ವಿಮಾನದಲ್ಲಿ ತನ್ನ ಮಗಳನ್ನು ಮುಟ್ಟಿದ ಎಂದು ಅಪ್ಪನೋರ್ವ ಪ್ರಯಾಣಿಕನೋರ್ವನಿಗೆ ಬಾಯಿಗೆ ಬಂದಂತೆ ಬಯ್ದಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ. 

ಮುಂಬೈ: ವಿಮಾನದಲ್ಲಿ ನಡೆಯುವ ಅವಾಂತರಗಳ ವೀಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಕುಡಿದ ಮತ್ತಿನಲ್ಲಿ ಕೆಲವು ವಿಮಾನ ಪ್ರಯಾಣಿಕರು ಅಸಭ್ಯವಾಗಿ ವರ್ತಿಸುವ, ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ, ಸಹ ಪ್ರಯಾಣಿಕರಿಗೂ ಕಿರುಕುಳ ನೀಡುವ ಹಲವು ಘಟನೆಗಳು ಈಗಾಗಲೇ ಸಾಕಷ್ಟು ವರದಿ ಆಗಿವೆ. ಇದಕ್ಕೊಂದು ಹೊಸ ಸೇರ್ಪಡೆ ಈ ವೀಡಿಯೋ. ವಿಮಾನದಲ್ಲಿ ತನ್ನ ಮಗಳನ್ನು ಮುಟ್ಟಿದ ಎಂದು ಅಪ್ಪನೋರ್ವ ಪ್ರಯಾಣಿಕನೋರ್ವನಿಗೆ ಬಾಯಿಗೆ ಬಂದಂತೆ ಬಯ್ದಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ. ಆದರೆ ಘಟನೆ ಯುವತಿಯನ್ನು ಟಚ್ ಮಾಡಿದ ಕಾರಣಕ್ಕೆ ನಡೆದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

ಓರ್ವ ಪ್ರಯಾಣಿಕನ (Passenger) ಮಗಳನ್ನು ಮತ್ತೋರ್ವ ಪ್ರಯಾಣಿಕ ಅಸಭ್ಯವಾಗಿ ಸ್ಪರ್ಶಿಸಿದ ಎಂಬ ಕಾರಣಕ್ಕೆ ಈ ಗಲಾಟೆ ನಡೆದಿದ್ದು, ಯುವತಿಯ ತಂದೆ ಈ ಕಾರಣಕ್ಕೆ ಮತ್ತೊಬ್ಬ ಪ್ರಯಾಣಿಕನಿಗೆ ಸರಿಯಾಗಿ ಬೈದಿದ್ದಾರೆ. ಯುವತಿ ಪ್ರಯಾಣಿಕನೋರ್ವ ತನ್ನನ್ನು ಅಸಭ್ಯವಾಗಿ ಟಚ್ ಮಾಡಿದ ಎಂದು ದೂರಿದ ನಂತರ ಹುಡುಗಿಯ ತಂದೆ ಹಾಗೂ ಸಹ ಪ್ರಯಾಣಿಕನ ಮಧ್ಯೆ ಈ ವಾಕ್ಸಮರ ನಡೆದಿದೆ. 

ವಿಮಾನದಲ್ಲಿ ಮಹಿಳೆಗೆ ಹೃದಯಸ್ತಂಭನ, ಚಿಕಿತ್ಸೆ ನೀಡಿ ರಕ್ಷಿಸಿದ ಎಸ್‌ಎಂ ಕೃಷ್ಣ ಅಳಿಯ!

ಈ ದೃಶ್ಯವನ್ನು ಅದೇ ಫ್ಲೈಟ್‌ನಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಮಾಡಿದ್ದಾರೆ. ಟ್ವಿಟ್ಟರ್‌ನ ಹಲವು ಖಾತೆಗಳಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಕಾಣಿಸುವಂತೆ ತಾನು ಕುಳಿತಿರುವ ಸೀಟಿನಿಂದ ವಿರುದ್ಧ ಸೀಟಿನಲ್ಲಿ ಕುಳಿತ ವ್ಯಕ್ತಿಗೆ ಹುಡುಗಿಯ ತಂದೆ, ತನ್ನ ಮಗಳನ್ನು ಮುಟ್ಟುವುದಕ್ಕೆ ನಿನಗೆಷ್ಟು ಧೈರ್ಯ ಎಂದು ದಬಾಯಿಸುವುದನ್ನು ಕಾಣಬಹುದಾಗಿದೆ. ಈ ವೇಳೆ ವಿಮಾನದಲ್ಲಿದ್ದ ಗಗನಸಖಿಯರು ಕೋಪಗೊಂಡ ವ್ಯಕ್ತಿಯನ್ನು ಸಮಾಧಾನಪಡಿಸಿ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಹುಡಗಿಯೂ ಕೂಡ ಈ ವಾಕ್ಸಮರದಲ್ಲಿ ಭಾಗಿಯಾಗಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಮೆನ್ಸ್ ರೈಟ್ ಪ್ರೊಫೆಷನಲ್ ಎಂಬ ಟ್ವಿಟ್ ಪೇಜ್‌ನಿಂದಲೂ ಈ ವೀಡಿಯೋ ಪೋಸ್ಟ್ ಆಗಿದ್ದು, 2 ಪ್ಯಾಕ್ಸ್ 22ಎ ವ್ಯಕ್ತಿ ಹಾಗೂ 23 ಎ ಹುಡುಗಿ ಮಧ್ಯೆ ಮಧ್ಯ ಆಗಸದಲ್ಲಿ ಈ ಘಟನೆ ನಡೆದಿದೆ. ಹುಡುಗಿ 23a ವಿಮಾನದಲ್ಲಿ ಆಹಾರ ಸೇವಿಸುತ್ತಿದ್ದು, ಆಕೆಯ ಮುಂದಿದ್ದ 22ಎ ವ್ಯಕ್ತಿಯ ಸೀಟನ್ನು ತನ್ನ ಕಾಲಿನಿಂದ ದೂಡಿದ್ದಾಳೆ, 22ಎ ವ್ಯಕ್ತಿ ನಿದ್ದೆ ಮಾಡ್ತಿದ್ದು, ಈಕೆ ಸೀಟನ್ನು ತಳ್ಳಿದ್ದರಿಂದ ಎದ್ದ ಆತ ನಿನಗೇನು ಮ್ಯಾನರ್ಸ್ ಇಲ್ವಾ ಎಂದು ಬೈದಿದ್ದಾನೆ. ಇಷ್ಟಕ್ಕೆ ಹುಡುಗಿ ಪೋಷಕರು ಆತನನ್ನು ತಪ್ಪಿತಸ್ಥನಾಗಿ ಮಾಡಿದ್ದು, ಆತನ ವಿರುದ್ಧ ಅಸಭ್ಯವಾಗಿ ನಿಂದಿಸಿದ್ದಲ್ಲದೇ ಆತನಿಗೆ ಹೊಡೆಯಲು ಯತ್ನಿಸಿದ್ದಾರೆ. ಈ ವೇಳೆ ವಿಮಾನದ ಸಿಬ್ಬಂದಿ ವಿಮಾನದ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದಾರೆ ಎಂದು ಈ ಟ್ವಿಟ್ಟರ್ ಪೇಜ್ ವಿವರ ನೀಡಿದೆ. ಮುಂಬೈ ಡೆಹ್ರಡೂನ್ ಮಾರ್ಗದ ವಿಸ್ತಾರ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. 

ವಿಮಾನದಲ್ಲಿ ಕುಳಿತು ಬಾಂಬ್ ಮಾತು: ದುಬೈಗೆ ಹೊರಟಿದ್ದವನ ಬಂಧನ

ಅನೇಕರು ಇಲ್ಲಿ ಹುಡುಗಿ ಸುಮ್ಮನೇ ಆರೋಪ ಮಾಡಿದ್ದಾಳೆ. ಆಕೆಯದ್ದೆ ಇಲ್ಲಿ ತಪ್ಪು ಎಂದು ದೂರಿ ಕಾಮೆಂಟ್ ಮಾಡಿದ್ದಾರೆ. ಆಕೆ ನಿದ್ರಿಸುವ ವ್ಯಕ್ತಿಯ ಸೀಟನ್ನು ತಳ್ಳಿ ಆತನನ್ನು ಎಬ್ಬಿಸಿದ್ದಾಳೆ. ಆ ವ್ಯಕ್ತಿ ಸೀಟನ್ನು ತಳ್ಳಬೇಡ ಎಂದಷ್ಟೇ ಹೇಳಿದ್ದಾನೆ. ಅಷ್ಟಕ್ಕೆ ಆಕೆಯ ಪೋಷಕರು ರೌಡಿಸಂ ಮಾಡಲು ಯತ್ನಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಸತ್ಯಾಸತ್ಯತೆ ತಿಳಿಯಲು ಘಟನೆಯ ಮತ್ತೊಂದು ವೀಡಿಯೋವನ್ನು ಹಾಕುವಂತೆ ಕೆಲವು ಬಳಕೆದಾರರು ಕೇಳಿದ್ದಾರೆ. 

Scroll to load tweet…