ಪ್ರವಾಸಕ್ಕೆ ಹೋಗೋದೆಂದ್ರೆ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರಿಗೂ ಖುಷಿ ನೀಡುವ ಸಂಗತಿ. ನಿತ್ಯದ ಕೆಲಸಗಳಿಂದ ಬ್ರೇಕ್ ಪಡೆದು ನಾಲ್ಕಾರು ದಿನ ದೂರದ ಊರಲ್ಲಿ ಸುತ್ತಾಡಿ ರಿಫ್ರೆಶ್ ಆಗಿ ಮರಳಬೇಕು ಎಂಬ ಉದ್ದೇಶದಿಂದಲೇ ಟೂರ್ ಪ್ಲ್ಯಾನ್ ಮಾಡಿರುತ್ತೇವೆ. ಆದರೆ,ಯಾವ ಸ್ಥಳಕ್ಕೆ ಹೋಗಬೇಕು ಎಂಬುದನ್ನು ನಿರ್ಧರಿಸುವುದರಿಂದ ಹಿಡಿದು ಟಿಕೆಟ್, ಹೋಟೆಲ್ ಬುಕ್ಕಿಂಗ್, ಪ್ರಯಾಣ ಸೇರಿದಂತೆ ಆ ಸ್ಥಳ ತಲುಪುವ ತನಕ ಮನಸ್ಸಿನಲ್ಲಿ ಏನೋ ಖುಷಿ, ಉತ್ಸಾಹ. ಆದರೆ, ಅಲ್ಲಿಗೆ ಹೋದ ಮೇಲೆ ಧಾವಂತಕ್ಕೆ ಬಿದ್ದವರಂತೆ ಸುತ್ತಮುತ್ತಲಿರುವ ಎಲ್ಲ ಪ್ರವಾಸಿ ತಾಣಗಳನ್ನು ನಮ್ಮ ವೇಳಾಪಟ್ಟಿಯಲ್ಲಿ ಸೇರಿಸಿಕೊಂಡು ಮತ್ತದೇ ಗಡಿಬಿಡಿ, ಒತ್ತಡಗಳ ಹಿಡಿತಕ್ಕೆ ಸಿಲುಕುತ್ತೇವೆ. ಈ ಮಧ್ಯೆ ಎಲ್ಲಿದ್ದೇವೆ, ಏನು ನೋಡಿದ್ವಿ,ಏನು ತಿಂದ್ವಿ ಎನ್ನುವುದರ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ತವಕ. ಇದರಿಂದ ಆ ತಾಣದ ಸೊಬಗನ್ನು ಮನಸ್ಫೂರ್ತಿಯಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಇನ್ನೊಂದು ಸ್ಥಳಕ್ಕೆ ಭೇಟಿ ನೀಡುವ ಗಡಿಬಿಡಿಯಲ್ಲಿ ಅಲ್ಲಿನ ಜನಜೀವನ,ಆಹಾರ, ಕಲೆ ಮತ್ತು ಸಂಸ್ಕತಿಗಳ ಬಗ್ಗೆ ತಿಳಿದುಕೊಳ್ಳಲು ಸಮಯವೇ ಸಾಲುವುದಿಲ್ಲ. ಹೀಗಾದಾಗ ಪ್ರವಾಸಕ್ಕೆ ಹೋದ ಸಾರ್ಥಕತೆ ಸಿಗುವುದಾದರೂ ಹೇಗೆ? ಪ್ರವಾಸದ ಉದ್ದೇಶವೇ ಅಪೂರ್ಣವಾಗುತ್ತದೆ.ಅದೇ ಗಡಿಬಿಡಿ ಮಾಡಿಕೊಳ್ಳದೆ ನಾವು ಭೇಟಿ ಮಾಡುವ ತಾಣದಲ್ಲಿ ಸಿಗುವ ಫುಡ್ ಸವಿದು, ಅಲ್ಲಿನ ಬೀದಿಗಳಲ್ಲಿ ಆರಾಮವಾಗಿ ಒಂದು ರೌಂಡ್ ಹೊಡೆದು, ಅಲ್ಲಿನ ಜನರೊಂದಿಗೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರೆ ಎಷ್ಟು ಖುಷಿ ಸಿಗುತ್ತದೆ ಅಲ್ವಾ? ಇನ್ನು ಅಲ್ಲಿನ ನಿಸರ್ಗದೊಂದಿಗೆ ಬೆರೆಯುವ ಅವಕಾಶ ಸಿಕ್ಕರಂತೂ ಪ್ರವಾಸ ಥ್ರಿಲ್ ನೀಡುವುದರಲ್ಲಿ ಅನುಮಾನವೇ ಇಲ್ಲ. ಹೌದು, ಭವಿಷ್ಯದಲ್ಲಿ ಇಂಥ ಟ್ರೆಂಡ್ ಪ್ರವಾಸೋದ್ಯಮದಲ್ಲಿ ಹೆಚ್ಚಲಿದೆ. ಇದರ ಹೆಸರೇ ‘ಸ್ಲೋ ಟ್ರಾವೆಲ್’. 

ಆಗುಂಬೆಯಾ ಪ್ರೇಮ ಸಂಜೆಯಾ

ಏನಿದು ಸ್ಲೋ ಟ್ರಾವೆಲ್?: ಹೆಸರು ನೋಡಿ ಪ್ರವಾಸಕ್ಕೆ ನಿಧಾನವಾಗಿ ಹೋಗುವುದು ಎಂದು ಭಾವಿಸಬೇಡಿ.ಬದಲಿಗೆ ಹೊಸ ತಾಣಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸರ,ಕಲೆ,ಸಂಸ್ಕತಿಯನ್ನು ಅರಿಯುವ ಜೊತೆಗೆ ಅಲ್ಲಿಯ ಜನರೊಂದಿಗೆ ಬೆರೆಯುವುದೇ ಸ್ಲೋ ಟ್ರಾವೆಲ್. ಸೋಷಿಯಲ್ ಮೀಡಿಯಾ, ಇ-ಮೇಲ್ ಸೇರಿದಂತೆ ಮನಸ್ಸನ್ನು ಚಂಚಲಗೊಳಿಸುವ ವಸ್ತುಗಳಿಂದ ಅಂತರ ಕಾಯ್ದುಕೊಂಡು ಆ ಸ್ಥಳದ ಸೊಬಗನ್ನು ಮನಪೂರ್ವಕವಾಗಿ ಸವಿಯುವುದು. ಒಂದೇ ಪದದಲ್ಲಿ ಹೇಳೋದಾದ್ರೆ ‘ಮೈಂಡ್‍ಫುಲ್ ಟ್ರಾವೆಲಿಂಗ್’. ಸ್ಲೋ ಟ್ರಾವೆಲ್ ರೋಮ್‍ನಲ್ಲಿ 1980ರಲ್ಲಿ ನಡೆದ ಆಹಾರ ಆಂದೋಲನದಿಂದ ಪ್ರಭಾವಿತವಾಗಿ ಜನ್ಮ ತಾಳಿರುವ ಕಾನ್ಸೆಪ್ಟ್. ಪ್ರವಾಸಿಗರು ಮಾಮೂಲಾಗಿ ಮಾಡುವಂತೆ ಯಾವುದೋ ಒಂದು ತಾಣಕ್ಕೆ ಭೇಟಿ ನೀಡುವುದು, ಫೋಟೋ ತೆಗೆಸಿಕೊಳ್ಳುವುದು ಅಷ್ಟಕ್ಕೆ ಸೀಮಿತವಾಗದೆ ಅಲ್ಲಿನ ಆಹಾರ, ಜನರು ಹಾಗೂ ಕಲೆಯೊಂದಿಗೆ ಕಲೆಯುವುದೇ ಸ್ಲೋ ಟ್ರಾವೆಲ್ ಮುಖ್ಯ ಉದ್ದೇಶ.

ಮಕ್ಕಳನ್ನು ಕರಕೊಂಡು ಪಿಕ್‌ನಿಕ್‌ ಹೋಗಬಹುದಾದ ತಾಣಗಳಿವು

ಏನೆಲ್ಲ ಮಾಡ್ಬಹುದು?: ಪ್ರವಾಸದಿಂದ ಹತ್ತಾರು ಅನುಭವಗಳನ್ನು ಪಡೆಯುವ ಜೊತೆಗೆ ಪ್ರತಿ ಕ್ಷಣವನ್ನು ಆನಂದಿಸಬೇಕೆನ್ನುವುದೇ ಸ್ಲೋ ಟ್ರಾವೆಲ್ ಆಶಯ. ಸೋ, ಜರ್ನಿಯಿಂದ ಹಿಡಿದು ಪ್ರವಾಸಿ ತಾಣ,ಅಲ್ಲಿನ ಪರಿಸರ,ಸ್ಪೆಷಲ್ ತಿಂಡಿ-ತಿನಿಸುಗಳು,ಕಲಾಕೃತಿಗಳು,ಸ್ಪೆಷಲಾಟಿಗಳನ್ನು ತಿಳಿಯುವ ಜೊತೆಗೆ ಅದರ ಸವಿಯನ್ನು ಸವಿಯಬಹುದು. ಸೆಲ್ಫಿ, ಗ್ರೂಪ್ ಫೋಟೋಗಳನ್ನು ಧಾರಾಳವಾಗಿ ತೆಗೆಯಿರಿ. ಆದರೆ, ಫೋಟೋ ತೆಗೆಯುವ ಗುಂಗಿನಲ್ಲಿ ಅಲ್ಲಿ ನೀವು ನೋಡಿ ಆನಂದಿಸಬೇಕಾದ ಕ್ಷಣವನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ. ಇನ್ನು ಪ್ರವಾಸದಲ್ಲಿರುವಷ್ಟು ದಿನ ಮೇಲ್, ಫೇಸ್‍ಬುಕ್, ವಾಟ್ಸ್ಆಪ್,ಮೆಸೆಂಜರ್ ಸೇರಿದಂತೆ ಸೋಷಿಯಲ್ ಮಿಡಿಯಾಗಳಿಂದ ದೂರವಿರಿ.ಕೇವಲ ದೈಹಿಕವಾಗಿ ಮಾತ್ರವಲ್ಲ,ಮಾನಸಿಕವಾಗಿಯೂ ಆ ಸ್ಥಳದಲ್ಲಿರುವ ಮೂಲಕ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ. ನಿತ್ಯ ಬದುಕಿನ ಜಂಜಾಟ,ಟೆನ್ಷನ್‍ಗಳನ್ನೆಲ್ಲ ಮನಸ್ಸಿನಿಂದ ಕಿತ್ತೆಸೆದು ಆರಾಮವಾಗಿ ಸುತ್ತಾಡಿ. ಅಲ್ಲಿನ ಗಲ್ಲಿಗಳಲ್ಲಿ ಸಿಗುವ ಚಾಟ್ಸ್ ತಿನ್ನಿ. ಅಂಥ ಟೆಸ್ಟಿ ಚಾಟ್ಸ್ ಅನ್ನು ನೀವು ಈ ತನಕ ತಿನ್ನದೇ ಇರಬಹುದು. ಆ ಸ್ಥಳ ಯಾವುದೋ ಒಂದು ಜಾನಪದ ಕಲೆ ಅಥವಾ ನೃತ್ಯಕ್ಕೆ ಹೆಸರುವಾಸಿಯಾಗಿರಬಹುದು, ಅದನ್ನು ತಿಳಿಯಿರಿ. ಆ ಸ್ಥಳ ಯಾವುದೋ ಒಂದು ಉತ್ಪನ್ನಕ್ಕೆ ಜನಪ್ರಿಯತೆ ಗಳಿಸಿರಬಹುದು.ಆ ಉತ್ಪನ್ನವನ್ನು ಮರೆಯದೆ ಖರೀದಿಸಿ. ಉದಾಹರಣೆಗೆ ಊಟಿಗೆ ಹೋದವರು ಟೀ ಪೌಡರ್, ಹೋಂಮೇಡ್ ಚಾಕೋಲೇಟ್ಸ್ ಖರೀದಿಸದೆ ವಾಪಸ್ ಬಂದ್ರೆ ಹೇಗೆ ಅಲ್ವಾ? ಒಟ್ಟಾರೆ ಪ್ರವಾಸದಲ್ಲಿರುವಾಗ ಯಾವುದೇ ಗಡಿಬಿಡಿ ಮಾಡಿಕೊಳ್ಳದೆ ತನು-ಮನದಿಂದ ಆ ಕ್ಷಣಗಳನ್ನು ಎಂಜಾಯ್ ಮಾಡಿ.