Ramanagara: ಬೆಂಬಲ ಬೆಲೆ ಇದೆ, ಆದರೆ ರಾಗಿ ಇಳುವರಿಯೇ ಇಲ್ಲ: ರೈತರ ಹಿಂದೇಟು!
ಫಸಲು ಉತ್ತಮವಾಗಿದ್ದರೆ ಬೆಲೆ ಇರುವುದಿಲ್ಲ, ಹೆಚ್ಚಿನ ಬೆಲೆ ಇದ್ದರೆ ಫಸಲು ಇರುವುದಿಲ್ಲ. ಇದು ಸಾಮಾನ್ಯವಾಗಿ ರೈತರು ಎದುರಿಸುವ ಸಮಸ್ಯೆ. ಈಗಿದು ರಾಗಿ ಬೆಳೆಗಾರರಿಗೂ ಅನ್ವಯಿಸುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.28): ಫಸಲು ಉತ್ತಮವಾಗಿದ್ದರೆ ಬೆಲೆ ಇರುವುದಿಲ್ಲ, ಹೆಚ್ಚಿನ ಬೆಲೆ ಇದ್ದರೆ ಫಸಲು ಇರುವುದಿಲ್ಲ. ಇದು ಸಾಮಾನ್ಯವಾಗಿ ರೈತರು ಎದುರಿಸುವ ಸಮಸ್ಯೆ. ಈಗಿದು ರಾಗಿ ಬೆಳೆಗಾರರಿಗೂ ಅನ್ವಯಿಸುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ರೈತರಿಂದ ಬೆಂಬಲ ಬೆಲೆಗೆ ರಾಗಿ ಖರೀದಿ ಮಾಡಲು ಸರ್ಕಾರ ತಾಲೂಕು ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದು ಸಿದ್ಧತೆ ಮಾಡಿಕೊಂಡಿದೆ. ರಾಗಿಗೆ ಉತ್ತಮ ಬೆಲೆಯೂ ಘೋಷಣೆ ಮಾಡಿದೆ. ಆದರೆ, ವಿಪರ್ಯಾಸ ಏನೆಂದರೆ ರಾಗಿ ಇಳುವರಿಯೇ ಇಲ್ಲ.
ಹೀಗಾಗಿ ರೈತರು ರಾಗಿ ಮಾರಾಟದ ನೋಂದಣಿಗೂ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಸಹ ಸಮೃದ್ಧಿಯಾಗಿ ರಾಗಿ ಬೆಳೆದು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡಿದ್ದರು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣ ರಾಗಿ ಸೇರಿದಂತೆ ಯಾವುದೇ ಬೆಳೆ ರೈತರ ಕೈ ಸೇರದೆ ನೆಲ ಕಚ್ಚಿದೆ.
ಮೋದಿ ಗೆಲ್ಲಿಸಿ -ಭಾರತ ಉಳಿಸಿ ಅಭಿಯಾನಕ್ಕೆ ಮಾಜಿ ಸಿಎಂ ಎಚ್‌ಡಿಕೆಗೆ ಆಹ್ವಾನ
63 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆ: ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 77 ಸಾವಿರ ಹೆಕ್ಟೇರ್ ಪೈಕಿ 66,719 ಹೆಕ್ಟೇರ್ ನಲ್ಲಿ ರಾಗಿ ಬೆಳೆಯಲಾಗಿತ್ತು. ಆಗ 22,350 ರೈತರು 3.29 ಲಕ್ಷ ಕ್ವಿಂಟಾಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 20,589 ರೈತರು 3.02 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಿ ಲಾಭ ಕಂಡಿದ್ದರು. ಪ್ರಸಕ್ತ ಸಾಲಿನಲ್ಲಿ 72,600 ಹೆಕ್ಟೇರ್ ಗುರಿಯಲ್ಲಿ 63,111 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಾಗಿ ಬೆಳೆ ಇದೆ. ಮಳೆಯಾಗದೆ ರಾಗಿ ಫಸಲು ಕಡಿಮೆ ಇರುವ ಕಾರಣ ಇಲ್ಲಿವರೆಗೆ ಕೇವಲ 2739 ರೈತರು 70380 ಕ್ವಿಂಟಲ್ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.
ಸರ್ಕಾರ ರಾಗಿಯ ದರವನ್ನು ಪ್ರತಿ ಕ್ವಿಂಟಲ್ ಗೆ 3846 ರು. ನಿಗದಿ ಮಾಡಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಲ್ ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲಾಗುತ್ತದೆ. ಈ ದರ ಕಳೆದ ವರ್ಷಕ್ಕಿಂತಲೂ ಹೆಚ್ಚಿದೆ. ಆದರೆ, ಬೆಳೆಯೇ ಇಲ್ಲದಿರುವುದರಿಂದ ರೈತರಲ್ಲಿ ನಿರಾಸೆ ಮೂಡಿಸಿದೆ. ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕೇವಲ 2 ಸಾವಿರದಿಂದ 2,500 ರುಪಾಯಿ ಇದೆ. ಆದರೆ, ಸರ್ಕಾರ 3846 ರುಪಾಯಿಗಳಿಗೆ ಖರೀದಿ ಮಾಡುವುದರಿಂದ ರೈತರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡದೆ ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡುತ್ತಿದ್ದರು.
ಸರ್ಕಾರದ ಬೆಂಬಲ ಬೆಲೆ ನೋಡಿ ಕೃಷಿಕರು ಖುಷಿಯಾಗಿದ್ದರು. ಪ್ರತಿ ವರ್ಷ ಸುಮಾರು 3 ಲಕ್ಷ ಕ್ವಿಂಟಲ್ ಗಿಂತಲೂ ಹೆಚ್ಚಿನ ರಾಗಿಯನ್ನು ರೈತರು ಸರ್ಕಾರಕ್ಕೆ ಮಾರಾಟ ಮಾಡುತ್ತಿದ್ದರು. ಜೊತೆಗೆ ಬೇರೆ ಜಿಲ್ಲೆಗಳಿಗೂ ಸಾಗಾಟ ಮಾಡುತ್ತಿದ್ದರು. ಆದರೆ, ಬಿತ್ತನೆ ಸಮಯದಲ್ಲಿಯೇ ಮಳೆರಾಯ ಕೈಕೊಟ್ಟಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಆಗಿಲ್ಲ. ಅಲ್ಪಸ್ವಲ್ಪ ಬೆಳೆಯಾಗಿರುವವರೂ ಅದನ್ನುಕಟಾವು ಮಾಡಲು ಕೂಲಿ ಕಾರ್ಮಿಕರ ಕೊರತೆಯಿಂದ ಕಟಾವು ಮಾಡಲಾಗದೆ ಹೊಲದಲ್ಲೆ ಒಣಗುವಂತಾಗಿದೆ. ಇನ್ನು 2024ರ ಜನವರಿ 1ರಿಂದ ರಾಗಿ ಖರೀದಿ ಆರಂಭಿಸಲು ಸೂಚಿಸಲಾಗಿದ್ದು, ಜಿಲ್ಲೆಯಲ್ಲಿ 4 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಆದರೆ, ಕೃಷಿಕರು ರಾಗಿ ಮಾರಾಟಕ್ಕೆ ಹಿಂದೇಟು ಹಾಕುತ್ತಿರುವ ಕಾರಣ ಖರೀದಿ ಕೇಂದ್ರದ ಬಳಿ ಯಾವ ಚಟುವಟಿಕೆಗಳು ನಡೆಯುತ್ತಿಲ್ಲ.
ಎಲ್ಲೆಲ್ಲಿ ರಾಗಿ ಖರೀದಿ ಕೇಂದ್ರಗಳು ?
1. ಕೆಎಫ್‌ಸಿಎಸ್‌ಸಿ ಚನ್ನಪಟ್ಟಣ ಸಗಟು ಮಳಿಗೆ, ಜಾನಪದ ಲೋಕದ ಎದುರು, ಬಿ.ಎಂ.ರಸ್ತೆ, ಚನ್ನಪಟ್ಟಣ.
2. ಕೆಎಫ್‌ಸಿಎಸ್‌ಸಿ ಕನಕಪುರ ಸಗಟು ಮಳಿಗೆ, ಮೆಳೆಕೋಟೆ, ರಾಮನಗರ ರಸ್ತೆ, ಕನಕಪುರ.
3. ಕೆಎಫ್‌ಸಿಎಸ್‌ಸಿ ಮಾಗಡಿ ಸಗಟು ಮಳಿಗೆ, ಗುಡೇಮಾರನಹಳ್ಳಿ ರಸ್ತೆ, ಮಾಗಡಿ
4. ಕೆಎಫ್‌ಸಿಎಸ್‌ಸಿ ರಾಮನಗರ ಸಗಟು ಮಳಿಗೆ, ಜಾನಪದ ಲೋಕದ ಎದುರು, ಬಿ.ಎಂ.ರಸ್ತೆ, ರಾಮನಗರ.
ರಾಜ್ಯದಲ್ಲಿ ಟಿಪ್ಪು ನೇತೃತ್ವದ ತುಘಲಕ್ ಸರ್ಕಾರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಡಿ.26ರವರೆಗೆ ರಾಗಿ ಮಾರಾಟದ ನೋಂದಣಿ ವಿವರ
ತಾಲೂಕು ರೈತರು ರಾಗಿ ಪ್ರಮಾಣ (ಕ್ವಿ)
ಚನ್ನಪಟ್ಟಣ 170 5358.50
ರಾಮನಗರ 128 3014.00
ಕನಕಪುರ 768 20497.00
ಮಾಗಡಿ 1673 41511.00
ಒಟ್ಟು 2739 70380.50