ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಕೆಎಸ್‌ಆರ್‌ಟಿಸಿ ಸ್ಪೆಷಲ್ ಪ್ಯಾಕೇಜ್ ಟೂರ್
ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬಂದು ಅತ್ಯಂತ ಸುಂದರ ರೂಪ ತಾಳುತ್ತವೆ. ಮಲೆನಾಡು ಈ ಸಮಯದಲ್ಲಿ ಮಳೆನಾಡಾಗಿ ಮಾರ್ಪಡುತ್ತದೆ. ಅದರಲ್ಲೂ ಭೋರ್ಗರೆಯುತ್ತಿರುವ ಜೋಗದ ಸೌಂದರ್ಯ ನೋಡಲು ಎರಡೂ ಕಣ್ಣೂ ಸಾಲದು. ಈ ಮಧ್ಯೆ ಜೋಗಕ್ಕೆ ದಂಡು ಕಟ್ಟು ಹೋಗುತ್ತಿರುವ ಪ್ರವಾಸಿಗರ ಅನುಕೂಲಕ್ಕೆಂದೇ ಕೆಎಸ್‌ಆರ್‌ಟಿಸಿ, ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಪ್ಯಾಕೇಜ್ ಟೂರ್ ಏರ್ಪಡಿಸಿದೆ.
ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಸಣ್ಣಪುಟ್ಟಜಲಪಾತಗಳೂ ಉಕ್ಕುಕ್ಕಿ ಹರಿಯುತ್ತವೆ. ವಿಶ್ವ ಪ್ರಸಿದ್ಧ ಜೋಗ ಜಲಪಾತವು ಭೋರ್ಗರೆಯುತ್ತಿದೆ. ಜೋರು ಮಳೆಗೆ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಕರಿ ಮೋಡ ಸಹಿತ ಮಳೆ, ಶೀತ ಗಾಳಿಯು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದಿಂದ 'ಬೆಂಗಳೂರು-ಜೋಗ ಜಲಪಾತ' ಪ್ಯಾಕೇಜ್ ಟೂರ್ ಆರಂಭಿಸಿದೆ. ಜುಲೈ 22ರಿಂದ ಆರಂಭವಾಗುತ್ತಿರುವ ಈ ಪ್ಯಾಕೇಜ್ ಶುಕ್ರವಾರ ಮತ್ತು ಶನಿವಾರದಂದು ಕಾರ್ಯಚರಣೆ ಮಾಡುತ್ತಿದೆ. ಹವಾನಿಯಂತ್ರಿತ ರಹಿತ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಬಹುದಾಗಿದೆ
ಟೂರ್ ವಿವರ, ಎಲ್ಲೆಲ್ಲಿಗೆ ಹೋಗಬಹುದು ?: ಪ್ರತಿ ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಪ್ರಯಾಣ ಪ್ರಾರಂಭವಾಗಲಿದ್ದು, ಕೆಳದಿ, ಇಕ್ಕೇರಿ, ಸಾಗರ, ಜೋಗ ಜಲಪಾತವನ್ನು ನೋಡಬಹುದಾಗಿದೆ. ಪ್ರಯಾಣಿಕರಿಗೆ ತಿಂಡಿ ಮತ್ತು ಊಟ ಸೌಲಭ್ಯವನ್ನು ನಿಗಮವೇ ವಹಿಸಲಿದೆ. ಪ್ರಯಾಣ ದರ ವಯಸ್ಕರಿಗೆ - 2300 ರೂ. ಮಕ್ಕಳಿಗೆ (6 ರಿಂದ 12 ವರ್ಷ) 2100 ರೂ.ಗಳನ್ನು ನಿಗದಿ ಪಡಿಸಲಾಗಿದೆ.
ಉಡುಪಿಯಲ್ಲಿ ಮಳೆಗಾಲದ ಜಲಪಾತಗಳು, ಮಣಿಪಾಲದ ಅರ್ಬಿ ಮನಮೋಹಕ
ಭೋರ್ಗರೆಯುತ್ತಿದೆ ಜಲಧಾರೆ ನೋಡಲು ಜನಸಾಗರ:
ವಿಶ್ವ ಪ್ರಸಿದ್ಧ ಜೋಗ ಜಲಪಾತ (Jogfalls) ವೀಕ್ಷಣೆಗೆ ಪ್ರವಾಸಿಗರ ದಂಡೇ ಧಾವಿಸುತ್ತಿದೆ. ಕಲ್ಲು ಬಂಡೆಗಳ ಮಧ್ಯೆ ಹಾಲ್ನೋರೆಯಂತೆ ಧುಮ್ಮಿಕ್ಕಿ ಬೀಳುವ ಜಲಪಾತದ ನಯನಮನೋಹರ ದೃಶ್ಯಾವಳಿಯನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಜಿಟಿ ಜಿಟಿ ಮಳೆ (Rain)ಯನ್ನೂ ಲೆಕ್ಕಿಸದೇ ಯುವಕರು, ಯುವತಿಯರು, ಮಕ್ಕಳು, ನವಜೋಡಿಗಳು, ಗುಂಪು ಗುಂಪಾಗಿ ಜಲಧಾರೆಯನ್ನು ವೀಕ್ಷಣೆ ಮಾಡಿ ಖುಷಿ ಪಡುತ್ತಿದ್ದಾರೆ. ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಕಣ್ಣು ಹಾಗೂ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಮಳೆ ಕಡಿಮೆ ಆಗಿದ್ದರಿಂದ ಜೋಗ ಜಲಪಾತ, ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರಕ್ಕೆ ಭಾನುವಾರ ಜನರು ದಾಂಗುಡಿ ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣಗಳ ಸೌಂದರ್ಯ ಸವಿಸುವುದರ ಜೊತೆಗೆ, ಇಬ್ಬನಿ ಆವರಸಿದ ವಾತಾವರಣ ನೀಡುವ ವಿಶಿಷ್ಟಅನುಭವವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.
ಹೆಚ್ಚಿದ ವಾಹನ ದಟ್ಟಣೆ: ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಜನರು ಬೈಕ್, ಕಾರು, ಬಸ್, ಮಿನಿ ಬಸ್, ಆಟೋಗಳಲ್ಲಿ ಹೆಚ್ಚಾಗಿ ಬಂದಿದ್ದರಿಂದ ಜೋಗ ಜಲಪಾತಕ್ಕೆ ಸಾಗುವ ರಸ್ತೆಯಲ್ಲೇ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲೆ ವಾಹನಗಳನ್ನು ನಿಲ್ಲಿಸಿದ ಕಾರಣ ಪರಿಸ್ಥಿತಿ ಬಿಗಡಾಯಿಸಿತ್ತು.
ಚಿತ್ರದುರ್ಗ: ಮಧ್ಯ ಕರ್ನಾಟಕದ ಮಿನಿ ಊಟಿ ಜೋಗಿಮಟ್ಟಿ
ಸಿಂಹಧಾಮದಲ್ಲೂ ಹೆಚ್ಚಿದ ಪ್ರವಾಸಿಗರು: ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹೆಚ್ಚಿನ ಜನ ಭೇಟಿ ನೀಡುತ್ತಾರೆ. ಆದರೆ, ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಸಿಗರ (Tourist) ಸಂಖ್ಯೆ ಕಡಿಯಾಗಿತ್ತು. ಭಾನುವಾರ ಮಳೆಯೂ ಬಿಡುವು ನೀಡಿದ್ದರಿಂದ ಮಕ್ಕಳೊಂದಿಗೆ ಸಿಂಹಧಾಮಕ್ಕೆ ತೆರಳಿ ಸಂಭ್ರಮದಿಂದ ರಜೆ ದಿನವನ್ನು ಕಳೆದಿದ್ದಾರೆ. ಇನ್ನು ಸಕ್ರೆಬೈಲು ಆನೆ ಬಿಡಾರದಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.
ಕೆಎಸ್‌ಆರ್‌ಟಿಸಿಯಿಂದ ಭರಚುಕ್ಕಿ ಫಾಲ್ಸ್ ಟೂರ್: ಬೆಂಗಳೂರು ನಗರದಿಂದ ವಾರಾಂತ್ಯಗಳಲ್ಲಿ ಪ್ರಕೃತಿಯ ಸೌಂದರ್ಯ ಕಣ್ತುಂಬಿಕೊಳ್ಳುವವರಿಗಾಗಿ ಸೋಮನಾಥಪುರ, ತಲಕಾಡು, ಮಧ್ಯರಂಗ, ಗಗನ ಚುಕ್ಕಿ ಮತ್ತು ಭರಚುಕ್ಕಿ ಫಾಲ್ಸ್ ನೋಡುವುದಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಜು.23ರಿಂದ ಪ್ರಾರಂಭವಾಗುತ್ತಿರುವ ಒಂದು ದಿನದ ಟೂರ್‌ಗಾಗಿ ವೇಗದೂತ ಕರ್ನಾಟಕ ಸಾರಿಗೆ ಬಸ್‌ಗಳು ಸಿದ್ದವಾಗಿದ್ದು, ವಯಸ್ಕರಿಗೆ 400 ರು. ಮತ್ತು ಮಕ್ಕಳಿಗೆ 250 ರು.ಗಳನ್ನು ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.