ಲಡಾಖ್ ಅಮೃತಯಾತ್ರೆ-2022; ಭಾಗ-13, ಲೇಹ್‌ನಿಂದ ಮರಳುವಾಗ ಮಿಂಚಿನ ಓಟ !

ಒಂದೇ ದಿನ 450 ಕಿ.ಮೀ. ಪ್ರಯಾಣ. ದಾರಿಯಲ್ಲಿ ಸಿಕ್ಕವು 4 ಎತ್ತೆತ್ತರದ ಪಾಸ್ ಗಳು. ಈ ಜನ್ಮದಲ್ಲೇ ಕಂಡಿರದಷ್ಟು ಘಾಟಿ ತಿರುವುಗಳು. ನಿರ್ಮಾನುಷ ಪ್ರದೇಶದ ಬಟಾಬಯಲಿನಲ್ಲಿ 35-40 ಕಿ.ಮೀ. ಒಂದೇ ರಸ್ತೆ. ಬೆಂಕಿಪೊಟ್ಟಣಕ್ಕಿಂತ ಚಿಕ್ಕದಾಗಿ ಕಾಣುವ ಕಣಿವೆಗೆ ಬಿದ್ದ ಟ್ರಕ್. ಗಾಟಾ ಲೂಪ್ ನಲ್ಲಿ ಲಾರಿ ಕ್ಲೀನರ್ ಭೂತ. ಬೆಟ್ಟದಿಂದ ಉದುರಿ ಬೀಳುತ್ತಿದ್ದ ಕಲ್ಲು-ಬಂಡೆಗಳ ನಡುವೆ ರಾತ್ರಿ ವೇಳೆ ಅಪಾಯಕಾರಿ ಪ್ರಯಾಣ. ವಿವರಕ್ಕೆ ಮುಂದೆ ಓದಿ..

Ladakh Amrita Yatra-2022 Part-13: Return From Leh Vin

Ravishankar K Bhat, Executive Editor, Kannada Prabha (Twitter: @raveebhat)

ಯಾತ್ರೆ ಮುಗಿಯುತ್ತಾ ಬಂದಂತೆ ಮುಕ್ತಾಯಾಸ

ಆ ಅಮೋಘ ಯಾತ್ರೆ ಇನ್ನೇನು ಮುಕ್ತಾಯದ ಹಂತಕ್ಕೆ ತಲುಪಿತ್ತು. ಎಲ್ಲರಿಗೂ ಒಂದು ಬಗೆಯ ಉದಾಸೀನ. ಮುಗಿಯುತ್ತಿದೆಯಲ್ಲ ಎಂಬ ಮುಕ್ತಾಯಾಸ. ಪರಿಸ್ಥಿತಿ ಹೀಗಿದ್ದಾಗ ಆಗಸ್ಟ್ 20ರ ರಾತ್ರಿ ಒಂದು ಸಣ್ಣ ಆತಂಕ ಎದುರಾಗಿತ್ತು. ಆಗಸ್ಟ್ 23ರಂದು ಸಂಜೆ 7 ಗಂಟೆಗೆ ಚಂಡೀಗಢದಿಂದ ಹೊರಡಬೇಕಿದ್ದ ನಮ್ಮ ವಿಮಾನ ರದ್ದಾಗಿತ್ತು. ಪರ್ಯಾಯ ವಿಮಾನ ಆಯ್ದುಕೊಳ್ಳಿ ಅಥವಾ ಟಿಕೆಟ್ ಹಣ ವಾಪಸ್ ಪಡೆಯಿರಿ ಎಂಬ ಮೆಸೇಜನ್ನು ಇಂಡಿಗೋ ವಿಮಾನ ಕಂಪನಿ ಕಳುಹಿಸಿತ್ತು. ಹತ್ತು ಹಲವು ಆಯ್ಕೆಗಳನ್ನು ಹುಡುಕಿದರೆ ಎಲ್ಲವೂ ಒಂದು ನಿಲುಗಡೆ ಇದ್ದ ವಿಕಲ್ಪಗಳು. ಚಂಡೀಗಢದಿಂದ ಬೆಂಗಳೂರಿಗೆ ನೇರ ವಿಮಾನ ಮಧ್ಯಾಹ್ನ 1 ಗಂಟೆಗೆ ಇತ್ತು. ಅಂದರೆ, ಕಡೆಯ ದಿನ ಸಂಜೆಯ ಬದಲು ಮಧ್ಯಾಹ್ನವೇ ವಿಮಾನ ಹತ್ತಬೇಕು. ಮೊದಲೇ ಯೋಜಿಸಿದ್ದಕ್ಕಿಂತ ಒಂದು ದಿನ ಹೆಚ್ಚುವರಿಯಾಗಿ ಲೇಹ್ ನಲ್ಲಿ ಉಳಿದುಕೊಂಡಿದ್ದ ನಮಗೆ ಈಗ ಮಿಂಚಿನ ವೇಗದಲ್ಲಿ ಓಡದೆ ವಿಧಿ ಇರಲಿಲ್ಲ.

ಇಡೀ ಯಾತ್ರೆಯಲ್ಲಿ ಅತಿ ಸುದೀರ್ಘ ಪ್ರಯಾಣದ ದಿನ
ಆವತ್ತು ಆಗಸ್ಟ್ 21. ಮೊದಲು ಲೆಕ್ಕ ಹಾಕಿದಂತೆ ಆಗಸ್ಟ್ 20ರಂದೇ ಲೇಹ್ ನಿಂದ ಹೊರಟು ಹಿಮಾಚಲ ಪ್ರದೇಶದ ಜಿಸ್ಪಾ ತಲುಪಬೇಕಿತ್ತು. ಆಗಸ್ಟ್ 21ರಂದು ಮನಾಲಿಗೆ ತಲುಪಿ ಆಗಸ್ಟ್ 22ರಂದು ಅಲ್ಲಿ ಸುತ್ತಾಡಬೇಕಿತ್ತು. ಆಗಸ್ಟ್ 23ಕ್ಕೆ ಬೆಳಗ್ಗೆ ಹೊರಟು ಮಧ್ಯಾಹ್ನದ ವೇಳೆಗೆ ಚಂಡೀಗಢ ತಲುಪಬೇಕಿತ್ತು. ಆದರೆ, ನಾವು ಆಗಸ್ಟ್ 20ಕ್ಕೆ ಲೇಹ್ ನಲ್ಲೇ ಇದ್ದು ಸುತ್ತಾಡಿದ್ದೆವಲ್ಲ? ಹಾಗಾಗಿ, ಮನಾಲಿಗೆ ಆಗಸ್ಟ್ 21ರ ಮಧ್ಯಾಹ್ನವೇ ತಲುಪುವ ಸಾಧ್ಯತೆ ಇಲ್ಲವಾಗಿತ್ತು. ಯಾಕೆಂದರೆ, ಲೇಹ್ ನಿಂದ ಜಿಸ್ಪಾಗೆ 335 ಕಿ.ಮೀ. ಆರಾಮಾಗಿ ಪ್ರಯಾಣಿಸಿದರೆ ಒಂದು ದಿನ ಬೇಕು. ಜಿಸ್ಪಾದಿಂದ ಮನಾಲಿಗೆ ಸುಮಾರು 100 ಕಿ.ಮೀ. ಅದು ಅರ್ಧ ದಿನದ ಪ್ರಯಾಣ. ಮನಾಲಿಯಿಂದ 310 ಕಿ.ಮೀ. ಅದು ಒಂದು ದಿನದ ಪ್ರಯಾಣ (Travel). ಹೀಗೆ ನಾವು ಲೇಹ್ ನಿಂದ ಚಂಡೀಗಢಕ್ಕೆ 3 ದಿನ ಪ್ರಯಾಣಿಸಬೇಕಿತ್ತು. ಆದರೆ, ನಮ್ಮ ಬಳಿ ಅಷ್ಟು ಸಮಯಾವಕಾಶ (Time) ಇರಲಿಲ್ಲ. ಆಗಸ್ಟ್ 23ರ ಮಧ್ಯಾಹ್ನವೇ ವಿಮಾನ ಇದ್ದುದರಿಂದ ಆಗಸ್ಟ್ 22ರ ತಡರಾತ್ರಿಯೊಳಗಾದರೂ ಚಂಡೀಗಢ ತಲುಪಬೇಕಿತ್ತು. ಹಾಗಾಗಬೇಕಿದ್ದಲ್ಲಿ 21ರ ರಾತ್ರಿಯೊಳಗೆ ನಾವು ಮನಾಲಿ ತಲುಪಬೇಕಿತ್ತು. ಇದಕ್ಕಾಗಿ 21ರ ಬೆಳಗ್ಗೆ ಲೇಹ್ ನಿಂದ ಹೊರಟ ನಾವು ಒಂದೇ ದಿನ 450 ಕಿ.ಮೀ. ಮಿಂಚಿನ ಓಟ ಮಾಡಬೇಕಿತ್ತು. ನಮ್ಮ ಇಡೀ ಯಾತ್ರೆಯಲ್ಲಿ ಒಂದೇ ದಿನ ಗರಿಷ್ಠ ದೂರ ಪ್ರಯಾಣಿಸಿದ ದಿನವದು. 

ಲಡಾಖ್ ಅಮೃತ ಯಾತ್ರೆ – 2022 ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!

325 ಕಿ.ಮೀ. ನೋ ಪೆಟ್ರೋಲ್, ನೋ ಡೀಸೆಲ್
ಲೇಹ್ ನಿಂದ ಹಾನ್ ಲೇಗೆ ಹೋದಾಗ ಅನುಭವ (Experience) ಆದ ಹಾಗೆ ಲೇಹ್ ನಿಂದ ಮನಾಲಿಗೆ ಹೋಗುವಾಗಲೂ ಇಂಧನ ಲಭ್ಯತೆ ಅಷ್ಟಕ್ಕಷ್ಟೆ. ಲೇಹ್ ನಿಂದ 35 ಕಿ.ಮೀ. ದೂರದ ಕಾರು ಪಟ್ಟಣದಲ್ಲಿ ಕಡೆಯ ಪೆಟ್ರೋಲ್ ಬಂಕ್. ಆ ನಂತರ ಒಂದೂ ಇಲ್ಲ. ಅಬ್ಬಬ್ಬಾ ಅಂದರೆ ಬ್ಲ್ಯಾಕ್ ನಲ್ಲಿ ಲೀ.ಗೆ 150 ರೂಪಾಯಿ ದರದಲ್ಲಿ ಪೆಟ್ರೋಲ್, ಡೀಸೆಲ್ ಸಿಕ್ಕರೂ ಸಿಕ್ಕೀತು. ಖಾತ್ರಿ ಇಲ್ಲ. ಕಾರು ದಾಟಿದ ನಂತರ ಮೊದಲ ಪೆಟ್ರೋಲ್ ಬಂಕ್ ಸಿಗುವುದು 325 ಕಿ.ಮೀ. ದೂರದ ಹಿಮಾಚಲ ಪ್ರದೇಶದಲ್ಲಿರುವ ಕೀಲಾಂಗ್ ಎಂಬಲ್ಲಿ. ಥಾರ್ ಡೀಸೆಲ್ ಟ್ಯಾಂಕಿಗೆ ಕನಿಷ್ಠ 55-60 ಲೀಟರ್ ಸಾಮರ್ಥ್ಯ ಇತ್ತಾದರೂ, ಬೈಕುಗಳಿಗೆ ಟ್ಯಾಂಕ್ ತುಂಬಿಸಿದರೆ ಸಾಕಾದೀತು ಎಂಬ ಖಾತ್ರಿ ನಮಗೆ ಇರಲಿಲ್ಲ. ಹಾಗಾಗಿ, ಒಂದೈದು ಲೀಟರ್ ಪೆಟ್ರೋಲನ್ನು ಕ್ಯಾನಲ್ಲಿ ತುಂಬಿಯೇ ಹೊರಟಿದ್ದೆವು. ಕಾರು ಪಟ್ಟಣದಲ್ಲಿ (City) ಬೈಕುಗಳು ಹಾಗೂ ಥಾರ್ ಜೀಪಿನ ಹೊಟ್ಟೆಯನ್ನೂ ತುಂಬಿಸಿದ್ದೆವು.

Ladakh Amrita Yatra-2022 Part-13: Return From Leh Vin

ಉಮ್ಲಿಂಗ್ ಲಾದಷ್ಟು ಎತ್ತರ ಇಲ್ಲದಿದ್ದರೂ ಆ 4 ಪಾಸ್ ಗಳು ಅಂತಿಂಥವಲ್ಲ
ಅದು ಲೇಹ್-ಮನಾಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 3. ಹಾಗಂತ ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 1ರಂತೆ ಪೂರ್ತಿ ನುಣುಪಾದದ್ದೇನಲ್ಲ. ಬಹುತೇಕ ಟಾರು ರಸ್ತೆ (Road). ಆದರೆ, ಮಧ್ಯೆ ಮಧ್ಯೆ ಕಚ್ಚಾರಸ್ತೆ. ಹಿಮಾಚಲ ಗಡಿ ತಲುಪುವವರೆಗೂ ಬಹುತೇಕ ಎತ್ತರದ ಪ್ರದೇಶದಲ್ಲೇ (high altitude) ಪ್ರಯಾಣ. ಇನ್ನೂ ವಿಶೇಷ ಎಂದರೆ ವಿಶಾಲವಾಗಿ ಚಾಚಿಕೊಂಡ ಬೆಟ್ಟಗಳ ಸೊಂಟದುದ್ದಕ್ಕೂ ಕಡೆದ ರಸ್ತೆ, ಕಣ್ಣು ಹಾಯಿಸಿದಷ್ಟೂ ಉದ್ದಕ್ಕೆ ಹರಡಿಕೊಂಡ ಬಯಲು ಭೂಮಿಯನ್ನು ಸೀಳಿ ಸಾಗುತ್ತಿದ್ದ ರಸ್ತೆ, ಆಗುಂಬೆಯನ್ನು ನೆನಪಿಸಿಕೊಟ್ಟ ಘಾಟಿ ರಸ್ತೆ, ಪಾತಾಳಕ್ಕಿಳಿದ ಅನುಭವ ನೀಡಿದ ಕೆಲವು ಕಣಿವೆ ಪ್ರದೇಶಗಳಲ್ಲಿನ ರಸ್ತೆಗಳ ಮೂಲಕ ಪ್ರಯಾಣಿಸಬೇಕಿತ್ತು.

ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !

ಎಲ್ಲಕ್ಕಿಂತ ಹೆಚ್ಚಾಗಿ ಒಂದಲ್ಲ, ಎರಡಲ್ಲ... ಬರೋಬ್ಬರಿ ನಾಲ್ಕು ಪಾಸ್ ಗಳು. ಮೊದಲಿಗೆ ಲೇಹ್ ನಿಂದ 110 ಕಿ.ಮೀ. ದೂರದಲ್ಲಿರುವ ತಾಂಗ್ಲಾಂಗ್ ಲಾ ಪಾಸ್. ಸಮುದ್ರದಿಂದ 17482 ಅಡಿ ಎತ್ತರ. ವಿಶ್ವದ 12ನೇ ಅತಿ ಎತ್ತರದ ರಸ್ತೆ. ಅಲ್ಲಿಂದ 90 ಕಿ.ಮೀ. ದೂರದ ಲಾಚುಂಗ್ ಲಾ ಪಾಸ್. ಅದೂ 16616 ಅಡಿ ಎತ್ತರದ ಪ್ರದೇಶ. ಅಲ್ಲಿಂದ 10 ಕಿ.ಮೀ. ದೂರದಲ್ಲಿ ನಕೀಲಾ ಪಾಸ್. ಅದು 15547 ಅಡಿ ಎತ್ತರ. ಇದು ಲೇಹ್-ಮನಾಲಿ ಹೆದ್ದಾರಿಯಲ್ಲಿ ಲಡಾಖ್ ಪ್ರಾಂತ್ಯದಲ್ಲಿ ಸಿಗುವ ಕಡೆಯ ಪಾಸ್. ಅಲ್ಲಿಂದ 75 ಕಿ.ಮೀ. ಸಾಗಿದರೆ ಹಿಮಾಚಲ ಪ್ರದೇಶದೊಳಗೆ ಸಿಗುವ ಬಾರಲಾಚಾ ಲಾ ಪಾಸ್ 15912 ಅಡಿ ಎತ್ತರದಲ್ಲಿದೆ. ಇದಾದ ಮೇಲೆ ರೋಹ್ತಾಂಗ್ ಪಾಸ್ ಇದೆಯಾದರೂ ಆ ಬೆಟ್ಟದ ಹೊಟ್ಟೆ ಸೀಳಿ ಈಗ ಸುರಂಗ ಮಾರ್ಗ (ಅಟಲ್ ಟನಲ್) ಆಗಿರುವ ಕಾರಣ, ಯಾರೂ ಪಾಸ್ ಹತ್ತಿ ಇಳಿಯುವ ಸಾಹಸ ಮಾಡುವುದಿಲ್ಲ. ಒಟ್ಟಿನಲ್ಲಿ ಲೇಹ್-ಮನಾಲಿ ಹೆದ್ದಾರಿಯುದ್ದಕ್ಕೂ ಎತ್ತರದ ಬೆಟ್ಟಗಳು, ಆಳವಾದ ಕಣಿವೆಗಳ ಜೊತೆಯಲ್ಲೇ ಸಾಗಬೇಕು. ಪಾಸ್ ಗಳ ರಸ್ತೆಯಲ್ಲಿ ಎಚ್ಚರ ತಪ್ಪಿದರೆ ಫೇಲ್!

ಕಣಿವೆಗೆ ಬಿದ್ದ ಟ್ರಕ್ ಬೆಂಕಿಪೊಟ್ಟಣದಂತೆ ಕಾಣ್ತಿತ್ತು!
ನಾವು ಸಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲ ಪರ್ವತ ಪ್ರದೇಶ ಎಷ್ಟು ವಿಶಾಲವಾಗಿತ್ತು ಎಂದರೆ ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರೂ ಎರಡು ಆಯಾಮದ ಚಿತ್ರವಷ್ಟೇ ಕಾಣುವ ಕಾರಣ ಅದರ ಅಗಾಧತೆ ಗೊತ್ತಾಗುತ್ತಿರಲಿಲ್ಲ. ಬರಿಗಣ್ಣಿನಲ್ಲಿ ಮೂರು ಆಯಾಮದ ದೃಶ್ಯ ನೋಡಿದಾಗ ಮಾತ್ರ ಬೆಟ್ಟಗಳ ಬ್ರಹ್ಮಾಂಡ ದರ್ಶನವಾಗುತ್ತಿತ್ತು. ಅವುಗಳ ಗಾತ್ರ ಹೇಗಿತ್ತು ಎಂದರೆ, ಒಂದೆರಡು ಕಿಲೋಮೀಟರು ದೂರದಲ್ಲಿ ಪ್ರಪಾತಕ್ಕೆ ಬಿದ್ದ 10 ಚಕ್ರಗಳ ಟ್ರಕ್ಕು ಬೆಂಕಿಪೊಟ್ಟಣದಂತೆ ಭಾಸವಾಗುತ್ತಿತ್ತು!

ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!

ನಿರ್ಮಾನುಷ ಬಯಲಲ್ಲಿ 50 ಕಿ.ಮೀ. ಪ್ರಯಾಣ, ಈ ಬಾರಿ ರಸ್ತೆ ಇತ್ತು!
ಬೆಟ್ಟಗಳ ದಾರಿಯದ್ದು ಒಂದು ಕತೆಯಾದರೆ, ಬಟಾಬಯಲಿನ ನಡುವೆ ಸಾಗುವ ಹೆದ್ದಾರಿ ಪ್ರಯಾಣದ್ದು ಇನ್ನೊಂದು ಕತೆ. ಹಾನ್ ಲೇಯಿಂದ ಉಮ್ಲಿಂಗ್ ಲಾಗೆ ತೆರಳುವ ವೇಳೆ ಇಂಥದೇ ನಿರ್ಮಾನುಷ ಪ್ರದೇಶದಲ್ಲಿ ಸಾಗಿದ್ದೆವಾದರೂ ಇದರ ಅನುಭವ ವಿಭಿನ್ನ. ಅಲ್ಲಿ ನಾವು ಸಾಗಿದ ಮಾರ್ಗವೇ ರಸ್ತೆ. ಇಲ್ಲಿ ಸಂಪೂರ್ಣವಾಗಿ ಟಾರು ರಸ್ತೆಯಲ್ಲೇ ಪ್ರಯಾಣ. ಕೆಲವೊಂದು ಕಡೆ 4-5 ಕಿ.ಮೀ.ಗಳಷ್ಟು ದೂರ ಗೆರೆ ಎಳೆದಂಥ ನೇರ ರಸ್ತೆ. ಒಂದೂ ತಿರುವು (Turn) ಇಲ್ಲ. ಸರಿಸುಮಾರು ಡೆಬ್ರಿಂಗ್ ಎಂಬಲ್ಲಿಂದ ಪಾಂಗ್ ಕಣಿವೆಯವರೆಗೆ 50 ಕಿ.ಮೀ.ಗಳಷ್ಟು ದೂರ ಮಸ್ತ್ ರಸ್ತೆ.

Ladakh Amrita Yatra-2022 Part-13: Return From Leh Vin

ಗಾಟಾ ಲೂಪ್ ಘಾಟಿ ತಿರುವುಗಳಲ್ಲಿ ಲಾರಿ ಕ್ಲೀನರ್ ಭೂತ ಇದೆಯಂತೆ!
ಈ ಪಾಂಗ್ ಕಣಿವೆಯಿಂದ ಸುಮಾರು 50 ಕಿ.ಮೀ. ದೂರದಲ್ಲಿ ಭಯಂಕರ ತಿರುವುಗಳುಳ್ಳ ಪ್ರದೇಶ ಸಿಗುತ್ತದೆ. ಇಲ್ಲಿ ಸುಮಾರು 20ಕ್ಕೂ ಹೆಚ್ಚು ಹೇರ್ ಪಿನ್ ತಿರುವುಗಳಿವೆ. ಮೇಲಿನಿಂದ ಇಳಿಯುವಾಗ 3ನೇ ತಿರುವಿನಲ್ಲಿ ರಾಶಿ ರಾಶಿ ನೀರಿನ ಬಾಟಲಿಗಳ ದರ್ಶನವಾಗುತ್ತದೆ. ಅವುಗಳ ನಡುವೆ ಒಂದು ಪುಟ್ಟ ಗುಡಿ. ಅದು ಅಲ್ಲಿ ನೀರಿಲ್ಲದೆ ನರಳಿ ಸತ್ತ ಲಾರಿ ಕ್ಲೀನರ್ ಗುಡಿಯಂತೆ. ಹಾಗೊಂದು ಕತೆ ಇದೆ. 1999ರಲ್ಲಿ ಸರಕು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಈ ಜಾಗದಲ್ಲಿ ಕೆಟ್ಟು ನಿಂತಿತಂತೆ. ಚಾಲಕ (Driver) ಹಾಗೂ ಸಹಾಯಕ ಏನು ಮಾಡಿದರೂ ಲಾರಿ ರಿಪೇರಿ ಆಗಲಿಲ್ಲವಂತೆ. ಚಳಿಗಾಲ ಆದ ಕಾರಣ ವಾಹನ ಸಂಚಾರ ಬಹಳ ವಿರಳವಾಗಿತ್ತಂತೆ. ವಿಧಿಯಿಲ್ಲದೆ ಸಮೀಪದ ಗ್ರಾಮವೊಂದರಲ್ಲಿ ನೆರವು ಪಡೆಯಲು ಚಾಲಕ ನಡೆದೇ ಹೊರಟನಂತೆ. ಕ್ಲೀನರ್ ತುಸು ಅಸ್ವಸ್ಥನಾಗಿದ್ದರಿಂದ ಲಾರಿಯಲ್ಲೇ ಉಳಿದನಂತೆ.

ಅಷ್ಟರಲ್ಲಿ ಭಾರೀ ಹಿಮಪಾತ ಆರಂಭವಾಗಿ ಚಾಲಕ ಲಾರಿ ಬಳಿ ಬರಲು ಆಗಲೇ ಇಲ್ಲವಂತೆ. ಕುಡಿಯಲು ನೀರೂ ಇಲ್ಲದೆ ಕ್ಲೀನರ್ ಅಲ್ಲೇ ನರಳಿ ನರಳಿ ತೀರಿಕೊಂಡನಂತೆ. ಬಳಿಕ ಭೂತವಾಗಿ ಅಲ್ಲೇ ನೆಲೆಸಿದ್ದಾನೆ. ಆ ಭೂತಕ್ಕೆ ಶಾಂತಿ ಮಾಡುವ ಆ ಮಾರ್ಗವಾಗಿ ಸಾಗುವ ಬಹುತೇಕ ವಾಹನ ಸವಾರರು ನೀರಿನ ಬಾಟಲಿ ಎಸೆದು ಮುಂದೆ ಸಾಗುತ್ತಾರೆ. ಬೈಕು, ಜೀಪು ಸವಾರರು ಅಲ್ಲದಿದ್ದರೂ, ಬಹುತೇಕ ಎಲ್ಲ ಲಾರಿ ಚಾಲಕರು ಇದನ್ನು ನಂಬಿ ನೀರಿನ ಬಾಟಲಿ ಕಾಣಿಕೆ ನೀಡುತ್ತಾರೆ. ಹಾಗಾಗಿ, ಅಲ್ಲೊಂದು ನೀರಿನ ಬಾಟಲಿಗಳ ಗುಡ್ಡವೇ ನಿರ್ಮಾಣ ಆಗಿದೆ ಎಂದರೆ ತಪ್ಪಾಗಲಾರದು!

ಲಡಾಖ್ ಅಮೃತಯಾತ್ರೆ-2022: ಭಾಗ-8, ಲೇಹ್‌ ಗೆ ಹೋಗೋಣ, ಬಾರೋ ಲೇ...!

ಕಡೆಗೂ ಸಿಕ್ಕಿತೊಂದು ಸರೋವರ, ಹೆಸರು ದೀಪಕ್ ತಾಲ್
ಅಂಥಾ ಸ್ಮಶಾನಸದೃಶ ಗಾಟಾ ಲೂಪ್ ತಿರುವುಗಳನ್ನು ಇಳಿದು ಬಂದರೆ ಲಡಾಖ್ ಪ್ರಾಂತ್ಯ ಅಂತ್ಯವಾಗುತ್ತದೆ. ಅಲ್ಲಿಂದ ಹಿಮಾಚಲ ಪ್ರದೇಶದ ಗಡಿ ಪ್ರವೇಶ. ಬೆಳಗ್ಗೆ 8.30ಕ್ಕೆ ಹೊರಟವರು ನಾವಲ್ಲಿಗೆ ತಲುಪುವಾಗ ಮಧ್ಯಾಹ್ನ 3.30 ಕಳೆದಿತ್ತು. ಸರ್ಚು ಎಂಬಲ್ಲಿ ಸಿಕ್ಕ ಹೋಟೆಲಲ್ಲಿ ಹೊಟ್ಟೆ ಪಾಡು ಮುಗಿಸಿ ಹೊರಟಾಗ 4 ಆಗಿತ್ತು. ಸುಮಾರು 250 ಕಿ.ಮೀ. ಕ್ರಮಿಸಿದ್ದೆವಷ್ಟೆ.  ಮತ್ತೆ ಬೆಟ್ಟವೇರಿ ಬಾರಾಲಾಚಾ ಲಾ ಪಾಸ್ ಇಳಿದು 65 ಕಿ.ಮೀ. ಸಾಗುವಷ್ಟರಲ್ಲಿ 6 ಗಂಟೆ ಕಳೆದಿತ್ತು. ಅಲ್ಲೊಂದು ಕಣಿವೆಯಲ್ಲಿ ಸುಂದರವಾದ ಸರೋವರ. ಹೆಸರು ದೀಪಕ್ ತಾಲ್. ಲಡಾಖ್ ನಲ್ಲಿ ಸರೋವರಗಳನ್ನು ಸೋ (Tso) ಎಂದು ಕರೆದರೆ ಹಿಮಾಚಲದಲ್ಲಿ ಅವುಗಳಿಗೆ ತಾಲ್ ಎಂದು ಹೆಸರು. ಸೊ ಮೊರಿರಿ, ಸೊ ಕರ್ ಭೇಟಿ ತಪ್ಪಿ ನಿರಾಸೆಗೊಂಡಿದ್ದ ನಮಗೆ ಸುತ್ತ ಬೆಟ್ಟಗುಡ್ಡಗಳಿಂದ ಕೂಡಿದ್ದು ಮಧ್ಯೆ ನೀಲಿ ಹಸುರಿನ ದೀಪಕ್ ತಾಲ್ ದರ್ಶನ ತುಸು ನಿರಾಳತೆ ನೀಡಿತು. ಆ ಸುಂದರ ಪರಿಸರದಲ್ಲಿದ್ದ ಅಂಗಡಿಯೊಂದರಲ್ಲಿ ಚಹಾ ಸೇವಿಸಿ ಪ್ರಯಾಣ ಮುಂದುವರಿಸಿದೆವು. ಅಲ್ಲಿಂದ ಜಿಸ್ಪಾ ತಲುಪುವಷ್ಟರಲ್ಲಿ 6.30 ಆಗಿತ್ತು. ಕತ್ತಲು ಕವಿಯತೊಡಗಿತ್ತು. ಮನಾಲಿ ಇನ್ನೂ 90 ಕಿ.ಮೀ. ದೂರವಿತ್ತು. 

Ladakh Amrita Yatra-2022 Part-13: Return From Leh Vin

ದಿಲೀಪ್ ರೂಲ್ಸ್ ಬ್ರೇಕ್: ಬಂಡೆ ಉರುಳುತ್ತಿದ್ದ ರಸ್ತೆಯಲ್ಲಿ ರಾತ್ರಿ ರೈಡಿಂಗ್
ಶಿಸ್ತಿನ ಬೈಕ್ ಪ್ರಯಾಣ ಮಾಡುವ ದಿಲೀಪ ಸಾಮಾನ್ಯವಾಗಿ ಅಪಾಯಕಾರಿ ರಸ್ತೆಯಲ್ಲಿ ರಾತ್ರಿ ಪ್ರಯಾಣ ಸಲ್ಲದು ಎಂದೇ ಹೇಳುತ್ತಾನೆ. ಆದರೆ, ನಾವು ಅವತ್ತು ಮನಾಲಿ ದಾಟಲೇ ಬೇಕಿತ್ತು. ಹಾಗಾಗಿ, ದಿಲೀಪನ ನಿಯಮ ಉಲ್ಲಂಘಿಸಿ ಕತ್ತಲಾದ ಮೇಲೂ ಪ್ರಯಾಣ ಮುಂದುವರಿಸಿದೆವು. ಜಿಸ್ಪಾಕ್ಕಿಂತ ತುಸು ಹಿಂದೆ ದಾರ್ಚಾ ತಲುಪಿದಾಗ ನಮ್ಮ ಲಡಾಖ್ ಪ್ರದಕ್ಷಿಣೆ ಪೂರ್ಣಗೊಂಡಿತ್ತು. ಅದೇ ಸ್ಥಳದಲ್ಲಿ ನಾವು ಜನ್ಸ್ ಖಾರ್ ಕಡೆಗೆ ತಿರುಗಿ ಸಾಹಸ ಯಾನ ಆರಂಭಿಸಿದ್ದೆವು. ಆ ಸವಿನೆನಪುಗಳೊಂದಿಗೆ ಜಿಸ್ಪಾದಿಂದ ಮುಂದಕ್ಕೆ ಸಾಗಿದೆವು. ಕೀಲಾಂಗ್ ತಲುಪಿದಾಗ ವಾಹನಗಳ ಟ್ಯಾಂಕ್ ಪರಿಶೀಲಿಸಿದೆವು. ಸಾಕಷ್ಟು ಇಂಧನ ಇತ್ತು. ಹಾಗಾಗಿ, ಪೆಟ್ರೋಲ್ ಬಂಕ್ ಕಡೆ ಸುಳಿಯದೆ ಪ್ರಯಾಣ ಮುಂದುವರಿಸಿದೆವು. ನನಗೆ ಇನ್ನೂ ಭುಜ ನೋವಿದ್ದ ಕಾರಣ ಬೈಕ್ ಏರಿರಲಿಲ್ಲ. ಏರುವ ಆಸೆಯಿದ್ದರೂ ಜತೆಗಿದ್ದವರು ಖಡಾಖಂಡಿತವಾಗಿ ಬೇಡ ಎಂದಿದ್ದರು. ಹಾಗಾಗಿ, ದಿಲೀಪ ಮತ್ತು ಅನಿಲ್ ಲೇಹ್ ನಿಂದ ಬೈಕ್ ಸವಾರಿ ಮಾಡುತ್ತಲೇ ಬಂದಿದ್ದರು. ಕೀಲಾಂಗ್ ನಿಂದ ಸಿಸ್ಸು ನಡುವೆ ಹೆದ್ದಾರಿ ಮೇಲೆ ಕಲ್ಲುಗಳು ಉರುಳುತ್ತಿದ್ದವು. ಆ ಅಪಾಯಕಾರಿ ಸನ್ನಿವೇಶದಲ್ಲಿ ದೇವರ ದಯದಿಂದ ಯಾವುದೇ ತೊಂದರೆ ಆಗದೆ ರೋಹ್ತಂಗ್ ತಲುಪಿದೆವು. ಅಟಲ್ ಟನೆಲ್ ದಾಟುತ್ತಿದ್ದಂತೆ ಒಣಪ್ರದೇಶ ಮುಕ್ತಾಯವಾಗಿ ಹರಿದ್ವರ್ಣದ ಸೋಲಾಂಗ್ ಕಣಿವೆ ಆರಂಭವಾಗಿತ್ತು. ಕರಾಳ ಕತ್ತಲಲ್ಲಿ ಮಂಜು ಕವಿದಿತ್ತು. ಇಬ್ಬನಿ ಬಿದ್ದು ರಸ್ತೆ ಒದ್ದೆಯಾಗಿತ್ತು.

ಲಡಾಖ್ ಅಮೃತಯಾತ್ರೆ - 2022: ಭಾಗ-9, ಹಾನ್‌ಲೇ... ಅದು ಬೇರೆಯೇ ಗ್ರಹ !

ಇನ್ನೇನು ಮನಾಲಿ ತಲುಪಿದೆವು ಅನ್ನುವಷ್ಟರಲ್ಲಿ ಮಳೆಯೂ ಧೋ ಎಂದು ಸುರಿಯಿತು. ಪಟ್ಟುಬಿಡದೆ ಪ್ರಯಾಣ ಮುಂದುವರಿಸಿ ರಾತ್ರಿ ಸುಮಾರು 8.30ರ ವೇಳೆಗೆ ಮನಾಲಿ ತಲುಪಿದೆವು. ಆದರೆ, ಮನಾಲಿಯಿಂದ 20 ಕಿ.ಮೀ. ಮುಂದಕ್ಕೆ ದೋಭಿ ಎಂಬಲ್ಲಿರುವ ಹೋಮ್ ಸ್ಟೇಯಲ್ಲಿ ಯಾತ್ರೆಯ ಆರಂಭದಲ್ಲಿ ಉಳಿದುಕೊಂಡಿದ್ದೆವಲ್ಲ, ಅಲ್ಲಿಗೇ ಹೋಗಿ ತಂಗುವುದು ಎಂದು ನಿರ್ಧರಿಸಿದೆವು. ಪುಣ್ಯಕ್ಕೆ ಮನಾಲಿ ತಲುಪುವಾಗ ಮಳೆ ನಿಂತಿತ್ತು. ಅಲ್ಲಿಂದ ದೋಭಿ ತಲುಪುವಾಗ 9.30 ಆಗಿತ್ತು. ಅಲ್ಲಿಯವರೆಗೂ ಮೌನವಾಗಿ ರಸ್ತೆ ಕ್ರಮಿಸಿದ್ದ ದಿಲೀಪ, ರಾತ್ರಿ ವೇಳೆ ಇಂಥ ಅಪಾಯಕಾರಿ ಪ್ರಯಾಣದ ರಿಸ್ಕ್ ತಗೊಳ್ಳುವುದು ಸರಿಯಲ್ಲ ಎಂದ. ಆತ ಹೇಳಿದ್ದು ಶತಪ್ರತಿಶತ ಸರಿಯಿತ್ತು. ನೀರಜ್ ರಾಥೋರೆಯ ಹೋಮ್ ಸ್ಟೇಯಲ್ಲಿ ಊಟ ಮಾಡಿ ಮಲಗಿದಾಗ ಮಧ್ಯರಾತ್ರಿ ಕಳೆದಿತ್ತು. 

ಮುಂದಿನ ಕಂತಿನಲ್ಲಿ: ದೋಭಿಯಿಂದ ಹೊರಡಲು ಯಾರಿಗೂ ಮನಸ್ಸೇ ಇರಲಿಲ್ಲ. ತಾಜಾ ಸೇಬು ತಗೊಳ್ಳೋಣ ಎಂದರೆ ವಿಧಿ ಅದನ್ನು ಬರೆದಿರಲಿಲ್ಲ. ಯಾತ್ರೆಯ ಕಡೆಯ ದಿನವೂ ಕಾಡಿದ ಭೂಕುಸಿತ. ಚಂಡೀಗಢಕ್ಕೆ ಬಂದರೆ ಎಲ್ಲರ ಹೃದಯವೂ ಭಾರ ಭಾರ. ಅನಂತ-ಅನಿಲ್ ಥಾರ್ ಹೋದದ್ದೆಲ್ಲಿಗೆ? ರಾಯಲ್ ಎನ್ ಫೀಲ್ಡುಗಳಿಗೆ ವಿದಾಯ ಹೇಳುವಾಗ ಆಗಿದ್ದೇನು?

Latest Videos
Follow Us:
Download App:
  • android
  • ios