ಸಿಲ್ಕ್‌ಬೋರ್ಡ್‌ನಲ್ಲಿ ಟ್ರಾಫಿಕ್‌ನಲ್ಲೇ ಊಟ ಮುಗಿಸಿದ ಬೆಂಗಳೂರಿನ ಚಾಲಕ: ವಿಡಿಯೋ ವೈರಲ್
ಉದ್ಯಾನನಗರಿ ಸಿಲಿಕಾನ್ ಸಿಟಿ ಎಂದೆಲ್ಲಾ ಉಪಮೆಗಳಿಂದ ಕರೆಸಿಕೊಳ್ಳುವ ಬೆಂಗಳೂರು ನಗರವೂ ಇಲ್ಲಿನ ತಂಪಾದ ಹವೆಗೆ ಎಷ್ಟು ಫೇಮಸ್ಸೋ ಅಷ್ಟೇ ಇಲ್ಲಿನ ಕಿಕ್ಕಿರಿದ ಟ್ರಾಫಿಕ್ ಕಾರಣಕ್ಕೆ ಕುಖ್ಯಾತಿ ಪಡೆದಿದೆ.
ಬೆಂಗಳೂರು: ಉದ್ಯಾನನಗರಿ ಸಿಲಿಕಾನ್ ಸಿಟಿ ಎಂದೆಲ್ಲಾ ಉಪಮೆಗಳಿಂದ ಕರೆಸಿಕೊಳ್ಳುವ ಬೆಂಗಳೂರು ನಗರವೂ ಇಲ್ಲಿನ ತಂಪಾದ ಹವೆಗೆ ಎಷ್ಟು ಫೇಮಸ್ಸೋ ಅಷ್ಟೇ ಇಲ್ಲಿನ ಕಿಕ್ಕಿರಿದ ಟ್ರಾಫಿಕ್ ಕಾರಣಕ್ಕೆ ಕುಖ್ಯಾತಿ ಪಡೆದಿದೆ. ಟ್ರಾಫಿಕ್‌ನಲ್ಲಿ ಸಿಲುಕಿಯೇ ಅನೇಕರು ದಿನವೂ ಚಡಪಡಿಸುತ್ತಿರುತ್ತಾರೆ. ಹೀಗಿರುವಾಗ ಬೆಂಗಳೂರಿನಲ್ಲಿ ಬಸ್ ಓಡಿಸುವ ಚಾಲಕನೋರ್ವ ಈ ಟ್ರಾಫಿಕ್ ದಟ್ಟಣೆಯ ನಡುವೆ ಬಸ್‌ನಲ್ಲೇ ಊಟ ಮುಗಿಸಿದ್ದಾನೆ. ಇದನ್ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇಂದು ನಿನ್ನೆಯದಲ್ಲ, ಬೆಂಗಳೂರು ಬಹಳ ಹಿಂದಿನಿಂದಲೂ ಸಂಚಾರ ದಟ್ಟಣೆಗೆ ಕುಖ್ಯಾತಿ ಗಳಿಸಿದೆ. ಇಲ್ಲಿ ಪ್ರತಿದಿನ, ಸಾವಿರಾರು ಪ್ರಯಾಣಿಕರು ಉದ್ದನೆಯ ಸರತಿ ಸಾಲಿನಲ್ಲಿ ಸಿಲುಕಿಕೊಂಡು ಚಡಪಡಿಸುತ್ತಾರೆ. ಹೀಗೆ ಟ್ರಾಫಿಕ್‌ನಲ್ಲಿ ಸಿಲುಕಿದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದ ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಒಬ್ಬರು ಟ್ರಾಫಿಕ್‌ನಲ್ಲಿ ಬಸ್ ಚಾಲಕ ಊಟ ಮಾಡುತ್ತಿರುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
Bengaluru Traffic: ನಗರದಲ್ಲಿ ಇನ್ಮುಂದೆ ಟ್ರಾಫಿಕ್ ಹೆಚ್ಚಿದ್ದರೆ ಬೇಗ ಗ್ರೀನ್ ಸಿಗ್ನಲ್!
ಈ ವಿಡಿಯೋವನ್ನು 2 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದು, ಇದು ಬೆಂಗಳೂರು ಟ್ರಾಫಿಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಎಬ್ಬಿಸಿದೆ. ಅನೇಕರು ಸಂಚಾರ ದಟ್ಟಣೆ ಕಡಿಮೆ ಮಾಡಲು ಆಡಳಿತ ಸರಿಯಾದ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು ಚಾಲಕನ ಬಗ್ಗೆ ಕರುಣೆ ತೋರಿದ್ದಾರೆ. ಟ್ರಾಫಿಕ್‌ನಿಂದಾಗಿ ಚಾಲಕನಿಗೆ ಸರಿಯಾಗಿ ಕುಳಿತು ನೆಮ್ಮದಿಯಿಂದ ತಿನ್ನಲು ಕೂಡ ಸಮಯ ಇಲ್ಲದಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಅವರು ರಾತ್ರಿಯ ಊಟವನ್ನು ಕೂಡ ಅಲ್ಲೇ ಮುಗಿಸಬಹುದು ಎಂದು ಹೇಳಿದ್ದಾರೆ.
ಮತ್ತೆ ಕೆಲವರು ತಮ್ಮ ಸ್ವ ಅನುಭವವನ್ನು ಹೇಳಿಕೊಂಡಿದ್ದು, ತಾನು ಕೂಡ ಟ್ರಾಫಿಕ್‌ನಲ್ಲೇ ನನ್ನ ಬೆಳಗಿನ ತಿಂಡಿ ಮುಗಿಸಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ಪ್ರದೇಶಗಳಲ್ಲಿ 15 ರಿಂದ 20 ನಿಮಿಷಕ್ಕೂ ಅಧಿಕ ಕಾಲ ಟ್ರಾಫಿಕ್ ದಟ್ಟಣೆ ಇರುತ್ತದೆ. ಈ ಚಾಲಕನನ್ನು ಶ್ಲಾಘಿಸಬೇಕು ಬೆಂಗಳೂರಿನಲ್ಲಿ ವಾಹನ ಚಾಲನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ರೀತಿ ಚಾಲಕ ಟ್ರಾಫಿಕ್‌ನಲ್ಲಿ ಊಟ ಮಾಡಿದ್ದು, ನಗರದ ಅತೀ ಹೆಚ್ಚು ಸಂಚಾರ ದಟ್ಟಣೆಯ ಪ್ರದೇಶವಾದ ಸಿಲ್ಕ್ ಬೋರ್ಡ್‌ನಲ್ಲಿ ಎಂದು ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಕಳೆದ ತಿಂಗಳು ಮಹಿಳೆಯೊಬ್ಬಳು ಲ್ಯಾಪ್‌ಟಾಪ್ ಹಿಡಿದುಕೊಂಡು ಟ್ರಾಫಿಕ್‌ನಲ್ಲೇ ಕೆಲಸ ಮಾಡುತ್ತಿದ್ದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಕೋರಮಂಗಲ-ಅಗರ ಔಟರ್ ರಿಂಗ್‌ರೋಡ್‌ನಲ್ಲಿ ಈ ಫೋಟೋ ಸೆರೆ ಹಿಡಿಯಲಾಗಿತ್ತು.
Bengaluru Traffic: ಜೀರೋ ಟ್ರಾಫಿಕ್ ಹಿಂಪಡೆದ ಸಿಎಂ ಸಿದ್ದರಾಮಯ್ಯ