ಲಡಾಖ್ ಅಮೃತ ಯಾತ್ರೆ - 2022 ಭಾಗ-2: ಮೂರು ವಾಹನ, ಆರು ಜನ, ಹದಿಮೂರು ದಿನ
ಲಡಾಖ್‌ಗೆ ಪ್ರಯಾಣಿಸುವುದು ಹಲವರ ಕನಸು. ಹಾಗೆ ಟ್ರಾವೆಲ್ ಮಾಡೋ ಪ್ರವಾಸಿಗರು ಯಾತ್ರೆಯ ಬಳಿಕ ತಮ್ಮ ಅನುಭವ ಬರೆದುಕೊಳ್ಳುವುದು ಸಾಮಾನ್ಯ. ಆದ್ರೆ ಇದು ವಿಶಿಷ್ಟವಾದ ಪ್ರಯಾಣ. ಮೂರು ವಾಹನ, ಆರು ಜನ, ಹದಿಮೂರು ದಿನದ ಯಾನ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
- ರವಿಶಂಕರ್ ಭಟ್
ಲಡಾಖ್ ಪ್ರವಾಸಿಗರು ಯಾತ್ರೆಯ ಬಳಿಕ ತಮ್ಮ ಅನುಭವ ಬರೆದುಕೊಳ್ಳುವುದು ಸಾಮಾನ್ಯ. ಈ ಪ್ರಯಾಣ ಹಾಗಿಲ್ಲ. ಇದೊಂದು ವಿಶಿಷ್ಟವಾದ ಯಾತ್ರೆ. ಲಡಾಖ್ ಪ್ರಾಂತ್ಯದ ನಿರ್ದಿಷ್ಟ ಸ್ಥಳಗಳ ಬದಲಾಗಿ ಆ ಪ್ರದೇಶದ ಮೂಲೆ ಮೂಲೆ ಸುತ್ತುವ ಯೋಜನೆ, ಯೋಚನೆ. ಇನ್ನೂ ವಿಶೇಷ ಎಂದರೆ ಸಂಚಾರ ಮಾಡುತ್ತಲೇ ನಾವು ಓಡಾಡುವ ಸ್ಥಳಗಳಿಗೆ ಓದುಗರನ್ನು ಕರೆದೊಯ್ಯುವ ಪ್ರಯತ್ನ. ಎರಡು ದ್ವಿಚಕ್ರವಾಹನ, ಒಂದು ಜೀಪಿನಲ್ಲಿ ಯಾನ. ನಾಲ್ವರು ಪುರುಷರು, ಇಬ್ಬರು ಸ್ತ್ರೀಯರು ಸೇರಿ ಆರು ಜನರ ಪಯಣ. ಹವಾಮಾನ ವೈಪರೀತ್ಯ ಅಥವಾ ಇನ್ನಾವುದೇ ತೊಂದರೆ ಆಗದಿದ್ದರೆ ಚಂಡೀಗಢದಿಂದ ಆರಂಭಿಸಿ 13 ದಿನಗಳ ಕಾಲ ಸರಿಸುಮಾರು 2500 ಕಿ.ಮೀ. ಏರಿಳಿದು ಮರಳಿ ಚಂಡೀಗಢಕ್ಕೆ ತಲುಪುವುದು ನಮ್ಮ ಗುರಿ. ಲಡಾಖ್ ಅಮೃತಯಾತ್ರೆ - 2022ರ ವಿವರ ಇಲ್ಲಿದೆ.
ಯಾರೆಲ್ಲ ಹೊರಟಿರುವುದು?
ಉಜ್ಬೇಕಿಸ್ತಾನದ ತಾಷ್ಕೆಂಟಿನಿಂದ ಹೊರಟು ತಜಿಕಿಸ್ತಾನ್, ಕಿರ್ಗಿಸ್ತಾನ್, ಕಜಕ್ ಸ್ತಾನ್, ರಷ್ಯಾ, ಮಂಗೋಲಿಯಾ ಮೂಲಕ ಸಾಗಿ ಮರಳಿ ರಷ್ಯಾದ ಸೈಬೀರಿಯಾ ದಾಟಿ ಜಪಾನಿಗಿಂತಲೂ ಪೂರ್ವದಲ್ಲಿರುವ ಮಗದಾನ್ ಎಂಬಲ್ಲಿಗೆ ದ್ವಿಚಕ್ರವಾಹನದಲ್ಲಿ 15000 ಕಿ.ಮೀ. ಕ್ರಮಿಸಿದ ಏಕೈಕ ಭಾರತೀಯ ತಂಡದ ಸದಸ್ಯ ದಿಲೀಪ್ ಕೃಷ್ಣ ಭಟ್ ನೇತೃತ್ವದ ಯಾತ್ರೆ ಇದು. ಅದಲ್ಲದೆ ಭಾರತದ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಲಕ್ಷಾಂತರ ಕಿ.ಮೀ. ಸಂಚರಿಸಿದ ಅನುಭವಿ ತರುಣ, ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಮಾಡುವ ದಿಲೀಪ್ ಜೊತೆಗೆ ಇತರೆ ಐವರು ಸಹಯಾನಿಗಳು. ದಿಲೀಪ್ ಜೊತೆಗೆ ಮತ್ತೊಂದು ಬೈಕಿನಲ್ಲಿ ನಾನು ತೆರಳಲಿದ್ದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೇ ಉದ್ಯೋಗದಲ್ಲಿರುವ ನನ್ನ ಗೆಳೆಯ ಅನಂತ್ ರಾಮ್, ಆತನ ಸಹೋದರ ಅನಿಲ್, ದಿಲೀಪ್ ಪತ್ನಿ ಮಾನಸ ಹೆಗಡೆ, ದಿಲೀಪ್ ಸೋದರಿ ದೀಪ್ತಿ ಭಟ್ ಜೀಪಿನಲ್ಲಿ ಪಯಣಿಸಲಿದ್ದಾರೆ. 25ರಿಂದ 45 ವರ್ಷ ವಯಸ್ಸಿನವರೆಗಿನ ವಿವಿಧ ವಯೋಮಾನದವರ ತಂಡವಿದು.
ಲಡಾಖ್ ಅಮೃತ ಯಾತ್ರೆ-2022 ಭಾಗ-1: ಲಡಾಖ್ ಎಂಬ ಸ್ವರ್ಗದ ಬಾಗಿಲು
ಯಾವುದರಲ್ಲಿ ಹೊರಟಿರುವುದು ?
ಈಗಾಗಲೇ ಹೇಳಿರುವಂತೆ 2 ಬೈಕು, 1 ಜೀಪು ಈ ಪ್ರಯಾಣದ ಬೆನ್ನೆಲುಬು. ಭಾರತದ ಹೆಮ್ಮೆಯ ರಾಯಲ್ ಎನ್ ಫೀಲ್ಡ್ ಕಂಪನಿಯ ಹಿಮಾಲಯನ್ ಸ್ಕ್ರ್ಯಾಮ್ 411 ಹಾಗೂ ಕ್ಲಾಸಿಕ್ 350 ಯಾತ್ರೆಗೆ ಸಹಕರಿಸಲಿರುವ ಬೈಕುಗಳು. ಎರಡೂ ಯಾವುದೇ ಪ್ರದೇಶಕ್ಕೆ ಒಗ್ಗುವಂತಹ ದ್ವಿಚಕ್ರವಾಹನಗಳು. ಅದರಲ್ಲೂ ಹಿಮಾಲಯನ್ ಸ್ಕ್ರ್ಯಾಮ್ 411 ಸಾಹಸ ಯಾತ್ರೆಗೆ ಹೇಳಿ ಮಾಡಿಸಿದಂಥದ್ದು. ಇನ್ನೊಂದು ಜೀಪು. ಮಹೀಂದ್ರಾ ಕಂಪನಿಯ ಥಾರ್. ಇದಂತೂ ಬೆಂಗಳೂರಿನಿಂದಲೇ ಹೊರಟು ಲಡಾಖ್ ಸುತ್ತಾಡಿ ಮರಳಿ ಬೆಂಗಳೂರಿಗೆ ಹೋಗುವಷ್ಟರಲ್ಲಿ ಅಜಮಾಸು 8000 ಕಿ.ಮೀ. ಕ್ರಮಿಸಲಿದೆ.
ಎಲ್ಲೆಲ್ಲಿ ಹೋಗುವ ಯೋಜನೆ ?
ಮೂಲತಃ ಬೆಂಗಳೂರಿನಿಂದಲೇ ಬೈಕಿನಲ್ಲಿ ಹೊರಟು ವಾಪಸ್ ಬೆಂಗಳೂರುವರೆಗೆ ಸವಾರಿ ಮಾಡುವ ಯೋಜನೆ ಇತ್ತಾದರೂ, ಸಮಯಾಭಾವದಿಂದ ಯಾತ್ರೆ ಆರಂಭಿಕ ಬಿಂದುವನ್ನು ಚಂಡೀಗಢಕ್ಕೆ ನಿಗದಿ ಮಾಡಲಾಗಿದೆ. ಅಲ್ಲಿಂದ ಹೊರಟು ಲಡಾಖ್ ಪ್ರಾಂತ್ಯದ ಅತ್ಯಂತ ಕಠಿಣ ಪ್ರದೇಶಗಳಲ್ಲಿ ಸಂಚರಿಸಿ ಚಂಡೀಗಢಕ್ಕೆ ಮರಳುವುದು ಲಡಾಖ್ ಅಮೃತ ಯಾತ್ರೆ-2022ರ ಯೋಜನೆ. ಅಂದರೆ, ಚಂಡೀಗಢದಿಂದ ಈಶಾನ್ಯ ದಿಕ್ಕಿನಲ್ಲಿ ಸಾಗಿ ಹಿಮಾಚಲ ಪ್ರದೇಶದ ಕುಲು, ಮನಾಲಿ, ಕೆಲಾಂಗ್, ಜಿಸ್ಪಾ ವರೆಗೆ ಹೆದ್ದಾರಿಯಲ್ಲಿ ಸಂಚರಿಸಿ ಹಿಮಾಲಯ ಶ್ರೇಣಿ ಪ್ರವೇಶ. ಬಳಿಕ ಲಡಾಖ್ ಪ್ರಾಂತ್ಯದ ಕಚ್ಚಾ ರಸ್ತೆ, ಏರಿಳಿತದ ಕಣಿವೆ, ನದೀಪಾತ್ರಗಳಿಂದ ಕೂಡಿದ ದುರ್ಗಮ ಕುರ್ಗಿಯಾಖ್, ಪುರ್ನೆ, ಪದುಮ್, ಝನ್ಸ್ಕಾರ್, ಲಿಂಗ್ ಶೆಡ್ ಹಾದಿಯ ಮೂಲಕ ತೆರಳಿ ಉತ್ತರ ಲಡಾಖ್ ನ ಲಮಾಯೂರಿಗೆ ತಲುಪುವುದು.
ಅಲ್ಲಿಂದ ರಾಜಧಾನಿ ಲೇಹ್, ಪ್ರವಾಸಿಗರ ನೆಚ್ಚಿನ ಖಾರ್ದುಂಗ್ ಲಾ ಪಾಸ್, ನುಬ್ರಾ ಕಣಿವೆ, ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಸುತ್ತಾಟ. ಮತ್ತೆ ದುರ್ಗಮ ಹಾದಿಯಲ್ಲಿ ಪಯಣ. 17ನೇ ಶತಮಾನದ ಬೌದ್ಧವಿಹಾರ, ಅಪರೂಪದ ಖಗೋಳ ವೀಕ್ಷಣಾಲಯ ಇರುವ ಹಾನ್ಲೇಗೆ ಭೇಟಿ. ಅಲ್ಲಿಂದ ವಿಶ್ವದ ಅತಿ ಎತ್ತರದ ವಾಹನ ಸಂಚಾರ ಯೋಗ್ಯ ಪ್ರದೇಶ ಎಂಬ ಖ್ಯಾತಿಯ, ಸಮುದ್ರ ಮಟ್ಟದಿಂದ 19000 ಅಡಿ ಎತ್ತರದಲ್ಲಿರುವ ಉಮ್ಲಿಂಗ್ ಲಾ ಕಣಿವೆಗೆ ತೆರಳಿ ಕೇಲಾಂಗ್-ಲೇಹ್ ಹೆದ್ದಾರಿ ಮೂಲಕ ಜಿಸ್ಪಾಗೆ ಮರಳಿ, ಅಲ್ಲಿಂದ ಚಂಡೀಗಢಕ್ಕೆ ತಲುಪುವುದು ಹಾಲಿ ಇರುವ ಯೋಜನೆ.
ಎಷ್ಟು ದಿನಗಳ ಪ್ರವಾಸ ?
ಆ.11ರ ಗುರುವಾರದಂದು ಚಂಡೀಗಢದಿಂದ ಹೊರಟು ಆ.23ರ ಮಂಗಳವಾರ ಚಂಡೀಗಢಕ್ಕೆ ಮರಳುವಲ್ಲಿಯವರೆಗೆ 13 ದಿನಗಳ ಕ್ಲಿಷ್ಟವಾದ ಪ್ರವಾಸದ ಯೋಜನೆ ಇದು.
ಏನೇನು ತಯಾರಿ ಅಗತ್ಯ ?
ಯಾವುದೇ ಪ್ರವಾಸಕ್ಕೆ ಕನಿಷ್ಠ ಸರಕು, ಗರಿಷ್ಠ ಯೋಜನೆ ಎಂಬುದು ಮೂಲಮಂತ್ರ. ಅದರಲ್ಲೂ ಲಡಾಖ್ ನಂಥ ಕ್ಲಿಷ್ಟ ಪ್ರವಾಸಕ್ಕೆ ತುಸು ಹೆಚ್ಚೇ ಯೋಜನೆ ಅಗತ್ಯ. ಬೈಕಿನಲ್ಲಿ ತೆರಳುವವರಿಗೆ ಉತ್ಕೃಷ್ಟ ದರ್ಜೆಯ ಸವಾರಿ ದಿರಿಸು ಹಾಗೂ ಕೈಗವಸು, ನೀರು ನುಗ್ಗದಂಥ ಸವಾರಿ ಬೂಟು, ಬಿಗಿಯಾದ ಶಿರಸ್ತ್ರಾಣ, ನಾಲ್ಕು ಜೊತೆ ಉಷ್ಣವಸ್ತ್ರ, ಮಳೆ ಇದ್ದರೆ ಎದುರಿಸಲು ರೈನ್ ಕೋಟು... ಇರಲೇಬೇಕು. ಇತರರಿಗೆ ದೈನಂದಿನ ಬಳಕೆಯ ವಸ್ತುಗಳ ಜೊತೆಗೆ ಉಷ್ಣವಸ್ತ್ರಗಳು, ವಾಹನ ಸವಾರಿಗೆ ಸೂಕ್ತವಾದ ಸರಂಜಾಮು, ಸಂಭಾವ್ಯ ತೀವ್ರ ಪರ್ವತಶ್ರೇಣಿ ವ್ಯಾಧಿ ನಿರ್ವಹಿಸಲು ಅಗತ್ಯವಾದ ಔಷಧಗಳು, ಅದಕ್ಕಿಂತ ಮುಖ್ಯವಾಗಿ ಎತ್ತರ ಪ್ರದೇಶದ ಸವಾಲನ್ನು ಎದುರಿಸಲು ಬೇಕಾದ ದೈಹಿಕ ಕ್ಷಮತೆಗೆ ಸಮರ್ಪಕ ವ್ಯಾಯಮ... ಇವಿಷ್ಟು ಲಡಾಖ್ ಭೇಟಿಗೆ ಬೇಕಾದ ಕನಿಷ್ಠ ತಯಾರಿ.
ಮುಂದಿನ ಕಂತಿನಲ್ಲಿ: ಮೊದಲ ದಿನ ಎಷ್ಟು ದೂರ ಕ್ರಮಿಸಿದೆವು? ಸಾಗಿದ ಹಾದಿ ಯಾವುದು? ಏನೇನು ಸವಾಲು ಎದುರಾದವು? ನೋಡಿದ ಜಾಗಗಳು ಯಾವುವು?