ದೇಶದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಜೋರಾಗಿದ್ದು, ಲಕ್ಷದ್ವೀಪವನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಕನ್ನಡದ ಯ್ಯೂಟೂಬರ್ ಡಾ ಬ್ರೋ ಇಡೀ ಲಕ್ಷದ್ವೀಪದ ಸೌಂದರ್ಯ ತೋರಿಸಿದ್ದಾನೆ.

ಲಕ್ಷದ್ವೀಪ (ಜ.08): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಹೋಗಿ ಬಂದಾಕ್ಷಣ ಮಾಲ್ಡೀವ್ಸ್‌ ಸಚಿವರು,  ಪ್ರಧಾನಿ ಮೋದಿ ಹಾಗೂ ಭಾರತಕ್ಕೆ ಅಪಹಾಸ್ಯ ಮಾಡಿದ್ದರು. ದೇಶದ ಚಿತ್ರರಂಗ, ಕ್ರೀಡಾರಂಗ ಹಾಗೂ ಇತರೆ ಕ್ಷೇತ್ರಗಳಿಂದ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ಕನ್ನಡದ ಸ್ಟಾರ್‌ ಯ್ಯೂಟೂಬರ್ ಡಾ ಬ್ರೋ ಕೂಡ ಬೆಂಬಲ ವ್ಯಕ್ತಪಡಿಸಿ, ಇಡೀ ಲಕ್ಷದ್ವೀಪದ ಸೌಂದರ್ಯವನ್ನು ಪ್ರವಾದ ಮೂಲಕ ತೋರಿಸಿದ್ದಾರೆ.

ನಮ್ಮ ದೇಶದ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್‌ ಹಾಗೂ ಮಾಲಿವುಡ್‌ ಸೇರಿದಂತೆ ಎಲ್ಲ ಬಹುತೇಕ ಸಿನಿಮಾ ನಟ-ನಟಿಯರು ಹಾಗೂ ಹಲವು ಜನ ಸಾಮಾನ್ಯರು ಕೂಡ ಮಾಲ್ಡೀವ್ಸ್‌ ಬೀಚ್‌ಗೆ ಹೋಗಿ ಎಂಜಾಯ್‌ ಮಾಡಿಕೊಂಡು ಬರುತ್ತಿದ್ದರು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಭಾಗವೇ ಆಗಿರುವ ಲಕ್ಷದ್ವೀಪಕ್ಕೆ ಹೋಗಿ ಅಲ್ಲಿನ ಸಮುದ್ರ ದಂಡೆ, ಪ್ರಸಿದ್ಧ ಬೀಚ್‌ಗಳು, ಸ್ಕೂಬಾ ಡೈವಿಂಗ್ ಇತರೆ ಸ್ಥಳಗಳನ್ನು ತೋರಿಸಿದ್ದಾರೆ. ಇದರ ಬೆನ್ನಲ್ಲಿಯೇ ಮಾಲ್ಡೀವ್ಸ್‌ ಸಚಿವರು ಪ್ರಧಾನಿ ಮೋದಿ ಹಾಗೂ ಭಾರತದ ಬಗ್ಗೆ ತೆಗಳಿ ಮಾತನಾಡಿದ್ದರು. ಇದರ ಬೆನ್ನಲ್ಲಿಯೇ ಬಾಲಿವುಡ್‌, ಕ್ರಿಕೆಟ್‌ ಹಾಗೂ ಇತರೆ ಕ್ಷೇತ್ರಗಳ ಸ್ಟಾರ್‌ಗಳಿಂದ ಮಾಲ್ಡೀವ್ಸ್‌ ಬಾಯ್ಕಾಟ್‌ ಅಭಿಯಾನ ಆರಂಭ ಮಾಡಲಾಯಿತು. ಇದಕ್ಕೆ ಸಾಥ್‌ ಕೊಟ್ಟಿರುವ ಕನ್ನಡಿಗ ಡಾ.ಬ್ರೋ ಕೂಡ ಲಕ್ಷದ್ವೀಪ ಪ್ರವಾಸಕ್ಕೆ ಹೋಗಿ ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ವರ್ಣಿಸಿದ್ದಾನೆ.

ಮಾಲ್ಡೀವ್ಸ್‌ ಪ್ರವಾಸದಲ್ಲಿ ಭಾರತೀಯರದ್ದೇ ಮೇಲುಗೈ: 2023ರಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದು 17 ಲಕ್ಷ ಜನ!

ಇನ್ನು ಲಕ್ಷದ್ವೀಪಕ್ಕೆ ಹೋಗುವುದು ಅತ್ಯಂತ ಸುಲಭವಾಗಿದ್ದು, ಕ್ರೂಸರ್‌ ಶಿಪ್‌ನಿಂದ ಕಡ್ಮಟ್‌ ಐಲ್ಯಾಂಡ್‌ಗೆ ಹೋಗಲು ಬೋಟ್‌ ಮೂಲಕ ಕರೆದೊಯ್ಯಲಾಗುತ್ತದೆ. ಕರ್ನಾಟಕದಿಂದ ಹಲವು ಜನರು ಲಕ್ಷದ್ವೀಪ ಐಲ್ಯಾಂಡ್‌ ನೋಡಲು ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಲಕ್ಷದ್ವೀಪದಲ್ಲಿ 36 ದ್ವೀಪಗಳಿವೆ. ಮಂಗಳೂರು ಐಲ್ಯಾಂಡ್‌ನಿಂದ ಲಕ್ಷದ್ವೀಪ ಐಲ್ಯಾಂಡ್‌ಗೆ ಹತ್ತಿರವಿದ್ದರೂ ಹಡಗುಗಳು ಹೋಗುವ ಮಾರ್ಗಕ್ಕೆ ಅನುಕೂಲ ಆಗುವಂತೆ ಕೊಚ್ಚಿಯಿಂದ ಶಿಪ್‌ಗಳನ್ನು ಸಂಚಾರ ಮಾಡಲಾಗುತ್ತದೆ.

Lakshadweep Island | 🇮🇳 Union Territory | Dr Bro Kannada

ಸಮುದ್ರದ ಮೇಲೆ ತೇಲುವ ಬ್ರಿಡ್ಜ್‌, ಸಮುದ್ರೊಳಗೇ ರಸ್ತೆ ನಿರ್ಮಾಣ: ಲಕ್ಷದ್ವೀಪದಲ್ಲಿ ವಾಹನ ಸಂಚಾರ ತೀರಾ ವಿರಳವಾಗಿದೆ. ಇಲ್ಲಿನ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಪ್ರತಿನಿತ್ಯ ಬೋಟ್‌ಗಳಲ್ಲಿ ಸಂಚಾರ ಮಾಡುತ್ತಾರೆ. ಪ್ರಯಾಣಿಕರು ಬಂದಾಗ ದೊಡ್ಡ ದೊಡ್ಡ ಕ್ರೂಸರ್‌ ಶಿಪ್‌ಗಳು ಇಲ್ಲಿಗೆ ಬರುತ್ತವೆ. ಸ್ಥಳೀಯವಾಗಿ ದ್ವೀಪಗಳಿಂದ ದ್ವೀಪಗಳಿಗೆ ಹೋಗಲು ಬೋಟ್‌ಗಳನ್ನು ಬಳಕೆ ಮಾಡುತ್ತಾರೆ. ಹಲವು ಬೀಚ್‌ಗಳಲ್ಲಿ ತೇಲುವ ಬ್ರಿಡ್ಜ್‌ಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇನ್ನು ಕೆಲವೆಡೆ ಸಮುದ್ರದೊಳಗೇ ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಮುದ್ರದ ನೀರು ಸ್ವಚ್ಛವಾಗಿದ್ದು, ಶುದ್ಧ ತಿಳಿನೀರಿನಂತಿದೆ.

ಲಕ್ಷದ್ವೀಪದಲ್ಲಿ ಹುಡುಗಿಗೆ ವಧು ದಕ್ಷಿಣೆ ಕೊಡುವುದು ಸಂಪ್ರದಾಯ: ಲಕ್ಷದ್ವೀಪದಲ್ಲಿ ಮಹಿಳಾ ಪ್ರಧಾನ ಸಮಾಜವಿದೆ. ಇಲ್ಲಿ ಮದುವೆ ಆಗುವಾಗ ಹೆಣ್ಣಿಗೆ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳಲಾಗುತ್ತದೆ. ಇನ್ನು ಪುರುಷರು ಮದುವೆಯಾದ ನಂತರ ತನ್ನ ಹೆಂಡತಿಯ ಮನೆಗೆ ಹೋಗಿ ವಾಸ ಮಾಡಬೇಕು. ಅಂದರೆ, ಪುರುಷ ತನ್ನ ಹುಟ್ಟಿದ ಮನೆಯನ್ನು ಬಿಟ್ಟು ಹೆಂಡತಿ ಮನೆಗೆ ಹೋಗಿ ಜೀವನ ಮಾಡಬೇಕು. ಇದು ಭಾರತೀಯ ಸಂಪ್ರದಾಯದಲ್ಲಿ ವಿಭಿನ್ನವಾಗಿರುವ ಸಂಪ್ರದಾಯ ಎಂದೇ ಹೇಳಬಹುದು. 

ರಾಮ ಸೀತೆ ವಾಸಿಸಿದ್ದ ಕನಕ ಮಹಲ್‌ನಲ್ಲಿ ಡಾ ಬ್ರೋ! ಇನ್ನೂ ಇದೆ ದೇವರ ಕಾಲಿನ ಧೂಳಿನ ಘಮ

ಸ್ಪೋರ್ಟ್ಸ್ ಆಕ್ಟಿವಿಟಿಗೂ ಕಡಿಮೆಯಿಲ್ಲ: ಪ್ರವಾಸಕ್ಕೆಂದು ಲಕ್ಷದ್ವೀಪಕ್ಕೆ ಹೋದ ಪ್ರವಾಸಿಗರಿಗೆ ಸಮುದ್ರ ನೀರಿನಲ್ಲಿ ಆಟಗಳನ್ನು ಆಡಿಸುವುದು ಹಾಗೂ ಇತರೆ ಆಕ್ಟಿವಿಟಿಗಳನ್ನೂ ಮಾಡಿಸುತ್ತಾರೆ. ಇದಕ್ಕೆಂದೇ ಕೆಲವು ತಜ್ಞರನ್ನು ಒಳಗೊಂಡ ತಂಡಗಳೂ ಇದ್ದು, ಇಂತಿಷ್ಟು ಹಣ ಪಡೆದು ಆಕ್ಟಿವಿಟಿ ಮಾಡಿಸುತ್ತಾರೆ. ಮಾಲ್ಡೀವ್ಸ್‌ ಸೇರಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದಲ್ಲಿ ಲಕ್ಷದ್ವೀಪದಲ್ಲಿ ಹಣ ಕಡಿಮೆಯಿದೆ. ವಾಟರ್‌ ಸೋರ್ಸಿಂಗ್, ಬನಾನ ಬೋಟಿಂಗ್‌, ಸ್ಕೂಬಾ ಡೈವಿಂಗ್ ಇತ್ಯಾದಿ ಆಕ್ಟಿವಿಟಿಗಳಿವೆ ಎಂದು ಡಾ ಬ್ರೋ ಮಾಹಿತಿ ನೀಡಿದ್ದಾರೆ.

ಲಕ್ಷದ್ವೀಪ ರಕ್ಷಣೆ ಮಾಡಿದ್ದು ಕೇವಲ ಇಬ್ಬರು ಭಾರತೀಯ ಯೋಧರು: ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದಾಗ ಲಕ್ಷದ್ವೀಪವನ್ನು ವಶಕ್ಕೆ ಪಡೆಯುವುದಕ್ಕೆ ಪಾಕಿಸ್ತಾನದ ಆರ್ಮಿ ಬೆಟಾಲಿಯನ್‌ ಕೂಡ ಆಗಮಿಸಿತ್ತು. ಆದರೆ, ಈ ವೇಳೆ ಭಾರತೀಯ ಸೇನೆಯ ಇಬ್ಬರು ವ್ಯಕ್ತಿಗಳು ಲಕ್ಷದ್ವೀಪದಲ್ಲಿ ಭಾರತೀಯ ಬಾವುಟವನ್ನು ಹಾರಿಸಿದ್ದರಿಂದ ಪಾಕಿಸ್ತಾನದಿಂದ ಬಂದಿದ್ದ ದೊಡ್ಡ ಬೆಟಾಲಿಯನ್‌ ಇದನ್ನು ಈಗಾಗಲೇ ಭಾರತ ಆಕ್ರಮಿಸಿಕೊಂಡಿದೆ ಎಂದು ಅಲ್ಲಿಂದ ಕಾಲ್ಕಿತ್ತಿದೆ. ಈ ವೇಳೆ ಸ್ವತಃ ದೇಶದ ಉಕ್ಕಿನ ಮನುಷ್ಯ ಖ್ಯಾತಿಯ ಸರ್ಧಾರ್ ವಲ್ಲಭಬಾಯಿ ಪಟೇಲ್‌ ಕೂಡ ಲಕ್ಷದ್ವೀಪ ಭಾರತಕ್ಕೆ ಪಡೆಯಲು ಭಾರಿ ಕಸರತ್ತು ಮಾಡಿದ್ದಾರೆ. ಇಲ್ಲದಿದ್ದರೆ ನಾವು ಲಕ್ಷದ್ವೀಪಕ್ಕೂ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ.