ಜೇನು ಸವಿಯುವುದು ಮಧುರ. ಜೇನು ಹುಳದಿಂದ ಕಡಿಸಿಕೊಳ್ಳುವುದು ಕಟು ಮಧುರ! ಮಧು ಎಂದರೇ ಜೇನು. ಅಧರಂ ಮಧುರಂ ಎಂಬ ಪದ್ಯವನ್ನು ನೆನಪಿಸಿಕೊಳ್ಳಿ. ಹಾಗೆಂದರೆ ಬೇರೇನೋ ನೆನಪಾಗಬಹುದು. ಮಧುರ ಎಂದರೆ ಪ್ರಿಯತಮೆ ತುಟಿ, ಮಧುರ ಎಂದರೆ ಮಗುವಿನ ತುಟಿ, ಮಧುರ ಎಂದರೆ ಆಪ್ತರ ಮಾತು. ಎಲ್ಲ ನಿಜ. ಸವಿಯಾದುದಕ್ಕೆಲ್ಲ ಮಧು ಎಂದೇ ಹೆಸರು. ಏನು ಏನು ಜೇನು ಜೇನು ಎನೆ ಗುಂ ಗುಂ ಗಾನ! ಎಂದು ವರಕವಿ ಬೇಂದ್ರೆಯವರು ಹಾಡಿದ್ದು ನಿಮಗೆ ನೆನಪಿರಬಹುದು. ಸಾವಿರಾರು ಜೇನುಹುಳಗಳು ರಾಗ ಹುಡುಕುತ್ತಾ ಹೂವಿನಿಂದ ಹೂವಿಗೆ ಹಾರಾಡುತ್ತಿದ್ದರೆ ಅಲ್ಲಿ ಎಲ್ಲ ಹುಳಗಳ ಗುಂ ಗುಂ ಸ್ವರ ಸೇರಿ ಒಂದು ನಾದಮೇಳವೇ ನಡೆಯುತ್ತಿರುತ್ತದೆ. ಜೇನು ನಾಲಿಗೆಗೂ ಮಧುರ, ಕಿವಿಗೂ ಮಧುರ.

ಜೇನು ಸವಿಯದ ಮನುಷ್ಯನಿಲ್ಲ ಎನ್ನಬಹುದು. ನಮ್ಮ ಆಯುರ್ವೇದ ಪಂಡಿತರಿಗಂತೂ ಮೂಲಿಕೆಗಳ ಜೊತೆ ತೇಯ್ದು ಕೊಡಲು ಜೇನು ಬೇಕೇ ಬೇಕು. ವಿಶ್ವದ ನಾನಾ ಕಡೆಗಳು ಹಲವು ವೈದ್ಯಕೀಯ ಪದ್ಧತಿಗಳೂ ಜೇನಿನ ಪ್ರಾಮುಖ್ಯವನ್ನು ಮಾನ್ಯ ಮಾಡಿವೆ. ಜೇನು ಸವಿಯುವುದರಿಂದ ರೋಗನಿರೋಧಕ ಶಕ್ತಿ ಖಾತ್ರಿ. ಜೇನಿನಿಂದ ಕಾರ್ಯಚಟುವಟಿಕೆ ಸಾಮರ್ಥ್ಯ ವೃದ್ಧಿ, ಲೈಂಗಿಕ ಕಾರ್ಯಕ್ಷಮತೆ ಹೆಚ್ಚಳ- ಇದೆಲ್ಲ ನಿಮಗೆ ಗೊತ್ತೇ ಇದೆ. ಬೆಳಗ್ಗೆ ಎದ್ದು ಹಸಿದ ಹೊಟ್ಟೆಗೆ ಎರಡು ಚಮಚ ಜೇನು ಸವಿದರೆ ತೆಳ್ಳಗಾಗಲು ಅದು ಒಳ್ಳೆಯದು. ಹೀಗೆ ಜೇನಿನ ಅರೋಗ್ಯ ಉಪಯೋಗಗಳು ನೂರೆಂಟು. 

ಜೇನು ಸಾಕಿ, ಇಳುವರಿ ಹೆಚ್ಚಿಸಿಕೊಳ್ಳಿ

ವಿಶ್ವದ ವಿಕಾಸದ ಹಾದಿಯಲ್ಲಿ ಜೇನು ಹುಳ ಸೃಷ್ಟಿಯಾಗಿಲ್ಲದೆ ಇದ್ದರೆ, ನಾವು ಇಂದು ಕಾಣುವ ಚೆಲುವಾದ ಪ್ರಕೃತಿ ರಮಣೀಯ ನಿಸರ್ಗ ಖಂಡಿತವಾಗಿಯೂ ಇರುತ್ತಿರಲಿಲ್ಲ. ನಾವು ಹೂ ಬಿಡುವ ಮರಗಳನ್ನೂ ಸಸ್ಯಗಳನ್ನೂ ನಮ್ಮ ಸುತ್ತಮುತ್ತ ನೆಟ್ಟು ಬೆಳೆಸುತ್ತೇವೆ. ಹೂಗಿಡಗಳಿಲ್ಲದ ಉದ್ಯಾನವಿಲ್ಲ. ಈ ಮರಗಿಡಗಳು ಬೆಳೆಯುವುದು ಅವುಗಳ ಹೂವಿನಿಂದ ಸೃಷ್ಟಿಯಾಗುವ ಕಾಯಿ, ನಂತರ ಹಣ್ಣು ಹಾಗೂ ಬೀಜಗಳಿಂದ. ಈ ಹೂವುಗಳಲ್ಲಿ ಪರಾಗ ಹಾಗೂ ಪರಾಗರೇಣುಗಳಿರುತ್ತವೆ. ಇವು ಇನ್ನೊಂದು ಮರ ಅಥವಾ ಗಿಡದ ಪರಾಗರೇಣುವಿನೊಡನೆ ಸೇರಿ, ಪರಾಗಸ್ಪರ್ಶ ಆದಾಗ ಅಲ್ಲಿ ಫಲ- ಬೀಜ ಬಿಡುತ್ತವೆ. ಹೀಗೆ ಒಂದು ಜಾತಿಯ ಮರಗಿಡಗಳು ಫಲಬಿಡಲು ಅಲ್ಲಿ ಪರಾಗಸ್ಪರ್ಶ ಆಗಲೇಬೇಕು. ಅದು ಆಗಬೇಕಾದರೆ ಜೇನುಹುಳಗಳು ಹಾರಾಡೇಕು. ಅವು ಹೂವಿನ ಮೇಲೆ ಕೂತು ಪರಾಗವನ್ನು ಹೀರುವಾಗ ಅವುಗಳ ಮೈ- ಕಾಲುಗಳಲ್ಲಿ ಪರಾಗರೇಣುಗಳು ಅಂಟಿಕೊಳ್ಳುತ್ತವೆ. ಈ ಪರಾಗರೇಣುಗಳನ್ನು ಅವು ಇನ್ನೊಂದು ಮರದ ಹೂವಿನತ್ತ ಸಾಗಿಸುತ್ತವೆ. ಹೀಗೆ ಮರಗಿಡಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತವೆ. ಇವು ಹೀಗೆ ಸಾವಿರಾರು ವರ್ಷಗಳಿಂದ ವಿಕಾಸದ ಹಾದಿಯಲ್ಲಿ ಮರಗಿಡಗಳನ್ನು ಬೆಳೆಸಿ ಪರಿಸರ ಸಮತೋಲನದಲ್ಲಿ ಇಡುತ್ತ ಬಂದಿವೆ.

ತಂಪು ತಂಪು ತರಕಾರಿ ಜ್ಯೂಸ್, ಬಾಯಿಗೂ ರುಚಿ, ದೇಹಕ್ಕೂ ಹಿತ 

ಜೇನುಗಳಲ್ಲಿ ನೂರಾರು ಜಾತಿಗಳಿವೆ, ವೈವಿಧ್ಯವಗಳಿವೆ. ಕೆಲವು ಸಸ್ಯಗಳಿಗೂ ಕೆಲವು ಬಗೆಯ ಜೇನುಗಳಿಗೂ ಅವಿನಾಭಾವ ಸಂಬಂಧವಿದೆ. ಅಂದರೆ, ಕೆಲವು ಸಸ್ಯಗಳ ಹೂವುಗಳ ಪರಾಗಸ್ಪರ್ಶ ಮಾಡಲು ಕೆಲವು ನಿರ್ದಿಷ್ಟ ಜಾತಿಯ ಜೇನುಗಳೇ ಆಗಬೇಕು. ಈ ಜೇನುಗಳು ಇಲ್ಲವಾದರೆ ಈ ಗಿಡಗಳು ಪರಾಗಸ್ಪರ್ಶ ನಡೆಸಲಾಗದೆ ಸತ್ತೇ ಹೋಗುತ್ತವೆ. ಈ ಗಿಡಗಳ ಪರಾಗವೇ ಈ ಜೇನುಗಳಿಗೆ ಆಹಾರವಾದ್ದರಿಂದ, ಅವು ಇಲ್ಲದೆ ಈ ಜೇನುಗಳ ಜಾತಿಯೂ ನಶಿಸಿಹೋಗುತ್ತವೆ. ಅದಕ್ಕಾಗಿಯೇ ನಮ್ಮ ಸ್ಥಳೀಯ ಜಾತಿಯ ಹೂವುಗಳ ಸಸ್ಯಗಳನ್ನು ನಾವು ಬೆಳೆಸದೆ ಹೋದರೆ, ವಿದೇಶಿ ಹೂಗಳ ಸಸ್ಯಗಳನ್ನು ಹೆಚ್ಚಾಗಿ ಇಲ್ಲಿ ನೆಡುತ್ತ ಹೋದರೆ, ನಮ್ಮ ಸ್ಥಳೀಯ ಜೇನು ತಳಿಗಳೂ ಬೆಳೆಯುವುದೇ ಇಲ್ಲ. ಆದರೆ ವಿದೇಶಿ ಜೇನುತಳಿ ಇಲ್ಲಿನ ವಾತಾವರಣಕ್ಕೆ ಉಳಿಯುವುದೇ ಇಲ್ಲ. 

ಬೇಸಿಗೆಯಲ್ಲಿ ಮಕ್ಕಳಿಗೆ ಈ ಜ್ಯೂಸ್ ನೀಡಲು ಮರೆಯಬೇಡಿ 
ಜೇನುಹುಳಗಳು ನಮ್ಮ ವಾತಾವರಣ ಸಮಸ್ಥಿತಿಯಲ್ಲಿ ಇವೆಯಾ ಇಲ್ಲವಾ ಎಂದು ತಿಳಿಸುವ ಮಾನದಂಡಗಳು, ನಿಮ್ಮ ಸುತ್ತಮುತ್ತ ಸಾಕಷ್ಟು ಜೇನುತಳಿ, ಜೇನುಹುಳಗಳು ಇವೆ ಎಂದಾದರೆ ನೀವು ಆರೋಗ್ಯಕರ ವಾತಾವರಣದಲ್ಲಿ ಇದ್ದೀರಿ ಎಂದರ್ಥ. ಇಲ್ಲವೆಂದಾದರೆ ನಿಮ್ಮ ವಾತಾವರಣ ಕಲುಷಿತಗೊಂಡಿದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಇನ್ನು ಜೇನುಹುಳಗಳು ಕೂಡ ನಮ್ಮ ಹಾಗೇ ಸಮಾಜಜೀವಿಗಳು. ಅವುಗಳಲ್ಲೂ ಮಕ್ಕಳನ್ನು ಹಡೆಯುವ ರಾಣಿ ಜೇನು, ಸದಾ ದುಡಿಯುತ್ತಿರುವ ಕೆಲಸಗಾರ ಜೇನುಗಳು, ಕೆಲಸವೇ ಮಾಡದೆ ಸೋಮಾರಿಯಾಗಿ ಉಳಿದು ರಾಣಿಗೆ ಮಕ್ಕಳನ್ನು ಕೊಡುವ ಗಂಡು ಜೇನುಗಳು- ಇವೆಲ್ಲ ಇವೆ.

ನಮ್ಮ ಹಿತ್ತಲ ಗಿಡದಲ್ಲೇ ಇದೆ ಕೊರೋನಾಗೆ ಮದ್ದು!

ಜೇನುಹುಳಗಳನ್ನು ಸಾಕಿ ಜೇನು ಕಸಿಯುವ ಮಾನವನ ಪ್ರವೃತ್ತಿಗೆ ಪ್ರಾಚೀನ ಈಜಿಪ್ಟ್‌, ಗ್ರೀಕ್‌ ನಾಗರಿಕತೆಗಳಿಂದಲೂ ನಿದರ್ಶನಗಳು ಸಿಕ್ಕುತ್ತವೆ. ನಮ್ಮ ಪುರಾಣ ಕತೆಗಳಲ್ಲಿ ಬರುವ ಅಮೃತವನ್ನು ಮಧು ಎಂದೂ ಕರೆಯುತ್ತಿದ್ದರು. ಅದು ಇದೇ ಜೇನು ಅಲ್ಲದೆ ಮತ್ತೇನಲ್ಲ ಎಂದು ಹೇಳುವವರೂ ಇದ್ದಾರೆ. ಸದ್ಯಕ್ಕೆ ಮನುಷ್ಯನಿಗೆ ಇರುವ ಅಮೃತ ಎಂದರೆ ಈ ಮಧುವೇ. ಇಂಥ ಮಧು ಉಳೀಯಬೇಕಿದ್ದರೆ ಜೇನುಹುಳವೂ ಉಳಿಯಬೇಕು, ನಮ್ಮ ಮರಗಿಡಗಳೂ ಉಳಿಯಬೇಕು.