Asianet Suvarna News Asianet Suvarna News

ಕೊನಾರ್ಕ್​​​: ಶತಮಾನಗಳ ಕಾಲ ಗಾಳಿಯಲ್ಲೇ ತೇಲುತ್ತಿತ್ತು ಸೂರ್ಯ ದೇವರ ವಿಗ್ರಹ !

ಸೂರ್ಯನಿಗಾಗಿಯೇ ಇರೋ ಕೆಲವೇ ಕೆಲವು ದೇವಸ್ಥಾನಗಳಲ್ಲಿ ಒಡಿಶಾದಲ್ಲಿರುವ ಕೊನಾರ್ಕ್ ದೇವಾಲಯವೂ ಒಂದು. ಖುಜುರಾಹೋ ನೆನಪಿಸುವ ಮೈಥುನ ಶಿಲ್ಪಗಳಿರೋ ಈ ದೇವಸ್ಥಾನದಲ್ಲಿ ದೇವರ ವಿಗ್ರಹವೇ ಇಲ್ಲ!

konark travelogue where statue of sun was floating on air scientific reason
Author
First Published Jul 10, 2023, 12:06 PM IST

- ರಜನಿ.ಎಂಜಿ. ಏಷ್ಯಾನೆಟ್​ ಸುವರ್ಣ ನ್ಯೂಸ್​​

ಕೊನಾರ್ಕ್​ನಲ್ಲಿ ಸೂರ್ಯ ದೇವಸ್ಥಾನವಿದೆ ಎಂದು ಗೊತ್ತಿತ್ತು. ಆದರೆ ಆ ದೇವಸ್ಥಾನದಲ್ಲಿ ದೇವರ ಮೂರ್ತಿಯೇ ಇಲ್ಲ ಎಂದು ಗೊತ್ತಿರಲಿಲ್ಲ. ಪುರಿ ಜಗನ್ನಾಥ ರಥಯಾತ್ರೆಗೆಂದು ಹೋದವಳಿಗೆ ಕೊನಾರ್ಕ್​ ಹೆಸರೇ ಕೈ ಬೀಸಿ ಕರೆಯುತ್ತಿತ್ತು. ಬಂಗಾಳ ಕೊಲ್ಲಿ ಕಡಲ ತೀರದಲ್ಲಿರುವ, ಪುರಿಯಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಕೊನಾರ್ಕ್​ನ 13 ನೇ ಶತಮಾನದಲ್ಲಿ ನಿರ್ಮಾಣವಾದ ಸೂರ್ಯ ದೇವಸ್ಥಾನ ಜಗತ್ಪಸಿದ್ಧ.
  
ಕೊನಾರ್ಕ್​ ದೇವಸ್ಥಾನಕ್ಕೆ ನಾನು ಕಾಲಿಟ್ಟಾಗ ಸಂಜೆ 5 ಗಂಟೆಯಾಗಿತ್ತು. ಮುಳುಗುತ್ತಿದ್ದ ಸೂರ್ಯನ ಬೆಳಕಿನಲ್ಲಿ ಸೂರ್ಯ ದೇಗುಲ ಬಂಗಾರದ ಬಣ್ಣದಲ್ಲಿ ಮಿನುಗುತ್ತಿತ್ತು. ಬೇಲೂರು ಹಳೇಬೀಡಿನ ಕೆತ್ತನೆಯನ್ನು ನೆನಪಿಸುವಂತಿದ್ದ ದೇಗುಲದಲ್ಲಿ ಖುಜುರಾಹೋ ನೆನಪಿಸುವ ಮೈಥುನ ಶಿಲ್ಪಗಳಿಗೂ ಹೆಸರುವಾಸಿ.  ಆದರೆ ದೇವಸ್ಥಾನದಲ್ಲಿ ದೇವರೇ ಇಲ್ಲ ಎಂದು ಕೇಳಿ ನನಗೆ ನಿರಾಶೆಯಾಯಿತು. ಇಂಥ ಸುಂದರ ದೇಗುಲದಲ್ಲಿ ದೇವರೇ ಇಲ್ಲವಾ? 

ಶಿಲಾ ಕೆತ್ತನೆ ಬೆರಗುಗೊಳಿಸುತ್ತೆ:
ಈ ದೇವಸ್ಥಾನದ ಇತಿಹಾಸ ಕೇಳಿದರೆ ಮೈ ಜುಮ್ಮೆನ್ನುತ್ತದೆ. 13ನೇ ಶತಮಾನದಲ್ಲಿ ಗಂಗಾ ವಂಶಸ್ಥ ರಾಜ ನರಸಿಂಹದೇವ ಕಟ್ಟಿಸಿದೆನ್ನಲಾಗುವ ಈ ದೇವಾಲಯ ಅದ್ಭುತ ವಾಸ್ತುಶೈಲಿ ಹಾಗೂ ಬೆರಗುಗೊಳಿಸುವ ಶಿಲಾಕೆತ್ತನೆಯಿಂದ ಮನಮೋಹಕ. ದೇವಸ್ಥಾನ ಸುತ್ತಲೂ ಕಲ್ಲಿನಲ್ಲಿ ಕೆತ್ತಿರುವ ಮೈಥುನದ ಶಿಲ್ಪಗಳು ಇಡೀ ದೇವಾಲಯ ಕಳಿಂಗ ಶೈಲಿಯಲ್ಲಿದ್ದು, ಸೂರ್ಯನ ಹೊತ್ತ ರಥದ ಮಾದರಿಯಲ್ಲಿದೆ.  ಅತ್ಯಂತ ಸೂಕ್ಷ್ಮ ಕೆತ್ತನೆಯ 24 ಚಕ್ರಗಳು ಈ ದೇವಾಲಯದ ವೈಶಿಷ್ಟ್ಯತೆ. ಆ ಚಕ್ರಗಳು ನಮ್ಮ ಇಂದಿನ ಗಡಿಯಾರದ ಮಾದರಿಯಲ್ಲಿದೆ. ಪ್ರತಿ ಚಕ್ರದಲ್ಲಿಯೂ 24 ಗಂಟೆಗಳನ್ನು ಗುರುತಿಸಲಾಗಿದ್ದು, ನಮ್ಮ ಗಡಿಯಾರದಲ್ಲಿರುವಂತೆ ಪ್ರತಿ ನಿಮಿಷವನ್ನೂ ಗುರುತಿಸುವಂತೆ ರಚಿಸಲಾಗಿದೆ. ಅಚ್ಚರಿಯೆಂದರೆ ಈ 24 ಚಕ್ರಗಳೂ ಯಾವುದೇ ಬ್ಯಾಟರಿಯಿಲ್ಲದೆ, ನಮ್ಮ ಗಡಿಯಾರದಂತೆ ಈಗಲೂ ಕಾಲವನ್ನು ಸೂಚಿಸುತ್ತವೆ.  ರಥದ ಮಧ್ಯದ ಕೀಲಿನ ನೆರಳು ಈ ನಮ್ಮ ಗಡಿಯಾರದ ಮುಳ್ಳಿನಂತೆ ಕೆಲಸ ಮಾಡುತ್ತದೆ. ಆ ನೆರಳು ಎಲ್ಲಿ ಬೀಳುತ್ತದೆಯೋ ಅದರ ಆಧಾರದ ಮೇಲೆ ಸಮಯವನ್ನು ಕರಾರುವಕ್ಕಾಗಿ ಹೇಳಬಹುದು. ನಮ್ಮ ಗೈಡ್​ ಈಗ 5.35 ಎಂದು ಕರೆಕ್ಟಾಗಿ ಹೇಳಿ ನಮ್ಮನ್ನು ಬೆರಗುಗೊಳಿಸಿದರು. 

ಚಾರ್ ಧಾಮ್ ಯಾತ್ರೆಯಿಂದ ಪಾಪ ನಾಶ; ಹಿಂದೂಗಳಿಗೆ ಇದು ಏಕೆ ಮಹತ್ವ?

ಅಷ್ಟೆಲ್ಲಾ ವೈಭವಯುತವಾಗಿರುವ  ದೇವಾಲಯದ ಒಳಗೆ ಹೋಗುವಂತೆಯೇ ಇಲ್ಲ. ದೇವಸ್ಥಾನದ ಬಾಗಿಲು ಮುಚ್ಚಿದ್ದು, ಕೇವಲ ಹೊರ ಭಾಗವಷ್ಟೇ ನೋಡಲು ಅವಕಾಶ. ಇದ್ಯಾಕೆ ಹೀಗೆ ಅನ್ನೋ ನಮ್ಮ ಪ್ರಶ್ನೆಗೆ ಅಲ್ಲಿದ್ದ ಗೈಡ್ ಹೇಳಿದ​​ ದೇವಾಲಯದ ಕಥೆ ಕೇಳಿ ಒಮ್ಮೆ ಅವಕ್ಕಾದೆ. ಏಕಂದರೆ ಈ ದೇಗುಲದಲ್ಲಿ ಸೂರ್ಯನ ವಿಗ್ರಹ ನೆಲದ ಮೇಲೆ ನಿಂತಿರಲಿಲ್ಲ. ಬದಲಾಗಿ ಗಾಳಿಯಲ್ಲಿ ತೇಲುತ್ತಿತ್ತಂತೆ! ನಿಜ. ಸೂರ್ಯನ ವಿಗ್ರಹವಿದ್ದುದ್ದು ಯಾವುದೇ ಪೀಠದ ಮೇಲಲ್ಲ. ಗಾಳಿಯಲ್ಲೇ ಶತಮಾನಗಳ ಕಾಲ ನಿಂತಿತ್ತು ಆ ವಿಗ್ರಹ. ಇದನ್ನು ಭಕ್ತರು ಪವಾಡ ಎನ್ನುತ್ತಾರೆ. ಆದರೆ ಅದರ ಹಿಂದೆ ಇದ್ದದ್ದು ವಿಜ್ಞಾನ. ಅಂದಿನ ಕಾಲದಲ್ಲೇ ದೇಗುಲದ ಶಿಖರದ ಮೇಲ್ಭಾಗದ ನಾಲ್ಕೂ ಕಡೆ ದೊಡ್ಡ ಮರದ ದಿಮ್ಮಿಯಂಥ ಬೃಹತ್​ ಕಬ್ಬಿಣದ ಬೀಮ್​ಗಳನ್ನು ಕೂರಿಸಲಾಗಿತ್ತು. ಮುಖ್ಯ ಗೋಪುರದ ಪ್ರತಿ 2 ಕಲ್ಲಿನ ಮಧ್ಯ ಕಬ್ಬಿಣದ ಪ್ಲೇಟ್​​ ಇಡಲಾಗಿತ್ತು. ಶಿಖರದ ಮಧ್ಯಭಾಗದಲ್ಲಿ  ಸುಮಾರು 52 ಟನ್​​​​​ ಬೃಹತ್​ ಆಯಸ್ಕಾಂತವನ್ನು ಇಟ್ಟು ಕಳಶವನ್ನು ಜೋಡಿಸಲಾಯಿತು. ಈ ಆಕರ್ಷಣೆಯ ಪ್ರಭಾವದಿಂದ ಕಬ್ಬಿಣದ ಅಂಶವಿದ್ದ ಸೂರ್ಯ ವಿಗ್ರಹ ನೆಲ ಬಿಟ್ಟು ಮೇಲೆ ಗಾಳಿಯಲ್ಲಿ ನಿಂತಿತಂತೆ. ಶತಮಾನಗಳ ಕಾಲ ಈ ವಿಗ್ರಹ ಹಾಗೇ ತೇಲುತ್ತಾ ನಿಂತಲ್ಲೇನಿಂತಿತ್ತು. ಪೂಜೆ ಪುನಸ್ಕಾರಗಳೂ ಹಾಗೇ ನಡೆಯುತ್ತಿದ್ದವು.  ಆದರೆ ಮುಂದೆ ಬಂಗಾಳಕೊಲ್ಲಿ ಕಡಲ ತೀರಕ್ಕೆ ಬಂದ ಪೋರ್ಚುಗೀಸರ ಹಡಗುಗಳಿಗೆ ಈ ಮ್ಯಾಗ್ನೆಟ್​​ ಪ್ರಭಾವದಿಂದ ದಾರಿ ತಪ್ಪುತ್ತಿತ್ತು. ಇದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತದೆಯೆಂದು ಪೋರ್ಚುಗೀಸರು ಈ ಬೃಹತ್​ ಆಯಸ್ಕಾಂತವನ್ನು ಶಿಖರದಿಂದ ಎತ್ತಿಬಿಟ್ಟರಂತೆ. ಆಕರ್ಷಣೆಯ ಬಲದಲ್ಲಿ ನಿಂತಿದ್ದ ಸೂರ್ಯ ವಿಗ್ರಹ ಕೂಡಲೇ ಧರೆಗುರುಳಿತು. ಅಂದಿನಿಂದ ದೇವಸ್ಥಾನದ ಒಳಭಾಗದಲ್ಲಿ ಕಲ್ಲುಗಳು ಬೀಳತೊಡಗಿದವು. ಆನಂತರ ಬಂದ ಬ್ರಿಟೀಷರು ಆ ವಿಗ್ರಹವನ್ನು ಕೊಂಡೊಯ್ದು ಲಂಡನ್​ ಮ್ಯೂಸಿಯಂನಲ್ಲಿಟ್ಟರು. ಈ ಮಾತಿಗೆ ಸಾಕ್ಷಿ ಎನ್ನುವಂತೆ ಈಗಲೂ ಬೃಹತ್​ ಕಬ್ಬಿಣದ ಬೀಮ್​ಗಳು ದೇಗುಲದ ಆವರಣದಲ್ಲಿ ಬಿದ್ದಿವೆ. ಯಾರದ್ದಾದರೂ ತಲೆ ಮೆಲೆ ಬೀಳುತ್ತದೆ ಎಂದು ದೇವಸ್ಥಾನದ ಒಳ ಹೋಗುವುದನ್ನೇ ಸರ್ಕಾರ ನಿಷೇಧಿಸಿದೆ. ಆದರೆ ಆ ಬೃಹತ್​ ಆಯಸ್ಕಾಂತ ಎಲ್ಲಿ ಹೋಯಿತು ಎಂದು ಯಾರಿಗೂ ತಿಳಿದಿಲ್ಲ.

ನಮ್ಮ ಬೇಲೂರು, ಹಳೇಬೀಡು ನಿರ್ಮಾಣವಾದ ಸಮಯದಲ್ಲೇ ನಿರ್ಮಾಣವಾದ ಈ ಸೂರ್ಯ ದೇವಾಲಯ ಅದೇ ರೀತಿಯ ಶಿಲ್ಪಕಲಾ ಸೌಂದರ್ಯದಿಂದ ಕೂಡಿದೆಯಾದರೂ, ಕಾಲದ ಹೊಡೆತಕ್ಕೆ ಸಿಕ್ಕು ಹಾಳಾಗಿದೆ. ಸಮುದ್ರದ ಪಕ್ಕದಲ್ಲಿರುವುದಿರಂದ ಅಲೆಗಳ ಹೊಡೆತ, ಉಪ್ಪುನೀರಿನ ಗಾಳಿಯ ಬಡಿತಕ್ಕೆ ಸಿಕ್ಕಿ ತನ್ನ ಮೂಲ ಸೌಂದರ್ಯ ಕಳೆದುಕೊಂಡಿದೆಯಾದರೂ ಅಂದಿನ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ. ದೇವಸ್ಥಾನ ನೋಡಿದ ನಂತರ ಪಕ್ಕದಲ್ಲೇ ಇದ್ದ ಮ್ಯೂಸಿಯಂ ಮೂಲ ದೇವಸ್ಥಾನದ ಮಾದರಿ, ದೇವಸ್ಥಾನದ ಇತಿಹಾಸ ಕುರಿತ ಡಾಕ್ಯುಮೆಂಟರಿ ಸಿನಿಮಾ ನೋಡುವುದನ್ನು ಮರೆತರೆ ಒಂದು ಅದ್ಭುತ ಅನುಭವದಿಂದ ವಂಚಿತರಾಗುತ್ತೀರಿ.

Puri Jagannath Ratha Yatra: ರಥದ ಹಗ್ಗ ಮುಟ್ಟಿದರೆ ಜಗನ್ನಾಥನ ಪಾದ ಸ್ಪರ್ಶಿಸಿದಂತೆ!

ಸೂರ್ಯನ ವಿಗ್ರಹ ನಿಜಕ್ಕೂ ಗಾಳಿಯಲ್ಲಿ ತೇಲುತ್ತಾ ನಿಂತಿತ್ತಾ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಇನ್ನೊಮ್ಮೆ ದೇಗುಲವ ಸುತ್ತಿಬಂದೆ. ಈ ಕಥೆ ನಿಜವಾದರೆ ಬಹುಶಃ ಜಗತ್ತಿನ ಏಳು ಅದ್ಭುತಗಳಲ್ಲಿ ಈ ದೇಗುಲವೂ ಇರಲೇಬೇಕು ಎಂದು ಬಲವಾಗಿ ಅನಿಸಿತು. ಇಂಥ ಅಪೂರ್ವ ಶಿಲ್ಪಕಲಾ  ಸೌದರ್ಯದ, 24 ಚಕ್ರದ 7 ಕುದುರೆಯ ಶಿಲಾರಥದ ದೇಗುಲದಲ್ಲಿ ದೇವರೇ ಇಲ್ಲವಾಯಿತೇ ಎಂದು ವಿಷಾಧದಿಂದ ಇನ್ನೊಮ್ಮೆ ದೇಗುಲದ ಕಡೆ ತಿರುಗಿ ನೋಡಿದೆ. ದೇವಸ್ಥಾನದ ಪಕ್ಕದಲ್ಲೇ ಸುಂದರವಾಗಿ ಮುಗುಳ್ನಗುತ್ತಿದ್ದ ಸೂರ್ಯ ಮುಳುಗುತ್ತಿದ್ದ..

Follow Us:
Download App:
  • android
  • ios