಿ ಸ್ಥಳೀಯರಿಗೂ, ವಿಜ್ಞಾನಿಗಳಿಗೂ ಅಚ್ಚರಿ ಮೂಡಿಸಿದೆ. ಇದುವರೆಗೂ ಈ ಕೆರೆನೀರಿನ ಬಣ್ಣ ಕೊಂಚ ಹಸಿರಾಗಿತ್ತು. 

ಕೋರೋನಾ ಸಮಯದ 3 ತಿಂಗಳಲ್ಲಿ ಬಿಲಿಯೇನರ್‌ ಆದ ಬಡ ದಂಪತಿ

ಬಣ್ಣ ಬದಲಾದದ್ದಕ್ಕೆ ಕಾರಣವೇನು?
ಆಸ್ಟ್ರೇಲಿಯಾದ ಉಟ್ಹಾ ಕೆರೆ ಪಿಂಕ್ ಬಣ್ಣದಲ್ಲಿದ್ದು, ಜಗತ್ಪ್ರಸಿದ್ಧವಾಗಿರುವ ಬಗ್ಗೆ ನಿಮಗೂ ಗೊತ್ತಿರಬಹುದು. ಅದರ ಬಣ್ಣ ಪಿಂಕ್ ಇರುವುದಕ್ಕೆ ಅದರಲ್ಲಿರುವ ಆಲ್ಗೆ ಎಂಬ ಸಸ್ಯಪ್ರಾಕಾರವೇ ಕಾರಣ ಎನ್ನಲಾಗುತ್ತದೆ. ಇದೀಗ ಲೋನಾರ್ ಲೇಕ್‌ನ ಬಣ್ಣ ಬದಲಾದದ್ದಕ್ಕೂ ಅದರಲ್ಲಿದ್ದ ಆಲ್ಗೆಗಳೇ ಕಾರಣ ಎನ್ನುತ್ತಿದ್ದಾರೆ ಈ ಕೆರೆಯ ಸಂರಕ್ಷಣಾ ಸಮಿತಿಯಲ್ಲಿರುವ ಸದಸ್ಯ ಗಜಾನನ್ ಖಾರಟ್. ಈ ಉಪ್ಪು ನೀರಿನ ಕೆರೆಯ ಪಿಎಚ್ ಮಟ್ಟ 10.5ರಷ್ಟಿದೆ. ಕೆರೆಯ ಮೇಲ್ಮೆೈಯಿಂದ 1 ಮೀಟರ್ ಕೆಳಗೆ ಆಮ್ಲಜನಕ ಇಲ್ಲ. ಉಪ್ಪು ಹಾಗೂ ಆಲ್ಗೆ ಸೇರಿ ಹೀಗಾಗಿರಬಹುದು ಎಂಬುದು ಅವರ ಅಂದಾಜು. 

ಇರಾನ್‌ನಲ್ಲಿ ಕೆಂಪು ನೀರನ್ನು ಹೊಂದಿದ ಕೆರೆಯೊಂದಿದ್ದು, ಅದರ ಉಪ್ಪಿನ ಮಟ್ಟ ಹೆಚ್ಚಿರುವ ಕಾರಣಕ್ಕೆ ಅದು ಆ ಬಣ್ಣದಲ್ಲಿದೆ. ಇದೀಗ ಲೋನಾರ್ ಲೇಕ್‌ನಲ್ಲಿ ಕಳೆದ ಹಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನೀರು ಬಹಳ ಕಡಿಮೆ ಇದೆ. ಇನ್ನೂ ಮಳೆನೀರು ಕೂಡಾ ಬಂದಿಲ್ಲ. ಹಾಗಾಗಿ ಬತ್ತಿರುವ ಕೆರೆಯಲ್ಲಿ ಉಪ್ಪಿನಂಶ ಹಿಂದೆಂದಿಗಿಂತ ಹೆಚ್ಚಾಗಿದ್ದು, ಲಾಕ್‌ಡೌನ್‌ನಿಂದ ಹವಾಮಾನದಲ್ಲಾದ ಬದಲಾವಣೆಗೆ ಆಲ್ಗೆಯ ವರ್ತನೆ ಬದಲಾಗಿರಬಹುದು. ಇವೆರಡೂ ಅಂಶಗಳು ಸೇರಿ ನೀರು ಗುಲಾಬಿ ಬಣ್ಣವಾಗಿರಬಹುದು ಎಂದು ಖಾರಟ್ ಊಹಿಸಿದ್ದಾರೆ. ಕೆರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೀರು ಗುಲಾಬಿ ಬಣ್ಣಕ್ಕೆ ತಿರುಗಿರುವುದು. 

ಔರಂಗಾಬಾದ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠವಾಡಾ ಯೂನಿವರ್ಸಿಟಿಯ ಜಿಯೋಗ್ರಫಿ ವಿಭಾಗದ ಮುಖ್ಯಸ್ಥ ಡಾ. ಮದನ್ ಸೂರ್ಯವಂಶಿ ಪ್ರಕಾರ, ಲಾಕ್‌ಡೌನ್ ಸಂದರ್ಭದಲ್ಲಿ ಪ್ರವಾಸಿಗರ ಗಲಾಟೆ ಇಲ್ಲದ ಕಾರಣ ಕೆರೆಯ ನೀರಿಗೆ ಯಾವುದೇ ರೀತಿಯ ಡಿಸ್ಟರ್ಬೆನ್ಸ್ ಇಲ್ಲದ್ದು ಕೂಡಾ ಈ ಬದಲಾವಣೆಗೆ ಕಾರಣವಾಗಿರಬಹುದು. 

ಸಧ್ಯಕ್ಕಂತೂ ಹಲವಾರು ಲ್ಯಾಬ್‌ಗಳಿಗೆ ಕೆರೆ ನೀರಿನ ಸ್ಯಾಂಪಲ್ಸ್ ಕಳುಹಿಸಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. 

ಕಧ: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕಷಾಯ
 
ಎಲ್ಲಿದೆ ಕೆರೆ?
ಮುಂಬೈನಿಂದ 500 ಕಿಲೋಮೀಟರ್ ದೂರದ ಬುಲ್ಧಾನಾ ಜಿಲ್ಲೆಯಲ್ಲಿ ಲೋನಾರ್ ಲೇಕ್ ಇದೆ. ಇದು 1823ರಲ್ಲಿ ಜೆಇ ಅಲೆಕ್ಸಾಂಡರ್‌ನಿಂದ ಪತ್ತೆಗೆ ಬಂದಾಗಿನಿಂದಲೂ ಜಗತ್ತಿನಾದ್ಯಂತದ ವಿಜ್ಞಾನಿಗಳನ್ನು ಆಕರ್ಷಿಸುತ್ತಲೇ ಇದೆ. ಇದು ಜಗತ್ತಿನಲ್ಲಿ ಉಲ್ಕೆಯಿಂದ ಸೃಷ್ಟಿಯಾದ ಮೂರನೇ ಅತಿ ದೊಡ್ಡ ಹೊಂಡವಾಗಿದೆ. ಇದೇ ಕಾರಣಕ್ಕೆ ಪ್ರವಾಸಿಗರಿಗೂ ನೆಚ್ಚಿನ ತಾಣವಾಗಿದೆ. ಸ್ಕಂದ ಪುರಾಣ, ಪದ್ಮ ಪುರಾಣ ಆಗೂ ಐನಿ ಅಕ್ಬರಿಯಲ್ಲೂ ಇದರ ಕುರಿತ ಉಲ್ಲೇಖಗಳಿವೆ. ಐಐಟಿ ಬಾಂಬೆಯ ಅಧ್ಯಯನದಂತೆ, ಈ ಕೆರೆಯ ಮಣ್ಣಿನಲ್ಲಿರುವ ಮಿನರಲ್ಸ್ ಚಂದ್ರನಿಂದ ಭೂಮಿಗೆ ತಂದ ಮಿನರಲ್ಸ್‌ನಂತೆಯೇ ಇವೆ.