Kodagu: ವರ್ಷದ ಕೊನೆಯ ಸೂರ್ಯಾಸ್ತ ಕಣ್ತುಂಬಿಕೊಂಡ ಪ್ರವಾಸಿಗರು!
ಪ್ರಾಕೃತಿಕ ಸೌಂದರ್ಯವನ್ನೇ ಹೊದ್ದು ಮಲಗಿರುವ ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಮಾಡುವುದೆಂದರೆ ಅದರ ಖುಷಿಯೇ ಬೇರೆ. 2022 ಕ್ಕೆ ಗುಡ್ ಬೈ ಹೇಳಿ, 2023 ಸ್ವಾಗತಿಸಲು ಪ್ರವಾಸಿಗರ ಹಾಟ್‍ಸ್ಪಾಟ್ ಆಗಿರುವ ಮಂಜಿನಗರಿಯ ರಾಜಾಸೀಟ್‍ನಲ್ಲಿ ಕೊನೆಯ ಸೂರ್ಯಾಸ್ತ ನೋಡಿ 2022ಕ್ಕೆ ಗುಡ್ ಬೈ ಹೇಳುತ್ತಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಡಿ.31): ಪ್ರಾಕೃತಿಕ ಸೌಂದರ್ಯವನ್ನೇ ಹೊದ್ದು ಮಲಗಿರುವ ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಮಾಡುವುದೆಂದರೆ ಅದರ ಖುಷಿಯೇ ಬೇರೆ. 2022 ಕ್ಕೆ ಗುಡ್ ಬೈ ಹೇಳಿ, 2023 ಸ್ವಾಗತಿಸಲು ಪ್ರವಾಸಿಗರ ಹಾಟ್‍ಸ್ಪಾಟ್ ಆಗಿರುವ ಮಂಜಿನಗರಿಯ ರಾಜಾಸೀಟ್‍ನಲ್ಲಿ ಕೊನೆಯ ಸೂರ್ಯಾಸ್ತ ನೋಡಿ 2022ಕ್ಕೆ ಗುಡ್ ಬೈ ಹೇಳುತ್ತಾರೆ. ಆ ಕ್ಷಣ ಹೇಗಿತ್ತು ಗೊತ್ತಾ!. ಪೂರ್ವಾಚಲವೆಲ್ಲ ಕೆಂಪಾಗಿದ್ದರೆ, ವೀವ್ ಪಾಯಿಂಟಿನಲ್ಲಿ ಕುಳಿತು ಭಾಸ್ಕರನ ವೀಕ್ಷಿಸುತ್ತಿದ್ದವರ ಮುಖ ಮೈಯೆಲ್ಲಾ ಅಸ್ತಂಗತನಾಗುತ್ತಿದ್ದ ಸೂರ್ಯನ ಹೊಂಬಣ್ಣದ ಬೆಳಕನಲ್ಲಿ ಕೆಂಪಾಗಿದ್ದವು.
ಇಡೀ ಆಗಸವೆಲ್ಲಾ ಬಣ್ಣ ಬಳಿದಂತೆ ಕೆಂಪಾಗಿ ಮುಗಿಲೆತ್ತರೆಕ್ಕೆ ಚಾಚಿಕೊಂಡಿದ್ದ ಬೆಟ್ಟಗಳು ಹೊಳೆಯುತ್ತಿದ್ದವು. ಹೌದು! ಇದು 2022 ರ ಕೊನೆಯ ಸೂರ್ಯಾಸ್ತದ ಕ್ಷಣದಲ್ಲಿ ಮಡಿಕೇರಿಯ ರಾಜಾಸೀಟಿನಲ್ಲಿ ಕುಳಿತು ಸನ್‍ಸೆಟ್ ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರಿಗೆ ಕಂಡ ದೃಶ್ಯವಿದು. ಹೌದು! ಪ್ರಕೃತಿಯ ಮಡಿನಲ್ಲಿ ಕುಳಿತಿದ್ದ ನೂರಾರು ಪ್ರವಾಸಿಗರು ಮುಳುಗುತ್ತಿದ್ದ ಕೆಂಬಣ್ಣದ ಸೂರ್ಯನನ್ನು ತಮ್ಮ ಮೊಬೈಲ್, ಕ್ಯಾಮೆರಾದಲ್ಲಿ ಸೆರೆಹಿಡಿದು ಸಂಭ್ರಮಪಟ್ಟರು. ಬೈ ಬೈ 2022 ವೆಲ್‍ಕಮ್ 2023 ಎಂದು ಕೂಗಿ ಸಂಭ್ರಮಿಸಿದರು. ಕೊಡಗಿನ ಪ್ರವಾಸಿ ತಾಣಗಳಲ್ಲಿ ಸುತ್ತಾಡುತ್ತಾ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿದು ಸಂಭ್ರಮಿಸುತ್ತಲೇ ಹೊಸ ವರ್ಷಾಚರಣೆ ಮಾಡುವುದಕ್ಕಾಗಿ ಬಂದಿದ್ದೇವೆ.
ಹೊಸ ವರ್ಷಕ್ಕೆ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಏರಿಕೆ!
ಅದರಲ್ಲೂ ಇಲ್ಲಿನ ಸೂರ್ಯಾಸ್ತವನ್ನು ನೋಡಿದ್ದು ಇಲ್ಲಿನ ಸಂಭ್ರಮ ನೀಡಿದೆ ಎಂದು ಮೈಸೂರಿನಿಂದ ಬಂದಿದ್ದ ಪ್ರವಾಸಿಗರಾದ ಖುಷಿ ಹರ್ಷ ವ್ಯಕ್ತಪಡಿಸಿದರು. ಐದು ಗಂಟೆಯಿಂದಲೇ ರಾಜಾಸೀಟಿಗೆ ಹರಿದು ಬಂದ ಸಾವಿರಾರು ಪ್ರವಾಸಿಗರು ವೀವ್ ಪಾಯಿಂಟಿನ ಎಲ್ಲೆಡೆ ಕುಳಿತು ಸೂರ್ಯಾಸ್ತಕ್ಕಾಗಿ ತುದಿಗಾಲಿನಲ್ಲಿ ಕಾತರರಾಗಿದ್ದರು. ಒಂದೆಡೆ ಸೂರ್ಯಾಸ್ತವಾಗುತ್ತಿದ್ದರೆ ಮತ್ತೊಂದೆಡೆ ತೋಟಗಾರಿಕೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರೋಕೆ ಗೀತೆ ಗಾಯನ ಏರ್ಪಡಿಸಲಾಗಿತ್ತು. ಕಲಾವಿದರು ಅಷ್ಟೇ ಅಲ್ಲದೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಬಂದಿದ್ದ ಪ್ರವಾಸಿಗರಿಗೂ ಕರೋಕೆ ಹಾಡುಗಳಿಗೆ ಹಾಡಲು ಅವಕಾಶ ನೀಡಲಾಗಿತ್ತು.
ಹೀಗಾಗಿ ಹಾಡು ಕೇಳುತ್ತಾ, ಕಣ್ಣೀಕ್ಷಿಸಿದಷ್ಟು ದೂರದಲ್ಲಿ ಮುಗಿಲೆತ್ತರದ ಬೆಟ್ಟಗಳ ಹಿಂದೆ ಮರೆಯಾಗುತ್ತಿದ್ದ ಕೆಂಬಣ್ಣದ ಸೂರ್ಯನನ್ನು ಆ ಸೌಂದರ್ಯವನ್ನು ಕಂಡು ಸಂಭ್ರಮಿಸಿದರು. ಕೇವಲ ಯಾವಾಗಲೂ ಕಂಪ್ಯೂಟರ್, ಮೊಬೈಲ್‍ಗಳಲ್ಲಿ ಕೆಲಸವೆಂದು ಬ್ಯುಸಿಯಾಗಿರುತ್ತಿದ್ದ ನಮಗೆ ಕೊಡಗಿನ ರಾಜಾಸೀಟಿನಲ್ಲಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಿರುವ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವಂತಾಗಿದೆ ಎಂದು ಬೆಂಗಳೂರಿನಿಂದ ಬಂದಿದ್ದ ಐಟಿ ಉದ್ಯೋಗಿ ಭೂಮಿಕಾ ಸಂತಸ ವ್ಯಕ್ತಪಡಿಸಿದರು.
ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ: ಸಿಎಂ ಆಗಮನ!
ಕೊಡಗಿನ ಪ್ರಕೃತಿ ಸೌಂದರ್ಯದ ನಡುವೆ ಇಡೀ ದಿನ ಓಡಾಡಿದ್ದ ಪ್ರವಾಸಿಗರು ಸಂಜೆ ತಾವುಗಳು ತಂಗಿದ್ದ ವಿವಿಧ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್‍ಗಳಲ್ಲಿಯೇ ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಂಡು ಅಲ್ಲಿಯೇ ಹೊಸ ವರ್ಷಾಚರಣೆ ಮಾಡಿದರು. ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲೂ ಸಂಜೆ ಐದು ಗಂಟೆಯಿಂದಲೇ ಹಾಡು ಕುಣಿತ ನೃತ್ಯಗಳು ಜೋರಾಗಿದ್ದವು. ಸಂಜೆ ಏಳು ಗಂಟೆಯಿಂದ ರಾತ್ರಿ ಒಂದು ಗಂಟೆಯವರೆಗೆ ಸಂಭ್ರಮಿಸಿ ಹೊಸ ವರ್ಷಾಚರಣೆ ಮಾಡಿದರು. ಒಟ್ಟಿನಲ್ಲಿ ವಿವಿಧ ಜಿಲ್ಲೆ, ರಾಜ್ಯಗಳಿಂದ ಬಂದಿದ್ದ ಪ್ರವಾಸಿಗರು ಕೊಡಗಿನಲ್ಲಿ ಸಖತ್ತಾಗಿಯೇ ನ್ಯೂಯಿಯರ್ ಆಚರಿಸಿದ್ದಾರೆ.