tooth extraction gone wrong: ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ನಂತರ ಆರೋಪಿ ವೈದ್ಯ ಪರಾರಿಯಾಗಿದ್ದು, ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

35 ವರ್ಷದ ಮಹಿಳೆ ಬಿಜಂತಿ ದೇವಿಯವರಿಗೆ ಕೆಲ ದಿನಗಳಿಂದ ಹಲ್ಲು ನೋವು ಕಾಣಿಸಿಕೊಂಡಿದ್ದು, ಇದಕ್ಕೊಂದು ಮುಕ್ತಿ ನೀಡುವುದಕ್ಕಾಗಿ ಅವರು ಹಲ್ಲನ್ನು ಕೀಳಿಸಲು ನಿರ್ಧರಿಸಿ ಹರಿಹರಗಂಜ್‌ನಲ್ಲಿರುವ ಖಾಸಗಿ ಡೆಂಟಲ್ ಕ್ಲಿನಿಕ್ ಆದ ಜನತಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ವೈದ್ಯರು ತಪಾಸಣೆ ಮಾಡಿದ್ದಾರೆ. ಹಲ್ಲನ್ನು ಕೀಳುವುದಕ್ಕೆ ಲೋಕಲ್ ಅನಸ್ಥೇಸಿಯಾವನ್ನು ಕೂಡ ನೀಡಿದ್ದಾರೆ. ಇದಾದ ನಂತರ ಬಿಜಂತಿ ದೇವಿ ಮೇಲೆ ಎದ್ದಿಲ್ಲ. ಈ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಪಲಮು ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಬಿಜಂತಿ ದೇವಿ ಅವರಿಗೆ ಚಿಕಿತ್ಸೆ ನೀಡಿದ ದಂತವೈದ್ಯ ಘಟನೆ ಬಳಿಕ ಪರಾರಿಯಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ 36 ವರ್ಷದ ಮುಕೇಶ್ ಚಂದ್ರ ಭಾರತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾವು ಬಿಹಾರದ ಔರಂಗಾಬಾದ್ ಜಿಲ್ಲೆಯ ನಿವಾಸಿಯಾಗಿದ್ದು, ಚಿಕಿತ್ಸೆ ಸಮಯದಲ್ಲಿ ವೈದ್ಯರು ತಪ್ಪಾಗಿ ನೀಡಿದ ಚುಚ್ಚುಮದ್ದಿನ ಬಳಿಕ ತಮ್ಮ ಪತ್ನಿ ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. ಹಲ್ಲು ನೋವು ಕಾಣಿಸಿಕೊಂಡ ಹಿನ್ನೆಲೆ ಮುಕೇಶ್ ಚಂದ್ರ ಭಾರತಿ ಅವರು ತಮ್ಮ ಪತ್ನಿ ಬಿಜಂತಿ ದೇವಿ ಅವರನ್ನು ಮುಂಜಾನೆ 10.30ರ ಸುಮಾರಿಗೆ ಈ ಜನತಾ ಡೆಂಟಲ್ ಕ್ಲಿನಿಕ್‌ಗೆ ಕರೆದುಕೊಂಡು ಬಂದಿದ್ದರು. ಅವ ಬಾಯಲ್ಲ ಅರ್ಧ ಮುರಿದ ಹಲ್ಲೊಂದಿತ್ತು. ಇದು ಅವರಿಗೆ ಭಾರಿ ಕಿರಿಕಿರಿ ಉಂಟು ಮಾಡುತ್ತಿತ್ತು. ಅಲ್ಲಿ ನಮ್ಮ ಗ್ರಾಮದ ಅನೇಕರು ಈ ಹಿಂದೆ ಚಿಕಿತ್ಸೆ ಪಡೆದಿದ್ದರು. ಹಾಗೆಯೇ ನಾವು ಕೂಡ ಆ ವೈದ್ಯರನ್ನು ಸಂಪರ್ಕಿಸಿ ಅಲ್ಲಿಗೆ ಚಿಕಿತ್ಸೆಗಾಗಿ ಹೋದೆವು. ನಾವು ಪಲಮುವಿನಲ್ಲಿರುವ ಈ ಕ್ಲಿನಿಕ್‌ಗೆಂದೇ ಬಂದಿದ್ದೆವು.

ಅಶ್ರಫ್ ಅಲಿ ಎಂದು ಗುರುತಿಸಲಾದ ದಂತವೈದ್ಯರು ತಮ್ಮ ಪತ್ನಿಯನ್ನು ಪರೀಕ್ಷಿಸಿ, ಅವರ ರಕ್ತದೊತ್ತಡವನ್ನು ಪರೀಕ್ಷಿಸಿದರು, ರಕ್ತದಲ್ಲಿನ ಸಕ್ಕರೆ ಪರೀಕ್ಷೆಗೆ ಸಲಹೆ ನೀಡಿದರು, ಅದು ಸುಮಾರು 140 ಎಂದು ಕಂಡು ಬಂದಿತು. ಇದಾದ ನಂತರವೇ ಅವರು ಆಕೆಯನ್ನು ಹಲ್ಲು ಕೀಳಿಸುವುದಕ್ಕಾಗಿ ಒಳಗೆ ಕರೆದೊಯ್ದರು. ಹಲ್ಲು ಇರುವ ಜಾಗವನ್ನು ಮರಗಟ್ಟಲು ಚುಚ್ಚುಮದ್ದನ್ನು ನೀಡಿ, ಹಲ್ಲು ತೆಗೆಯಲಾಯಿತು. ಇದಾಗಿ ಸುಮಾರು ಒಂದು ಗಂಟೆಯ ನಂತರ ವೈದ್ಯರು ಕೆಲವು ಔಷಧಿಗಳನ್ನು ಬರೆದು ಇಂಜೆಕ್ಷನ್ ನೀಡಲು ಹೇಳಿದರು. ಒಬ್ಬ ಕಾಂಪೌಂಡರ್ ಇಂಜೆಕ್ಷನ್ ನೀಡಿದರು. ಅದನ್ನು ನೀಡಿದ ತಕ್ಷಣ, ಅವಳು ವಾಂತಿ ಮಾಡಲು ಪ್ರಾರಂಭಿಸಿದಳು ಮತ್ತು ಅವಳ ಸ್ಥಿತಿ ತಕ್ಷಣವೇ ಹದಗೆಟ್ಟಿತು ಎಂದು ಮಹಿಳೆಯ ಪತಿ ಭಾರ್ತಿ ಹೇಳಿದ್ದಾರೆ.

ವೈದ್ಯರಿಗೆ ಮಾಹಿತಿ ನೀಡಿದಾಗ, ಎರಡು ಹೆಚ್ಚುವರಿ ಚುಚ್ಚುಮದ್ದುಗಳನ್ನು ನೀಡಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ನಿಮಿಷಗಳಲ್ಲಿ, ಆಕೆಯ ಮುಖವು ಬಿಳಿಚಿಕೊಂಡಿದ್ದು, ಅವಳು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದಳು. ಅದರೆ ವೈದ್ಯರು ಆಂಬ್ಯುಲೆನ್ಸ್ ತರುವುದಾಗಿ ಹೇಳಿ ಕ್ಲಿನಿಕ್‌ನಿಂದ ಹೊರಗೆ ಹೋದವರು ವಾಪಸ್ ಬರದೇ ಪರಾರಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಲ್ಲಿದ್ದ ಸ್ಥಳೀಯರು ತಮ್ಮ ಪತ್ನಿಯನ್ನು ಮೊದಲು ಹತ್ತಿರದ ಖಾಸಗಿ ಮಕ್ಕಳ ಆಸ್ಪತ್ರೆಗೆ ಮತ್ತು ನಂತರ ಹರಿಹರಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿದರು ಅಲ್ಲಿ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಮಹಿಳೆಯ ಪತಿ ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯ ಪತಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಪ್ರಮುಖ ಆರೋಪಿ - ವೈದ್ಯರ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಆದರೆ ಕಂಪೌಂಡರ್ ಭಾಗಿಯಾಗಿರುವ ಬಗ್ಗೆ ನಮಗೆ ಸದ್ಯಕ್ಕೆ ಖಚಿತವಿಲ್ಲ. ಆರೋಪಿಗಳನ್ನು ಬಂಧಿಸಿದ ನಂತರ, ನಾವು ಈ ವಿಷಯವನ್ನು ಸರಿಯಾಗಿ ತನಿಖೆ ಮಾಡುತ್ತೇವೆ ಎಂದು ಹರಿಹರಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ.