ದಕ್ಷಿಣ ಕನ್ನಡದ ಮನಮೋಹಕ ಕುತ್ಲೂರಿಗೆ ರಾಷ್ಟ್ರಪ್ರಶಸ್ತಿ ಗರಿ, ವಿಶ್ವ ಪ್ರವಾಸಿಗರ ದೃಷ್ಟಿ ಈಗ ಸುಂದರ ಹಳ್ಳಿ ಮೇಲೆ!
ಕುತ್ಲೂರು ಗ್ರಾಮವು ಅತ್ಯುತ್ತಮ ಪ್ರವಾಸಿ ಹಳ್ಳಿ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ, ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಪರಿಸರ ಪ್ರಿಯರಲ್ಲಿ ಆತಂಕ ವ್ಯಕ್ತವಾಗಿದೆ. ಎದುರಿಗೆ ಕಾಣುವ ಮನಮೋಹಕ ಪಶ್ಚಿಮಘಟ್ಟ. ಅದರ ತಪ್ಪಲಲ್ಲಿ ಕುಕ್ಕುಜೆ ಫಾಲ್ಸ್, ಪಂಜಲ್ ಗುಡ್ಡ, ಮಡಿಕೆ ರಸ್ತೆ, ಪರುಶಗುಡ್ಡೆ ಜೈನ ಬಸದಿ ಇತ್ಯಾದಿ ಕುತ್ಲೂರಿನಲ್ಲಿ ಇವೆ.
ವರದಿ: ದೀಪಕ ಅಳದಂಗಡಿ
ಬೆಳ್ತಂಗಡಿ (ಸೆ.27): ಕಠಿಣ ದಾರಿಯನ್ನು ಹೊಂದಿರುವ, ಸುಮಾರು 350 ಮನೆಗಳಿರುವ ಕುತ್ಲೂರು ಎಂಬ ಪುಟ್ಟ ಹಳ್ಳಿ ಇನ್ನು ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊತ್ತುಕೊಳ್ಳಬೇಕಾಗಿ ಬರಬಹುದೇ ಎಂಬ ಶಂಕೆ ಪರಿಸರ ಪ್ರಿಯರಲ್ಲಿ ಮೂಡತೊಡಗಿದೆ. ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವ ದೊಡ್ಡ ಸವಾಲು ಸ್ಥಳೀಯಾಡಳಿತಕ್ಕೆ ಎದುರಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಹೊಬಳಿಯಲ್ಲಿರುವ ನಾರಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕುತ್ಲೂರು ಎಂಬ ಸುಂದರ ಹಳ್ಳಿ ಇದುವರೆಗೆ ನಕ್ಸಲ್ ಬಾಧಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತು ಕೊಂಡಿತ್ತು. ಹೀಗಾಗಿ ಅಲ್ಲಿನ ದುರ್ಗಮ ಕಾಡಿನೊಳಗೆ ಪ್ರವೇಶ ಮಾಡಲು ಹಿಂದೆ ಮುಂದೆ ನೋಡಬೇಕಾಗುತ್ತಿತ್ತು. ಕಾಡಿನೊಳಗೆ ಹೋಗಲು ಪೊಲೀಸರ ಅನುಮತಿಯೂ ಬೇಕಿತ್ತು. ಹೀಗಾಗಿ ಸದ್ಯ ಕುತ್ಲೂರು ಪರಿಸರದ ಕಾಡು ಸಹಜತೆಯಿಂದ ಮತ್ತು ಶುದ್ಧತೆಯಿಂದ ಇತ್ತು.
ನಯನತಾರಾ ಮದುವೆ ಬಳಿಕ 31 ವರ್ಷದ ಯುವ ನಟಿಯೊಂದಿಗೆ ನಟ ಸಿಂಬು ಡೇಟಿಂಗ್!
ಇದೀಗ ಕುತ್ಲೂರು ಪ್ರವಾಸೋದ್ಯಮ ಇಲಾಖೆಯಿಂದ ಅತ್ಯುತ್ತಮ ಪ್ರವಾಸಿ ಹಳ್ಳಿ ಪ್ರಶಸ್ತಿಗೆ ಆಯ್ಕೆಯಾಗಿದೆ. ವಿಶ್ವದ ಎಲ್ಲ ಜನರು ಕುತ್ಲೂರಿನತ್ತ ದೃಷ್ಟಿ ನೆಟ್ಟಿದ್ದಾರೆ. ಇದರ ಪರಿಣಾಮ ಮಾತ್ರ ವ್ಯತಿರಿಕ್ತವೂ ಆಗಬಲ್ಲುದು ಎಂಬುದು ದೇಶದ ಇತರೆ ಪ್ರವಾಸೀ ತಾಣಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ.
ದೇಶವು ಸ್ವಚ್ಛವಾಗಬೇಕು ಎಂಬ ಗುರಿ 2014 ರಿಂದಲೂ ಇದೆ. ಆದರೆ ಗುರಿಯ ಸಾಧನೆಯಾಗದಿರುವುದು ವಿಪರ್ಯಾಸ. ಇದು ನಾವು ದೇಶದ ವಿವಿಧ ಕಡೆ ಪ್ರವಾಸಕ್ಕೆ ಹೋದಾಗ ಅರಿವಾಗುತ್ತದೆ. ಎಲ್ಲೆಂದರಲ್ಲಿ ಕಸ ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಇತಿ ಮಿತಿಯೇ ಇಲ್ಲ. ಕುತ್ಲೂರು ಇದಕ್ಕೆ ಹೊರತಾಗಿರುವುದಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ ಚಾರ್ಮಾಡಿ, ನರಸಿಂಹ ಗಡ, ಶಿಶಿಲದ ಮತ್ಸ್ಯ ತೀರ್ಥ, ಅರ್ಬಿ, ಬಂಡಾಜೆ, ದಿಡುಪೆ, ಬೊಳ್ಳೆ ಮೊದಲಾದೆಡೆ ಇರುವ ಜಲಪಾತಗಳ ಸನಿಹ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಗೊತ್ತೇ ಇದೆ. ಪಶ್ಚಿಮ ಘಟ್ಟದ ಚಾರಣ ಪ್ರದೇಶಗಳಲ್ಲೂ ಬಾಟಲಿಗಳ ರಾಶಿಯೇ ಇರುತ್ತದೆ. ಇನ್ನು ಈ ಪ್ರದೇಶಗಳ ಜೊತೆಗೆ ಕುತ್ಲೂರು ಸೇರ್ಪಡೆಯಾಗಲಿರುವುದು ನಿಶ್ಚಿತ.
ಜಯಂ ರವಿ, ಆರತಿ ವಿಚ್ಛೇದನಕ್ಕೆ ಕಾರಣ ಇದು, ಶಾಕಿಂಗ್ ವಿಷಯ ಬಿಚ್ಚಿಟ್ಟ ನಟನ ಗೆಳತಿ ಕೆನಿಷಾ ಫ್ರಾನ್ಸಿಸ್
ಮನಮೋಹಕ ಕುತ್ಲೂರಿಗೆ ರಾಷ್ಟ್ರಪ್ರಶಸ್ತಿ ಗರಿ:
ಎದುರಿಗೆ ಕಾಣುವ ಮನಮೋಹಕ ಪಶ್ಚಿಮಘಟ್ಟ. ಅದರ ತಪ್ಪಲಲ್ಲಿ ಕುಕ್ಕುಜೆ ಫಾಲ್ಸ್, ಪಂಜಲ್ ಗುಡ್ಡ, ಮಡಿಕೆ ರಸ್ತೆ, ಪರುಶಗುಡ್ಡೆ ಜೈನ ಬಸದಿ ಇತ್ಯಾದಿ ಕುತ್ಲೂರಿನಲ್ಲಿ ಇವೆ. ದುರ್ಗಮ ತಾಣವೂ ಹೌದು. ಟ್ರೆಕ್ಕಿಂಗ್ ಪ್ರದೇಶವೂ ಆಗಿದೆ. ಇಲ್ಲಿನ ಸುಂದರ ಪರಿಸರವು ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ವರ್ಷಂಪ್ರತಿ ನಡೆಯುವ ಅತ್ಯುತ್ತಮ ಪ್ರವಾಸಿ ಹಳ್ಳಿಗಳು ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ. ಸೆ. 27 ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮುಂದಿನ ದಿನಗಳಲ್ಲಿ ಸಹಸ್ರಾರು ಮಂದಿ ಕುತ್ಲೂರನ್ನು ಅರಸಿ ಬರಲಿದ್ದಾರೆ. ಪ್ರವಾಸಿಗರ ಜೊತೆಗೆ ಪ್ಲಾಸ್ಪಿಕ್ ಕೂಡ ಜತೆಯಾಗಿ ಬರಲಿದೆ. ಕಾಡಿನಲ್ಲಿರುವ ಪ್ರಾಣಿಗಳು ನಿಧಾನಕ್ಕೆ ಮಾಯವಾಗಲಿವೆ. ರೆಸಾರ್ಟ್ ಗಳು ತಲೆಯೆತ್ತುವ ಸಂಭವವಿದೆ. ಹೋಟೆಲ್, ಗೂಡಂಗಡಿಗಳ ತಾಣವಾಗಲಿದೆ. ಅಕ್ರಮಗಳ ನೆಲೆಯಾಗಲಿದೆ ಎಂಬ ಆತಂಕ ಪರಿಸರ ಪ್ರಿಯರಲ್ಲಿದೆ. ಈ ಬಗ್ಗೆಯೂ ಚಿಂತನೆ ನಡೆಸುವುದು ಒಳಿತು ಎಂಬ ಅಭಿಪ್ರಾಯ ಗ್ರಾಮಸ್ಥರದ್ದು.
ಕುತ್ಲೂರನ್ನು ಪ್ಲಾಸ್ಟಿಕ್ ತ್ಯಾಜ್ಯ ಆವರಿಸಲಿದೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತವು ಪ್ರವಾಸಿಗರು ಕಾಡಿನೊಳಗೆ ಪ್ರವೇಶಿಸುವ ಮೊದಲು ಗೇಟ್ ಅಳವಡಿಸಿ ಅವರಿಂದ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಯಂತ್ರಣಕ್ಕೆ ಬಾರದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುವುದು ನಿಶ್ಚಿತ. ಅರಣ್ಯ ಇಲಾಖೆ, ವನ್ಯಜೀವಿ ಇಲಾಖೆಯವರು ಈ ಬಗ್ಗೆ ಗಮನಹರಿಸುವ ಅವಶ್ಯಕತೆ ಇದೆ
- ಸಚಿನ್ ಭಿಡೆ ಮುಂಡಾಜೆ, ಪರಿಸರ ಪ್ರಿಯರು
ಸಾಹಸಿಕ ತಾಣವಾಗಿ ಕುತ್ಲೂರು ಆಯ್ಕೆಯಾಗಿ ನಕ್ಸಲ್ ಹಣೆಪಟ್ಟಿ ಕಳಚಿರುವುದು ಸಂತಸ ತಂದಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಅನುಕೂಲಕರವಾಗಿದೆ. ಆದರೆ ಪ್ರವಾಸಿಗರಿಂದಾಗಿ ಉಂಟಾಗುವ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪರಿಹಾರ ಏನು ಎಂಬುದನ್ನು ಸ್ಥಳೀಯಾಡಳಿತ ಆಲೋಚನೆ ಮಾಡಬೇಕಾದ ಸ್ಥಿತಿ ಬಂದಿದೆ
- ಉದಯ ಹೆಗ್ಡೆ, ನಾರಾವಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು, ಹಾಲಿ ಸದಸ್ಯ