'ಮದುವೆಯಾದ ಹೊಸತರಲ್ಲಿ ಹೋದ ಹನಿಮೂನ್ ಗಿಂತಲೂ ಸೆಕೆಂಡ್ ಹನಿಮೂನ್ ಅನ್ನೇ ನಾನು ಹೆಚ್ಚು ಎನ್‌ಜಾಯ್ ಮಾಡಿದೆ. ಏಕೆಂದರೆ ಮದುವೆಯ ಸಮಯದಲ್ಲಿ ಹನಿಮೂನ್‌ಗೆ ಎಂಥಾ ಸುಂದರ ಜಾಗಕ್ಕೆ ಹೋದರೂ ಆ ಕಡೆ ನಮ್ಮ ಗಮನ ಅಷ್ಟಾಗಿ ಹೋಗಲ್ಲ. ನಮ್ಮ ಗಮನವೆಲ್ಲ ರೊಮ್ಯಾನ್ಸ್ ಮಾಡುವ ಕಡೆಗೆ, ಸಂಗಾತಿಯ ಕಡೆಗೆ ಇರುತ್ತದೆ. ಆದರೆ ಸೆಕೆಂಡ್ ಹನಿಮೂನ್‌ನಲ್ಲಿ ಹಾಗಲ್ಲ. ನಮ್ಮಲ್ಲಿ ಆತುರ ಇರಲ್ಲ. ರೊಮ್ಯಾಂಟಿಕ್‌ ಆಗಿರೋದರ ಜೊತೆಗೆ ಆ ಅದ್ಭುತ ಜಾಗವನ್ನೂ ಎನ್‌ಜಾಯ್ ಮಾಡುತ್ತೇವೆ.' ಅಂತಾರೆ ಸೆಕೆಂಡ್ ಹನಿಮೂನ್‌ಗೆ ಹೋದ ಲೇಡಿ. 

 ಹೌದು, ಫಸ್ಟ್ ಹನಿಮೂನ್‌ನಲ್ಲಿಲ್ಲದ ಖುಷಿ, ಅಪ್ಯಾಯಮಾನತೆ ಸೆಕೆಂಡ್ ಹನಿಮೂನ್‌ನಲ್ಲಿ ಸಿಗುತ್ತೆ. ಎಷ್ಟೋ ಸಲ ಮೊದಲ ಹನಿಮೂನ್ ಜಾಗಗಳು ನಮ್ಮ ಸೆಲೆಕ್ಷನ್ ಆಗಿರೋದೇ ಇಲ್ಲ. ಯಾರೋ ಆತ್ಮೀಯರು ಜಾಗ ಸೆಲೆಕ್ಟ್ ಮಾಡ್ತಾರೆ, ಮತ್ಯಾರೋ ವಿಮಾನ ಟಿಕೆಟ್ ಮಾಡಿಸ್ತಾರೆ, ನಮ್ಮ ಚಾಯ್ಸ್ ಅಲ್ಲದ ಜಾಗದಲ್ಲಿ ನಮ್ಮ ಹನಿಮೂನ್ ಆಗಿರುತ್ತೆ, ಅದು ನಮ್ಮ ಮೂಡ್‌ಗೆ ಸೆಟ್ ಆಗುತ್ತೆ ಅಂದುಕೊಳ್ಳೋದಿಕ್ಕೆ ಆಗಲ್ಲ. ಆದರೆ ಆಗ ಮನಸ್ಸು ಕಂಪ್ಲೀಟ್ ರೊಮ್ಯಾಂಟಿಕ್ ಮೂಡ್ ನಲ್ಲೇ ಇರುವ ಕಾರಣ ಇದೆಲ್ಲ ಕೌಂಟ್ ಆಗಲ್ಲ. ಆದರೆ ಸೆಕೆಂಡ್ ಹನಿಮೂನ್ ಗೆ ಹೋಗುವಾಗ ನಮಗೆ ಅನುಭವವಿರುತ್ತದೆ. ನಮ್ಮ ಟೇಸ್ಟ್‌ಗೆ ತಕ್ಕಂಥಾ ಜಾಗಗಳನ್ನೇ ಸೆಲೆಕ್ಟ್ ಮಾಡ್ತೀವಿ. 

ಸೆಕೆಂಡ್ ಹನಿಮೂನ್‌ಗೆ ಇಂತಿಷ್ಟೇ ಟೈಮ್‌ನಲ್ಲಿ ಹೋಗ್ಬೇಕು ಅಂತಿಲ್ಲ. ಮಕ್ಕಳಾದ್ಮೇಲೂ. ದೊಡ್ಡ ಮಕ್ಕಳಿದ್ದಾಗಲೂ ಹೋಗಬಹುದು. ಸಂಸಾರ, ವೃತ್ತಿ ಬದುಕಿನ ಜಂಜಾಟಗಳಿಂದ ಕಳಚಿಕೊಂಡು ಮತ್ತೆ ಪ್ರೀತಿಯ ಪಯಣ ಮುಂದುವರಿಸಲು, ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಇಂಥದ್ದೊಂದು ಹನಿಮೂನ್ ಪ್ರತೀ ಕಪಲ್‌ಗೂ ಬೇಕು. 

ಎಲ್ಲೆಲ್ಲ ಹೋಗಬಹುದು?

ಗುಲ್ಮಾರ್ಗ್‌ನಲ್ಲಿ ಹೂವಂತೆ ಅರಳುವ ಪ್ರೀತಿ
ಇದು ಜಮ್ಮು ಕಾಶ್ಮೀರದಲ್ಲಿರುವ ತಾಣ. ಹಿಮ ಮುಚ್ಚಿದ ಬೆಟ್ಟಗಳು, ತಣ್ಣನೆಯ ಕಚಗುಳಿ ಇಡುವ ಹವಾಮಾನ, ಬೆಟ್ಟದ ನಡುವೆ ಅರಳಿನಿಂತ ಚೆಂದದ ಹೂಗಳು, ಅಪ್ಯಾಯಮಾನ ಪರಿಸರದಲ್ಲಿ ನಿಮ್ಮ ಎರಡನೇ ಹನಿಮೂನ್ ಅನ್ನು ಲೈಫ್ ಲಾಂಗ್ ಮರೆಯದಂತೆ ಆಚರಿಸಿಕೊಳ್ಳಬಹುದು. ಇಲ್ಲಿ ಶಿಮ್ಲಾ, ಮನಾಲಿಯಂತೆ ಅತಿಯಾದ ಜನ ದಟ್ಟಣೆ ಇರಲ್ಲ. ನೀವಿಬ್ಬರೇ ರೊಮ್ಯಾಂಟಿಕ್ ಆಗಿ ಕಾಲ ಕಳೆಯಬಹುದು. ಇದು ಹನಿಮೂನ್ ಸ್ಕೀಯಿಂಗ್ ಸ್ಟೇಶನ್ ಅಂತಲೇ ಫೇಮಸ್. ಈ ಟೈಮ್ ನಲ್ಲಿ ಹೋದರೆ ಹಿತವಾದ ವಾತಾವರಣ ಇರುತ್ತದೆ. ಅತಿಯಾದ ಚಳಿ ಇರಲ್ಲ. ಹಿಮ ನಿಧಾನಕ್ಕೆ ಕರಗುತ್ತಿದ್ದರೂ ಆಟವಾಡಬಹುದಾದಷ್ಟ ಹಿಮವಂತೂ ಇದ್ದೇ ಇರುತ್ತದೆ. ಇಲ್ಲಿ ಹಿಮದಲ್ಲಿ ಸ್ಕೀಯಿಂಟ್ ಮಾಡುತ್ತಾ, ಜಾರುತ್ತ ಚಿಕ್ಕ ಹುಡುಗರಂತೆ ಸಂಭ್ರಮಿಸಬಹುದು. ಚೆಂದದ ಸರೋವರದ ಅಂಚಿನಲ್ಲಿ ಸಂಗಾತಿಯನ್ನು ಬಳಸಿ ನಡೆಯಬಹುದು. 

ಬೈಕಿಂಗ್, ವಾಲ್ ಕ್ಲೈಂಬಿಗ್... ಸಾಹಸಕ್ಕೆ ಬೆಂಗಳೂರಲ್ಲಿ ಬರವಿಲ್ಲ 

ಅಂಡಮಾನ್‌ನ ಅಲೆಗಳಲ್ಲಿ ಪ್ರೀತಿಯುಂಗುರ
ಅಂಡಮಾನ್ ಒಂದು ಕಾಲಕ್ಕೆ ಖೈದಿಗಳನ್ನು ಬಂಧಿಸಿಡುತ್ತಿದ್ದ ಜಾಗ. ಆದರೆ ಈಗ ಪ್ರೇಮ ಖೈದಿಗಳಿಗೂ ಇದು ಪೇಮಸ್ ಜಾಗ. ನಿಮ್ಮ ಪ್ರೀತಿ, ಪ್ರೇಮಕ್ಕೆ ತಾಜಾತನ, ನವಿರುತನ ತಂದುಕೊಳ್ಳಲು ಈ ಜಾಗ ಬೆಸ್ಟ್. ಇಲ್ಲಿ ಮರಳಲ್ಲಿ ನಿಮ್ಮ ಪ್ರೇಮವನ್ನು ಹೆಚ್ಚಿಸುವ ಮ್ಯಾಜಿಕ್ ಇದೆ. ಸಮುದ್ರದ ನೀರಲ್ಲಿ ಆಡುವ, ನೀರಿನಾಳಕ್ಕೆ ಇಳಿದು ಸ್ಕೂಬಾ ಡೈವಿಂಗ್ ಮಾಡುವ, ಸಮುದ್ರದೊಳಗಿನ ಜೀವಿಗಳನ್ನು ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶ ಇಲ್ಲಿ ಸಿಗುತ್ತದೆ. ಇಲ್ಲಿ ನಿಮ್ಮ ಅಂತರಂಗ ಭಾವನೆಗಳು ಹೊರಬರಲು ಬೇಕಾದ ಏಕಾಂತವೂ ಇದೆ. ಸಮುದ್ರ ಕಿನಾರೆಗಳಲ್ಲಿ ಅಲೆಯುತ್ತಾ ನೀರಾಟ ಆಡುತ್ತಾ ನಿಮ್ಮ ದಾಂಪತ್ಯದ ಖುಷಿಯನ್ನು ವಿಸ್ತರಿಸಿಕೊಳ್ಳಬಹುದು. 

ಸ್ಲೋ ಟ್ರಾವೆಲ್ ಮಾಡಿ, ಪ್ರವಾಸದ ಪ್ರತಿ ಕ್ಷಣವನ್ನು ಆನಂದಿಸಿ

ರಾಜಸ್ತಾನ ಮಹಲು, ಮರುಭೂಮಿ
ರಾಜಸ್ತಾನ ಅಂದ್ರೆ ನೆನಪಾಗೋದು ಮರುಭೂಮಿ, ಸೆಕೆ ಇತ್ಯಾದಿ. ಇದೆಂಥಾ ಹನಿಮೂನ್ ಜಾಗ ಅಂತ ಮೂಗು ಮುರೀಬೇಡಿ. ನಿಮ್ಮ ಕಲ್ಪನೆಗೂ ಮೀರಿದ ಅಚ್ಚರಿಗಳು ಇಲ್ಲಿ ತೆರೆದುಕೊಳ್ಳುತ್ತವೆ. ಇಲ್ಲಿನ ಪ್ರೇಮ ಮಹಲುಗಳು, ಜೈಸಲ್ಮೇರ್ ನಂಥಾ ಕೋಟೆಗಳು ಪ್ರೇಮದ ಮಗ್ಗಲು ಬದಲಾಯಿಸಲು ಬೆಸ್ಟ್ ಜಾಗ. ಹಾಗೇ ಇಲ್ಲಿ ಮರುಭೂಮಿಗಳೂ ಇವೆ. ರಾತ್ರಿ ಮರುಭೂಮಿಯ ಮಧ್ಯೆ ಹಗ್ಗದ ಮಂಚದಲ್ಲಿ ಮಲಗಿ ಆಕಾಶ ನೋಡೋದು ಅವಿಸ್ಮರಣೀಯ ಅನುಭವ.