ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರು ಕುಸಿದು ಬೀಳುವ ದೃಶ್ಯವನ್ನು ನೋಡಬಹುದು. ಇದರಿಂದ ನೆಟ್ಟಿಗರು ಆಘಾತಕ್ಕೊಳಗಾಗಿದ್ದು, ವಿಡಿಯೋ ನೋಡಿದ ಮೇಲೆ ಡಾ.ಬ್ರೋ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಆಗಿದ್ದೇನು? 

ನಮಸ್ಕಾರ ದೇವ್ರು ಎನ್ನುತ್ತಲೇ ಕರುನಾಡ ಕಣ್ಮಣಿ ಎಂದೆಲ್ಲಾ ಬಿರುದು ಪಡೆದು ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ನೆಲೆಯೂರಿರೋದು ಡಾ.ಬ್ರೋ ಅರ್ಥಾತ್​ ಗಗನ್ ಶ್ರೀನಿವಾಸ್. ತಮ್ಮ ಚಾನೆಲ್‌ನಲ್ಲಿ 170 ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದು, ಇವರ ಯೂಟ್ಯೂಬ್ ಚಾನೆಲ್ (youtube channel) ಸುಮಾರು 2.8 ಮಿಲಿಯನ್ ಸಬ್‌ಸ್ಕ್ರೈಬರ್ಸ್‌ನ್ನು ಹೊಂದಿದೆ, ಅಲ್ಲದೆ ಇನ್’ಸ್ಟಾಗ್ರಾಂನಲ್ಲಿ 2.9 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಯೂಟ್ಯೂಬರ್ ಇವರಾಗಿದ್ದಾರೆ. ಆದರೆ, ಕೆಲವು ತಿಂಗಳುಗಳಿಂದ ಇವರು ಯಾವುದೇ ವಿಡಿಯೋ ಮಾಡದೇ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ. ಡಾ. ಬ್ರೋ ಕೊನೆಯದಾಗಿ ಯೂಟ್ಯೂಬಲ್ಲಿ ವಿಡಿಯೋ ಬಿಟ್ಟಿದ್ದು, ಮಾರ್ಚ್ ತಿಂಗಳಲ್ಲಿ. ಚೀನಾದ ನಡೆದಾಡುವ ದೇವತೆ ಬಗ್ಗೆ ವಿಡಿಯೋ ಮಾಡಿದ್ದರು, ಅಲ್ಲದೇ ತಮ್ಮ ಇನ್’ಸ್ಟಾಗ್ರಾಂನಲ್ಲಿ ಟಿಬೆಟ್ ನ ಸುಂದರವಾದ ಮಾರ್ಫಾ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸುಂದರವಾದ ಪರಿಸರ, ಅಲ್ಲಿ ನಿಶ್ಯಬ್ಧತೆಯ ಕುರಿತಾಗಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಅದಾಗಿ ನಾಲ್ಕು ತಿಂಗಳು ಕಳೆದರೂ ಡಾ. ಬ್ರೋ ಯಾವುದೇ ವಿಡಿಯೋ ಬಿಡುಗಡೆ ಮಾಡಿಲ್ಲ. ಒಂದೆರಡು ಬಾರಿ ತಮ್ಮ ಇನ್’ಸ್ಟಾಗ್ರಾಂನಲ್ಲಿ (Instagram)ಯಾವುದೋ ಪ್ರೊಮೋಷನ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಯಾವುದೇ ದೇಶದ ವಿಡಿಯೋ ಮಾಡಿಲ್ಲ. ಹಾಗಾಗಿ ಡಾ, ಬ್ರೋ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿದ್ಯಪ್ಪಾ ದೇವ್ರು ಎನ್ನುತ್ತಾ ಚರ್ಚೆ ಮಾಡ್ತಿದ್ದಾರೆ.

ಕೆಲವರು ನಾವು ಡಾ. ಬ್ರೋ ವಿರುದ್ಧ ಕಂಪ್ಲೇಂಟ್ ಕೊಡ್ತೀವಿ ಅಂದ್ರೆ, ಇನ್ನೂ ಕೆಲವರು ಡಾ. ಬ್ರೋಗೆ ವಾರ್ನಿಂಗ್ ಕೊಡ್ತೀವಿ, ಯಾಕೆ ನಾಲ್ಕು ತಿಂಗಳಿಂದ ವಿಡಿಯೋ ಇಲ್ಲ. ಯಾಕೆ ಸೈಲೆಂಟ್ ಆಗಿದ್ಯಾ? ಡಾ. ಬ್ರೋ ವಿಡಿಯೋ ಇಲ್ಲದೇ ಇನ್’ಸ್ಟಾಗ್ರಾಂಗೂ ಯೂಟ್ಯೂಬ್ ಗೂ (youtube)ಕಳೆ ಇಲ್ಲ ಎಂದಿದ್ದಾರೆ. ಮಿಸ್ ಯೂ ಡಾ. ಬ್ರೋ ಅಂತಾನೂ ಹೇಳಿದ್ದಾರೆ. ಆದರೆ ಇದರ ನಡುವೆಯೇ, ವಿಡಿಯೋ ಒಂದು ಅಪ್​ಲೋಡ್​ ಆಗಿದ್ದು, ಇದು ಗಗನ್​ ಅವರ ಅಭಿಮಾನಿಗಳನ್ನು ತೀವ್ರ ಕೆರಳಿಸಿದೆ. ನಿಮ್ಮ ಮೇಲೆ ಇರುವ ಅಭಿಮಾನವನ್ನೆಲ್ಲಾ ಕಳೆದುಹಾಕಿದ್ರಲ್ಲ ಬ್ರೋ ಎಂದು ಫ್ಯಾನ್ಸ್​ ಕೆಂಡಾಮಂಡಲವಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಇದಾಗಲೇ ತಿಳಿದಿರುವಂತೆ ಡಾ. ಬ್ರೋ ಅವರು 'ಗೋ ಪ್ರವಾಸ' (Go Pravasa) ಎಂಬ ಪ್ರವಾಸೋದ್ಯಮ ಸಂಸ್ಥೆಯ ಜೊತೆ ಟೈ-ಅಪ್​ ಆಗಿದ್ದಾರೆ. ಈ ಸಂಸ್ಥೆಯು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಶ ಹಾಗೂ ವಿದೇಶಗಳ ಪ್ರವಾಸಗಳನ್ನು ಆಯೋಜಿಸುತ್ತದೆ. ಸದ್ಯ ಅದರಲ್ಲಿಯೇ ಅವರು ಬಿಜಿಯಾಗಿರುವ ಕಾರಣ, ಸೋಷಿಯಲ್​​ ಮೀಡಿಯಾದತ್ತ ಹೆಚ್ಚು ಗಮನ ಹರಿಸುತ್ತಿಲ್ಲ. ಗೋ ಪ್ರವಾಸದ ಮೂಲಕ, ಕನ್ನಡಿಗರಿಗೆ ದೇಶ ವಿದೇಶಗಳ ಸಂಸ್ಕೃತಿ, ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಅಭಿವೃದ್ಧಿ ಮೊದಲಾದವುಗಳನ್ನು ಮೊಬೈಲ್ ಮೂಲಕ ತೋರಿಸುವ ಗುರಿಯನ್ನು ಹೊಂದಿರುವುದಾಗಿ ಅವರು ಹೇಳಿದ್ದರು. ಇದನ್ನೆಲ್ಲಾ ಅವರ ಫ್ಯಾನ್ಸ್​ ಮುಕ್ತಕಂಠದಿಂದಲೇ ಶ್ಲಾಘಿಸಿದ್ದರು.

ಆದರೆ ಈಗ? ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದರಲ್ಲಿ ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿ ಕುಳಿತಿದ್ದಾರೆ. ಅದರಲ್ಲಿ ಒಬ್ಬನನ್ನು ಹೈಲೈಟ್​ ಮಾಡಲಾಗಿದೆ. ಕಚೇರಿಯ ಸಮಯದಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಹೃದಯಾಘಾತವಾಗುವಾಗ ನೀಡುವ ಮ್ಯೂಸಿಕ್​ ಅಲ್ಲಿ ನೀಡಲಾಗಿದ್ದು, ಆ ಸಿಬ್ಬಂದಿಯನ್ನು ಹೈಲೈಟ್​ನಲ್ಲಿ ತೋರಿಸಲಾಗಿದೆ. ಅಷ್ಟೊತ್ತಿಗಾಗಲೇ ಆತ ಬಿದ್ದುಬಿಡುತ್ತಾನೆ. ಇದನ್ನು ನೋಡುತ್ತಿದ್ದರೆ, ಯಾರಿಗೋ ಏನೋ ಆಗಿದೆ ಎಂದು ನೆಟ್ಟಿಗರು ಶಾಕ್​ ಆಗುವುದರೊಳಗೆ ಅಲ್ಲಿರುವ ಇತರರು ಓಡೋಡಿ ಹೋಗುತ್ತಾರೆ. ಕೊನೆಗೆ ಬಿದ್ದಿರೋ ವ್ಯಕ್ತಿ, ಅಲ್ಲಿ ಪುಸ್ತಕ ಹಿಡಿದು ಕುಳಿತುಕೊಂಡಿದ್ದಾನೆ. ಇದು ಬಾಲಿ ಪ್ರವಾಸಕ್ಕೆ ಇರುವ ಟೂರ್​ ಬಗ್ಗೆ ತಿಳಿಸುತ್ತದೆ. ಅಲ್ಲಿಯೇ ಈ ಪ್ರವಾಸದ ಕುರಿತು ಜಾಹೀರಾತು ಮಾಡಲು ಈ ತಂತ್ರವನ್ನು ಬಳಸಿಕೊಳ್ಳಲಾಗಿದೆ. ಡಾ.ಬ್ರೋ ಅದರ ಭಾಗವಾಗಿರುವ ಕಾರಣ, ಈ ವಿಡಿಯೋದಲ್ಲಿ ಅವರು ಇಲ್ಲದಿದ್ದರೂ, ಅವರ ಫೋಟೋ ಪುಸ್ತಕದ ಮೇಲೆ ಪ್ರಿಂಟ್​ ಮಾಡಲಾಗಿದೆ.

ಇದರಿಂದ ನೆಟ್ಟಿಗರು ಇಂಥ ಗಿಮಿಕ್​ ಯಾಕೆ ಮಾಡುತ್ತೀರಿ, ಬೇರೆ ಐಡಿಯಾ ಸಿಕ್ತಿಲ್ವಾ? ಥೂ ಅಸಹ್ಯ ಎಂದೆಲ್ಲಾ ತೀವ್ರವಾಗಿ ಟೀಕೆಮಾಡುತ್ತಿದ್ದಾರೆ. ಅಲ್ಲಿ ತಮ್ಮ ನೆಚ್ಚಿನ ಗಗನ್​ ಅವರ ಫೋಟೋ ಇರುವ ಕಾರಣ ಹಾಗೂ ಈ ಪ್ರವಾಸದ ಭಾಗ ಅವರೇ ಆಗಿರುವ ಕಾರಣ, ಸಹಜವಾಗಿ ಅಭಿಮಾನಿಗಳ ಕೋಪ ಅವರ ಮೇಲೆ ತಿರುಗಿದೆ. ಯಾರೂ ಈ ಪ್ರವಾಸಕ್ಕೆ ಹೋಗಬೇಡಿ ಎಂದೇ ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು, ಈ ಪ್ರವಾಸದ ರೇಟ್​ ನೋಡಿ ಹಾರ್ಟ್​ ಎಟ್ಯಾಕ್​ ಆಗುತ್ತದೆ ಎಂದು ಈತ ಹೇಳುತ್ತಿದ್ದಾನೆ, ಹೋಗಬೇಡಿ ಎಂದೂ ಹೇಳುತ್ತಿದ್ದಾರೆ.

View post on Instagram