ರಮಣೀಯ ಪ್ರಕೃತಿ, ಆಹ್ಲಾದಕರ ವಾತಾವರಣ, ಭೂಲೋಕದ ಸ್ವರ್ಗ ಅಂದರೆ ಇದೇ ಅನ್ನುವಷ್ಟುಚೆಂದ. ಆದರೆ ಈ ಖುಷಿ ಯಾವ ಹೊತ್ತಲ್ಲಿ ಬೇಕಿದ್ದರೂ ದಿಗಿಲು, ಆಘಾತ, ನೋವಿನ ಕ್ಷಣವಾಗಿ ಬದಲಾಗಬಹುದು. ಅದು ಕಾಶ್ಮೀರ. ಅಲ್ಲಿನ ಒಳ ಹೊರಗಿನ ನೋಟ ಇಲ್ಲಿದೆ.

- ಡೆಲ್ಲಿ ಮಂಜು

ಮೇಘಸ್ಫೋಟದ ಸುದ್ದಿ ಮುಗಿಸಿ, ಬಾಲ್ಟಾಲ್‌ ಬೇಸ್‌ ಕ್ಯಾಂಪ್‌ನಲ್ಲಿ ಕಾಶ್ಮೀರ ಪೊಲೀಸರ ಜೊತೆ ತಳ್ಳಾಡಿಸಿಕೊಂಡು ಸೋನಾ ಮಾಗ್‌ರ್‌ನಲ್ಲಿ ನಿದ್ರೆ ಮಾಡಿ, ಕಾಶ್ಮೀರದ ಕಣಿವೆಯಲ್ಲಿ ಸಿಂಧೂ ನದಿ ಜೊತೆ ಜೊತೆಗೆ ಇನ್ನೋವಾ ವಾಹನದಲ್ಲಿ ಶ್ರೀನಗರ ತಲುಪಿದಾಗ ಹೆಚ್ಚು ಕಡಿಮೆ ಬಿಸಿಲಿನ ತಾಪ ಅಲ್ಲೂ ಇತ್ತು. ಶ್ರೀನಗರದ ಮುಖ್ಯ ಆಕರ್ಷಣೆ ದಾಲ್‌ ಲೇಕ್‌. ಅಲ್ಲಿರೋ 30ಕ್ಕೂ ಹೆಚ್ಚು ಘಾಟ್‌ಗಳಲ್ಲಿ ನಿಂತು ದಾಲ್‌ ಸರೋವರ ಕಣ್ಣು ತುಂಬಿಕೊಳ್ಳೋದೇ ಒಂದು ಅದ್ಭುತ. ಅಲ್ಲೇ ಒಂದೆರಡು ತಾಸು ಸಮಯ ಕಳೆದರೆ ಕಾಶ್ಮೀರದ ರಾಜ ಕುಟುಂಬ ಕರುಣ್‌ ಸಿಂಗ್‌ರ ಮನೆ, ಅವರಿಗೆ ಸೇರಿದ್ದು ಎನ್ನಲಾದ ಹೊಟೇಲ್‌, ಸರೋವರದ ಮಧ್ಯದಲ್ಲಿ ಬರುವ ತೇಲಾಡುವ ಮೀನಾ ಮಾರ್ಕೆಟ್‌ ಎಲ್ಲವೂ ನೋಡಬಹುದು. ಲೇಕ್‌ನ ಮಧ್ಯಭಾಗಕ್ಕೆ ಬಂದು ಪನೀರ್‌ ಟಿಕ್ಕಾ, ಮೀನು ಕೊಟ್ಟು ಹೋಗುವ ಮಿನಿ ಹೋಟೆಲ್‌ ಕೂಡ ದೋಣಿಯಲ್ಲಿ ಬಂದು ಹೋಯ್ತು. ಇಷ್ಟರ ನಡುವೆ ಘಾಟ್‌ 10ರ ಬಳಿ ಪೋಸ್ಟ್‌ ಆಫೀಸ್‌ ತೇಲಾಡುತ್ತಿತ್ತು.

ಪ್ರವಾಸಿಗರ ಆಕರ್ಷಣೆ ಸಲುವಾಗಿ ದಾಲ್‌ ಸರೋವರದಲ್ಲಿ ತೇಲಾಡುವ ಪೋಸ್ಟ್‌ ಆಫೀಸ್‌ ಅನ್ನು ಕಾಶ್ಮೀರ ಸರ್ಕಾರ ಮಾಡಿದೆ. ಇಲ್ಲಿ ನಿಜವಾಗಿಯೂ ಡಾಕ್‌ (ಅಂಚೆ) ಕೆಲಸ ಮಾಡುತ್ತೆ. ಜೊತೆಗೆ ಮತ್ತೊಂದು ಅಚ್ಚರಿ ಅನ್ನಿಸಿದ್ದು ಶ್ರೀನಗರ ಆಗಲಿ, ಸೋನಾ ಮಾರ್ಗ ಆಗಲಿ ಬೇಕಾಬಿಟ್ಟಿಮದ್ಯ ಸಿಗೋದಿಲ್ಲ ಅನ್ನೋದು. ಮುಸ್ಲಿಂ ಬಾಹುಳ್ಯ ಇರುವ ಈ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೂ ಹೆಚ್ಚು ಅವಕಾಶ ಇಲ್ಲ. ಪ್ರವಾಸಿಗರಿಗಾಗಿ ಇಡೀ ಶ್ರೀನಗರದಲ್ಲಿ ಎರಡು ಮದ್ಯದ ಶಾಪ್‌ಗಳು ಇವೆ.

ಹೆಚ್ಚು ಕಡಿಮೆ ಆರು ಗಂಟೆಗಳ ಕಾಲ ನಮ್ಮ ಡ್ರೈವರ್‌ ಬಾಯ್‌ ಕಾಶ್ಮೀರ ಕುರಿತಾಗಿ ಹೇಳಿದ್ದ ಮಾತುಗಳು, 370 ವಿಧಿ ತೆರವು ಮಾಡಿದ್ದು ಬಡವರಿಗೆ ವರವಾಯಿತು, ಶ್ರೀಮಂತರಿಗೆ ಶಾಪವಾಯ್ತು, ಈ ಬಾರಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಿದೆ ಅನ್ನೋ ದಾಲ್‌ ಲೇಕ್‌ನ ದೋಣಿ ನಡೆಸುವವನ ಮಾತುಗಳು ಕಾಶ್ಮೀರದ ಬಗ್ಗೆ ಮತ್ತಷ್ಟುಹೆಮ್ಮೆ ಅನ್ನಿಸುವಂತೆ ಮಾಡಿತು. ಆದರೆ ನಾವೆಲ್ಲಾ ಓಡಾಡಿ ಶ್ರೀನಗರದ ಏರ್‌ಪೋರ್ಚ್‌ನಲ್ಲಿ ಇನ್ನೇನು ಬೋರ್ಡಿಂಗ್‌ ಆಗಬೇಕು, ‘ಭಯೋತ್ಪಾದಕರ ಅಟ್ಟಹಾಸ, ಕಾಶ್ಮೀರದ ಪೊಲೀಸ್‌ ಅಧಿಕಾರಿ ಹುತಾತ್ಮ ಅಂತ ಬಂದ ಟ್ವೀಟ್‌ ಮತ್ತೆ ತಲೆ ಗಿರ್‌ ಅನ್ನುವಂತೆ ಮಾಡಿತು.

==========

ಆಕರ್ಷಕ ಕಾಶ್ಮೀರಿ ಹೌಸ್‌ಬೋಟ್‌ಗಳು
ಕಾಶ್ಮೀರದಲ್ಲಿರುವ ಈ ಹೌಸ್‌ಬೋಟ್‌ಗಳು ಕಾಶ್ಮೀರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕಾಶ್ಮೀರಿ ಹೌಸ್‌ಬೋಟ್‌ಗಳು ತೇಲುವ ಮನೆಗಳಾಗಿವೆ. ಅವುಗಳು ದಾಲ್ ಸರೋವರ, ಝೇಲಂ ಸರೋವರ ಮತ್ತು ನಾಗಿನ್ ಸರೋವರದಂತಹ ಕೆಲವು ಸುಂದರವಾದ ಸರೋವರಗಳ ದಡದಲ್ಲಿ ನೆಲೆಗೊಂಡಿವೆ. ಹೌಸ್‌ಬೋಟ್‌ಗಳು ನೀರಿನ ಮೇಲೆ ಹೋಟೆಲ್ ಮತ್ತು ಹೋಂಸ್ಟೇಗಳ ಮಿಶ್ರಣದಂತಿವೆ. ಕಾಶ್ಮೀರದ ಪ್ರಸ್ತಾಪ ಬಂದಾಗಲೆಲ್ಲ, ಮಿನುಗುವ ಸರೋವರಗಳ ಮೇಲಿನ ಆ ವರ್ಣರಂಜಿತ ಹೌಸ್‌ಬೋಟ್‌ಗಳ ಬಗ್ಗೆ ಯೋಚಿಸದೆ ಇರಲು ಸಾಧ್ಯವಿಲ್ಲ. ದಾಲ್ ಸರೋವರದ ಬೋಟ್‌ಹೌಸ್‌ನಲ್ಲಿ ಒಂದೆರಡು ದಿನಗಳನ್ನು ಕಳೆಯುವುದು ಕಾಶ್ಮೀರಕ್ಕೆ ಪ್ರತಿ ವಿಹಾರಕ್ಕೆ ಬರುವವರ ಕನಸಾಗಿರುತ್ತದೆ. 

ಕಾಶ್ಮೀರಿ ಹೌಸ್‌ಬೋಟ್‌ಗಳ ಇತಿಹಾಸವು 13ನೇ ಶತಮಾನದಷ್ಟು ಹಿಂದಿನದು. ಈ ಹೌಸ್‌ಬೋಟ್‌ಗಳನ್ನು ಪ್ರವಾಸೋದ್ಯಮಕ್ಕಾಗಿ ಅಲ್ಲ, ವೈಯಕ್ತಿಕ ಕಾರಣಗಳಿಗಾಗಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಸರೋವರದ ಮೇಲೆ ವಾಸಿಸಲು ದೋಣಿಗಳನ್ನು ನಿರ್ಮಿಸುವ ಜನರಲ್ಲಿ ಇದು ದೈನಂದಿನ ಜೀವನ ಶೈಲಿಯಾಗಿತ್ತು. ಆರಂಭಿಕ ದಿನಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ ಮಹಾರಾಜರು ಬ್ರಿಟಿಷರಿಗೆ ಆಸ್ತಿ ಖರೀದಿಸಲು ಅವಕಾಶ ನೀಡದ ಕಾರಣ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳಿಗೆ ಮಾತ್ರ ಹೌಸ್‌ಬೋಟ್‌ಗಳನ್ನು ನಿರ್ಮಿಸಲು ಮತ್ತು ಉಳಿಯಲು ಅನುಮತಿಸಲಾಯಿತು. ಇಂದು, ಕಾಶ್ಮೀರ ಕಣಿವೆಯಲ್ಲಿ ಸಾವಿರಕ್ಕೂ ಹೆಚ್ಚು ಹೌಸ್‌ಬೋಟ್‌ಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಬಳಸಲ್ಪಡುತ್ತವೆ.