Bangalore Tour : ವೀಕೆಂಡಲ್ಲಿ ಈ ಪ್ರಶಾಂತ ಜಾಗಕ್ಕೆ ಹೋಗ್ಬನ್ನಿ
ಉದ್ಯಾನನಗರಿ ಬೆಂಗಳೂರಿನ ಆಸುಪಾಸು ಸಾಕಷ್ಟು ಪ್ರವಾಸಿ ತಾಣಗಳಿವೆ. ಕೆಲವು ಪ್ರಸಿದ್ಧಿ ಪಡೆದಿದ್ರೆ ಮತ್ತೆ ಕೆಲವು ಹೆಚ್ಚು ಪ್ರವಾಸಿಗರಿಲ್ಲದ ಕಾರಣ ಸ್ವಚ್ಛಂದವಾಗಿವೆ. ಶಾಂತ ಪರಿಸರ ಮನಸ್ಸನ್ನು ಸೂರೆಗೊಳ್ಳುತ್ತದೆ. ಇವತ್ತಿನ ಟೂರ್ ಎಲ್ಲಿ ಗೊತ್ತಾ?
ವೀಕೆಂಡ್ ನಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶ ವೀಕ್ಷಣೆ ಮಾಡ್ಬೇಕು ಎನ್ನುವ ಬೆಂಗಳೂರಿಗರ ಸಂಖ್ಯೆ ಹೆಚ್ಚಿದೆ. ಎಲ್ಲಿಗೇ ಹೋಗ್ಬೇಕು ಎನ್ನುವ ಪ್ರಶ್ನೆ ಬಂದಾಗ ನಾವು ಹುಡುಕಾಟ ಶುರು ಮಾಡ್ತೇವೆ. ಸಿಲಿಕಾನ್ ಸಿಟಿ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣಗಳಿವೆ. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರು, ಪ್ರವಾಸಿಗರಿಗೆ ಹೊಸ ಹೊಸ ಸ್ಥಳಗಳ ಪರಿಚಯ ಮಾಡಿಕೊಡ್ತಿದ್ದಾರೆ. ಬೆಂಗಳೂರಿನ ಆಸುಪಾಸು ಇಂಥ ಸ್ಥಳವೂ ಇದ್ಯಾ ಎಂದು ಪ್ರಶ್ನೆ ಮಾಡುವಷ್ಟು ಸುಂದರ ಪ್ರವಾಸಿ ತಾಣಗಳನ್ನು ನಾವು ಈಗ ನೋಡ್ತಿದ್ದೇವೆ.
ಇತ್ತೀಚೆಗಷ್ಟೆ ಪ್ರಸಿದ್ಧಿಗೆ ಬರ್ತಿರುವ ಪ್ರವಾಸಿ (Tourist) ತಾಣಗಳಲ್ಲಿ ಕೂಟಗಲ್ ತಿಮ್ಮಪ್ಪನ ಬೆಟ್ಟ ಕೂಡ ಒಂದು. ಬೆಂಗಳೂರಿ (Bangalore) ನಿಂದ ಇದು ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ಕಾರ್ ಅಥವಾ ಬೈಕ್ ಎರಡರಲ್ಲೂ ನೀವು ಪ್ರಯಾಣ ಬೆಳೆಸಬಹುದು. ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆ ಇರುವ ಕಾರಣ, ನೀವು ಶಾಂತವಾಗಿ ಕುಳಿತು ಪರಿಸರ (Environment) ದ ಸೌಂದರ್ಯವನ್ನು ಸವಿಯಬಹುದು.
ಎಲ್ಲಿದೆ ಕೂಟಗಲ್ ತಿಮ್ಮಪ್ಪನ ಬೆಟ್ಟ: ರಾಮನಗರ ಜಿಲ್ಲೆಯಲ್ಲಿ ಕೂಟಗಲ್ ತಿಮ್ಮಪ್ಪನ ಬೆಟ್ಟವಿದೆ. ರಾಮನಗರ ಬಸ್ ನಿಲ್ದಾಣದಿಂದ ಇದು ಕೇವಲ 10 ಕಿಲೋಮೀಟರ್ ದೂರದಲ್ಲಿದೆ. ಇದೊಂದು ಕರ್ನಾಟಕದ ಪ್ರಶಾಂತ ಬೆಟ್ಟ ಅಂದ್ರೆ ತಪ್ಪಾಗಲಾರದು. ನೂರಾರು ಬಂಡೆಗಳಿಂದ ರಚಿತವಾದ ಬೆಟ್ಟ ಟ್ರೆಕ್ಕಿಂಗ್ ಅಥವಾ ಕ್ಲೈಂಬಿಂಗ್ ಗೆ ಸೂಕ್ತವಾದ ಸ್ಥಳ. 2017ರಲ್ಲಿ ಇದು ಮೊದಲ ಬಾರಿ ಪ್ರಸಿದ್ಧಿಗೆ ಬಂತು. ಈಗೀಗ ಅಲ್ಲಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನೀವು ಬೆಟ್ಟದ ಮೇಲ್ಭಾಗದವರೆಗೂ ಆರಾಮವಾಗಿ ಸಂಚರಿಸಬಹುದಾದ ಕಾರಣ, ಮಕ್ಕಳನ್ನು ಕೂಡ ಬೆಟ್ಟಕ್ಕೆ ಕರೆದೊಯ್ಯಬಹುದು.
ಧುಮ್ಮಿಕ್ಕುತ್ತಿರುವ ಜೋಗದ ಸೊಬಗು: ರಾಜ, ರಾಣಿ, ರೋರರ್, ರಾಕೆಟ್, ಲೇಡಿ ನೋಡಲು ಪ್ರವಾಸಿಗರ ದಂಡು
ತಿಮ್ಮಪ್ಪನ ಬೆಟ್ಟದ ವಿಶೇಷವೇನು? : ತಿಮ್ಮಪ್ಪನ ಬೆಟ್ಟದ ಬಹುಮುಖ್ಯ ಆಕರ್ಷಣೆ ಅಂದ್ರೆ ಅವಳಿ ಬಂಡೆಗಳಾಗಿವೆ. ಬಂಡೆಗಳ ಸುತ್ತಲಿರುವ ಪ್ರಕೃತಿ ಸೌಂದರ್ಯ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೀವು ಬೆಟ್ಟ ಹತ್ತುವ ಮೊದಲೇ ದೇವರ ದರ್ಶನವನ್ನು ಪಡೆಯಬಹುದು. ಬೆಟ್ಟದ ಬುಡದಲ್ಲಿಯೇ ತಿಮ್ಮಪ್ಪನ ದೇವಸ್ಥಾನವಿದೆ. ದೇವಸ್ಥಾನ ಸುವ್ಯವಸ್ಥೆಯಿಂದ ಕೂಡಿದೆ.
ಇಲ್ಲಿದೆ ಎರಡು ವ್ಯೂವ್ ಪಾಯಿಂಟ್ : ತಿಮ್ಮಪ್ಪನ ಬೆಟ್ಟಕ್ಕೆ ಬಂದವರು ಎರಡು ವ್ಯೂವ್ ಪಾಯಿಂಟ್ ಗಳನ್ನು ನೋಡ್ಬಹುದು. ಒಂದು ದೇವಸ್ಥಾನದಿಂದ ಸಮೀಪದಲ್ಲಿದ್ದರೆ ಇನ್ನೊಂದು ವ್ಯೂವ್ ಪಾಯಿಂಟ್ ದೇವಸ್ಥಾನದಿಂದ 15 ನಿಮಿಷಗಳ ದೂರದಲ್ಲಿದೆ. ಇಲ್ಲಿ ರಸ್ತೆ ವ್ಯವಸ್ಥಿತವಾಗಿರುವ ಕಾರಣ ನೀವು ಬೆಳಿಗ್ಗೆ ಸೂರ್ಯೋದಯದ ವೇಳೆ ಅಥವಾ ಸಂಜೆ ಸೂರ್ಯಾಸ್ತದ ವೇಳೆ ಇಲ್ಲಿಗೆ ಬರಬಹುದು. ಮಳೆಗಾಲದಲ್ಲಿ ಬರುವ ಪ್ರವಾಸಿಗರು ಬಂಡೆಗಳ ಮೇಲೆ ನಡೆಯುವ ವೇಳೆ ಸ್ವಲ್ಪ ಎಚ್ಚರಿಕೆವಹಿಸಬೇಕು.
ನಿಸರ್ಗ ಪ್ರೇಮಿಗಳು ಇಲ್ಲಿ ಬಂದು ಸ್ವಚ್ಛ ಗಾಳಿಯನ್ನು ತೆಗೆದುಕೊಳ್ತಾ, ಶಾಂತ ಪರಿಸರದಲ್ಲಿ ವಾರಾಂತ್ಯವನ್ನು ಆರಾಮವಾಗಿ ಕಳೆಯಬಹುದಾಗಿದೆ. ಪಿಕ್ನಿಕ್ ಗಾಗಿ ನೀವು ಇಲ್ಲಿಗೆ ಬಂದ್ರೆ ಆರಾಮವಾಗಿ ಮೂರ್ನಾಲ್ಕು ಗಂಟೆ ಕಳೆಯಬಹುದು. ತಿಮ್ಮಪ್ಪನ ಬೆಟ್ಟ ಬೆಳಿಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ.
ಕೊನಾರ್ಕ್: ಶತಮಾನಗಳ ಕಾಲ ಗಾಳಿಯಲ್ಲೇ ತೇಲುತ್ತಿತ್ತು ಸೂರ್ಯ ದೇವರ ವಿಗ್ರಹ !
ಇಲ್ಲಿ ನೀರು, ಆಹಾರ ಸೇರಿದಂತೆ ಯಾವುದೇ ವಸ್ತು ನಿಮಗೆ ಸಿಗುವುದಿಲ್ಲ. ಅಷ್ಟು ಪ್ರಸಿದ್ಧಿ ಪಡೆಯದ ಕಾರಣ ಜನಸಂಖ್ಯೆ ಕೂಡ ಕಡಿಮೆ. ಹಾಗಾಗಿ ನೀವು ಅಗತ್ಯವಿರುವ ಆಹಾರ ಹಾಗೂ ನೀರನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಆರೆಂಟು ಮಂದಿ ಒಟ್ಟಿಗೆ ಹೋದಲ್ಲಿ ಪ್ರವಾಸದ ಮಜವನ್ನು ನೀವು ಪಡೆಯಬಹುದು.ಬೈಕ್ ಹಾಗೂ ಕಾರ್ ಪಾರ್ಕಿಂಗ್ ಗೆ ಕೂಡ ಇಲ್ಲಿ ಜಾಗವಿದೆ. ಕಾರ್ ಪಾರ್ಕಿಂಗ್ ಗೆ 50 ರೂಪಾಯಿ ಹಾಗೂ ಬೈಕ್ ಪಾರ್ಕಿಂಗ್ ಗೆ 20 ರೂಪಾಯಿ ಶುಲ್ಕ ಪಾವತಿಸಬೇಕು.