ಇಲ್ಲೊಂದು ಕಡೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾತು ಆಡಲು ಬಾರದ ಪುಟ್ಟ ಮಗುವೊಂದು ಅಸ್ವಸ್ಥಗೊಂಡಿದ್ದು, ಈ ವೇಳೆ ರೈಲ್ವೆ ಇಲಾಖೆಯ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಮಗುವಿನ ತಾಯಿಯೊಬ್ಬರು ಧನ್ಯವಾದ ಹೇಳಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ರೈಲು ಪ್ರಯಾಣದ ಮಧ್ಯೆ ಅಸ್ವಸ್ಥಗೊಂಡ ಪುಟ್ಟ ಮಗು

ಪುಟ್ಟ ಮಕ್ಕಳಿಗೆ ಏನಾದರೂ ಆದರೆ ಮನೆಯಲ್ಲಿರುವ ಯಾರಿಗೂ ನೆಮ್ಮದಿ ಇರುವುದಿಲ್ಲ, ಏಕೆಂದರೆ ಮಾತು ಬಾರದ ಪುಟ್ಟ ಮಕ್ಕಳಿಗೆ ಏನಾಗುತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ, ಅವರು ಅಳುವುದನ್ನು ನೋಡಿ ಏನೂ ಆಗಿರಬೇಕು ಎಂದು ನಾವು ಊಹಿಸಬಹುದಷ್ಟೇ. ಅದರಲ್ಲೂ ಪ್ರಯಾಣದ ಸಮಯದಲ್ಲಿ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಪೋಷಕರ ಧೈರ್ಯವೇ ಕುಸಿದು ಬಿಡುತ್ತದೆ. ಅದೇ ರೀತಿ ಇಲ್ಲೊಂದು ಕಡೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾತು ಆಡಲು ಬಾರದ ಪುಟ್ಟ ಮಗುವೊಂದು ಅಸ್ವಸ್ಥಗೊಂಡಿದ್ದು, ಈ ವೇಳೆ ರೈಲ್ವೆ ಇಲಾಖೆಯ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಮಗುವಿನ ತಾಯಿಯೊಬ್ಬರು ಧನ್ಯವಾದ ಹೇಳಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಮಗುವಿನ ತಾಯಿ ಮಾತ್ರವಲ್ಲದೇ ನೆಟ್ಟಿಗರು ಕೂಡ ರೈಲ್ವೆ ಇಲಾಖೆ ಸ್ಪಂದಿಸಿದ ರೀತಿಗೆ ಧನ್ಯವಾದ ಹೇಳಿದ್ದು, ರೈಲ್ವೆ ಇಲಾಖೆ ಸಿಬ್ಬಂದಿ ಮನಸ್ಸು ಮಾಡಿದರೆ ಹೀಗೂ ಕೂಡ ಕೆಲಸ ಮಾಡಬಹುದು ಎಂಬುದು ಸಾಬೀತಾಗಿದೆ.

Add Asianetnews Kannada as a Preferred SourcegooglePreferred

ವಾಂತಿ ಮಾಡಲು ಶುರು ಮಾಡಿದ ಮಗು

ಅಂದಹಾಗೆ ಈ ವೀಡಿಯೋವನ್ನು ದಂತವೈದ್ಯೆಯಾಗಿರುವ ಭಾವನಾ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಲಿಸುವ ರೈಲಿನಲ್ಲಿ ಭಯದಿಂದ ಪರಿಹಾರದವರೆಗೆ ಎಂದು ಬರೆದು ಈ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಅವರು ಮಗುವಿಗೆ ಏನಾಯಿತು ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ. ಅವರ ವೀಡಿಯೋದಲ್ಲಿರುವ ಮಾಹಿತಿಯ ಪ್ರಕಾರ, ಮಾರ್ಚ್ 13 ರಂದು ದಂತವೈದ್ಯ ಭಾವನಾ ಅವರು ಬೆಂಗಳೂರಿನಿಂದ ಗುಜರಾತ್‌ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಪುಟ್ಟ ಮಗು ಅಸ್ವಸ್ಥಗೊಂಡಿದೆ. ಮಗುವಿಗೆ ಅವರು ನುಗ್ಗೆಕಾಯಿ ಸೂಪ್ ನೀಡಿದ್ದು, ಇದಾದ ನಂತರ ಮಗು ವಾಂತಿ ಮಾಡಿಕೊಳ್ಳುವುದಕ್ಕೆ ಆರಂಭಿಸಿದೆ. ಇದರಿಂದ ಅವರಿಗೆ ಮಗುವಿಗೇನಾಯ್ತೋ ಎಂದು ಭಯವಾಗುವುದಕ್ಕೆ ಶುರುವಾಗಿದೆ.

ಮುಂದಿನ ನಿಲ್ದಾಣದಲ್ಲಿ ಸಿದ್ಧವಾಗಿ ನಿಂತಿದ್ದ ವೈದ್ಯರು

ಹೀಗಾಗಿ ಚಲಿಸುವ ರೈಲಿನಲ್ಲಿ ಔಷಧಿ ಸಿಗುವ ಯಾವುದೇ ನಿರೀಕ್ಷೆ ಇಲ್ಲದೇ ಅವರು ಏನಾದರೂ ಸಹಾಯ ಸಿಗಬಹುದೋ ಏನೋ ಎಂಬ ಸಣ್ಣ ಭರವಸೆಯಲ್ಲಿ ರೈಲು ಟಿಕೆಟ್ ಪರೀಕ್ಷಕರನ್ನು (ಟಿಟಿಇ) ಸಂಪರ್ಕಿಸಿದ್ದಾರೆ. ಈ ತುರ್ತು ಕ್ಷಣದಲ್ಲಿ ಅವರು ಹೆಚ್ಚಿನ ಸಹಾಯವನ್ನು ನಿರೀಕ್ಷಿಸಿರಲಿಲ್ಲ. ಆದರೂ ರೈಲ್ವೆ ಸಿಬ್ಬಂದಿ ಕೂಡಲೇ ಅವರಿಗೆ ಸ್ಪಂದಿಸಿದ್ದಾರೆ. ರೈಲು ಹಿಂದೂಪುರ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಅಲ್ಲಿ ತಕ್ಷಣದ ವೈದ್ಯಕೀಯ ಸಹಾಯ ಸಿದ್ಧವಾಗಿತ್ತು.

ಇದನ್ನೂ ಓದಿ: ಹಲ್ಲು ಕೀಳಿಸಲು ಹೋಗಿ ಮಹಿಳೆ ಪ್ರಾಣನೇ ಹೋಯ್ತು: ಘಟನೆಯ ಬಳಿಕ ಡೆಂಟಿಸ್ಟ್ ಪರಾರಿ

ಆಸ್ಪತ್ರೆಗೆ ಆಗಮಿಸಿದಾಗ, ಮಗುವನ್ನು ಪರೀಕ್ಷಿಸಲು ಅಲ್ಲಿ ವೈದ್ಯರು ಸಿದ್ಧರಾಗಿದ್ದರು. ವೈದ್ಯರು ಸ್ಥಳದಲ್ಲೇ ಅಗತ್ಯ ಚಿಕಿತ್ಸೆ ನೀಡಿ, ಕುಟುಂಬದ ಕಳವಳಗಳನ್ನು ನಿವಾರಿಸಿದರು. ರೈಲ್ವೆ ಸಿಬ್ಬಂದಿ ತ್ವರಿತವಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ಸಲ್ಲಿಸಿದ ಸೇವೆಗಳಿಗೆ ಔಪಚಾರಿಕ ಬಿಲ್ ಅನ್ನು ಸಹ ನೀಡಿದರು, ಇದು ಅವರ ವೃತ್ತಿಪರತೆ ಮತ್ತು ಪಾರದರ್ಶಕತೆಗೆ ಸಾಕ್ಷಿ. ಇದನ್ನು ನಿರೀಕ್ಷೆ ಮಾಡಿರದ ಭಾವನಾ ಅವರು ರೈಲ್ವೆ ಸಿಬ್ಬಂದಿಯ ಈ ತ್ವರಿತ ಸ್ಪಂದನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ರೈಲ್ವೆ ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಾತನಾಡಲು ಕಲಿಯದ ಪುಟ್ಟ ಮಕ್ಕಳ ಜೊತೆ ಪ್ರಯಾಣಿಸುವಾಗ ಅಂತಹ ಸಹಾಯ ಎಷ್ಟೊಂದು ಮಹತ್ವಪೂರ್ಣವಾದುದು ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಾ 5 ದಿನಗಳ ಯುದ್ಧ ವಿರಾಮ ಘೋಷಣೆ ಬೆನ್ನಲೇ ತನ್ನ ಭೂಗತ ಕ್ಷಿಪಣಿ ಶಸ್ತ್ರಾಗಾರದ ವೀಡಿಯೋ ಹರಿಬಿಟ್ಟ ಇರಾನ್

ವೀಡಿಯೋದ ಜೊತೆ ಭಾವನಾ ತಮ್ಮ ಭಾವನಾತ್ಮಕ ಪ್ರಯಾಣವನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ, ಚಲಿಸುವ ರೈಲಿನಲ್ಲಿ ಭಯದಿಂದ ಪರಿಹಾರದವರೆಗೆ. ನನ್ನ ಮಗುವಿಗೆ ಸಹಾಯದ ಅಗತ್ಯವಿತ್ತು ಮತ್ತು ಅದು ನಾನು ಊಹಿಸಿದ್ದಕ್ಕಿಂತ ವೇಗವಾಗಿ ಬಂದಿತು ಎಂದು ಹೇಳಿದರು. ಪ್ರಯಾಣದ ಸಮಯದಲ್ಲಿ ಎದುರಿಸುವ ಅನಿರೀಕ್ಷಿತ ಸವಾಲುಗಳು ಮತ್ತು ಆ ಕ್ಷಣಗಳಲ್ಲಿ ಸಿಗುವ ನೆರವು ವಹಿಸಬಹುದಾದ ಅಮೂಲ್ಯ ಪಾತ್ರವನ್ನು ಅವರು ವಿವರಿಸಿದ್ದಾರೆ.

View post on Instagram