ಲಡಾಖ್ ಅಮೃತ ಯಾತ್ರೆ–2022 ಭಾಗ-3: ಹೆದ್ದಾರಿ ಬಂದ್, 200ಕ್ಕೂ ಹೆಚ್ಚು ಭೂಕುಸಿತ !

ದಾರಿಯುದ್ದಕ್ಕೂ 200ಕ್ಕೂ ಹೆಚ್ಚು ಕಡೆ ರಸ್ತೆಗೆ ಸುರಿದ ಮಣ್ಣು, ಕಲ್ಲು, ಬಂಡೆಗಳು. 5-6 ಕಡೆಯಂತೂ ತುಸು ಹೆಚ್ಚೇ ಆತಂಕ ಮೂಡಿಸಿದ ಭೂಕುಸಿತ. ಅಲ್ಲಲ್ಲಿ ರಸ್ತೆಯಲ್ಲೇ ಹರಿಯುವ ನೀರು, ಕೆಲವೆಡೆ ರಸ್ತೆಯೇ ಇಲ್ಲದೆ ಕೆಸರ ಹಾದಿ. ಅಷ್ಟರಲ್ಲಿ ಆವರಿಸಿದ ಕತ್ತಲು. ಜನವಸತಿ ಅಲ್ಲೋ, ಇಲ್ಲೋ. ಏನಾದರೂ ರಸ್ತೆ ಬಂದ್ ಆದರೆ, ರಾತ್ರಿಯಿಡೀ ಅಲ್ಲೇ ಕಳೆಯುವ ಪರಿಸ್ಥಿತಿ. ಇದು ಲಡಾಖ್ ಅಮೃತಯಾತ್ರೆ – 2022ರ ಮೊದಲ ದಿನದ ಯಾನದ ಮುಖ್ಯಾಂಶಗಳು. ವಿವರಕ್ಕೆ ಮುಂದೆ ಓದಿ...

Ladakh Amrita Yatra-2022 Part-3: Road Blocked Because Of Landslide Vin

- ರವಿಶಂಕರ್ ಭಟ್

ಸುಮಾರು 80 ಕಿ.ಮೀ. ಹೆದ್ದಾರಿ. ಆಮೇಲೆ ಅಂದಾಜು 120 ಕಿ.ಮೀ. ಬೆಟ್ಟ-ಗುಡ್ಡಗಳಲ್ಲಿ ಪಯಣ. ಹತ್ತು, ಇಳಿ. ಹತ್ತು, ಇಳಿ. ಎಡ-ಬಲ ವಾಲಿಸುತ್ತ ಸಾಗು. ಆಮೇಲೆ ಬಂತಲ್ಲ ಮಂಡಿಯ ಮಂಡೆಬಿಸಿ. 3 ದಿನ ನಿರಂತರ ಮಳೆಯ ಫಲ. ಭಾರೀ ಭೂಕುಸಿತದಿಂದ ಹೆದ್ದಾರಿ ಸಂಪೂರ್ಣ ಬಂದ್. ಕಡೆಗೆ ಪರ್ಯಾಯ ದಾರಿಯಲ್ಲಿ 75 ಕಿ.ಮೀ. ಪಯಣ. ಒಂದೆಡೆ ಮಳೆ, ಮತ್ತೊಂದೆಡೆ ಭೂಕುಸಿತ. ದಾರಿಯುದ್ದಕ್ಕೂ 200ಕ್ಕೂ ಹೆಚ್ಚು ಕಡೆ ರಸ್ತೆಗೆ ಸುರಿದ ಮಣ್ಣು, ಕಲ್ಲು, ಬಂಡೆಗಳು. 5-6 ಕಡೆಯಂತೂ ತುಸು ಹೆಚ್ಚೇ ಆತಂಕ ಮೂಡಿಸಿದ ಭೂಕುಸಿತ. ಅಲ್ಲಲ್ಲಿ ರಸ್ತೆಯಲ್ಲೇ ಹರಿಯುವ ನೀರು, ಕೆಲವೆಡೆ ರಸ್ತೆಯೇ ಇಲ್ಲದೆ ಕೆಸರ ಹಾದಿ. ಅಷ್ಟರಲ್ಲಿ ಆವರಿಸಿದ ಕತ್ತಲು. ಜನವಸತಿ ಅಲ್ಲೋ, ಇಲ್ಲೋ. ಏನಾದರೂ ರಸ್ತೆ ಬಂದ್ ಆದರೆ, ರಾತ್ರಿಯಿಡೀ ಅಲ್ಲೇ ಕಳೆಯುವ ಪರಿಸ್ಥಿತಿ. ಇದು ಲಡಾಖ್ ಅಮೃತಯಾತ್ರೆ – 2022ರ ಮೊದಲ ದಿನದ ಯಾನದ ಮುಖ್ಯಾಂಶಗಳು. ವಿವರಕ್ಕೆ ಮುಂದೆ ಓದಿ...

ನಮ್ ಕತೆ ಕೇಳಿ...
ಈ ದಿನದ ಕಥೆಯನ್ನು ಯಾಕೋ ಮಾತಾಡಿದಂತೆಯೇ ಬರೆಯಬೇಕು ಅನ್ನಿಸುತ್ತಿದೆ. ಶಿಷ್ಟ ಭಾಷೆಯ ಬದಲು ಆಡುಭಾಷೆಯಲ್ಲಿ ಹೇಳೋಣ ಅಂತಾಗುತ್ತಿದೆ. ಅದಕ್ಕೆ ಕಾರಣ ಮೊದಲ ದಿನವೇ ಎದುರಾದ ಸವಾಲು, ಕಸರತ್ತು, ಆತಂಕ. ಇದನ್ನೆಲ್ಲ ಶಿಷ್ಟ ಬರವಣಿಗೆಯಲ್ಲಿ ಹೇಳಿದರೆ ಆ ಮಜಾ ಸಿಗಲಿಕ್ಕಿಲ್ಲ ಎನಿಸಿ ಸಾದಾ ಸಾಮಾನ್ಯ, ಕಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಹೇಳುತ್ತೇನೆ, ಕೇಳಿ...

ಬುಧವಾರ ರಾತ್ರಿ ಬೆಂಗಳೂರಿನಿಂದ ನಾನು, ದಿಲೀಪ, ದೀಪ್ತಿ, ಮಾನಸ ವಿಮಾನದಲ್ಲಿ ಚಂಡೀಗಢಕ್ಕೆ ಬಂದ್ವಲ್ಲ. ಅನಂತ, ಅನಿಲ ಮೊದಲೇ ಜೀಪಲ್ಲಿ ಬಂದು ತಂಗಿದ್ದರಲ್ಲ. ಎಲ್ಲರೂ ಸೊಂಪಾದ ನಿದ್ದೆ ಮಾಡಿ ಬೆಳಗ್ಗೆ 8.30ಕ್ಕೆಲ್ಲ ಹಿಮಾಲಯದ ಕಡೆ ಮುಖ ಮಾಡೋದು ಅಂದುಕೊಂಡಿದ್ವಿ. ಬೇಗ ಎದ್ದು ರೆಡಿಯೂ ಆದ್ವಿ. ಆದರೆ, ಫಸ್ಟ್ ಡೇ ಅಲ್ವಾ, ಪ್ಯಾಕಿಂಗು-ಫಿಟ್ಟಿಂಗು ಎಲ್ಲ ಮಾಡಿ ಹೊರಡುವಷ್ಟರಲ್ಲಿ 10 ಗಂಟೆ ಆಗೇ ಹೋಯ್ತು. ಲೇಟಾದ್ರೇನಂತೆ, ಫಸ್ಟ್ ಕ್ಲಾಸ್ ಹೈವೇ. ಅರ್ಧ ಗಂಟೆಯಲ್ಲಿ ಸಿಟಿಯಿಂದ ಹೊರಬಿದ್ದವರು ಆಕ್ಸಿಲೇಟರ್ ಜಗ್ಗಿದ್ವಿ. ತಿಂಡಿ ಆಗಿರ್ಲಿಲ್ಲ ಅಂತ ಹೈವೇ ಡಾಬಾದಲ್ಲಿ ಆಲೂ ಪರಾಟ ತಿಂದು, ಗಟ್ಟಿ ಹಾಲಿನ ಚಹಾ ಹೀರಿ ಮತ್ತೆ ಹೈವೇ ಹತ್ತಿದ್ವಿ. ಫೋರ್ ಲೇನ್ ರಸ್ತೆ ಅದು. ನಾವು ಚಂಡೀಗಢದಿಂದ ಹಿಮಾಚಲಕ್ಕೆ ಎಂಟ್ರಿ ಆಗಿ ಮನಾಲಿ ಹತ್ತಿರದ ದೋಭಿ ಅನ್ನೋ ಜಾಗಕ್ಕೆ ರೀಚ್ ಆಗ್ಬೇಕಿತ್ತು. ಸುಮಾರು 275 ಕಿಲೋ ಮೀಟರ್ ಜರ್ನಿ.

ಲಡಾಖ್ ಅಮೃತ ಯಾತ್ರೆ-2022 ಭಾಗ-1: ಲಡಾಖ್ ಎಂಬ ಸ್ವರ್ಗದ ಬಾಗಿಲು

ಗುಡು ಗುಡುಗಳಿಗೆ ಟ್ರೀಟ್ಮೆಂಟ್
ಅನಂತ, ಅನಿಲ್, ದೀಪ್ತಿ, ಮಾನಸಾ ಜೀಪಲ್ಲಿ ಹೊರಟ್ರು. ನಾನು, ದಿಲೀಪ ಬೈಕಲ್ಲಿ. ಒಂದು ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಸ್ಕ್ರಾಮ್ 411. ಅದ್ರಲ್ಲಿ ದಿಲೀಪ. ಇನ್ನೊಂದು ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350. ಇದ್ರಲ್ಲಿ ನಾನು. ದಿಲೀಪನ ಬೈಕಲ್ಲಿ ಹಾರ್ನ್ ವರ್ಕ್ ಆಗ್ತಿರ್ಲಿಲ್ಲ. ನನ್ನ ಬೈಕಲ್ಲಿ ಮಿರರೇ ಇರಲಿಲ್ಲ. ಜೊತೆಗೆ ಹಿಂದುಗಡೆಯ ನಂಬರ್ ಪ್ಲೇಟು ಮಕ್ಕಳ ಹಲ್ಲು ಆಡಿದ ಹಾಗೆ ಅಲ್ಲಾಡ್ತಿತ್ತು. ಹಾಗೇ ಅಡ್ಜಸ್ಟ್ ಮಾಡ್ಕೊಂಡು ಹೋಗ್ತಿರ್ಬೇಕಾದ್ರೆ ಹೈವೇ ಪಕ್ಕದಲ್ಲೇ ರಾಯಲ್ ಎನ್ ಫೀಲ್ಡ್ ಸರ್ವಿಸ್ ಸೆಂಟರ್ ಕಾಣ್ತು. ಸಣ್ ಸಣ್ ಪ್ರಾಬ್ಲಮ್ಮೇ ಮುಂದೆ ದೊಡ್ಡದಾಗೋದು. ಈಗ್ಲೇ ಸರಿ ಮಾಡ್ಬಿಡೋಣ ಅಂತ ನಿಲ್ಸಿದ್ವಿ. ಜೀಪು ಆಗಲೇ ಹಿಮಾಚಲ ಗಡಿ ಒಳಗೆ ಹೋಗ್ಬಿಟ್ಟಿತ್ತು. ಅವರಿಗೆ ಕಾಲ್ ಮಾಡಿ, ನೀವು ಕಂಟಿನ್ಯೂ ಮಾಡಿ ಅಂತಂದು, ನಾವು ಬೈಕ್ ರಿಪೇರಿಗೆ ಕೊಟ್ವಿ. ಸಣ್ ಹುಡುಗ ಅವ್ನು. ಗುರುಚರಣ್. ಚಕಾ ಚಕ್ ಅಂತ ಮಿರರ್ ಫಿಟ್ ಮಾಡಿದ. ನಂಬರ್ ಪ್ಲೇಟ್ ರಿಬೀಟ್ ಹೊಡೆದು ಗಟ್ಟಿ ಮಾಡಿದ. ಇನ್ನೊಂದು ಬೈಕಿನ ಹಾರ್ನ್ ಕೂಡ ಸರಿ ಮಾಡ್ಕೊಟ್ಟ. ಅವ್ನಿಗೊಂದು ಥ್ಯಾಂಕ್ಸ್ ಹೇಳಿ ಜುಮ್ ಅಂತ ಹೊರಟ್ವಿ.

ಹತ್ತು ಇಳಿ, ಹತ್ತು ಇಳಿ!
ಅಷ್ಟರಲ್ಲಾಗ್ಲೇ ಗಂಟೆ 12 ಆಗೋಗಿತ್ತು. ಹಿಮಾಚಲದ ಮಂಡಿಯಲ್ಲಿ ನಮ್ದು ನೆಕ್ಸ್ಟ್ ಸ್ಟಾಪ್ ಅಂತ ಮಾತಾಡಿಕೊಂಡಿದ್ವಿ. ಪಂಜಾಬ್ ಗಡಿಯಲ್ಲಿ ಆನಂದ್ ಪುರ ಸಾಹಿಬ್ ಅಂತ ಸಿಖ್ಖರ ತೀರ್ಥಕ್ಷೇತ್ರವಿದೆ. ಅಲ್ಲಿವರೆಗೂ ಹೈವೇ. ಅಲ್ಲಿಂದಲೇ ಘಟ್ಟ ಶುರು ಆಗೋದು. ಮಂಡಿಗೆ ಸುಮಾರು 135 ಕಿ.ಮೀ. ಹಾದಿ. ಜೀಪು ನಮಗಿಂತ 20-30 ಕಿ.ಮೀ. ಮುಂದೆ ಹೋಗಿತ್ತು. ನಾವೂ ಜಗ್ಗಿ ಹೊಡೆದ್ವಿ. ಒಂದು 15 ಕಿ.ಮೀ. ಬೆಟ್ಟ ಹತ್ತೋದು, ಅಷ್ಟೇ ಇಳಿಯೋದು. ಮತ್ತೆ ಹತ್ತೋದು. ಹೀಗೆ ಹತ್ತು, ಇಳಿ. ಹತ್ತು, ಇಳಿ. ಒಂದ್ಕಡೆ ಬೆಟ್ಟ, ಮತ್ತೊಂದ್ಕಡೆ ಪ್ರಪಾತ. ಅಲ್ಲೆಲ್ಲೋ ಹರಿಯುವ ಸಟ್ಲೆಜ್ ನದಿ. ಸಟ್ಲೆಜ್ ಗೊತ್ತಲ್ಲ? ಅದೇ, ಪಂಚ ನದಿಗಳ ನಾಡು ಅಂತ ಪಂಜಾಬಿಗೆ ಹೆಸರು ಬರಲು ಕಾರಣವಾದ ಝೇಲಂ, ಚೀನಾಬ್, ರಾವಿ, ಬಿಯಾಸ್ ನದಿಗಳ ಸಾಲಿನಲ್ಲಿ ಕಡೆಯದು. ಇವುಗಳೇ ಮುಂದೆ ಹೋಗಿ ಸಿಂಧೂ ನದಿಗೆ ಸೇರೋದು. ಇರ್ಲಿ. ನೋಡ ನೋಡುತ್ತಲೇ ಕೋಠಿಪುರ್, ನೌನಿ, ಬಿಲಾಸ್ ಪುರ, ಸುಂಗಲ್, ಘಾಘಸ್, ಹರಾಬಾಗ್ ಹಿಂದೆ ಹೋದ್ವು. ಅಷ್ಟರಲ್ಲಿ ಒಂದೈದು ಬೆಟ್ಟ ಏರಿ ಇಳ್ದಿರ್ಬೇಕು. ಆಗ ಸಿಕ್ಕಿದ್ದು ಸುಂದರನಗರ.

ಲಡಾಖ್ ಅಮೃತ ಯಾತ್ರೆ - 2022 ಭಾಗ-2: ಮೂರು ವಾಹನ, ಆರು ಜನ, ಹದಿಮೂರು ದಿನ

ಆಹಾ, ಹೆಸರಿಗೆ ತಕ್ಕಂತೆ ಸುಂದರವಾದ ನಗರ ಅದು. ಅದರ ಬಗ್ಗೆ ಎರಡೇ ಎರಡು ಸಾಲು ಬರೆಯಲೇಬೇಕು. ನಗರಕ್ಕೆ ಕಲಶಪ್ರಾಯ ಅಂತಾರಲ್ಲ, ಹಾಗೆ ದೊಡ್ಡ ಸರೋವರ. ಪಟ್ಟಣದುದ್ದಕ್ಕೂ ರಸ್ತೆ ಪಕ್ಕ ಹರಿಯುವ ನಾಲೆ. ಅಗಲವಾದ ರಸ್ತೆಗಳು. ಸುತ್ತಲೂ ಪಹಾಡ್ ಹೇಗೂ ಇದೆಯಲ್ಲ. ಸಖತ್ ಪ್ಲೆಸೆಂಟ್ ಫೀಲ್ ಕೊಡ್ತು. ಛೆ, ಇಂಥ ಜಾಗದಲ್ಲಿ ಬದುಕೋ ಥರ ಯಾಕೆ ಹುಟ್ಟಿಸ್ಲಿಲ್ಲ ಅಂತ ದೇವ್ರನ್ನು ಕೇಳಿಬಿಡೋಣ ಅಂತನ್ನಿಸ್ಲಿಲ್ಲ ಅಂದ್ರೆ ಸುಳ್ಳು ಹೇಳಿದ ಹಾಗಾಗುತ್ತೆ. ಆಲ್ರೈಟ್, ಮುಂದ್ಹಕ್ಕೋಗೋಣ.

ಮಂಡಿಯಲ್ಲಿ ಮಂಡೆ ಬಿಸಿಯೋ ಬಿಸಿ!
ಹಾಗೆ ಹೋಗ್ತಾ ಹೋಗ್ತಾ ಒಂದೆರಡು ಕಡೆ ಟೀ ಬ್ರೇಕ್ ತಗೊಂಡು, ಇನ್ನೊಂದೆರಡು ಕಡೆ ಕ್ಲಿಕ್ ಕ್ಲಿಕ್ ಅಂತ ಫೋಟೋ ಹೊಡೆದು ಅಂತೂ ಮಂಡಿ ತಲುಪಿದ್ವಿ. ಮಂಡಿಗೆ ತಲುಪೋಕೂ ಮುನ್ನ ವರುಣ ದೇವ ಮುನಿಸ್ಕೊಳ್ಳೋ ಸೂಚನೆ ಸಿಕ್ಕಿತ್ತು. ಗಟ್ಟಿ ಮೋಡ ದಟ್ಟೈಸ್ತಾ ಇತ್ತು. ಮಂಡಿ ನಗರದಲ್ಲೇ ಹಾದು ಹೋಗುವ ಬಿಯಾಸ್ ನದಿ ಕೆಂಪು ಕೆಂಪಾಗಿತ್ತು. ರಭಸವಾಗಿ ಹರಿಯುತ್ತಿತ್ತು. ಮೂರು ದಿನ ಎಡೆಬಿಡದೆ ಸುರಿದ ಮಳೆಯ ಫಲ ಅಂತೆ ಅದು. ಸಂಜೆ 5 ಆಗಿತ್ತು. ಹೊಟ್ಟೆ ಲೈಟಾಗಿ ನಾನೂ ಇದ್ದೀನಿ, ನೆನಪಿರ್ಲಿ ಅಂತಿತ್ತು. ಎಲ್ರೂ ಒಂದು ಹೋಟೆಲ್ ಸೇರ್ಕೊಂಡ್ವಿ. ಬಿಯಾಸ್ ನದಿ ಬುಡದಲ್ಲೇ ಇದ್ದ ಹೋಟೆಲ್ ಅದು. ದಿಲೀಪ ಮುಂದಿನ ಪ್ರಯಾಣದ ಯೋಜನೆ ಮಾಡ್ಕೋತಿದ್ದ. ಅವ್ನ ಫ್ರೆಂಡ್ಸ್ ಫೋನಿಗೆ ಸಿಕ್ರು. ಆಗಲೇ ಬಂದೆರಗಿದ್ದು ಸಿಡಿಲಾತಂಕದ ಸುದ್ದಿ. ಮನಾಲಿಗೆ ಹೋಗುವ ನ್ಯಾಷನಲ್ ಹೈವೇಯಲ್ಲಿ ಭಾರೀ ಲ್ಯಾಂಡ್ ಸ್ಲೈಡ್ ಆಗಿದೆ. ಈ ಕಡೆಯಿಂದ ಹೋಗ್ತಿಲ್ಲ, ಆ ಕಡೆಯಿಂದ ಏನೂ ಬರ್ತಿಲ್ಲ. ಜೊತೆಗೆ ಮಳೆ ಸುರೀತಾ ಇದೆ. ರೋಡ್ ಕ್ಲಿಯರ್ ಆಗೋಕೆ ಎಷ್ಟು ಹೊತ್ತಾಗುತ್ತೋ ಗೊತ್ತಿಲ್ಲ.

ಮಂಡಿಯಿಂದ ಮನಾಲಿಗೆ ಮತ್ತೊಂದು ರೂಟ್ ಇದೆ. ಅದು ಓಲ್ಡ್ ಮನಾಲಿ ಹೈವೇ. ಎರಡೂ ಹೆಚ್ಚು ಕಮ್ಮಿ ಒಂದೇ ದೂರ. ಆದರೆ, ನ್ಯಾಷನಲ್ ಹೈವೇ ರೂಟು ಫೋರ್ ಲೇನು. ಹಳೇದು ಸಿಂಗಲ್ ರೋಡು. ಸರಿ, ಓಲ್ಡ್ ಮನಾಲಿ ರೋಡಲ್ಲಿ ಹೋಗೋಣ ಅಂದ್ರೆ ಅಲ್ಲೂ ಮಳೆ ಆಗಿದ್ರಿಂದ ಲ್ಯಾಂಡ್ ಸ್ಲೈಡ್ ಆಗಿರುತ್ತೆ ಅಂತ ಲೋಕಲ್ ಜನ ಹೇಳಿದ್ರು. ಸುಮಾರು 200 ಕಿ.ಮೀ. ಜರ್ನಿ ಮಾಡಿ ಲೈಟಾಗಿ ಮಂಡಿ ನೋಯ್ತಿದ್ದ ನಮ್ಗೆ ಮಂಡಿಯಲ್ಲಿ ಭಯಂಕರ ಮಂಡೆ ಬಿಸಿ ಆಯ್ತು. ನಂಗೆ ಆಫೀಸಿಂದೂ ಯಾವ್ದೋ ಟೆನ್ಷನ್ ಸೇರಿ ಮಂಡೆ ಬಿಸಿಯೋ ಬಿಸಿ. ಅಷ್ಟರಲ್ಲಿ ದೋಭಿಯಲ್ಲಿದ್ದ ದಿಲೀಪನ ಗೆಳೆಯ ನೀರಜ್ ಫೋನ್ ಬಂದು ಧೈರ್ಯ ಹೇಳ್ಲಿಲ್ಲ ಅಂದ್ರೆ ಅವತ್ತು ಮಂಡಿಯಲ್ಲೇ ಮಂಡಿ ಊರಬೇಕಿತ್ತು ನಾವು. ‘ಕುಛ್ ನಹೀ ಹೋಗಾ. ಧೀರೇ ಸೇ ಆಜಾವೋ’ ಅಂದ್ನಂತೆ ಅವ್ನು. ಗಟ್ಟಿ ಮನಸ್ಸು ಮಾಡಿದ್ವಿ. ತರಿಸಿದ್ದ ಆಲೂ ಪರಾಟ, ಪನೀರ್ ಬಟರ್ ಮಸಾಲಾ, ದಾಲ್ – ಚಾವಲ್ ಹೊಟ್ಟೆ ಸೇರಿತ್ತು.

ಅರೆ, ಅಷ್ಟರಲ್ಲಿ ಒಬ್ಬ ಮಧ್ಯವಯಸ್ಕ ನಮ್ಮ ಕಡೆ ಬಂದು ವಿಚಾರಣೆ ಮಾಡಿದ. ಆತ ತುಮಕೂರಿನ ಎಸ್ಐಟಿಯಲ್ಲಿ ಎಂಜಿನಿಯರಿಂಗ್ ಮಾಡಿದ್ದಂತೆ. 1994ರ ಬ್ಯಾಚು. ನಂಗೆ ಐವತ್ತೆರಡು ವರ್ಷ. ಮಹಾರಾಷ್ಟ್ರ, ಫಾರಿನ್ನು ಹೀಗೆ ಎಲ್ಲೆಲ್ಲೋ ಇದ್ದೆ. ಈಗ ಊರಿಗೆ ಬಂದು ಸೆಟ್ಲ್ ಆಗಿದ್ದೀನಿ ಅಂತೆಲ್ಲ ಮಾತಾಡಿದ. ಮುಂದೆ ಹೋಗಲೇ ಬೇಡಿ. ಇಲ್ಲೇ ಉಳ್ಕೊಳ್ಳಿ. ಬೆಳಗ್ಗೆ ಎಲ್ಲ ಕ್ಲಿಯರ್ ಆಗಿದೆ ಅಂತ ಕನ್ಫರ್ಮ್ ಆದ ಮೇಲೆ ಹೊರಡಿ, ಇಲ್ಲದಿದ್ರೆ ಡೇಂಜರ್ರು ಅಂತೆಲ್ಲ ಹೇಳಿ ಗ್ಲಾಸಲ್ಲಿದ್ದ ಲಿಮ್ಕಾ ಖಾಲಿ ಮಾಡಿದ. ಆತನ ಮಾತು ಕೇಳಿಯೇ ಗೊತ್ತಾಗಿತ್ತು. ಬೆಳಗ್ಗಿಂದ ಸಾಕಷ್ಟು ಗುಂಡು ಹೊಟ್ಟೆ ಸೇರಿದೆ ಅಂತ. ಅವನಿಗೆ ಆಯ್ತು, ಇಲ್ಲೇ ಇರ್ತೀವಿ ಅಂತ ಭರವಸೆ ಕೊಟ್ಟು ಅವನನ್ನು ಬೀಳ್ಕೊಟ್ಟು ರೇನ್ ಕೋಟು ಧರಿಸಿ ಹಳೇ ಮನಾಲಿ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರಿಸಿದ್ವಿ.

ಬದುಕಿದೆಯಾ ಬಡಜೀವ!
ಪಕ್ಕದಲ್ಲೇ ಬಿಯಾಸ್ ನದಿ ಭೋರ್ಗರೆದು ಹರಿಯುತ್ತಿತ್ತು. ನೋಡ್ಕೊಂಡು ಹೋಗ್ರಪ್ಪಾ, ಅಂತ ಎಚ್ಚರಿಸ್ತಾ ಇತ್ತು. ಮಳೆ ಬೇರೆ ಸುರೀತಾ ಇತ್ತು. ಬೆಟ್ಟದಿಂದ ಇಳಿದ ನೀರು ರಸ್ತೆಯಲ್ಲಿ ಹರೀತಿತ್ತು. ಅಲ್ಲಲ್ಲಿ ರಸ್ತೆ ಕಿತ್ತು ಹೋಗಿ, ಅಲ್ಲಿಗೆ ಮಳೆ ನೀರು ಬಿದ್ದು ಕೆಸರು ಗುಂಡಿಯಾಗಿತ್ತು. ಬೈಕಿನ ಟೈರು ಸೈಡಿಗೆ ಏಳೀತಾ ಇತ್ತು. ಸ್ವಲ್ಪ ಜಾರಿದರೂ ಪ್ರಪಾತ. ಅದೆಲ್ಲ ನಮ್ಮ ಸ್ಕಿಲ್ ಮೇಲೆ ಡಿಪೆಂಡ್ ಬಿಡಿ. ಎಲ್ಲಕ್ಕಿಂತ ಆತಂಕ ಹುಟ್ಟಿಸಿದ್ದು ಲ್ಯಾಂಡ್ ಸ್ಲೈಡು. ನಾವು ಹೊರಟು 2-3 ಕಿ.ಮೀ. ಆಗಿಲ್ಲ, ಆಗಲೇ ರಸ್ತೆ ಉದ್ದಕ್ಕೂ ಲ್ಯಾಂಡ್ ಸ್ಲೈಡು. ದೊಡ್ಡದೇನಲ್ಲ. ಆದರೆ, ಆಗಷ್ಟೇ ಬಿದ್ದ ಫ್ರೆಶ್ ಮಣ್ಣು. ಕೆಲವು ಅರ್ಧ ದಾರಿಯನ್ನೇ ತಿಂದು ಹಾಕಿದ್ದರೆ ಇನ್ನು ಕೆಲವು ಬಂಡೆಗಳನ್ನು ರಸ್ತೆಗೆ ಉರುಳಿಸಿದ್ದವು. ಹುಷಾರಾಗಿ ಹೋಗಬೇಕಿತ್ತು. ಸಣ್ಣ ಸಣ್ಣ ಕಲ್ಲುಗಳೂ ರಸ್ತೆಗೆ ಬಿದ್ದು ಬೈಕ್ ಸವಾರರಿಗೆ ಸವಾಲು ಹಾಕಿದ್ದವು. ಸುಮಾರು 15 ಕಿ.ಮೀ. ಬಂದಿರಬಹುದು. ಆ ಕಡೆ ಬೆಟ್ಟದಲ್ಲಿ ಮಂಡಿ ಐಐಟಿ ಕಾಣಿಸ್ತಿತ್ತು. ಸಡನ್ನಾಗಿ ಪೊಲೀಸಪ್ಪ ಒಬ್ಬ ಕೈ ಅಡ್ಡ ಹಾಕಿದ.

ಎದುರು ನೋಡ್ತೇವೆ, ಭಾರೀ ಭೂಕುಸಿತ. ದಿಲೀಪ ಮುಂದಿದ್ದ. ಬಿದ್ದ ಮಣ್ಣಿನಲ್ಲೇ ಇಳಿಜಾರಿನ ರಸ್ತೆ ಇಳಿಯಬೇಕಿತ್ತು. ಒಬ್ಬೊಬ್ಬರೇ ದಾಟಿ ಅಂತ ಪೊಲೀಸಪ್ಪ ಹೇಳಿದ. ಸರಿ ಮುಂದಿದ್ದ ದಿಲೀಪ ಕಲ್ಲು-ಮಣ್ಣಿನ ಮೇಲೆ ಇನ್ನೇನು ದಾಟಬೇಕು, ಅಷ್ಟರಲ್ಲಿ ಅವನಿಂದ ಒಂದು ಮೀಟರ್ ಮುಂದೆ ಎಂಟ್ಹತ್ತು ಕಲ್ಲುಗಳು ಮೇಲಿನಿಂದ ಉರುಳಿ ಕೆಳಗೆ ಹೋದ್ವು. ಇಬ್ಬರದೂ ಎಡಗಡೆ ಇನ್ನೇನು ಕುಸಿಯುವ ಹಂತದಲ್ಲಿರುವ ಗುಡ್ಡ. ಬಲಗಡೆ ಬಿಯಾಸ್ ನದಿ ಪ್ರಪಾತ. ಒಂದು ಕ್ಷಣಕ್ಕೆ ಹೆಂಡ್ತಿ, ಮಕ್ಕಳು, ಅಪ್ಪ-ಅಮ್ಮ ಎಲ್ಲ ಕಣ್ಣೆದುರು ಬಂದರು. ತಮಾಷೆ ಅಲ್ಲ, ಲೈಫ್ ಇನ್ಶೂರೆನ್ಸ್ ಎಷ್ಟಿದೆ ಅಂತಲೂ ಮನಸ್ಸಿನಲ್ಲಿ ಹಾದು ಹೋಯ್ತು. ಒಮ್ಮೆಲೇ ಸಾಯ್ತೀವಾ, ನರಳಿ ನರಳಿ ಸಾಯ್ತೀವಾ ಅಂತೆಲ್ಲ ಯೋಚನೆ ಆಗಿಬಿಡ್ತು. ಇನ್ನೇನು, ನೀರಲ್ಲಿ ಮುಳುಗಿದ ಮೇಲೆ ಈಜಲೇ ಬೇಕಲ್ಲ. ಧೈರ್ಯ ಮಾಡಿ ದಾಟಿದ್ವಿ. ದೇವರ ದಯ, 3 ನಿಮಿಷಗಳ ಯಮ ಭೀತಿ ಹಾಗೇ ಕರಗಿ ಹೋಯ್ತು. ನಮ್ಮ ಜೀಪು ಆಗಲೇ ಅದೇ ಹಾದಿ ದಾಟಿ ಮುಂದೆ ಹೋಗಿತ್ತು. ಅವರಿಗೂ ಏನೂ ಅಪಾಯ ಆಗಿರ್ಲಿಲ್ಲ. ಬೆಟ್ಟಗಳನ್ನು ಏರಿಳಿಯುತ್ತ ಸಾಗುತ್ತಿದ್ದರೆ ಕನಿಷ್ಠ ಏನಿಲ್ಲವೆಂದರೂ 200ಕ್ಕೂ ಹೆಚ್ಚು ಭೂಕುಸಿತಗಳು ಸಂಭವಿಸಿದ್ದವು. 5-6 ಭೂಕುಸಿತಗಳನ್ನು ರಸ್ತೆಗಳನ್ನು ಬಹುತೇಕ ಮುಚ್ಚಿ ಹಾಕಿದ್ದವು. ಇನ್ನು ಕೆಲವು ಕಡೆ ಅಂತೂ ರಸ್ತೆಯ ಬಲಭಾಗವೇ ಕುಸಿದು ಹೋಗಿತ್ತು. ಬೆಟ್ಟಕ್ಕೆ ಅಂಟಿಕೊಂಡು ಮುಂದೆ ಸಾಗಬೇಕಿತ್ತು. ತಪ್ಪಿದರೆ, ಮತ್ತೆ ರಸ್ತೆ ಕುಸಿದರೆ ಅದರ ಜೊತೆಗೆ ನಾವೂ ಪ್ರಪಾತ ಪಾಲು. ಹಾಗೆ ಎಚ್ಚರಿಕೆಯಿಂದ ಮುಂದೆ ದಾಟಿದ್ವಿ.

ಕತ್ತಲಾದಾಗ ಎಂಟು ಗಂಟೆ
ಒಂದು ಸ್ಟ್ರೆಚ್ ನಲ್ಲಿ ಅದ್ಭುತ ರಮಣೀಯ ನಿಸರ್ಗ ಕಾಣಿಸ್ತು. ಒಂದು ಬೆಟ್ಟ, ಅದರಾಚೆ ಅದಕ್ಕಿಂತ ದೊಡ್ಡ ಬೆಟ್ಟ. ಸುತ್ತಲೂ ಅಂಥವೇ ಬೆಟ್ಟಗಳು. ಅವುಗಳಲ್ಲಿ ಆಕಾಶಕ್ಕೆ ಮುತ್ತಿಕ್ಕುತ್ತ ನಿಂತ ಪೈನ್ ಮರಗಳು. ಕೆಳಗೆ ನೋಡಿದರೆ ತಳ ಕಾಣದಂಥ ಪ್ರಪಾತಗಳು. ಒಂದಿಷ್ಟು ಫೋಟೋಗ್ರಫಿ ಮಾಡ್ಕೊಂಡ್ವಿ. 15-20 ಕಿ.ಮೀ. ಸಾಗುವಷ್ಟರಲ್ಲಿ ಕತ್ತಲಾಯ್ತು. ಜೀಪು ಹಿಂದೆ ಇತ್ತು. ನಾವು ಮುಂದೆ ಹೋಗಿದ್ವಿ. ಜನವಸತಿ ವಿರಳವಾಗಿತ್ತು. ಅಲ್ಲೇನಾದರೂ ಆಗಿದ್ರೆ ಇಡೀ ರಾತ್ರಿ ಅಲ್ಲೇ ಕಳೆಯಬೇಕಿತ್ತು. ಹಾಗೇ ಟೈಮ್ ನೋಡಿದ್ರೆ 8 ಗಂಟೆ.ಬೆ

ಟ್ಟಗಳ ಮೇಲೆ ಕತ್ತಲಾಗುವುದು ಲೇಟು ಅಂತ ನೆನಪಾದದ್ದು ಆಗಲೇ. ಪುಣ್ಯ, ಮುಂದೇನೂ ತೊಂದರೆ ಆಗಲಿಲ್ಲ. ಎಚ್ಚರಿಕೆಯಿಂದ ಸಾಗಿ ಬಜೌರ್ ಎಂಬಲ್ಲಿ ಮನಾಲಿ ಹೈವೇ ಸೇರ್ಕೊಂಡ್ವಿ. ಅಲ್ಲಿಂದ 35 ಕಿ.ಮೀ. ಸಾಗಿದರೆ ನಾವು ತಂಗಬೇಕಿದ್ದ ದೋಭಿ. ಅಲ್ಲಿ ಚಹಾ ಹೀರಿ ಮತ್ತೆ ಹೈವೇ ಸಂಚಾರದ ಸುಖ ಅನುಭವಿಸುತ್ತ ಸಾಗಿ ದೋಭಿಯಲ್ಲಿರುವ ದಿಲೀಪನ ಗೆಳೆಯ ನೀರಜ್ ರಾಥೋರೆಯ ಟ್ರಿಸ್ಕೆಲೆ ಹೋಮ್ ಸ್ಟೇ ತಲುಪಿದಾಗ ರಾತ್ರಿ 9.30. ಒಂದೊಳ್ಳೆ ಸ್ನಾನ ಮಾಡಿ, ರೋಟಿ ಸಬ್ಜಿ ತಿಂದು ಹಾಸಿಗೆ ಹತ್ತಿದಾಗ 11 ಹೊಡೆದಿತ್ತು. ಆಗಲೇ ಜ್ಞಾನೋದಯ ಆಗಿದ್ದು. ವರುಣದೇವ ಮತ್ತು ಭೂದೇವಿ ನಮ್ಮ ಮುನಿಸ್ಕೊಂಡಿಲ್ಲ. ಅವ್ರ ಕೆಪಾಸಿಟಿಯ ಸ್ಯಾಂಪಲ್ ತೋರ್ಸಿ, ಹುಷಾರಾಗಿ ಹೋಗ್ರಪ್ಪಾ ಅಂತ ಆಶೀರ್ವಾದ ಮಾಡಿದ್ದು ಅಂತ!

Latest Videos
Follow Us:
Download App:
  • android
  • ios