ಈ ತಾಯಿ ಮುಟ್ಟಾದಾಗ ಬ್ರಹ್ಮಪುತ್ರ ಕೆಂಪಾಗುತ್ತದೆ!
ಅಸ್ಸಾಂನಲ್ಲಿರುವ ಕಾಮಾಕ್ಯ ದೇವಿ ಆಷಾಢದ ಮೂರು ದಿನ ಮುಟ್ಟಾಗುತ್ತಾಳೆ. ಈ ಸಂದರ್ಭದಲ್ಲಿ ಬ್ರಹ್ಮಪುತ್ರ ಕೆಂಪು ಬಣ್ಣದಲ್ಲಿ ಹರಿಯುತ್ತದೆ. ಈ ಕಾಮಾಕ್ಯ ದೇವಿ ಮಕ್ಕಳನ್ನು ಪಾಲಿಸುವ ಮಹಾಮಾತೆ. ಏನಿವಳ ಕತೆ?
ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಹತ್ತಿರದಲ್ಲಿ ಹರಿವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಈ ದೇವಾಲಯವನ್ನು ಬಂದ್ ಮಾಡಲಾಗುತ್ತದೆ. ಈ ದೇವಾಲಯದಲ್ಲಿರುವುದು ಶಕ್ತಿ ದೇವತೆಯ ಯೋನಿ. ಗರ್ಭಗುಡಿಯಲ್ಲಿರುವ ಈ ಯೋನಿಯನ್ನು ಹೆಣ್ಣಿನ ಮರುಸೃಷ್ಟಿ ಸಾಮರ್ಥ್ಯದ ಪ್ರತೀಕವಾಗಿ ಪರಿಗಣಿಸಿ ಪೂಜಿಸಲಾಗುತ್ತದೆ.
ಇಂಥದೊಂದು ವಿಶಿಷ್ಠ ದೇವಾಲಯವಿರುವುದು ಅಸ್ಸಾಂನ ಗುವಾಹಟಿ ನಗರದ ಪಶ್ಚಿಮದಲ್ಲಿ. ಇಲ್ಲಿನ ಕಾಮಾಕ್ಯ ದೇವಿಯ ದೇವಾಲಯಕ್ಕೆ ವರ್ಷವಿಡೀ ತಾಯಿಯಾಗಲು ಹಂಬಲಿಸುವ ಸಾವಿರಾರು ಹಿಂದೂ ಮಹಿಳೆಯರು ಭೇಟಿ ನೀಡುತ್ತಾರೆ. ಇಲ್ಲಿ ಯೋನಿಪೂಜೆ ನೆರವೇರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಅವರದು. ಹೌದು, ಗರ್ಭಗುಡಿಯಲ್ಲಿರುವುದು ಶಕ್ತಿ ದೇವತೆಯ ಯೋನಿ. ಸತಿಯ ದೇಹ 51 ಭಾಗಗಳಾಗಿ ದೇಶದ ಉದ್ದಗಲದಲ್ಲೂ ಬಿದ್ದು ವಿವಿಧ ಶಕ್ತಿಪೀಠಗಳಾಗಿ ಹೊಮ್ಮಿದಾಗ, ಇಲ್ಲಿ ಆಕೆಯ ಗರ್ಭ ಬಿದ್ದಿತು ಎಂಬ ಕತೆಯಿದೆ.
ಕಾಮಾಕ್ಯ ದೇವಿಯ ಕತೆ
ಶಿವ ಪುರಾಣ ಹಾಗೂ ವಿಷ್ಣು ಪುರಾಣಗಳಲ್ಲಿ ಸತಿಯ ಕತೆಯೊಂದಿದೆ. ಬ್ರಹ್ಮನ ಪುತ್ರ ದಕ್ಷ, ಶಕ್ತಿದೇವತೆ ತನ್ನ ಮಗಳಾಗಿ ಹುಟ್ಟಬೇಕೆಂದು ಯಜ್ಞ ಮಾಡುತ್ತಾನೆ. ಆಕೆಗೆ ಸತಿ ಎಂದು ಹೆಸರಿಸುತ್ತಾನೆ. ಸತಿ ವಯಸ್ಸಿಗೆ ಬಂದಾಗ ಆಕೆ ಶಿವನನ್ನು ಪ್ರೇಮಿಸುತ್ತಾಳೆ. ಆದರೆ, ಶಿವನ ಅಸಂಪ್ರದಾಯಿಕ ಜೀವನಶೈಲಿ, ಸಮಾಜದ ಕಟ್ಟಳೆಗೆ ವಿರುದ್ಧವಾಗಿ ಬದುಕುವ ರೀತಿಯಿಂದಾಗಿ ದಕ್ಷನಿಗೆ ಆತ ಇಷ್ಟವಿರುವುದಿಲ್ಲ. ಅದರಲ್ಲೂ ಒಮ್ಮೆ ಶಿವ ದಕ್ಷನನ್ನು ಕಡೆಗಣಿಸಿ ಆತನ ಮತ್ತಷ್ಟು ದ್ವೇಷಕ್ಕೆ ಗುರಿಯಾಗುತ್ತಾನೆ. ಹೀಗಿದ್ದರೂ ಸತಿ ಮಾತ್ರ ವಿವಾಹವಾದರೆ ಶಿವನನ್ನೇ ಎಂದು ದಕ್ಷನನ್ನು ಧಿಕ್ಕರಿಸಿ ಮದುವೆಯಾಗುತ್ತಾಳೆ. ಇದರಿಂದ ಕೋಪಗೊಂಡ ದಕ್ಷ ಶಿವ ಹಾಗೂ ಸತಿ ಇಬ್ಬರಿಗೂ ಶಿಕ್ಷೆ ನೀಡಲು ಯೋಜಿಸುತ್ತಾನೆ.
ಈ ರಾಶಿಯವರು ಭಯಂಕರ ಫ್ಲರ್ಟ್‌ಗಳಂತೆ!
ದಕ್ಷನ ಯಜ್ಞ
ದಕ್ಷ ಒಂದು ದೊಡ್ಡ ಯಜ್ಞ ಹಮ್ಮಿಕೊಂಡು ಅದಕ್ಕೆ ಶಿವ ಪಾರ್ವತಿ ಹೊರತು ಪಡಿಸಿ ಮತ್ತೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆಯೇ ಆದ್ದರಿಂದ ಈ ಯಜ್ಞಕ್ಕೆ ಹೋಗೋಣವೆಂದು ಸತಿ ಶಿವನಿಗೆ ಕೇಳಿಕೊಳ್ಳುತ್ತಾಳೆ. ಆದರೆ ಶಿವ ಮಾತ್ರ, ನಿನ್ನ ತಂದೆ ನನಗೆ ಅವಮಾನಿಸಬೇಕೆಂದೇ ಹೀಗೆ ಮಾಡಿದ್ದಾನೆ. ನಾನಂತೂ ಬರುವುದಿಲ್ಲ. ಆದರೆ, ನಿನ್ನನ್ನು ಹೋಗಬೇಡವೆನ್ನಲು ನನ್ನಲ್ಲಿ ಕಾರಣಗಳಿಲ್ಲ ಎನ್ನುತ್ತಾನೆ. ಹೀಗಾಗಿ ಸತಿಯೊಬ್ಬಳೇ ದಕ್ಷನ ಯಜ್ಞಕ್ಕೆ ಹೋಗುತ್ತಾಳೆ. ಅಲ್ಲಿ ಹೋದ ಬಳಿಕ ಸತಿಗೆ ತನ್ನನ್ನು ಹಾಗೂ ಶಿವನನ್ನು ಬೇಕೆಂದೇ ಆಹ್ವಾನಿಸಿಲ್ಲವೆಂಬುದು ಖಾತ್ರಿಯಾಗಿ ಬಹಳ ಅವಮಾನವಾಗುತ್ತದೆ. ಇಂಥ ಅವಮಾನ ಸಹಿಸುವುದಕ್ಕಿಂತ ನಾನು ಸಾಯಲು ಇಚ್ಛಿಸುತ್ತೇನೆ ಎನ್ನುತ್ತಾಳೆ ಸತಿ.
ಯಜ್ಞಕ್ಕೆ ಹಾರುವ ಸತಿ
ಹೀಗೆ ನಿರ್ಧರಿಸಿದವಳೇ ಯಜ್ಞಕುಂಡಕ್ಕೆ ಹಾರುತ್ತಾಳೆ ಸತಿ. ಆದರೆ ಅಗ್ನಿಗೆ ಸತಿಯನ್ನು ಸುಡುವ ಸಾಮರ್ಥ್ಯವಿರುವುದಿಲ್ಲ. ಹಾಗಾಗಿ ಆಕೆ ತನ್ನ ಜೀವ ತಾನೇ ತೆಗೆದುಕೊಳ್ಳುತ್ತಾಳೆ, ಶಿವನಿಗೆ ಎಷ್ಟು ದುಃಖವಾಗುತ್ತದೆಂದರೆ ಆತ ಸತಿಯ ದೇಹವನ್ನು 12 ವರ್ಷಗಳು ಕಾಪಿಡುತ್ತಾನೆ. ನಂತರದಲ್ಲಿ ಜಗತ್ತನ್ನೇ ಕೊನೆಗೊಳಿಸಲು ತಾಂಡವವಾಡುವ ನಿರ್ಧಾರಕ್ಕೆ ಬರುತ್ತಾನೆ. ಆಗ ವಿಷ್ಣುವು ಸುದರ್ಶನ ಚಕ್ರ ಬಳಸುತ್ತಾನೆ. ಅದು ಸತಿಯ ದೇಹವನ್ನು 51 ಭಾಗವಾಗಿಸಿ ಭಾರತದ ವಿವಿಧೆಡೆ ಬೀಳುವಂತೆ ಮಾಡುತ್ತದೆ. ಈ ಸ್ಥಳಗಳನ್ನೆಲ್ಲ ಇಂದು ಶಕ್ತಿಪೀಠ ಎನ್ನಲಾಗುತ್ತದೆ. ಅವುಗಳಲ್ಲೊಂದು ಶಕ್ತಿ ಪೀಠ ಕಾಮಾಕ್ಯ, ಇಲ್ಲಿಯೇ ಸತಿಯ ಗರ್ಭ ಬಿದ್ದುದು ಎಂಬ ನಂಬಿಕೆಯಿದೆ.
ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು?
ತಂತ್ರಕ್ಕೆ ಹೆಸರು
ಮಗು ಸೇರಿದಂತೆ ಬೇಡಿದ ವರಗಳನ್ನೆಲ್ಲ ಕರುಣಿಸುವ ತಾಯಾಗಿ ಗುರುತಿಸಿಕೊಂಡಿರುವ ಕಾಮಾಕ್ಯದ ವಿಶೇಷವೆಂದರೆ ಕಲ್ಲಿನಿಂದ ತಯಾರಿಸುವ ಇಲ್ಲಿನ ಕುಂಕುಮ. ಕಾಮಾಕ್ಯ ಸಿಂಧೂರ್ ಎಂದೇ ಹೆಸರಾಗಿರುವ ಇದನ್ನು ಮಹಿಳೆಯರು ಬಹಳ ಭಕ್ತಿಭಾವದಿಂದ ಹಣೆಗಿರಿಸಿಕೊಳ್ಳುತ್ತಾರೆ. ಈ ದೇವಾಲಯ ತಂತ್ರಮಂತ್ರಗಳಿಗೂ ಜನಪ್ರಿಯವಾಗಿದ್ದು, ಇಲ್ಲಿ ನೂರಾರು ಸಾಧುಗಳು, ಅಗೋರಿಗಳು ಮಾಟಮಂತ್ರ ತೆಗೆವ ಕಾರ್ಯದಲ್ಲಿ ತೊಡಗಿದ್ದಾರೆ. ಭೂತದೆವ್ವ ಬಿಡಿಸುವುದು, ನೆಗೆಟಿವ್ ಎನರ್ಜಿ ತೊಡೆದು ಹಾಕುವುದು ಮುಂತಾದ ಕಾರ್ಯಗಳನ್ನೂ ಇಲ್ಲಿ ಅಘೋರಿಗಳು ನಡೆಸುತ್ತಾರೆ. ಹಾಗಾಗಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ದೊಡ್ಡದಿದೆ. ಇಲ್ಲಿ ಪ್ರಾಣಿ ಬಲಿ ಸಾಮಾನ್ಯವಾದರೂ ಹೆಣ್ಣು ಪ್ರಾಣಿಯನ್ನು ಬಲಿ ಕೊಡುವುದು ನಿಷೇಧಿಸಲಾಗಿದೆ.