ಬೇಸಿಗೆ ರಜೆಯಲ್ಲಿ ಕೂಲ್ ಆಗ್ಬೇಕೆಂದ್ರೆ ಇಲ್ಲಿಗೆ ಹೋಗಿ
ಇನ್ನೇನು ಬಿಸಿ ಹೆಚ್ಚಾಗ್ತಿದೆ. ಬೇಸಿಗೆ ಝಳ ಶುರುವಾಗಲಿದೆ. ಈ ಸಂದರ್ಭದಲ್ಲೇ ಮಕ್ಕಳಿಗೆ ರಜಾ ಇರೋದ್ರಿಂದ ಜನರು ಫ್ಯಾಮಿಲಿ ಟ್ರಿಪ್ ಫ್ಲಾನ್ ಮಾಡ್ತಾರೆ. ಆದ್ರೆ ಎಲ್ಲಿ ಹೋಗೋದು ಎನ್ನುವ ಪ್ರಶ್ನೆ ಕಾಡುತ್ತೆ. ಅದಕ್ಕೆ ಉತ್ತರ ಇಲ್ಲಿದೆ.
ಮಕ್ಕಳ ಪರೀಕ್ಷೆಗಳು ಸಮೀಪಿಸುತ್ತಿವೆ. ಇನ್ನೇನು ಕಣ್ಣು ಮುಚ್ಚಿ ಬಿಡುವುದರೊಳಗೆ ಪರೀಕ್ಷೆಗಳೆಲ್ಲ ಮುಗಿದು ಬೇಸಿಗೆ ರಜೆ ಆರಂಭವಾಗುತ್ತದೆ. ಮಕ್ಕಳಿಗಂತೂ ಬೇಸಿಗೆಯ ರಜೆಯ ದಿನಗಳೆಂದರೆ ಅಚ್ಚುಮೆಚ್ಚು. ಇಷ್ಟರಲ್ಲೇ ಅವರು ಬೇಸಿಗೆಯ ರಜೆಯ ಪ್ಲ್ಯಾನ್ ಗಳ ಕುರಿತು ಪಾಲಕರೊಂದಿಗೆ ಚರ್ಚೆ ನಡೆಸಿಯೇ ಇರುತ್ತಾರೆ. ಪಾಲಕರಿಗೂ ಸಹ ಮಕ್ಕಳೊಂದಿಗೆ ಸಮಯ ಕಳೆಯಲು ಪ್ರವಾಸದಂತಹ ಬೆಸ್ಟ್ ಆಪ್ಷನ್ ಬೇರೊಂದಿಲ್ಲ.
ಬೇಸಿಗೆ (Summer) ರಜೆ ಎಂದಮೇಲೆ ಕೇಳಬೇಕೆ? ಎಲ್ಲೆಡೆ ಸುಡುವ ಬಿಸಲು ತುಂಬಿರುತ್ತದೆ. ಹಾಗಾಗಿ ಎಲ್ಲ ಸ್ಥಳಗಳಿಗೂ ಮಕ್ಕಳನ್ನು ಕರೆದುಕೊಂಡು ಹೋಗಲಾಗುವುದಿಲ್ಲ. ವಿಪರೀತ ಬಿಸಿಲಿನಲ್ಲಿ ಮಕ್ಕಳಿಗೆ ಸುತ್ತಾಡುವುದು ಕಷ್ಟವಾಗಬಹುದು. ಹಾಗಾಗಿ ಮಕ್ಕಳಿಗೆ ಅನುಕೂಲವಾಗುವಂತ, ಮಕ್ಕಳ ಆರೋಗ್ಯಕ್ಕೂ ಹಾನಿಯಾಗದಂತಹ ಸ್ಥಳಗಳಿಗೆ ಭೇಟಿ ನೀಡುವುದು ಉತ್ತಮ. ಮಕ್ಕಳನ್ನು ಯಾವ ಸ್ಥಳಗಳಿಗೆ ಕರೆದುಕೊಂಡು ಹೋಗುವುದು, ಎಲ್ಲಿ ಹೋದರೆ ಅವರು ಹೆಚ್ಚು ಎಂಜಾಯ್ ಮಾಡ್ತಾರೆ ಎನ್ನುವ ಕನ್ಫ್ಯೂಜನ್ ನಲ್ಲಿ ನೀವಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಮಕ್ಕಳನ್ನು ಕರೆದುಕೊಂಡು ಹೋಗಬಹುದಾದ ಕೆಲವು ಅದ್ಭುತ ಸ್ಥಳಗಳನ್ನು ನಾವು ನಿಮಗೆ ಪರಿಚಯಿಸಲಿದ್ದೇವೆ.
IRCTCಯಿಂದ ಚಾರ್‌ಧಾಮ್ ಯಾತ್ರೆ ಪ್ಯಾಕೇಜ್ ಘೋಷಣೆ; ದರ ಎಷ್ಟು ಗೊತ್ತಾ?
ಮಕ್ಕಳೊಂದಿಗೆ ಸುತ್ತಾಡಬಹುದಾದ ಭಾರತ (India) ದ ಸುಂದರ ಸ್ಥಳಗಳು
ಖಜ್ಜಿಯಾರ್ (Khajjiar) : ಬೇಸಿಗೆ ರಜೆಯಲ್ಲಿ ಕುಟುಂಬದೊಂದಿಗೆ ಸುತ್ತಾಡಲು ಹಿಮಾಚಲ ಪ್ರದೇಶದ ಡಾಲ್ ಹೌಸಿಯಲ್ಲಿರುವ ಖಜಿಯಾರ್/ಖಜ್ಜಿಯಾರ್ ಉತ್ತಮ ಜಾಗವಾಗಿದೆ. ಪ್ರಕೃತಿಯೇ ಮೈವೆತ್ತ ಈ ಸ್ಥಳ ಬಹಳ ಶಾಂತವಾಗಿದ್ದು, ಸೌಂದರ್ಯದ ಖನಿಯಾಗಿದೆ. ತನ್ನ ಸೌಂದರ್ಯದಿಂದ ಇದು ಭಾರತದ ‘ಮಿನಿ ಸ್ವಿಜರ್ಲ್ಯಾಂಡ್’ ಎಂಬ ಖ್ಯಾತಿಗೆ ಒಳಗಾಗಿದೆ. ಹಿಮಾಚಲ ಪ್ರದೇಶದ ಕಣಿವೆಯಲ್ಲಿರುವ ಇದು ಚಾರಣ, ಸರೋವರ ಮತ್ತು ಸಾಹಸ ಚಟುವಟಿಕೆಗೆ ಹೇಳಿಮಾಡಿಸಿದ ಸ್ಥಳವಾಗಿದೆ. ಖಜ್ಜಿಯಾರ್ ಸರೋವರ, ಕಲಾಟಾಪ್ ವನ್ಯಜೀವಿ ಅಭಯಾರಣ್ಯ, 13ನೇ ಶತಮಾನದ ಖಾಜಿ ನಾಗ್ ನಾಗಮಂದಿರ ಮುಂತಾದ ಆಕರ್ಷಕ ದೃಶ್ಯಾವಳಿಗಳಿಗೆ ಖಜ್ಜಿಯಾರ್ ಸಾಕ್ಷಿಯಾಗಿದೆ.
ವಾಟರ್ ಕಿಂಗಡಮ್ ಪಾರ್ಕ್ (Water Kingdom Park) : ಬೇಸಿಗೆ ರಜೆಯಲ್ಲಿ ನೀವು ಮುಂಬೈ ಸಮೀಪ ಹೋದರೆ ಅಲ್ಲಿನ ವಾಟರ್ ಕಿಂಗಡಮ್ ಪಾರ್ಕ್ ಗೆ ತಪ್ಪದೇ ಭೇಟಿ ನೀಡಿ. ನೀರನ್ನು ಇಷ್ಟಪಡದ ಮಕ್ಕಳಿಲ್ಲ. ಮಕ್ಕಳಿಗೆ ನೀರಿನಲ್ಲಿ ಆಡುವುದೆಂದರೆ ಪ್ರೀತಿ. ಹಾಗಾಗಿ ಇಲ್ಲಿ ಮಕ್ಕಳು ಬಹಳ ಎಂಜಾಯ್ ಮಾಡ್ತಾರೆ. ಈ ಉದ್ಯಾನವನದಲ್ಲೇ ಒಂದು ಮಾನವ ನಿರ್ಮಿತ ಬೀಚ್ ಕೂಡ ಇದೆ. ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ವಾಟರ್ ಕಿಂಗ್ ಡಮ್ ಉದ್ಯಾನವನದಲ್ಲಿ ಮಕ್ಕಳಿಗೆ 500 ರೂ ಹಾಗೂ ಹಿರಿಯರಿಗೆ 1000 ರೂ ಶುಲ್ಕವನ್ನು ಅಂದಾಜಿಸಬಹುದು.
ಕೂರ್ಗ್ (Coorg) : ಭಾರತದ ಸ್ಕಾಟ್ ಲ್ಯಾಂಡ್ ಎಂದೇ ಪ್ರಖ್ಯಾತವಾದ ದಕ್ಷಿಣ ಭಾರತದ ಕೂರ್ಗ್ ಮಕ್ಕಳಿಗೆ ತುಂಬ ಇಷ್ಟವಾಗುವ ಸ್ಥಳವಾಗಿದೆ. ಹಚ್ಚಹಸಿರನ್ನು ಇಷ್ಟಪಡುವವರಿಗೆ ಇದು ಕರ್ನಾಟಕದ ಅದ್ಭುತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ನಿಬ್ಬೆರಗುಗೊಳಿಸುವಂತಹ ದೃಶ್ಯಗಳು, ಕಾಡು ಬೆಟ್ಟಗಳು, ಮಸಾಲೆ ಮತ್ತು ಕಾಫಿಯ ತೋಟಗಳು ಕೂರ್ಗ್ ನಲ್ಲಿ ಕಾಣಸಿಗುತ್ತವೆ. ಇದಲ್ಲದೇ ಇಲ್ಲಿ ಅಬ್ಬೆ ಜಲಪಾತ, ಹೊನ್ನಮ್ಮನ ಕೆರೆ, ಜಲಪಾತ ಮುಂತಾದವನ್ನು ನೋಡಬಹುದು.
ಚುಮು ಚುಮು ಚಳಿಯಲ್ಲಿ, ಮಂಜಿನಡಿಯಲ್ಲಿ, ನಿಮಗೆ ಗೊತ್ತಿರದ ಇಟಲಿಯ ಟುರಿನ್ ಇದು!
ಮೇಘಾಲಯ (Meghalaya) : ಬೇಸಿಗೆ ರಜೆಯ ಸುಂದರ ತಾಣಗಳ ಪೈಕಿ ಮೇಘಾಲಯ ಕೂಡ ಸೇರಿದೆ. ಮೇಘಾಲಯಕ್ಕೆ ನೀವು ಪರಿವಾರದೊಂದಿಗೆ ಭೇಟಿ ನೀಡಿ ಸಂತೋಷದ ಸಮಯ ಕಳೆಯಬಹುದು. ಅತಿ ಹೆಚ್ಚು ಮಳೆಯಾಗುವ ಚಿರಾಪುಂಜಿ ಈ ರಾಜ್ಯದಲ್ಲೇ ಇರುವುದರಿಂದ ಇಲ್ಲಿಯ ವಾತಾವರಣ ತುಂಬ ಆಹ್ಲಾದಕರವಾಗಿದೆ. ಅನೇಕ ಬಗೆಯ ಉದ್ಯಾನ ಇಲ್ಲಿದ್ದು, ಸುಂದರವಾದ ಬೆಟ್ಟ, ನೈಸರ್ಗಿಕ ಸೌಂದರ್ಯ, ಸುಂದರ ಸರೋವರ ಮೇಘಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಮೇಘಾಲಯದಲ್ಲಿ ನೀವು ಚಿರಾಪುಂಜಿ, ಮೌಸಿನ್ರಾಮ್, ತುರಾ, ಲೈಟ್ಲುಮ್ ಕಣಿವೆ, ಮಾವ್ಲಾಂಗ್ ಸೇಕ್ರೆಡ್ ಫಾರೆಸ್ಟ್ ಮತ್ತು ಏಷ್ಯಾದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಡೆದ ಮಾವ್ಲಿನಾಂಗ್ ಹಳ್ಳಿ ಮತ್ತು ಜೀವಂತ ಬೇರಿನ ಸೇತುವೆಗಳನ್ನು ಇಲ್ಲಿ ಕಾಣಬಹುದು.