ಭಾರತದಲ್ಲಿ ಭಿನ್ನ ಸಂಪ್ರದಾಯಗಳು ಈಗ್ಲೂ ಜಾರಿಯಲ್ಲಿವೆ. ವಧು – ವರರ ಆಯ್ಕೆಯಲ್ಲೂ ಸಾಕಷ್ಟು ವೈಶಿಷ್ಟ್ಯವಿದೆ. ಒಂದ್ಕಡೆ ವರನೇ ಹರಾಜಿಗೆ ಸಿಗ್ತಾನೆ. ಮದುವೆ ಆಗದ ಹುಡುಗರಿಗೆ ಇದೊಂದು ಒಳ್ಳೆ ಅವಕಾಶ.
ಮಗನ ಮದುವೆ (Marriage) ಮಾಡ್ಬೇಕು ಹೆಣ್ಣು ಸಿಕ್ತಿಲ್ಲ ಎನ್ನುವ ಪಾಲಕರಿಗೆ ಇಲ್ಲೊಂದು ಅವಕಾಶ ಇದೆ. ನಿಮ್ಮ ಮಗನನ್ನು ನೀವು ಮಾರಾಟಕ್ಕೆ ಇಡ್ಬಹುದು. ಹೆಣ್ಮಕ್ಕಳ ಪಾಲಕರು ನಿಮ್ಮ ಮಗನ ಮೇಲೆ ಬಿಡ್ ಮಾಡಿ, ಖರೀದಿ ಮಾಡ್ತಾರೆ. ಭಾರತದಲ್ಲಿ ಈಗ ಮದುವೆ ಆಗೋಕೆ ಹೆಣ್ಮಕ್ಕಳು ಸಿಕ್ತಿಲ್ಲ ಎನ್ನುವ ದೂರಿದೆ. ಅನೇಕ ಯುವಕರು 35ರ ಗಡಿ ದಾಡಿದ್ರೂ ಅವಿವಾಹಿತರಾಗಿದ್ದಾರೆ. ನಿಮಗೆ ಸೂಕ್ತ ಹುಡುಗಿ ಬೇಕು ಎಂದಾದ್ರೆ ನೀವು ವರನ ಮಾರ್ಕೆಟ್ಗೆ ಲಗ್ಗೆ ಇಡ್ಬಹುದು. ಅಲ್ಲಿ ನಿಮ್ಮನ್ನು ಸೂಕ್ತ ಬೆಲೆಗೆ ಖರೀದಿ ಮಾಡುವ ಹುಡುಗಿ ಸಿಕ್ಕಿದ್ರೂ ಸಿಗ್ಬಹುದು. ಭಾರತದಲ್ಲಿ ಈ ಹಿಂದೆ ವಧು – ವರರ ವೇದಿಕೆ, ಮ್ಯಾಟ್ರಿಮೋನಿಯಾ ಅಂತೆಲ್ಲ ಆನ್ಲೈನ್ ಸೈಟ್ ಇರ್ಲಿಲ್ಲ. ವಧು – ವರನ ಹುಡುಕಾಟ ಬಹಳ ಕಷ್ಟವಾಗಿತ್ತು. ಹೆಣ್ಮಕ್ಕಳ ಪಾಲಕರು, ದೂರದ ಊರುಗಳಿಗೆ ಹೋಗಿ, ಮಗಳಿಗೆ ವರನನ್ನು ಹುಡುಗುವ ಸ್ಥಿತಿ ಇತ್ತು. ಅಂಥವರಿಗೆ ಅನುಕೂಲ ಆಗ್ಲಿ ಎನ್ನುವ ಕಾರಣಕ್ಕೆ ವರನ ಮಾರುಕಟ್ಟೆ ಶುರುವಾಗಿತ್ತು. ಅದೇ ಸಂಪ್ರದಾಯ ಈಗ್ಲೂ ಜಾರಿಯಲ್ಲಿದೆ
ಎಲ್ಲಿ ಈ ವರನ ಮಾರುಕಟ್ಟೆ ನಡೆಯುತ್ತೆ ಗೊತ್ತಾ? : ಬಿಹಾರ (Bihar)ದ ಮಧುಬನಿಯಲ್ಲಿರುವ ಸೌರತ್ ಸಭಾ ಎಂಬ ಸ್ಥಳದಲ್ಲಿ ವರನ ಮಾರುಕಟ್ಟೆ ನಡೆಯುತ್ತೆ. ಹುಡುಗಿಯ ಕುಟುಂಬ ಈ ಮಾರುಕಟ್ಟೆಗೆ ಬಂದು ಹುಡುಗನಿಗೆ ಬಿಡ್ ಮಾಡುತ್ತೆ. ಸೌರತ್ ಸಭಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ವರನಿಗೆ ಸರಿಯಾದ ದರ ಪಟ್ಟಿ ಫಿಕ್ಸ್ ಮಾಡಿ ಸೇಲ್ ಮಾಡಲಾಗುತ್ತೆ. ಜೂನ್-ಜುಲೈ ತಿಂಗಳಲ್ಲಿ ಈ ಮಾರುಕಟ್ಟೆ ನಡೆಯುತ್ತದೆ.
ಸೌರತ್ ಸಭಾ ವರನ ಮಾರುಕಟ್ಟೆಯಲ್ಲಿ, ಹುಡುಗನ ಅರ್ಹತೆ, ಕುಟುಂಬ ಸ್ಥಿತಿ, ಅವನ ಆದಾಯ, ಜಾತಕ ಇತ್ಯಾದಿಗಳನ್ನು ನೋಡಿ, ಪರಿಶೀಲನೆ ಮಾಡಿದ ನಂತ್ರ ಹುಡುಗಿ ಕಡೆಯವರು ಖರೀದಿ ಮಾಡ್ತಾನೆ. ಮಧುಬನಿಯ ಈ ಮಾರುಕಟ್ಟೆಗೆ ಅರ್ಹ ಹುಡುಗರು ಮತ್ತು ಹುಡುಗಿಯರು ಬರ್ತಾರೆ.
ಯಾವಾಗಿನಿಂದ ಜಾರಿಯಲ್ಲಿದೆ ಈ ಪದ್ಧತಿ : ಇದು ಇತ್ತೀಚಿನದ್ದಲ್ಲ. ದುಲ್ಹಾ ಬಜಾರ್ನ ಸಂಪ್ರದಾಯ 700 ವರ್ಷಗಳಿಂದಲೂ ಜಾರಿಯಲ್ಲಿದೆ ಅಂದ್ರೆ ಅಚ್ಚರಿಯಾಗುತ್ತೆ. ಮೈಥಿಲ್ ಬ್ರಾಹ್ಮಣರು ಮತ್ತು ಕಾಯಸ್ಥರು ಇದನ್ನು ಪ್ರಾರಂಭಿಸಿದರು ಎನ್ನಲಾಗಿದೆ. ಹಿಂದಿನ ಕಾಲದಲ್ಲಿ, ಈ ಮಾರುಕಟ್ಟೆಯಲ್ಲಿ ಗುರುಕುಲದಿಂದ ಈ ಕೂಟಕ್ಕೆ ಹುಡುಗರನ್ನು ಕರೆತರಲಾಗುತ್ತಿತ್ತು. ಇಲ್ಲಿ ಹುಡುಗಿಯ ಪೋಷಕರು ತಮ್ಮ ಹೆಣ್ಣುಮಕ್ಕಳ ಮದುವೆಗೆ ಹುಡುಗರನ್ನು ಆಯ್ಕೆ ಮಾಡುತ್ತಿದ್ದರು. ಹಿಂದೆ ಬ್ರಾಹ್ಮಣರು ಮತ್ತು ಕಾಯಸ್ಥರಿಗೆ ಮಾತ್ರ ಮೀಸಲಾಗಿದ್ದ ಈ ಮಾರುಕಟ್ಟೆ ಈಗ ಎಲ್ಲರಿಗೂ ತೆರೆದುಕೊಂಡಿದೆ. ಈ ಮಾರುಕಟ್ಟೆಯಲ್ಲಿ, ಹುಡುಗಿಯ ಕುಟುಂಬ, ಹುಡುಗನ ಕುಟುಂಬವನ್ನು ಸಂಪೂರ್ಣ ಪರಿಶೀಲಿಸಿದ ನಂತ್ರವೇ ಮದುವೆ ಫಿಕ್ಸ್ ಮಾಡುತ್ತೆ.
ಈ ಮಾರುಕಟ್ಟೆಯಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತೆ? : ಮೊದಲೇ ಹೇಳಿದಂತೆ ಹುಡುಗನ ಶಾಲೆ ಸರ್ಟಿಫಿಕೆಟ್ ನಿಂದ ಹಿಡಿದು ಜಾತಿ ಪತ್ರದವರೆಗೆ ಎಲ್ಲವನ್ನೂ ಒದಗಿಸಬೇಕು. ಆದ್ರೆ ಹುಡುಗಿ ಹಾಗೂ ಹುಡುಗನ ಗೋತ್ರ ಹೊಂದಿಕೆಯಾದ್ರೆ ಮದುವೆ ಮಾಡಲು ಪಾಲಕರು ಮುಂದಾಗ್ತಾರೆ.
ವಧು ಮನೆಗೆ ಹೋಗ್ತಾನೆ ವರ : ಭಾರತದಲ್ಲಿ ಅನೇಕ ಭಿನ್ನ ಸಂಪ್ರದಾಯಗಳಿವೆ. ಬಹುತೇಕ ಜಾಗದಲ್ಲಿ ಮದುವೆಯಾದ ವಧು, ವರನ ಮನೆಗೆ ಹೋಗ್ತಾಳೆ. ಆದ್ರೆ ಮೇಘಾಲಯದಲ್ಲಿರುವ ಖಾಸಿ ಸಮುದಾಯ ಭಿನ್ನ ಪದ್ದತಿಯನ್ನು ಅನುಸರಿಸುತ್ತದೆ. ಇಲ್ಲಿ ವಧು ಬದಲು ವರ ಮನೆ ಬಿಡ್ತಾನೆ. ಮದುವೆಯಾದ್ಮೇಲೆ ವರ, ವಧು ಮನೆಯಲ್ಲಿ ವಾಸ ಮಾಡ್ಬೇಕು. ಹುಡುಗಿಯರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ಈ ಸಮುದಾಯದಲ್ಲಿ, ಹುಡುಗಿಯರಿಗೆ ಪೋಷಕರ ಆಸ್ತಿಯ ಮೇಲೆ ಮೊದಲ ಹಕ್ಕಿದೆ.
