Asianet Suvarna News Asianet Suvarna News

ಭಾರತದ ಕುರಿತ ಈ ವಿಷಯ ನಿಮಗ್ಗೊತ್ತಾ?

ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬುದು ಎಲ್ಲರಿಗೂ ಗೊತ್ತು. ಆದರೆ, ನಮ್ಮ ದೇಶದ ಬಗ್ಗೆ ಎಲ್ಲರಿಗೂ ಗೊತ್ತಿರದ ಒಂದಿಷ್ಟು ಸಂಗತಿಗಳು ಕೇಳಲು ಖುಷಿ ಕೊಡುತ್ತವೆ.  

Interesting Facts about India
Author
Bangalore, First Published May 21, 2020, 10:45 AM IST

ಜಗತ್ತಿನಲ್ಲಿ ಭಾರತ ಏಳನೇ ಅತಿ ದೊಡ್ಡ ದೇಶ. ಎರಡನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ. ವಿಶ್ವಗುರುವಾಗಲು ಕನಸು ಕಾಣುತ್ತಿರುವ ದೇಶ. ಈ ವಿಷಯಗಳು ಎಲ್ಲರಿಗೂ ಗೊತ್ತು. ಆದರೆ, ಭಾರತದ ಕುರಿತ ಇನ್ನೊಂದಿಷ್ಟು ಆಸಕ್ತಿಕರ ವಿಷಯಗಳು ಹೆಚ್ಚು ಜನರಿಗೆ ಪರಿಚಯವಿಲ್ಲ. ಅವುಗಳ ಬಗ್ಗೆ ಇಲ್ಲಿ ಕೊಡಲಾಗಿದೆ ನೋಡಿ. 

ಭಾರತ ಒಂದು ಕಾಲದಲ್ಲಿ ದ್ವೀಪವಾಗಿತ್ತು
ಹೌದು, ಡೈನಾಸರ್‌ಗಳು ಈ ಭೂಮಿಯ ಮೇಲೆ ಇದ್ದಂಥ ಸಂದರ್ಭದಲ್ಲಿ ಅಂದರೆ, ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ಭಾರತ ಒಂದು ದ್ವೀಪವಾಗಿತ್ತು. ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಭಾರತ ಖಂಡದ ಭೂಭಾಗ ಏಷ್ಯಾದ ಭೂಭಾಗಕ್ಕೆ ಢಿಕ್ಕಿ ಹೊಡೆದು ಹಿಮಾಲಯವನ್ನು ಹುಟ್ಟು ಹಾಕಿತು. ಆಗ ಭಾರತ ಏಷ್ಯಾದ ಭಾಗವಾಯಿತು. ಈಗ ಕೂಡಾ ಈ ಪ್ಲೇಟ್ ಉತ್ತರ ದಿಕ್ಕಿನತ್ತ ಚಲಿಸುತ್ತಿದ್ದು, ಮೌಂಟ್ ಎವರೆಸ್ಟ್ ಪ್ರತಿ ವರ್ಷ ಬೆಳೆಯುತ್ತಿರಲು ಇದೇ ಕಾರಣ. 

ಜೇನು ತುಪ್ಪದ ಸವಿ ಗೊತ್ತು, ಜೇನು ನೊಣವೂ ಇಷ್ಟು ಉಪಕಾರಿಯೇ?

ದಿಲ್ಲಿಯ ಪೂರ್ಣ ಹೆಸರು
ಭಾರತದ ರಾಜಧಾನಿ ದಿಲ್ಲಿಯ ಅಧಿಕೃತ ಪೂರ್ಣ ಹೆಸರು- ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ದೆಲ್ಲಿ. ಇದು ಜಗತ್ತಿನ ಎರಡನೇ ಅತಿ ದೊಡ್ಡ ಮೆಗಾ ಸಿಟಿ. ಭಾರತದಲ್ಲಿ ಮೂರು ಮೆಗಾಸಿಟಿಗಳಿದ್ದು, ಈ ವಿಷಯದಲ್ಲಿ ಚೀನಾವನ್ನು ಕೂಡಾ ಭಾರತ ಹಿಂದಿಕ್ಕಿದೆ. 

ಮಾವು ಹಾಗೂ ಹಲಸು
ದೇಶವು ಜಗತ್ತಿನ ಅತಿ ದೊಡ್ಡ ಮಾವು ಹಾಗೂ ಹಲಸು ಬೆಳೆಗಾರನಾಗಿದ್ದು, ಇಲ್ಲಿ ಈ ಹಣ್ಣುಗಳ ನೂರಕ್ಕೂ ಹೆಚ್ಚು ಜಾತಿಗಳನ್ನು ನೋಡಬಹುದು. ಅವುಗಳಲ್ಲಿ 30ರಷ್ಟು ಮಾವು, ಹಲಸು ಜಾತಿಗಳು ಹೆಚ್ಚು ವಾಣಿಜ್ಯೀಕರಣಗೊಂಡಿವೆ. 

ಮೂವಿಗಳ ಮೆರವಣಿಗೆ
ಭಾರತದ ಫಿಲ್ಮ್ ಇಂಡಸ್ಟ್ರಿ ಪ್ರತಿ ವರ್ಷ ಹೊರ ಬಿಡುವಷ್ಟು ಚಲನಚಿತ್ರಗಳನ್ನು ಜಗತ್ತಿನ ಇನ್ಯಾವ ದೇಶಗಳೂ ಮೀರಿಸಲಾರವು. ಪ್ರತಿ ವರ್ಷ ಸುಮಾರು 1100 ಮೂವಿಗಳು ಇಲ್ಲಿ ಬಿಡುಗಡೆಯಾಗುತ್ತವೆ. ಅವುಗಳಲ್ಲಿ ಬಾಲಿವುಡ್ ಪಾಲು ಕೇವಲ 200. ಉಳಿದಂತೆ ತಮಿಳು ಹಾಗೂ ತೆಲುಗು ಚಿತ್ರಗಳು ಈ ಸಂಖ್ಯೆಯ ಬಹುಪಾಲನ್ನು ಹೊಂದಿವೆ. 

ರಸ್ತೆ ಅಪಘಾತಗಳು
ಭಾರತದಲ್ಲಿ ಆಗುವಷ್ಟು ರಸ್ತೆ ಅಪಘಾತದ ಸಾವುಗಳ ಸಂಖ್ಯೆ ಕೇಳಿದರೆ ಆಘಾತವಾದೀತು. ಪ್ರತಿ ವರ್ಷ ಸುಮಾರು ಒಂದೂಕಾಲು ಲಕ್ಷ ಜನರು ರಸ್ತೆ ಅಪಘಾತಕ್ಕೆ ಇಲ್ಲಿ ಬಲಿಯಾಗುತ್ತಾರೆ. ಈ ವಿಷಯದಲ್ಲಿ ಭಾರತ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿ ಎರಿತ್ರಿಯ ಹಾಗೂ ದಿ ಕುಕ್ ಐಲ್ಯಾಂಡ್‌ಗಳಿವೆ. 

ದೀಪಿಕಾ ರಣವೀರ್ ತಿಂಗಳ ಆಹಾರದ ಖರ್ಚಿಷ್ಟು... !

ಕುಂಭಮೇಳ
12 ವರ್ಷಗಳಿಗೊಮ್ಮೆ ನಾಲ್ಕು ಪವಿತ್ರ ನದಿಗಳ ತಟದಲ್ಲಿ ನಡೆಯುವ ಕುಂಭಮೇಳಕ್ಕೆ ಭಾರತವಷ್ಟೇ ಅಲ್ಲದೆ, ಜಗತ್ತಿನಾದ್ಯಂತದಿಂದ ಜನಸಾಗರ ಹರಿದುಬರುತ್ತದೆ. ಸುಮಾರು 100 ದಶಲಕ್ಷ ಜನರು ಇಲ್ಲಿ ಒಂದೆಡೆ ಸೇರುತ್ತಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಜನ ಸಂಖ್ಯೆ ಸೇರುವ ದಾಖಲೆ. ಇದೆಷ್ಟು ದೊಡ್ಡದಿರುತ್ತದೆ ಎಂದರೆ ಅಂತರಿಕ್ಷದಿಂದ ಕೂಡಾ ಜನಸಾಗರ ಕಾಣಸಿಗುವಷ್ಟು!

ಮಸಾಲೆಗಳ ರಾಣಿ
ಭಾರತಕ್ಕೆ ಬ್ರಿಟಿಷರು ಇಲ್ಲಿನ ಮಸಾಲೆ ಪದಾರ್ಥಗಳ ಕಾರಣಕ್ಕಾಗಿಯೇ ಬಂದಿದ್ದು ಗೊತ್ತೇ ಇದೆ. ದೇಶವು ಜಗತ್ತಿನಲ್ಲೇ ಅತಿ ಹೆಚ್ಚು ಮಸಾಲೆ ಬೆಳೆವ, ಬಳಸುವ ದೇಶ. ಜಗತ್ತಿನಲ್ಲಿರುವ ಒಟ್ಟು ಮಸಾಲೆಯ ಶೇ.70 ಭಾಗ ಭಾರತದಲ್ಲೇ ಉತ್ಪಾದನೆಯಾಗುತ್ತದೆ. 

ಶಾಂತಿಯುತ ದೇಶ
ಭಾರತದ 100,000 ವರ್ಷಗಳ ಇತಿಹಾಸದಲ್ಲಿ ಅದು ಒಮ್ಮೆಯೂ ಬೇರೆ ದೇಶವನ್ನು ಆಕ್ರಮಿಸಿಕೊಂಡ ಉದಾಹರಣೆಯಿಲ್ಲ. ಜಗತ್ತಿನ ಅತಿ ಶಾಂತಿಯುತ ದೇಶವಾಗಿ ಭಾರತ ಗುರುತಿಸಿಕೊಂಡಿದೆ. 

ಭಾರತೀಯ ರೈಲ್ವೆ
ಭಾರತದ ರೈಲ್ವೆಯೊಂದರಲ್ಲೇ 1.4 ದಶಲಕ್ಷ ಉದ್ಯೋಗಿಗಳಿದ್ದಾರೆ. ಇದು ಮಾರಿಷಸ್, ಮೊನ್ಯಾಕೋ, ವ್ಯಾಟಿಕನ್ ಸಿಟಿ, ಈಸ್ಟೋನಿಯಾ ಮುಂತಾದ ಹಲವು ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು. 

ಅತಿ ದೊಡ್ಡ ಪೋಸ್ಟ್ ನೆಟ್ವರ್ಕ್
ಭಾರತದ ಪ್ರತಿ ಹಳ್ಳಿ, ಪಟ್ಟಣ, ನಗರಗಳಲ್ಲೂ ಪೋಸ್ಟ್ ಆಫೀಸ್ ಇದೆ. ಒಟ್ಟು 1, 55,015 ಅಂಚೆ ಕಚೇರಿಗಳು ಇಲ್ಲಿವೆ. ಕಾಶ್ಮೀರದ ದಾಲ್‌ ಲೇಕ್ನಲ್ಲಿ ತೇಲುವ ಅಂಚೆ ಕಚೇರಿ ಕೂಡಾ ಇದೆ. ಈ ಮೂಲಕ ಇದು ಜಗತ್ತಿನಲ್ಲೇ ಅತಿ ದೊಡ್ಡ ಪೋಸ್ಟಲ್ ನೆಟ್ವರ್ಕ್ ಸಾಧಿಸಿದೆ. 

ಬಾಂದ್ರಾ ವರ್ಲಿ ಸೀ ಲಿಂಕ್
ಮುಂಬೈಯ ಬಾಂದ್ರಾ ವರ್ಲಿ ಸೀ ಲಿಂಕ್‌ಗಾಗಿ ನಿರ್ಮಿಸಿರುವ ಸ್ಟೀಲ್ ವೈರ್‌ಗಳು ಭೂಮಿಯ ಸುತ್ತಳತೆಯಷ್ಟು ಉದ್ದ ಇವೆ. ಇದನ್ನು ಪೂರ್ಣಗೊಳಿಸಲು 2,57,00,000 ಗಂಟೆಗಳು ಬೇಕಾಗಿದ್ದು, 50,000 ಆಫ್ರಿಕನ್ ಆನೆಗಳಷ್ಟು ತೂಕ ಹೊಂದಿದೆ. ಇಂಥದೊಂದು ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ವಿಶೇಷ ಮತ್ತೆಲ್ಲೂ ಕಾಣ ಸಿಗಲಾರದು.

ಅತಿ ದೊಡ್ಡ ವೆಜಿಟೇರಿಯನ್ ದೇಶ
ಜಗತ್ತಿನ ಅತಿ ದೊಡ್ಡ ವೆಜಿಟೇರಿಯನ್ ದೇಶ ಭಾರತವಾಗಿದ್ದು, ಇಲ್ಲಿ ಶೇ.20ರಿಂದ 40ರಷ್ಟು ಭಾರತೀಯರು ಸಂಪೂರ್ಣ ಸಸ್ಯಾಹಾರಿಗಳಾಗಿದ್ದಾರೆ. 

Follow Us:
Download App:
  • android
  • ios