ಕುಪ್ಪಳ್ಳಿಯ ನೆನಪು: ಮಲೆನಾಡ ಮಡಿಲು ತೀರ್ಥಹಳ್ಳಿಯ 'ಕವಿ ಮನೆ'!
* ಮಲೆನಾಡ ಮಡಿಲಲ್ಲಿ ಸುಂದರವಾಗಿ ನೆಲೆನಿಂತಿರುವ ಪ್ರವಾಸಿತಾಣ ಕುಪ್ಪಳ್ಳಿ
* ಕುವೆಂಪು ರವರ ಹುಟ್ಟೂರು, 'ಕವಿ ಮನೆ'ಗೊಂದು ಭೇಟಿ
* ಕವಿ ಮನೆ ಕಂಡರೂ ಕವಿಶೈಲಕ್ಕೆ ಭೇಟಿ ನೀಡಲಾಗದ ತೊಳಲಾಟ
ಜ್ಯೋತಿ.ಜಿ, ಹೊರನಾಡು
ಕುಪ್ಪಳ್ಳಿ ಮಲೆನಾಡ ಮಡಿಲಲ್ಲಿ ಸುಂದರವಾಗಿ ನೆಲೆನಿಂತಿರುವ ಪ್ರವಾಸಿತಾಣ. ಕುವೆಂಪು ರವರ ಹುಟ್ಟೂರು. ಇವೆಲ್ಲಾ ಕುಪ್ಪಳ್ಳಿ ಎಂದು ತಕ್ಷಣ ಸಾಮಾನ್ಯವಾಗಿ ಎಲ್ಲರ ಮನದಲ್ಲೂ ಮೂಡಿಬರುವ ಚಿತ್ರಣ. ನಾನು ಇದಕ್ಕೆ ಹೊರತಾಳಲ್ಲ. ಇವೆಲ್ಲದರ ಜೊತೆಗೆ ಕುಪ್ಪಳ್ಳಿ ಎಂದಾಕ್ಷಣ ನನ್ನ ನೆನಪಿನಾಳದಲ್ಲಿ ಮೊದಲು ಮೂಡುವ ಚಿತ್ರಣ ನಾವು ಮೊದಲ ಬಾರಿಗೆ ಕುಪ್ಪಳ್ಳಿಗೆ ಹೋದ ದಿನ.
ಒಮ್ಮೆ ನಾವು ಗೆಳತಿಯರೆಲ್ಲ ಸೇರಿ ಕುಪ್ಪಳಿಗೆ ಹೋಗಲು ನಿರ್ಧರಿಸಿದೆವು. ಅದು ರಜೆದಿನ. ನಾವಿದ್ದದ್ದು ಸರ್ಕಾರಿ ವಸತಿ ನಿಲಯ ವಾದ್ದರಿಂದ ನಮಗೆ ರಜೆ ದಿನಗಳಲ್ಲಿ ಹೊರಗೆಲ್ಲೂ ಹೋಗಲು ಅನುಮತಿ ಇರಲಿಲ್ಲ. ಕೆಲವೊಮ್ಮೆ ಸೂಕ್ತ ಕಾರಣಗಳನ್ನು ಕೊಟ್ಟು ನಿಲಯದ ಆಸುಪಾಸಿನ ದೇವಾಲಯಗಳಿಗೋ, ಅಂಗಡಿಗಳಿಗೋ ಹೋಗಬಹುದಿತ್ತು ಅದು ಕೂಡ ಬೇಗ ಬರುವೆವೆಂಬ ಭರವಸೆ ಕೊಟ್ಟು.ಅಂದು ಕೂಡ ನಾವೆಲ್ಲ ಕುಪ್ಪಳಿಗೆ ಹೋಗುವುದೆಂದು ತೀರ್ಮಾನಿಸಿದೆವು. ಏನೋ ಒಂದು ಸುಳ್ಳು ಕಾರಣ ಹೇಳಿ ನಾವು ಗೆಳತಿಯರು 6ಜನ ನಿಲಯದ ಹೊರಬಿದ್ದು ಕುಪ್ಪಳ್ಳಿಯ ಬಸ್ ಹತ್ತಿದೆವು.
ಹೋಗುವುದೆಂದು ತೀರ್ಮಾನವೇನೊ ಆಯ್ತು, ಬಸ್ ಹತ್ತಿಯು ಆಯ್ತು. ಆದರೆ ನಮ್ಮಲ್ಲಿ ಯಾರೊಬ್ಬರಿಗೂ ಕುಪ್ಪಳ್ಳಿಗೆ ಹೋಗುವ ಮಾರ್ಗ ಸರಿಯಾಗಿ ಗೊತ್ತಿರಲಿಲ್ಲ. ಅಂತೂ ಅವರಿವರಿಂದ ಕೇಳಿ ಕುಪ್ಪಳ್ಳಿಯ ಮಾರ್ಗ ಕಂಡುಕೊಂಡೆವು. ಸುಮಾರು 4ಗಂಟೆಗಳ ಕಾಲ ಬಸ್ ಪ್ರಯಾಣದ ನಂತರ ಕುಪ್ಪಳ್ಳಿ ತಲುಪಿದೆವು. ಆದರೂ ಮನದ ಮೂಲೆಯಲ್ಲೊಂದು ಕಾಣದ ಅತಂಕ. ನಾವು ಒಂದು ಹಂತಕ್ಕೆ ಕುಪ್ಪಳಿ ತಲುಪಿದ್ದರು ಬಸ್ ಇಳಿದು ಸುಮಾರು ದೂರ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಅಷ್ಟರಲ್ಲೇ ಗೆಳತಿಯೊಬ್ಬಳ ಸಲಹೆ ಮೇರೆಗೆ ಕವಿಮನೆಗೆ ಹತ್ತಿರವಿದ್ದು ಕೊಂಡು ಯಾವುದೋ ಕಾಡು ದಾರಿಯಲ್ಲಿ ಹೆಜ್ಜೆ ಹಾಕತೊಡಗಿದೆವು. ನಡೆದಷ್ಟು ದಾರಿ ಮುಗಿಯಲೇ ಇಲ್ಲ. ಒಟ್ಟಿನಲ್ಲಿ ನಡೆಯುತ್ತಿರುವ ಹಾದಿ ಸರಿ ಇರಬಹುದೆಂಬ ಆಶಾಭಾವ ದಲ್ಲಿ ಮುಂದೆ ಸಾಗಿದೆವು.
ಎಷ್ಟೋ ದೂರ ನಡೆದ ನಂತರ ಅಲ್ಲೆಲ್ಲೋ ಒಂದು ಪುಟ್ಟ ಹಂಚಿನಮನೆ ಕಂಡಂತಾಯಿತು. ಅಂತೂ ಕವಿಮನೆ ತಲುಪಿದೆವಲ್ಲ ಎಂದು ಖುಷಿಪಟ್ಟು ಕೊಂಡೆವು. ಹತ್ತಿರ ಹೋಗಿ ನೋಡಿದರೆ ನಾವ್ ಇದ್ದದ್ದಾದರೂ ಎಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮಶತಮಾನೋತ್ಸವ ಸ್ಮಾರಕ ಭವನದ ಬಳಿಗೆ . ನಾವಿನ್ನೂ ಅದರೊಳಗೆ ಪ್ರವೇಶಿಸಿರಲಿಲ್ಲ ಕಾರಣ ನಾವು ನಡೆದು ಬಂದದ್ದು ಕಾಡು ದಾರಿಯಾದ್ದರಿಂದ ಸ್ಮಾರಕದ ಸುತ್ತ ಕಲ್ಲು ಕಂಬಗಳ ಅಡ್ಡಗೋಡೆ ನಿರ್ಮಿಸಲಾಗಿತ್ತು. ಅಂತೂ ಹೇಗೋ ಕಷ್ಟಪಟ್ಟು ಜೀವನದ ಅತ್ಯಂತ ದೊಡ್ಡ ಸಾಧನೆ ಎಂಬಂತೆ ಕಲ್ಲು ಕಂಬಗಳನ್ನು ಹಾರಿ ಕೊನೆಗೂ ಸ್ಮಾರಕದೊಳಗೆ ಪ್ರವೇಶಿಸಿದೆವು. ಸ್ಮಾರಕದ ಬಳಿ ಇದ್ದವರನ್ನು ಕೇಳಿ ಅಂತೂ ಇಂತೂ ಕವಿ ಮನೆ ತಲುಪಿದೆವು. ಇವೆಲ್ಲ ಗೋಜುಗಳ ನಡುವೆ ಮನದಲ್ಲೊಂದು ನೆಮ್ಮದಿಯ ಭಾವ ಅಂತೂ ಕವಿ ಮನೆ ತಲುಪಿದವಲ್ಲ ಎಂದು.
ಲಗುಬಗೆಯಿಂದ ಒಳನಡೆದು ಕವಿಮನೆಯ ಒಂದೊಂದು ಮೂಲೆಯನ್ನು ಕುತೂಹಲದಿಂದ ಗಮನಿಸತೊಡಗಿದೆವು. ಅಲ್ಲಿ ನಮಗೆ ಕಂಡದ್ದು ಅದ್ಭುತವಾದ ಸಂಗ್ರಹ. ಅವುಗಳೆಲ್ಲ ಕುವೆಂಪುರವರ ಬಾಲ್ಯವನ್ನು, ಅವರ ಪುಸ್ತಕ ಪ್ರೇಮವನ್ನು ಸಾರಿ ಸಾರಿ ಹೇಳುತ್ತಿತ್ತು.ಅಲ್ಲಿರುವ ಪ್ರತಿಯೊಂದು ವಸ್ತುಗಳಲ್ಲು ಕುವೆಂಪುರವರ ಒಂದೊಂದು ನೆನಪುಗಳಿತ್ತು.
ಅಂತೂ ಕವಿ ಮನೆಯನ್ನು ನೋಡಿ ಇನ್ನೇನು ಕವಿಶೈಲಕ್ಕೆ ಹೋಗಬೇಕು ಎನ್ನುವಾಗ ಗಡಿಯಾರದ ಮುಳ್ಳುಗಳು ನಮ್ಮನ್ನು ಎಚ್ಚರಿಸಿದ್ದವು. ನಮಗೆ ಹೆಚ್ಚು ಸಮಯವು ಇರಲಿಲ್ಲ.ಇನ್ನು ತಡ ಮಾಡುವುದು ಸರಿಯಲ್ಲ ಎಂದುಕೊಂಡು ಆತುರಾತುರವಾಗಿ ಕುಪ್ಪಳ್ಳಿಯಿಂದ ಹೊರಬಿದ್ದು ಬಸ್ ನಿಲ್ದಾಣ ತಲುಪಿದೆವು. ನಮ್ಮ ದುರಾದೃಷ್ಟವೆಂಬಂತೆ ಎಷ್ಟು ಹೊತ್ತು ಕಾದರೂ ಒಂದು ಬಸ್ ಬರಲೇ ಇಲ್ಲ. ಅಂತೂ ಕೊನೆಗೆ 3ಗಂಟೆಗೆ ಒಂದು ಬಸ್ ಬಂತು. ಪುಣ್ಯ ಈಗಲಾದರೂ ಬಸ್ ಬಂತಲ್ಲ ಎಂದುಕೊಂಡು ಹಾಸ್ಟೆಲ್ ಕಡೆಗೆ ಪಯಣ ಬೆಳೆಸಿದೆವು.
ಅದೆಷ್ಟೇ ಬೇಡವೆಂದರೂ ಗಡಿಯಾರದ ಮುಳ್ಳು ಅದಾಗಲೆ ಸುಮಾರು 6:30 ರಆಸುಪಾಸಿಗೆ ಬಂದು ನಿಂತಿತ್ತು. ಎಷ್ಟೇ ಬೇಡವೆಂದು ಕೊಂಡರು ಕೂಡ ನಮ್ಮನ್ನು ಸ್ವಾಗತಿಸಿದ್ದು ಮಾತ್ರ ಹಾಸ್ಟೆಲ್ ವಾರ್ಡನ್. ಅವರನ್ನು ನೋಡುತ್ತಿದ್ದಂತೆ ಒಮ್ಮೆಲೆ ನಮ್ಮ ಖುಷಿಯೆಲ್ಲ ಮಾಯವಾಗಿಬಿಟ್ಟಿತ್ತು. ಮುಂದಿನ ಮಂಗಳಾರತಿಗೆ ಅನಿವಾರ್ಯವಾಗಿ ತಲೆ ಬಾಗಲೇ ಬೇಕಾಯಿತು. ಆ ಕ್ಷಣಕ್ಕೆ ಆ ಬೈಗುಳಗಳು ಕಹಿ ಎನಿಸಿದರೂ ಇಂದಿಗೆ ನಮ್ಮಈ ಎಲ್ಲಾ ತರಲೆಗಳು ಮನದ ಮೂಲೆಯಲ್ಲಿ ಸಿಹಿ ನೆನಪಾಗಿ ಹಾಗೆ ಉಳಿದು ಬಿಟ್ಟಿದೆ.