Asianet Suvarna News Asianet Suvarna News

ರಾಮನಗರ ಯುವತಿಯ ಏಕಾಂಗಿ ಭಾರತ ಯಾತ್ರೆ..!

ರಾಮನಗರ ತಾಲೂಕು ಕೃಷ್ಣಾಪುರದೊಡ್ಡಿ ಗ್ರಾಮದ ಚಿತ್ರಾರಾವ್‌ ಸೋಲೋ ಬೈಕ್‌ ರೈಡ್ ಮಾಡಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರ ಹಾಗೂ ಲಡಾಕ್‌ ವರೆಗೂ ತೆರಳಿ, ಇದೀಗ ಊರಿಗೆ ಮರಳುತ್ತಿದ್ದಾರೆ.

Ramanagara Young Woman Solo Bike Ride to India Alone grg
Author
First Published Dec 29, 2023, 1:02 PM IST

ಎಂ.ಅಫ್ರೋಜ್ ಖಾನ್

ರಾಮನಗರ(ಡಿ.29):  ಹೆತ್ತು ಹೊತ್ತು ಸಾಕಿ ಸಲಹಿದ ಮಕ್ಕಳಿಂದಲೇ ಬಹಳಷ್ಟು ತಂದೆ ತಾಯಂದಿರು ಮನೆಯಿಂದ ಹೊರದೂಡಲ್ಪಟ್ಟು ವೃದ್ಧಾಶ್ರಮಗಳ ಪಾಲಾಗುತ್ತಿರುವ ಸಂದರ್ಭದಲ್ಲಿ ಹಿರಿಯರ ತ್ಯಾಗ ಹಾಗೂ ಅವರನ್ನು ಸಾಕಿ ಸಲಹಿ ಎಂಬ ಸಂದೇಶವನ್ನು ಸಾರಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಯುವತಿಯೊಬ್ಬಳು ಕನ್ಯಾಕುಮಾರಿಯಿಂದ ಲಡಾಕ್ ವರೆಗೆ ಬೈಕ್ ರೈಡ್ ಮಾಡಿ ವಾಪಸ್ಸಾಗುತ್ತಿದ್ದಾರೆ. ರಾಮನಗರ ತಾಲೂಕು ಕೃಷ್ಣಾಪುರದೊಡ್ಡಿ ಗ್ರಾಮದ ಚಿತ್ರಾರಾವ್‌ (24) ಸೋಲೋ ಬೈಕ್‌ ರೈಡ್ ಮಾಡಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರ ಹಾಗೂ ಲಡಾಕ್‌ ವರೆಗೂ ತೆರಳಿ, ಇದೀಗ ಊರಿಗೆ ಮರಳುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಯಾನ:

ವೃತ್ತಿಯಲ್ಲಿ ಬೆಂಗಳೂರಿನ ವ್ಯಾಲ್ಯೂ ಲೀಫ್ ಕಂಪನಿಯಲ್ಲಿ ಉದ್ಯೋಗಿ ಆಗಿರುವ ಚಿತ್ರಾರಾವ್‌, ತನ್ನ ಕನಸಿನಂತೆ ರಾಯಲ್‌ ಎನ್‌ ಫೀಲ್ಡ್ ಹಿಮಾಲಯನ್ ಬೈಕ್‌ ಖರೀದಿಸಿದ್ದರು. ಆರಂಭದಲ್ಲಿ ಮೈಸೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸುತ್ತಾಡಿದ್ದ ಅವರಿಗೆ ಲಾಂಗ್‌ ರೈಡ್ ಮಾಡುವ ಆಲೋಚನೆ ಮೊಳಕೆ ಹೊಡೆಯಿತು. ಈ ವಿಚಾರವನ್ನು ದಾರಿದೀಪ ವೃದ್ಧಾಶ್ರಮ ನಡೆಸುತ್ತಿರುವ ತನ್ನ ತಾಯಿ ಕವಿತಾರಾವ್‌ ಬಳಿ ವ್ಯಕ್ತಪಡಿಸಿದ್ದರು.

RAMANAGARA: ಬೆಂಬಲ ಬೆಲೆ ಇದೆ, ಆದರೆ ರಾಗಿ ಇಳುವರಿಯೇ ಇಲ್ಲ: ರೈತರ ಹಿಂದೇಟು!

ಆಗ ತಾಯಿ ಕವಿತಾರಾವ್‌ ರವರು ಬೈಕ್‌ ರೈಡ್‌ ಜೊತೆಗೆ ಹಿರಿಯ ನಾಗರಿಕರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆಯೂ ಸಲಹೆ ನೀಡಿದರು. ಅದರಂತೆ ಚಿತ್ರಾರಾವ್‌ ತನ್ನ ಪ್ರಯಾಣವನ್ನು ಮೊದಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (3577 ಕಿ.ಮೀ) ನಿಗದಿ ಪಡಿಸಿಕೊಂಡಿದ್ದರು. ಆನಂತರ ತನ್ನ ಜಾಗೃತಿ ಕಾರ್ಯಕ್ರಮವನ್ನು ವಿಸ್ತರಿಸಿಕೊಂಡು ಲಡಾಕ್‌ ವರೆಗೂ ಸಂಚರಿಸಿ ಇಡೀ ಭಾರತ ದೇಶವನ್ನು ಸಂದರ್ಶಿಸಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯಿಂದ ಆಗಸ್ಟ್‌ 26ರಂದು ಏಕಾಂಗಿಯಾಗಿ ಬೈಕ್‌ ನಲ್ಲಿ ಸವಾರಿ ಹೊರಟ ಚಿತ್ರಾರಾವ್‌, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್‌ ಮಾರ್ಗವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಸೆಪ್ಟೆಂಬರ್ 14ರಂದು ತಲುಪಿದರು. ಅಲ್ಲಿಂದ ಕಾರ್ಗಿಲ್‌ ಮತ್ತು ಲಡಾಕ್‌ ವರೆಗೂ ಯಾತ್ರೆ ಮುಂದುವರೆಸಿ ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. 24 ದಿನ 8 ರಾಜ್ಯಗಳಲ್ಲಿ 4850 ಕಿ.ಮೀ. ಬೈಕ್ ಓಡಿಸಿದ ಸಾಧನೆ ಅವರದ್ದಾಗಿದೆ.

ಎಲ್ಲೆಲ್ಲೂ ಚಿತ್ರಾಗೆ ಸಲಾಂ..!

ಚಿತ್ರಾರಾವ್‌ ಅವರು ಪ್ರವಾಸ ಮಾಡಿದ ಎಲ್ಲ ಕಡೆ ಜನರಿಂದ ಸಹಕಾರ ಮತ್ತು ಜಾಗೃತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬೈಕ್‌ ರೈಡ್ ವೇಳೆ ಸ್ನೇಹಿತರು, ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದ ಚಿತ್ರಾ ಬೇರೆ ರಾಜ್ಯಗಳಲ್ಲಿ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು.

ದೇಶದ ಉತ್ತರದ ಮೈ ಕೊರೆಯುವ ಚಳಿ, ದಕ್ಷಿಣದಲ್ಲಿ ಬಿಸಿಲು, ಹಿಮಾಲಯದ ಮಂಜು, ಈಶಾನ್ಯ ರಾಜ್ಯಗಳ ಪ್ರಕೃತಿ ಸೌಂದರ್ಯ, ಪೂರ್ವ - ಪಶ್ಚಿಮದ ಕರಾವಳಿಯನ್ನು ನೋಡುವ ಅವಕಾಶ ಲಭಿಸಿತು. ಗ್ರಾಮೀಣ ಜನರ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಕಣ್ಣಾರೆ ಕಾಣುವ ಅಪೂರ್ವ ಅವಕಾಶ ಸಿಕ್ಕಿತು ಎಂದು ಚಿತ್ರಾರಾವ್‌ ಹೇಳುತ್ತಾರೆ.

ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಬೈಕ್ ರೈಡಿಂಗ್ :

''''ಪ್ರತಿ ದಿನ ಬೆಳಗ್ಗೆ 6ರಿಂದ ಸಂಜೆ 7ರ ತನಕ ರೈಡಿಂಗ್‌, ರಾತ್ರಿ ಹೋಟೆಲ್‌ ಗಳಲ್ಲಿ ವಿಶ್ರಾಂತಿ. ರಸ್ತೆ ಪಕ್ಕದ ಸಣ್ಣ ಹೋಟೆಲ್‌ಗಳಲ್ಲಿ ಊಟ, ತಿಂಡಿ ಮಾಡುತ್ತಿದ್ದೆ. ದಾರಿ ಮಧ್ಯೆ ಎಲ್ಲಿಯೂ ಅಡ್ಡಿ ಆತಂಕ ಎದುರಾಗಲಿಲ್ಲ. ಯಾವುದೇ ಕೆಟ್ಟ ಅನುಭವವೂ ಆಗಲಿಲ್ಲ. ಜಮ್ಮು ಕಾಶ್ಮೀರದ ಜನರು ನಾವು ಅಂದುಕೊಂಡಂತಿಲ್ಲ. ಅವರಲ್ಲಿರುವಷ್ಟು ಮಾನವೀಯತೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಮುಂದಿನ ವರ್ಷ ಈಸ್ಟ್ ಇಂಡಿಯಾ ಬೈಕ್‌ ರೈಡ್‌ ಸಾಹಸ ಮಾಡಬೇಕೆಂದು ನಿರ್ಧರಿಸಿದ್ದೇನೆ ಎನ್ನುತ್ತಾರೆ ಬೈಕ್‌ ರೈಡರ್‌ ಚಿತ್ರಾರಾವ್‌.

ತಂದೆತಾಯಿಯನ್ನು ಕಡೆಗಣಿಸಬೇಡಿ

ನನ್ನ ಪ್ರವಾಸಕ್ಕೆ ತಾಯಿ ಕವಿತಾರಾವ್ ನಡೆಸುತ್ತಿರುವ ದಾರಿದೀಪ ವೃದ್ಧಾಶ್ರಮವೇ ಪ್ರೇರಣೆ. ವೃದ್ಧಾಶ್ರಮದಲ್ಲಿನ ವೃದ್ಧರ ಬವಣೆ ನನ್ನ ಮನಕಲುಕಿದೆ. ತಂದೆ ತಾಯಿಯರನ್ನು ಕಡೆಗಣಿಸಬೇಡಿ, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು ಎಂಬ ಸಂದೇಶವನ್ನು ಯುವ ಸಮುದಾಯದಲ್ಲಿ ಸಾರುವ ಉದ್ದೇಶ ಹೊತ್ತು ತಾನು ಕೈಲಾದಷ್ಟರ ಮಟ್ಟಿಗೆ ಜಾಗೃತಿ ಮೂಡಿಸಿದ್ದೇನೆ ಎನ್ನುತ್ತಾರೆ ಚಿತ್ರಾರಾವ್‌.

ಚನ್ನಪಟ್ಟಣದ ಸಹೋದರಿಯರು

ಪ್ರತಿಭಾನ್ವಿತ ಭರತ ನಾಟ್ಯ ಕಲಾವಿದೆ ಚಿತ್ರಾರಾವ್‌ ತಮ್ಮ ಮೂರನೇ ವಯಸ್ಸಿಗೆ ನೃತ್ಯ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದರು. ಹಿರಿಯ ಸಹೋದರಿ ಹಾಗೂ ಖ್ಯಾತ ಭರತ ನಾಟ್ಯಕಲಾವಿದೆ ಕಾವ್ಯರಾವ್ ಅವರ ಜೊತೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳ ಪ್ರದರ್ಶನ ನೀಡಿ, ಕರ್ನಾಟಕದಲ್ಲಿ ‘ಚನ್ನಪಟ್ಟಣದ ಸಹೋದರಿಯರು’ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಇವರು ನೃತ್ಯ ಕಾರ್ಯಕ್ರಮಗಳ ಪ್ರದರ್ಶನಗಳಲ್ಲಿ ಬರುವ ಗೌರವಧನ ಹಾಗೂ ರಾಮನಗರದಲ್ಲಿ ನಡೆಸುತ್ತಿರುವ ‘ಶಾಂತಲಾ ಕಲಾಕೇಂದ್ರ ನೃತ್ಯ ಶಾಲೆ’ ಯಿಂದ ಬರುವ ಬಹುಪಾಲು ಹಣವನ್ನು ತಮ್ಮ ತಾಯಿ ಕವಿತಾರಾವ್ ಅವರು ನಡೆಸುತ್ತಿರುವ ‘ದಾರಿದೀಪ ವೃದ್ದಾಶ್ರಮ’ಕ್ಕೆ ನೀಡುತ್ತಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ತವರಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತನ ಬಲಿ!

ಹಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಸಂಗೀತ ಮತ್ತು ನೃತ್ಯಾಭ್ಯಾಸ ಹೇಳಿಕೊಡುತ್ತಿದ್ದಾರೆ. ರಾಮನಗರ ತಾಲೂಕಿನ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಇಂದು ಚಿತ್ರಾರಾವ್ ಅವರಿಗೆ ಸ್ವಾಗತ ಕಾರ್ಯಕ್ರಮ

ರಾಮನಗರ: ವೃದ್ಧ, ತಂದೆ, ತಾಯಿ ಪೋಷಣೆ ಮಾಡಿ ಎಂಬ ಸಂದೇಶದೊಂದಿಗೆ ನಾಲ್ಕು ಸಾವಿರ ಕಿ.ಮೀ.ಸಂಚರಿಸಿದ ಜಿಲ್ಲೆಯ ನೃತ್ಯಪಟು ಚಿತ್ರ ರಾವ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ನಗರದ ವಿಜಯನಗರದಲ್ಲಿನ ಆಂಜನೇಯ ಮಹಾದ್ವಾರದ ಬಳಿ ಡಿ.29 ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬೈಕ್ ನಲ್ಲಿ ಒಬ್ಬಂಟಿಯಾಗಿ ಪ್ರಯಾಣ ಮಾಡಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ಎಸ್.ರುದ್ರೇಶ್ವರ ತಿಳಿಸಿದ್ದಾರೆ.

Follow Us:
Download App:
  • android
  • ios