ಬೆಂಗಳೂರು: ರಾಜ್ಯ ಸರ್ಕಾರದ ಭಾರತ ಗೌರವ್ ಯೋಜನೆಯಡಿಯಲ್ಲಿ ಕಾಶಿಯಾತ್ರೆ ಕೈಗೊಳ್ಳಲು ಮುಜರಾಯಿ ಇಲಾಖೆ ಸಿದ್ಧತೆ ನಡೆಸಿದೆ. ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಿಂದ ಮೊದಲ ರೈಲು ಕಾಶಿಯಾತ್ರೆಗೆ ತೆರಳಲಿದೆ.

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು: ರಾಜ್ಯ ಸರ್ಕಾರದ ಭಾರತ ಗೌರವ್ ಯೋಜನೆಯಡಿಯಲ್ಲಿ ಕಾಶಿಯಾತ್ರೆ ಕೈಗೊಳ್ಳಲು ಮುಜರಾಯಿ ಇಲಾಖೆ ಸಿದ್ಧತೆ ನಡೆಸಿದೆ. ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಿಂದ ಮೊದಲ ರೈಲು ಕಾಶಿಯಾತ್ರೆಗೆ ತೆರಳಲಿದೆ. ಈಗಾಗಲೇ ಕಾಶಿಯಾತ್ರೆ ತೆರಳಲಿರುವ ಯಾತ್ರಾರ್ಥಿಗಳಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲು ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಇಂದು ಬಯ್ಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಕಾಶಿ ವಿಶ್ವನಾಥನ ದರ್ಶನದ ವ್ಯವಸ್ಥೆಯನ್ನು ಇದೇ ಮೊದಲ ಭಾರಿಗೆ ಮುಜರಾಯಿ ಇಲಾಖೆ ಮಾಡ್ತಾ ಇದೆ. ವರ್ಷಕ್ಕೆ 30 ಸಾವಿರ ಯತ್ರಾರ್ಥಿಗಳಿಗೆ ಕಾಶಿ ಯಾತ್ರೆ ಪ್ರವಾಸಕ್ಕೆ ಕಳುಹಿಸಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರತಿ ಯಾತ್ರಾರ್ಥಿ ಗೆ 5 ಸಾವಿರ ಹಣವನ್ನ ಅವರ ಅಕೌಂಟ್‌ಗೆ ಹಾಕುವ ಯೋಜನೆಗೂ ಚಾಲನೆ ಕೊಡಲಿದ್ದೇವೆ ಅಂತ ಸಚಿವರು ತಿಳಿಸಿದರು. ಅಲ್ಲದೆ ಜೀವನದಲ್ಲಿ ಒಮ್ಮೆ ಕಾಶಿಯಾತ್ರೆ ಕೈಗೊಂಡರೆ ಜೀವನ ಪಾವನ ಎಂಬ ಭಾವನೆ ನಮ್ಮ ಹಿಂದುಗಳಿಗೆ ಇದೆ. ರೈಲ್ವೆ ಇಲಾಖೆ ಸಹಯೋಗದೊಂದಿಗೆ ಬೆಂಗಳೂರಿನಿಂದ ರೈಲ್ವೆ ಮೂಲಕ ಯಾತ್ರಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಭಾರತ್ ಗೌರವ್ ಯೋಜನೆಯಡಿ ರೈಲ್ವೆ ಇಲಾಖೆಯಿಂದ ಸೇವೆ

ಬಜೆಟ್ ನಲ್ಲಿ 15 ಕೋಟೆಯನ್ನು ಕಾಶಿಯಾತ್ರೆಗೆ ಮೀಸಲಿಡಲಾಗಿದೆ.
3 ಟೈಯರ್ ಎಸಿ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಒಂದು ಬೋಗಿಯನ್ನ ಮಂದಿರವನ್ನಾಗಿ ಮಾರ್ಪಾಡು ಮಾಡಲು ಸಿದ್ಧತೆ ಮಾಡಲು ಸೂಚನೆ ಕೊಡಲಾಗಿದೆ. ಒಂದು ಬೋಗಿಯನ್ನ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 7 ದಿನಗಳ ಪ್ರವಾಸದಲ್ಲಿ ಕಾಶಿ (Kashi), ಪ್ರಯಾಗ್ ರಾಜ್ (Prayag raj), ಅಯೋಧ್ಯೆ (Ayodhya) ವೀಕ್ಷಣೆಗೆ ಅವಕಾಶ‌ ಮಾಡಿಕೊಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ (shashikala jolle) ತಿಳಿಸಿದರು. ಒಬ್ಬ ಯಾತ್ರಾರ್ಥಿಗೆ 15 ಸಾವಿರ ವೆಚ್ಚವಾಗಲಿದ್ದು 5 ಸಾವಿರ ಮುಜರಾಯಿ ಇಲಾಖೆಯಿಂದ ನೀಡಲಾಗುತ್ತದೆ.

ಪ್ರವಾಸಕ್ಕೆ ತೆರಳಲಿರುವ ವಿಶೇಷ ರೈಲಿನ ಮೇಲೆ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನಗಳ ಚಿತ್ರ ರೈಲ್ವೆ ಬೋಗಿಯ ಹೊರಗಡೆ ಹಾಕಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಅಯೋಧ್ಯೆಯಿಂದ ಅಂಜನಾದ್ರಿಗೂ ಪ್ರವಾಸ ಇರಲಿದ್ದು, ಒಟ್ಟು 4161 ಕಿಲೋ ಮೀಟರ್ ಪ್ರವಾಸಕ್ಕೆ ಸಕಲ ಸಿದ್ಧತೆಯನ್ನ ಮುಜರಾಯಿ ಇಲಾಖೆ ಮಾಡಿಕೊಂಡಿದೆ.

aಲ್ಲದೆ ಪ್ರವಾಸಕ್ಕೆ ತೆರಳುವ ಭಕ್ತಾದಿಗಳು ಆನ್ ಲೈನ್ ಮೂಲಕ ಅಪ್ಲಿಕೇಷನ್‌ ಹಾಕೋಕೆ ಅವಕಾಶ ನೀಡಲಾಗಿದ್ದು, ಇದುವರೆಗೂ 365 ಅರ್ಜಿಗಳು ಮುಜರಾಯಿ‌ ಇಲಾಖೆಗೆ ಬಂದಿವೆ ಅಂತ ಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಜರಾಯಿ ಇಲಾಖೆಗೆ ಈ ಬಾರಿ ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದು, ಅರ್ಚಕರ ತಸ್ತಿಕ್ ಹಣವನ್ನೂ ಹೆಚ್ಚಳ ಸಹ ಮಾಡಿದ್ದೇವೆ ಅಂತ ಮುಜರಾಯಿ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ತಿಳಿಸಿದರು. 

ಕಾಶಿಯಾತ್ರೆ ಹೊರಡಲಿರುವ ವಿಶೇಷ ರೈಲಿನ ವಿನ್ಯಾಸ ಹೇಗೆ ಇರಲಿದೆ?

ಬೆಂಗಳೂರು – ವಾರಣಾಸಿ – ಅಯೋಧ್ಯ – ಪ್ರಯಾಗರಾಜ್‌ - ಬೆಂಗಳೂರು ಸಂಚರಿಸಲಿರುವ ರೈಲು

ಒಟ್ಟು 7 ದಿನಗಳಲ್ಲಿ ಸುಮಾರು 4,161 ಕಿಲೋ ಮೀಟರ್‌ಗಳಷ್ಟು ದಾರಿ ಕ್ರಮಿಸಲಿದೆ.

ಒಟ್ಟು 14 ಬೋಗಿಗಳನ್ನು ಒಳಗೊಂಡಿರುವ ರೈಲು

11 ಬೋಗಿಗಳು ಪ್ರಯಾಣಿಕರ ಪ್ರವಾಸಕ್ಕೆ ಲಭ್ಯ , 3 ಟಯರ್‌ ಎಸಿಯ ವ್ಯವಸ್ಥೆಯನ್ನು ಮಾಡಲಾಗುವುದು

1 ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ ನೀಡಲಾಗುವುದು.

11 ಬೋಗಿಗಳ ಮೇಲೂ ನಮ್ಮ ರಾಜ್ಯದ ಪ್ರಮುಖ ದೇವಸ್ಥಾನಗಳ ಬ್ರಾಂಡಿಂಗ್‌ ಮಾಡಲಾಗುವುದು.

ನಮ್ಮ ರಾಜ್ಯದ ದೇವಸ್ಥಾನಗಳನ್ನು ಭಾರತ ಉದ್ದಗಲಕ್ಕೂ ಸಂಚರಿಸುವ ಟ್ರೈನ್‌ ಮೂಲಕ ಪ್ರಚಾರ ಮಾಡುವುದು ನಮ್ಮ ಗುರಿ

ಪ್ರತಿಯೊಬ್ಬ ವ್ಯಕ್ತಿಗೂ ರೈಲಿನ ವೆಚ್ಚ ಸುಮಾರು 8,533 ರೂಪಾಯಿಗಳ ಅಂದಾಜನ್ನು ರೈಲ್ವೇ ಇಲಾಖೆ ನೀಡಿದೆ

ಇದರ ನಂತರ ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ರೈಲ್ವೇಯ ಅಧೀನ ಸಂಸ್ಥೆಯ ಜೊತೆ IRCTC ಜೊತೆಗೆ ಅಗತ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ.

ಪ್ರತಿದಿನ ಪ್ರತಿ ವ್ಯಕ್ತಿಗೆ ಸುಮಾರು 1 ಸಾವಿರ ರೂಪಾಯಿಗಳ ಖರ್ಚು ಆಗುವ ಅಂದಾಜಿದೆ.

ಒಟ್ಟು ಖರ್ಚಿನಲ್ಲಿ ರಾಜ್ಯ ಸರಕಾರದಿಂದ 5,000 ರೂಪಾಯಿಗಳ ಸಹಾಯಧನ ವನ್ನು ನೀಡಲಾಗುವುದು.