ಜಪಾನ್‌ನಲ್ಲಿ Penis Festival ! ಈ ವಿಚಿತ್ರ ಆಚರಣೆ ಬಗ್ಗೆ ನಿಮಗ್ಗೊತ್ತಾ?
ಗುಪ್ತಾಂಗಳ ಬಗ್ಗೆ ಮಾತನಾಡೋದು ಅಂದ್ರೇನೆ ತಪ್ಪೆಂದು (Wrong) ಪರಿಗಣಿಸಲಾಗುತ್ತದೆ. ಹೀಗಿರುವಾಗ ಇಲ್ಲೊಂದೆಡೆ ಖುಲ್ಲಾಂಖುಲ್ಲ ಅಗಿ ಶಿಶ್ನದ ಉತ್ಸವ (Penis Festival) ವನ್ನೇ ಮಾಡ್ತಾರೆ. ಎಲ್ಲಿದು ? ಏನಿದರ ವಿಶೇಷತೆ ತಿಳಿಯೋಣ.
ಜಪಾನಿನ (Japan) ಕವಾಸಾಕಿ (Kavasaki) ನಗರದ ಪ್ರಜೆಗಳು ವಿಚಿತ್ರ ಉತ್ಸವವೊಂದಕ್ಕೆ ಸಜ್ಜಾಗುತ್ತಿದ್ದಾರೆ. ಅದೇ 'ಶಿಶ್ನ ಉತ್ಸವ'. ಇಂಗ್ಲಿಷ್‌ನಲ್ಲಿ ಇದು 'ಪೆನಿಸ್ ಫೆಸ್ಟಿವಲ್.' (Penis Festival) ಇದನ್ನು ಜಪಾನಿ ಭಾಷೆಯಲ್ಲಿ 'ಕನಮಾರಾ ಮತ್ಸುರಿ' (Kanamara Matsuri) ಎಂದು ಕರೆಯುತ್ತಾರೆ. 'ಕನಮಾರಾ ಮತ್ಸುರಿ' ಎಂದರೆ 'ಉಕ್ಕಿನ ಶಿಶ್ನದ ಉತ್ಸವ' ಎಂದೂ ಹೇಳಬಹುದು. ಪ್ರತಿ ವರ್ಷ ಏಪ್ರಿಲ್ ಮೊದಲ ಭಾನುವಾರದಂದು ಕವಾಸಕಿಯ ಕನಯಾಮಾ (Kanayama) ದೇಗುಲದಲ್ಲಿ ಇದು ನಡೆಯುತ್ತದೆ. ಜಪಾನಿನಲ್ಲಿ ಶಿಂಟೋ (Shinto) ಪಂಥದವರು ಅಧಿಕ. ಈ ಶಿಂಟೋಗಳು ಆರಾಧಿಸುವ 'ಕನಯಾಮಾ-ಹಿಕೊ' ಮತ್ತು 'ಕನಯಾಮಾ-ಹಿಮ್' ದೇವತೆಗಳ ಸುತ್ತ ಈ ಹಬ್ಬ ಕೇಂದ್ರೀಕೃತವಾಗಿದೆ. ಈ ದೇವತೆಗಳು ಮನುಷ್ಯನ ಲೈಂಗಿಕ ಆರೋಗ್ಯ (Sexual Health) ಮತ್ತು ಲೋಹಶಾಸ್ತ್ರದ ಜೊತೆಗೆ ಸಂಬಂಧ ಹೊಂದಿದವರಂತೆ.
ಈ ಹಬ್ಬದಲ್ಲಿ ಸಂಭ್ರಮಿಸುವವರು ಹೆಚ್ಚಾಗಿ ಫಲವತ್ತತೆ ಮತ್ತು ಆರೋಗ್ಯಕರ ಮಕ್ಕಳಿಗಾಗಿ ಪ್ರಾರ್ಥಿಸುವ ವಿವಾಹಿತ ದಂಪತಿಗಳು, ಲೈಂಗಿಕ ಕಾರ್ಯಕರ್ತರು, ಲೈಂಗಿಕ ಮುಕ್ತತೆಯನ್ನು ಪ್ರತಿಪಾದಿಸುವ LGBTQ ಗುಂಪಿನ ಜನರು. ಇತ್ತೀಚೆಗೆ ಈ ಹಬ್ಬದ ವೈಶಿಷ್ಟ್ಯವನ್ನು ನೋಡಲು ಬರುವವರಿಂದಾಗಿ ಇದು ಭಾರಿ ಜನಸಂದಣಿಯನ್ನು ಕಾಣುತ್ತದೆ.
Travel Tips : ಈ ದೇಶಕ್ಕೆ ಹೋಗಲು ವಿಮಾನ ನಿಲ್ದಾಣವೇ ಇಲ್ಲ..!
ಹಬ್ಬದಲ್ಲಿ ಏನು ಮಾಡುತ್ತಾರೆ?
ಕನಯಾಮಾ ದೇಗುಲದ ಪ್ರದರ್ಶನ ಸಭಾಂಗಣದೊಳಗೆ ಲೈಂಗಿಕ ಸಂಪ್ರದಾಯಗಳನ್ನು ವಿವರಿಸುವ ಚಿತ್ರಗಳು, ಪವಿತ್ರ ವಸ್ತುಗಳು ಮತ್ತು ಪುಸ್ತಕಗಳಿರುತ್ತವೆ. ಲೈಂಗಿಕತೆಯೇ ಪ್ರಧಾನವಾಗಿರುವ ದೇವತೆಗಳ ಚಿತ್ರಗಳಿವೆ. ಜಾತ್ರೆಯಲ್ಲಿ ಪುರುಷರು ಮತ್ತು ಮಹಿಳೆಯರು ಸೊಂಟಕ್ಕೆ ಕೃತಕ ಲಿಂಗಗಳನ್ನು ಕಟ್ಟಿಕೊಂಡು ಮೋಜು ಮಾಡುತ್ತಾ ಓಡಾಡುತ್ತಿರುತ್ತಾರೆ.
ಈ ಹಬ್ಬದಲ್ಲಿ ಶಿಶ್ನದ ಆಕೃತಿಯನ್ನು ಹೊಂದಿರುವ ಕಲಾಕೃತಿಗಳು, ಖಾದ್ಯಗಳು, ಟೋಪಿಗಳು, ಬೊಂಬೆಗಳು, ವೇಷಭೂಷಣಗಳು ಮಾರಾಟವಾಗುತ್ತವೆ. ಶಿಶ್ನದ ಆಕಾರದ ಚಲಿಸುವ ಗುಡಿಗಳು ಮೆರವಣಿಗೆಯಲ್ಲಿ ಆಗಮಿಸುತ್ತವೆ. 'ಕನಮಾರಾ ಬೋಟ್ ಮಿಕೋಶಿ' ಎಂಬ ಒಂದು ದೇವಾಲಯ ಮೆರವಣಿಗೆಯಲ್ಲಿ ಮೊದಲು ಆಗಮಿಸುತ್ತದೆ. ಇದರಲ್ಲಿ ದೋಣಿ-ಆಕಾರದ ತಳದಲ್ಲಿ ಕಪ್ಪು ಕಬ್ಬಿಣದ ಲಿಂಗವಿರುತ್ತದೆ. 'ಎಲಿಜಬೆತ್ ಮಿಕೋಶಿ' ಎಂದು ಕರೆಯಲ್ಪಡುವ ಎರಡನೇ ಗುಡಿ ಮರದ ತಳ ಹೊಂದಿದ್ದು, ದೈತ್ಯಾಕಾರದ ಲಿಂಗವನ್ನು ಹೊಂದಿದೆ. 'ಕನಮಾರಾ ಮಿಕೋಶಿ' ಈ ಗುಡಿಗಳಲ್ಲಿ ಅತ್ಯಂತ ಹಳೆಯದು. ಛಾವಣಿಯೊಂದಿಗೆ ಚೌಕಾಕಾರದ ತಳದಲ್ಲಿ ಇರಿಸಲಾಗಿರುವ ಮರದ ಲಿಂಗವಿದು.
ಮೆರವಣಿಗೆಯ ನಂತರ 'ಮೋಚಿ ನೇಜ್' ಎಂದು ಕರೆಯಲ್ಪಡುವ ಆಚರಣೆ. ಇದರಲ್ಲಿ ಶಿಂಟೋ ಪುರೋಹಿತರು ಎತ್ತರದ ವೇದಿಕೆ ಮೇಲೆ ನಿಂತು ಅಕ್ಕಿಯ ಕೇಕ್‌ಗಳನ್ನು ಆಶೀರ್ವದಿಸಿ ಅವುಗಳನ್ನು ಜನಸಂದಣಿ ಮೇಲೆ ಎಸೆಯುತ್ತಾರೆ. ಈ ಅಕ್ಕಿರೊಟ್ಟಿಗಳು ಫಲವತ್ತತೆಯ ಸಂಕೇತ. ಎಸೆದ ಅಕ್ಕಿ ರೊಟ್ಟಿಯನ್ನು ಹಿಡಿಯುವುದು ಫಲವತ್ತತೆಯ ಆಶೀರ್ವಾದ ಎಂದು ನಂಬಲಾಗುತ್ತದೆ.
ಆಂಧ್ರದ ತಿರುಪತಿಗೆ ಪ್ರತಿಸ್ಪರ್ಧಿಯಾಗಿ ನಿಂತ ತೆಲಂಗಾಣದ ಯದಾದ್ರಿ
ಪೌರಾಣಿಕ ಕತೆ
ಕನಯಾಮಾ ದೇಗುಲದಲ್ಲಿ ಹಿಂದೆ ಲೈಂಗಿಕ ಚಿಕಿತ್ಸೆಗಳನ್ನು ನೀಡಲಾಗುತ್ತಿತ್ತು. ಇಜಾನಮಿ ಎಂಬ ಹೆಣ್ಣುದೇವತೆ, ಅಗ್ನಿ ದೇವತೆಗೆ ಜನನ ನೀಡುವಾಗ, ತನ್ನ ದೇಹದ ಕೆಳಗಿನ ಅರ್ಧಕ್ಕೆ ತೀವ್ರವಾದ ಗಾಯಗಳನ್ನು ಅನುಭವಿಸಿದಳಂತೆ. ನಂತರ ಇಲ್ಲಿ ಅದಕ್ಕೆ ಚಿಕಿತ್ಸೆ ಪಡೆದಳಂತೆ. ಇನ್ನೊಂದು ದಂತಕಥೆಯ ಪ್ರಕಾರ, ಸ್ಥಳೀಯ ಮಹಿಳೆಯೊಬ್ಬಳ ಯೋನಿಯಲ್ಲಿ ಹರಿತವಾದ ಹಲ್ಲಿನ ರಾಕ್ಷಸನೊಬ್ಬ ಅಡಗಿಕೊಂಡಿದ್ದನಂತೆ. ಆಕೆಯನ್ನು ಮದುವೆಯಾದವರು, ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕೂಡಲೇ ಶಿಶ್ನ ಕತ್ತರಿಸಲ್ಪಟ್ಟು ಸತ್ತುಹೋಗುತ್ತಿದ್ದರು. ಈ ರಾಕ್ಷಸನನ್ನು ಮಣಿಸಲು ಬುದ್ಧಿವಂತನೊಬ್ಬನು ಕಬ್ಬಿಣದ ಶಿಶ್ನವನ್ನು ಕಟ್ಟಿಕೊಂಡು, ಆ ಮಹಿಳೆಯನ್ನು ಮದುವೆಯಾಗಿ ಆಕೆಯ ಜೊತೆ ಕೂಡುತ್ತಾನೆ. ಮಿಲನದ ವೇಳೆ ರಾಕ್ಷಸನ ಹಲ್ಲುಗಳು ಕತ್ತರಿಸಿಹೋಗಿ ಆತ ಸಾಯುತ್ತಾನೆ. ಈ ಕತೆಯನ್ನು ನೆನೆಯುವಂತೆ ಕನಯಾಮ ದೇವಾಲಯದ ಮುಂದೆ ಕಬ್ಬಿಣದ ಶಿಶ್ನವೊಂದನ್ನು ಸ್ಥಾಪಿಸಲಾಗಿದೆ.
1600ರಿಂದ 1800ರವರೆಗೆ ಈ ದೇವಾಲಯದ ಪರಿಸರದಲ್ಲಿ ಲೈಂಗಿಕ ಕಾರ್ಯಕರ್ತೆಯರು ವಾಸಿಸುತ್ತಿದ್ದರು. ಇವರು ಲೈಂಗಿಕವಾಗಿ ಹರಡುವ ರೋಗಗಳಿಂದ ರಕ್ಷಣೆಗಾಗಿ ಪ್ರಾರ್ಥಿಸಲು ಕನಯಾಮಾ ದೇಗುಲಕ್ಕೆ ಭೇಟಿ ನೀಡುತ್ತಿದ್ದರು.
ಆಧುನಿಕ ಉತ್ಸವ
ಆಧುನಿಕ ಯುಗದಲ್ಲಿಯೂ ಲೈಂಗಿಕ ಸೋಂಕಿನಿಂದ ಬಳಲುತ್ತಿರುವವರಿಗೆ ಗುಪ್ತವಾಗಿ ಹರಿಕೆ ಸಲ್ಲಿಸಲು ಈ ದೇವಾಲಯ ಜನಪ್ರಿಯ ತಾಣವಾಗಿ ಮುಂದುವರಿದಿದೆ. ನವದಂಪತಿಗಳು ಲೈಂಗಿಕ ಸಮಸ್ಯೆಗಳಿದ್ದರೆ ಈ ಉತ್ಸವಕ್ಕೆ ಬಂದು ಹರಿಕೆ ಸಲ್ಲಿಸುತ್ತಾರೆ. ಈ ಉತ್ಸವ ಜನಪ್ರಿಯತೆಯು ಇತ್ತೀಚೆಗೆ ಅಗಾಧವಾಗಿ ಬೆಳೆದಿದೆ. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಪ್ರಚಾರದ ಪರಿಣಾಮ ಪ್ರವಾಸಿಗರು ಇನ್ನಷ್ಟು ಆಕರ್ಷಿತರಾಗುತ್ತಿದ್ದಾರೆ. ಅರ್ಧಕ್ಕಿಂತಲೂ ಅಧಿಕ ಮಂದಿ ಹೊರದೇಶಗಳಿಂದಲೂ ಈ ಜಾತ್ರೆಗೆ ಬರುತ್ತಾರಂತೆ. ಕನಯಾಮಾ ದೇಗುಲ ಈಗ ಉತ್ಸವದಿಂದ ಬರುವ ಹಣವನ್ನು HIV/AIDS ಕುರಿತು ಸಂಶೋಧನೆಗೆ ದೇಣಿಗೆಯಾಗಿ ನೀಡುತ್ತಿದೆ.