Asianet Suvarna News Asianet Suvarna News

Chikkamagaluru: ಭದ್ರಾ ಡ್ಯಾಂನ ಹಿನ್ನೀರಿನಲ್ಲಿ ರಿವರ್ ಟರ್ನ್ ಹಕ್ಕಿಗಳ ಕಲರವ!

ಜಿಲ್ಲೆಯ ತರೀಕೆರೆ ತಾಲ್ಲೂಕಿನ ಭದ್ರಾ ಡ್ಯಾಂನ ರಮಣೀಯ ಹಿನ್ನೀರಿನ ನಡುಗುಡ್ಡೆಯೊಂದರಲ್ಲಿ ರಿವರ್ ಟರ್ನ್ ಹಕ್ಕಿಗಳ ಕಲರವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಮ್ಮ ದೇಶದ ಹಿಮಾಚಲ ಪ್ರದೇಶ, ಹೊರಗಿನ ಇರಾನ್ ಹಾಗೂ ಮ್ಯಾನ್ಮಾರ್ ಇನ್ನಿತರೆ ಕಡೆಗಳಿಂದ ಪ್ರತಿ ವರ್ಷ ಇಲ್ಲಿಗೆ ಆಗಮಿಸುವ ವಿಶೇಷ ಅತಿಥಿಗಳಾದ ಈ ರಿವರ್ ಟರ್ನ್‌ಗಳ ವೈಯಾರಕ್ಕೆ ಬೆರಗಾಗದವರೇ ಇಲ್ಲ. 

river tern birds breeding at bhadra backwater place in chikkamagaluru gvd
Author
Bangalore, First Published Jun 26, 2022, 11:17 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.26): ಜಿಲ್ಲೆಯ ತರೀಕೆರೆ ತಾಲ್ಲೂಕಿನ ಭದ್ರಾ ಡ್ಯಾಂನ ರಮಣೀಯ ಹಿನ್ನೀರಿನ ನಡುಗುಡ್ಡೆಯೊಂದರಲ್ಲಿ ರಿವರ್ ಟರ್ನ್ ಹಕ್ಕಿಗಳ ಕಲರವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಮ್ಮ ದೇಶದ ಹಿಮಾಚಲ ಪ್ರದೇಶ, ಹೊರಗಿನ ಇರಾನ್ ಹಾಗೂ ಮ್ಯಾನ್ಮಾರ್ ಇನ್ನಿತರೆ ಕಡೆಗಳಿಂದ ಪ್ರತಿ ವರ್ಷ ಇಲ್ಲಿಗೆ ಆಗಮಿಸುವ ವಿಶೇಷ ಅತಿಥಿಗಳಾದ ಈ ರಿವರ್ ಟರ್ನ್‌ಗಳ ವೈಯಾರಕ್ಕೆ ಬೆರಗಾಗದವರೇ ಇಲ್ಲ. ಬೂದು ಮಿಶ್ರಿತ ಬಿಳಿಯ ಮೈಬಣ್ಣ, ಕಡು ಕಪ್ಪಿನ ತಲೆಯ ಭಾಗ, ಹಳದಿ ಬಣ್ಣದ ಕೊಕ್ಕು ಹೊಂದಿರುವ ಈ ಹಕ್ಕಿಗಳು ನಡುಗುಡ್ಡೆಯ ಸುತ್ತಲೂ ರೆಕ್ಕೆ ಬಿಚ್ಚಿ, ಇಂಪಾಗಿ ಉಲಿಯುತ್ತಾ ಕ್ಷಣಕ್ಕೊಮ್ಮೆ ನೀರಿನಲ್ಲಿ ಮುಳುಗೇಳುವುದನ್ನು ನೋಡುವುದೇ ಒಂದು ಸಂಭ್ರಮ.

ಹಕ್ಕಿಗಳಿಗೆ ನಡುಗುಡ್ಡೆಯಲ್ಲಿ ಸಂತನೋತ್ಪತ್ತಿಗೆ ಸೂಕ್ತ ಜಾಗ: ಡಿಸೆಂಬರ್, ಜನವರಿ ವೇಳೆಗೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕೊಂಚ ಇಳಿಕೆಯಾಗುತ್ತಿದ್ದಂತೆ ಈ ನಡುಗುಡ್ಡ ತೆರೆದುಕೊಳ್ಳಲಾರಂಭಿಸುತ್ತದೆ. ಈ ವೇಳೆಗೆ ಸಂತಾನೊತ್ಪತ್ತಿಗೆ ತಯಾರಾಗುವ ರಿವರ್‌ ಟರ್ನ್‌ಗಳು ಸಾವಿರಾರು ಕಿ.ಮೀ.ದೂರದಿಂದ ಭದ್ರಾ ಡ್ಯಾಂ ಕಡೆಗೆ ಪಯಣ ಬೆಳೆಸುತ್ತವೆ. ಆರಂಭದಲ್ಲಿ ನೂರಿನ್ನೂರು ಹಕ್ಕಿಗಳು ಇಲ್ಲಿಗಾಗಮಿಸಿ ಸುತ್ತಲ ಪ್ರದೇಶವದಲ್ಲಿ ವಾಸ ಮಾಡಿ ನಡುಗುಡ್ಡೆಯಲ್ಲಿ ಸಂತನೋತ್ಪತ್ತಿಗೆ ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ. 

ವಿವಾದದ ಮಧ್ಯೆಯೇ ವಿದ್ಯಾರ್ಥಿಗಳ ಕೈ ಸೇರಿದ ಪಠ್ಯಪುಸ್ತಕ, ಗೊಂದಲದಲ್ಲಿ ಮಕ್ಕಳು

ಹೆಣ್ಣು ಹಕ್ಕಿ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು, ಗಂಡು ತನ್ನ ಸಂಗಾತಿಯ ಮನವೊಲಿಸಲು ನಡೆಸುವ ಕಸರತ್ತಿನ ಪ್ರಕ್ರಿಯೆಗಳೇ ಒಂದು ಸೋಜಿಗ. ಮೂರ್ನಾಲ್ಕು ಗಂಡು ಹಕ್ಕಿಗಳು ಮೀನು ಮರಿಗಳನ್ನು ಶಿಕಾರಿ ಮಾಡಿ ತಂದು ಒಂದು ಹೆಣ್ಣು ಹಕ್ಕಿಗೆ ಕೊಟ್ಟು ಒಲಿಸಿಕೊಳ್ಳುವ ಪ್ರಯತ್ನ ನಡೆಸುತ್ತವೆ. ಇವುಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಹೆಣ್ಣು ಹಕ್ಕಿ ಅಲ್ಲಿಂದ ಸಂತಾನೋತ್ಪತ್ತಿಗೆ ತಯಾರಾಗುತ್ತವೆ. ಜನವರಿ, ಫೆಬ್ರವರಿ ವೇಳೆಗೆ ಸಂತಾನೋತ್ಪತ್ತಿ ಆರಂಭಿಸುತ್ತವೆ. ಒಂದು ಹಕ್ಕಿ ಮೂರರಿಂದ ನಾಲ್ಕು ಮೊಟ್ಟೆಗಳನಿಡುತ್ತದೆ. 

ಹದಿನೆಂಟರಿಂದ ಇಪ್ಪತ್ತು ದಿನ ಗಂಡು, ಹೆಣ್ಣು ಎರಡೂ ಹಕ್ಕಿಗಳು ಜತನದಿಂದ ಕಾಪಾಡುತ್ತವೆ. ನಂತರ ಮರಿಗಳು ಹೊರಬರುತ್ತವೆ. ಮರಿಗಳ ರೆಕ್ಕೆ ಬಲಿತು ಹಾರುವಂತಾಗುವವರೆಗೆ ತಾಯಿ ಮಕ್ಕಳಿಗೆ ಗಂಡು ಹಕ್ಕಿಯೇ ಮೀನು ಮರಿಗಳನ್ನು ತಂದು ನೀಡುತ್ತದೆ. ಹತ್ತಾರು ಕಿ.ಮೀ.ದೂರಕ್ಕೆ ತೆರಳಿ ಮೀನು ಹಿಡಿದು ಬರುವ ವೇಳಗೆ ಅದರ ಮೇಲಿನ ಲೋಳೆಯಂತಹ ಅಂಶ ಒಣಗಿ ಹೋಗುವ ಕಾರಣ ನಡುಗುಡ್ಡೆ ಬಳಿಗೆ ಬಂದು ಮೀನು ಮರಿಯನ್ನು ಮೂರ್ನಾಲ್ಕು ಬಾರಿ ನೀರಿನಲ್ಲಿ ಮುಳುಗಿಸಿ ಮೆದುವಾಗಿಸಿ ನಂತರವೇ ಮರಿಗಳಿಗೆ ತಿನ್ನಿಸುವ ಗಂಡು ಹಕ್ಕಿಯ ಕೌಶಲ್ಯ ಪಕ್ಷಿ ಪ್ರಿಯರ ಆಧ್ಯಯನಕ್ಕೆ ಉತ್ತಮ ವಸ್ತುವಾಗುತ್ತದೆ.

ಸಾವನ್ನಪ್ಪಿದ ವರ, ವಧುವಿನ ಸ್ಥಿತಿ ಗಂಭೀರ, ತಿಂಗಳು ತುಂಬುವ ಮೊದಲೇ ಸಂಸಾರ ಛಿದ್ರ

ಜುಲೈ ವೇಳೆಗೆ ಮೂರ್ನಾಲ್ಕು ಸಾವಿರದಷ್ಟಾಗಿ ನಡುಗುಡ್ಡೆಯಿಂದ ವಿದಾಯ: ಜನವರಿ, ಫೆಬ್ರವರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಬರುವ ಹಕ್ಕಿಗಳು ಜೂನ್, ಜುಲೈ ವೇಳಗೆ ಮೂರ್ನಾಲ್ಕು ಸಾವಿರದಷ್ಟಾಗಿ ನಡುಗುಡ್ಡೆಗೆ, ಭದ್ರಾ ಡ್ಯಾಂಗೆ, ಕರುನಾಡಿಗೆ ವಿದಾಯ ಹೇಳಿ ತವರಿನತ್ತ ಪಯಣಿಸುತ್ತವೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಈ ಹಕ್ಕಿಗಳು ಆಕರ್ಷಿಸುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕರ್ನಾಟಕ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಸಂಸ್ಥೆಯು ಪ್ರವಾಸಿಗರಿಗಾಗಿ ರಿವರ್ ಟರ್ನ್ ಜಂಗಲ್ ಲಾಡ್ಜ್ ಎನ್ನುವ ಹೆಸರಿನಲ್ಲೇ ಇಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಿದೆ. ಜನವರಿಯಿಂದ ಮೇ, ಜೂನ್ ವರೆಗೆ ಭದ್ರಾ ವನ್ಯಜೀವಿ ವಲಯದಲ್ಲಿ ಸಫಾರಿ ಹಾಗೂ ಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಸಂಸ್ಥೆಗಳು ಬೋಟಿಂಗ್ ವ್ಯವಸ್ಥೆ ಮಾಡಿದ್ದು, ಪ್ರವಾಸಿಗರು ರಿವರ್‌ ಟರ್ನ್‌ಗಳ ಕಲರವವನ್ನು ಕಣ್ತುಂಬಿಕೊಳ್ಳಬಹುದು.

Follow Us:
Download App:
  • android
  • ios