ಜಗತ್ತಿನ ವನ್ಯಜೀವಿಗಳು ಎದುರಿಸುತ್ತಿರುವ ಐದು ಅಪಾಯಗಳು!

ಕಾಡು ಬರಿದಾಗುತ್ತದೆ, ತಾಪಮಾನ ಏರುತ್ತಿದೆ, ಕಾಡ್ಗಿಚ್ಚು, ಪ್ರವಾಹ, ಬಿರುಗಾಳಿ ಸಾಮಾನ್ಯವಾಗಿದೆ. ಇದರೊಂದಿಗೆ ಉಸಿರುಗಟ್ಟಿಸುವ ಮಾಲಿನ್ಯ, ಬೇಟೆ, ಪ್ರಾಣಿಗಳ ಅಕ್ರಮ ಮಾರಾಟ ಇನ್ನೂ ಹಲವು ಸಮಸ್ಯೆಗಳು ವನ್ಯಜೀವಿಗಳನ್ನು ಕಾಡುತ್ತಿವೆ.  

5 biggest threats to the world wildlife

ಮನುಷ್ಯ ಈ ಭೂಮಿ ತನಗೆ ಮಾತ್ರ ಸೇರಿದ್ದೆಂದು ಭಾವಿಸಿದಂತಿದೆ. ಈ ಗ್ರಹದ ಆಡಳಿತ ಚುಕ್ಕಾಣಿ ಹಿಡಿದು ಸರ್ವಾಧಿಕಾರಿಯ ದರ್ಪ ಪ್ರದರ್ಶಿಸುತ್ತಿದ್ದಾನೆ. ಪರಿಣಾಮ, ಪರಿಸರದ ಮೇಲೆ ಅತ್ಯಾಚಾರ, ಜೀವವೈವಿಧ್ಯತೆಯ ಉಳಿವಿಗೆ ಪೆಟ್ಟು. ನಮ್ಮ ದುರಾಸೆಗೆ ಜೀವಸಂಕುಲದ ಸಮತೋಲನ ತತ್ವವನ್ನೇ ಏರುಪೇರು ಮಾಡುತ್ತಿದ್ದೇವೆ. ಸಧ್ಯ ವನ್ಯಪ್ರಾಣಿಗಳು ಎದುರಿಸುತ್ತಿರುವ ಐದು ಪ್ರಮುಖ ಸಮಸ್ಯೆಗಳು ಇಲ್ಲಿವೆ. 

1. ಕಾನೂನುಬಾಹಿರ ವನ್ಯಜೀವಿ ಬೇಟೆ, ಮಾರಾಟ

ಜಗತ್ತಿನ ಟಾಪ್ 10 ಹಾಟ್‌ಸ್ಪಾಟ್; 2020ಯಲ್ಲಿ ಸ್ಥಾನ ಪಡೆದ ಜೋಧ್‌ಪುರ!

ಕಾನೂನುಬಾಹಿರ ವನ್ಯಜೀವಿ ಮಾರಾಟವು ಜಗತ್ತಿನಲ್ಲಿ ನಾಲ್ಕನೇ ಅತಿ ದೊಡ್ಡ ಕ್ರಿಮಿನಲ್ ಇಂಡಸ್ಟ್ರಿ. ಡ್ರಗ್ಸ್, ಆರ್ಮ್ಸ್, ಮಾನವ ಕಳ್ಳಸಾಗಣೆ ಬಳಿಕ ವನ್ಯಜೀವಿ ಮಾರಾಟವೇ ದೊಡ್ಡ ದಂಧೆ. ವಾರ್ಷಿಕ ಸುಮಾರು 20 ಬಿಲಿಯನ್ ಅಮೆರಿಕನ್ ಡಾಲರ್‌ ಮಟ್ಟದ ವನ್ಯಜೀವಿ ಬೇಟೆ, ಮಾರಾಟ ಕಾನೂನುಬಾಹಿರವಾಗಿ ನಡೆಯುತ್ತದೆ. ಇದರಿಂದ ರೈನೋಸರ್, ಆನೆ ಸೇರಿದಂತೆ ಅಮೂಲ್ಯ ವನ್ಯಪ್ರಾಣಿಗಳ ಸಂಕುಲಕ್ಕೇ ಆಪತ್ತು ಕಾದಿದೆ. ಆಫ್ರಿಕನ್ ಆನೆಗಳ ಸಂಖ್ಯೆ ಈ ಬೇಟೆಯಿಂದಾಗಿ ಕಳೆದ ಏಳೇ ವರ್ಷಗಳಲ್ಲಿ ಶೇ.30ರಷ್ಚು ಇಳಿಕೆಯಾಗಿದೆ. ಇದು ಇದೇ ವೇಗದಲ್ಲಿ ಮುಂದುವರಿದರೆ ಡೈನಾಸರನ್ನು ಪಳೆಯುಳಿಕೆಯಾಗಿ ನೋಡುವಂತೆ ಆನೆಯನ್ನು ಕೂಡಾ ನೋಡಬೇಕಾದೀತು. ಕೇವಲ 2011ರೊಂದರಲ್ಲೇ 23 ಮೆಟ್ರಿಕ್ ಟನ್‌ನಷ್ಟು ಆನೆದಂತ ವಶಪಡಿಸಿಕೊಳ್ಳಲಾಗಿದೆ.

ಅಂದರೆ, ಸುಮಾರು 2500 ಆನೆಗಳನ್ನು ಇದಕ್ಕಾಗಿ ಸಾಯಿಸಲಾಗಿದೆ. ಇನ್ನು ಚಿಪ್ಪು ಹಂದಿ ಭೂಮಿ ಮೇಲೆ ಅತಿ ದೊಡ್ಡ ಮಟ್ಟದಲ್ಲಿ ಕಳ್ಳಸಾಗಣೆಯಾಗುವ ಪ್ರಾಣಿ. ಇದರ ಚಿಪ್ಪನ್ನು ಚೈನೀಸ್ ಮನೆಮದ್ದಿನಲ್ಲಿ ಹಾಲು ಉತ್ಪತ್ತಿಯಿಂದ ಹಿಡಿದು ಕಾಲುನೋವಿನ ತನಕ ಬಹಳ ಕಾಯಿಲೆಗಳಿಗೆ ಬಳಸಲಾಗುತ್ತದೆ. ಅಂಥ ವಿಶೇಷವೇನಿದೆ ಇದರಲ್ಲಿ? ಈ ಚಿಪ್ಪು ಕೂಡಾ ನಮ್ಮ ತಲೆಕೂದಲು ಹಾಗೂ ಉಗುರುಗಳಲ್ಲಿರುವ ಕೆರಾಟಿನ್ ಹೊಂದಿರುತ್ತದೆ. ಆದರೆ, ಮೂಢನಂಬಿಕೆ ಎನ್ನುವ ಮನುಷ್ಯಮಾತ್ರರ ಸ್ವತ್ತನ್ನು ಹೋಗಲಾಡಿಸುವುದು ಹೇಗೆ? ಈ ಭೂಮಿ ಮೇಲೆ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಉಳಿಸಿ ಮುಂದಿನ ತಲೆಮಾರುಗಳಿಗೂ ತೋರಿಸಲು, ಜೀವಸಂಕುಲದ ಸಮತೋಲನ ಕಾಪಾಡಲು ಈ ಕಾನೂನುಬಾಹಿರ ಬೇಟೆ ಹಾಗೂ ಮಾರಾಟಕ್ಕೆ ಹೆಚ್ಚಿನ ಕ್ರಮ ಕೈಗೊಂಡು ಒಂದು ಫುಲ್‌ಸ್ಟಾಪ್ ಹಾಕಬೇಕಿದೆ. ಜಗತ್ತು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. 

2. ಆವಾಸಸ್ಥಾನ ನಾಶ

ಕಾಡ್ಗಿಚ್ಚು, ಮನುಷ್ಯನ ದುರಾಸೆಗೆ ಕಾಡುಗಳ ನಾಶ, ಕಾಡನ್ನೆಲ್ಲ ನಾಡು ಮಾಡುತ್ತಿರುವುದು ಮುಂತಾದ ಕಾರಣಗಳಿಗಾಗಿ ಕಾಡುಪ್ರಾಣಿಗಳ ಆವಾಸಸ್ಥಾನ ನಾಶವಾಗುತ್ತಿದೆ. ಬಹುತೇಕ ವನ್ಯಪ್ರಾಣಿಗಳಿಗೆ ಜೀವಿಸಲು ಕಾಡೇ ಇಲ್ಲದ ಸ್ಥಿತಿಗೆ ತಂದಿಟ್ಟಿದ್ದೇವೆ. ಜಗತ್ತಿನ ಅರ್ಧದಷ್ಟು ಮೂಲ ಅರಣ್ಯ ನಾಶ ಮಾಡಿಯಾಗಿದೆ. ಉಳಿದಿರುವುದನ್ನು ಬೆಳೆಸುತ್ತಿರುವುದರ 10 ಪಟ್ಟು ವೇಗದಲ್ಲಿ ಕಡಿಯುತ್ತಿದ್ದೇವೆ.

ವೀಕೆಂಡ್ ಟ್ರಿಪ್‌ಗೆ ಬೆಂಗಳೂರಿನ ಸುತ್ತ ಇರೋ ಈ ಸ್ಥಳಗಳು ಬೆಸ್ಟ್

ಆಫ್ರಿಕಾದಲ್ಲಿ ಮನುಷ್ಯರ ಸಂಖ್ಯೆ ಹೆಚ್ಚಾಗಿ ಪ್ರಾಣಿಗಳು ಹಿಂದೆ ಅನುಭವಿಸುತ್ತಿದ್ದ ಸ್ಥಳದ ಶೇ.90ರಷ್ಟು ಕಳೆದುಕೊಂಡಿವೆ. ಉದಾಹರಣೆಗೆ ಆಫ್ರಿಕನ್ ಸಿಂಹಗಳು ಹಿಂದೆ ಓಡಾಡಲು ಬಳಸುತ್ತಿದ್ದ ಅರಣ್ಯದ ಶೇ.10ಕ್ಕಿಂತ ಕಡಿಮೆ ಭಾಗದಲ್ಲಿ ಈಗ ಓಡಾಡಿಕೊಂಡಿರಬೇಕಾಗಿದೆ. ಭಾರತ ಹಾಗೂ ನೇಪಾಳದ ಹುಲಿಗಳು, ಚೀನಾದ ಪಾಂಡಾಗಳಿಗೂ ಇದೇ ಸ್ಥಿತಿ ಬಂದಿದೆ. ಇದೇ ಕಾರಣಗಳಿಗಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಬೆಳೆನಾಶ, ಸಾಕುಪ್ರಾಣಿಗಳ ನಾಶದಲ್ಲಿ ತೊಡಗಿವೆ. 

3. ಮಾಲಿನ್ಯ

ಆಕಾಶದಲ್ಲಿ ಇರುವ ನಕ್ಷತ್ರಗಳಿಗಿಂತ 500  ಪಟ್ಟು ಹೆಚ್ಚು ಮೈಕ್ರೋಪ್ಲ್ಯಾಸ್ಟಿಕ್‌ಗಳು ಸಮುದ್ರದಲ್ಲಿವೆ ಎಂದರೆ ನಾವು ಮನುಷ್ಯರೆಷ್ಟು ಪಾಪಿಗಳೆಂಬುದು ಅರಿವಾದೀತು. 800 ದಶಲಕ್ಷ ಟನ್‌ಗಳಷ್ಟು ಪ್ಲ್ಯಾಸ್ಟಿಕ್ಕನ್ನು ಪ್ರತಿ ವರ್ಷ ಸಮುದ್ರಕ್ಕೆ ಸೇರಿಸುತ್ತಿದ್ದೇವೆ. ಈ ಪ್ಲ್ಯಾಸ್ಟಿಕ್ ದಾಳಿಗೆ ಸಮುದ್ರದೊಳಗಿನ ಸುಮಾರು 600 ಜಾತಿಯ ಜೀವಿಗಳು ಅಪಾಯದಂಚಿನಲ್ಲಿವೆ. ಸಮುದ್ರದೊಳಗಿನ ಜೀವಿಗಳು ಮನುಷ್ಯರು ಎಸೆದ ಈ ಪ್ಲ್ಯಾಸ್ಟಿಕ್ ತಿನ್ನುತ್ತವೆ.

ಜೊತೆಗೆ, ಈ ಪ್ಲ್ಯಾಸ್ಟಿಕ್ ಅವುಗಳು ಜೀವಿಸುವ ಪರಿಸರವನ್ನೂ ಹಾಳುಗೆಡವುತ್ತವೆ. ಆಂತರಿಕವಾಗಿ ಹಾಗೂ ಬಹಿರಂಗವಾಗಿ ಅವು ಆ ಜೀವಿಗಳ ಸರ್ವನಾಶಕ್ಕೆ ಕಾರಣವಾಗುತ್ತಿವೆ. ಹೀಗೆ ಮೈಕ್ರೋಸ್ಕೋಪಿಕ್ ಮಟ್ಟಕ್ಕಿಳಿದ ಪ್ಲ್ಯಾಸ್ಟಿಕ್‌ಗಳನ್ನು ಮೀನುಗಳು ತಿನ್ನುತ್ತವೆ. ನಾಳೆ ಆ ಮೀನನ್ನು ತಿಂದ ಮನುಷ್ಯನ ದೇಹಕ್ಕೂ ಅಪಾಯಕಾರಿ ಪ್ಲ್ಯಾಸ್ಟಿಕ್ ಸೇರುತ್ತದೆ. ಇದಲ್ಲದೆ, ಮನುಷ್ಯ ಬಳಸುವ ಪೆಸ್ಟಿಸೈಡ್ಸ್, ಹರ್ಬಿಸೈಡ್ಸ್ ಮುಂತಾದ ರಾಸಾಯನಿಕಗಳು ಕೂಡಾ ಪರಿಸರವನ್ನು, ನೀರನ್ನು ಹಾಳುಗೆಡವುತ್ತಿವೆ. 

ದೇಶದ ಪ್ರವಾಸೋದ್ಯಮ ವಲಯಕ್ಕೆ ವರವಾಗಿರುವ ಸ್ಮಾರಕಗಳು!

4. ಹವಾಮಾನ ಬದಲಾವಣೆ

ಹಿಂದೆ ಎಲ್ಲೋ ಪಠ್ಯಗಳಲ್ಲಿ ಓದುತ್ತಿದ್ದ ಆ ಪ್ರವಾಹ, ಬರ, ಚಂಡಮಾರುತ, ಭೂಕಂಪಗಳೆಲ್ಲ ಈಗ ಪ್ರತಿ ವರ್ಷ ಎಲ್ಲೆಡೆ ಸಾಮಾನ್ಯ ವಿದ್ಯಮಾನಗಳಾಗಿವೆ. ದೀಪಾವಳಿ ಬಂದರೂ ಮಳೆಗಾಲ ಮುಗಿಯುತ್ತಿಲ್ಲ. ಇಷ್ಟು ಸಾಕಲ್ಲವೇ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಊಹಿಸಲು. ಮಾನವನ ಅಭಿವೃದ್ಧಿ ಹೆಸರಿನ ಚಟುವಟಿಕೆಗಳ ಪರಿಣಾಮವಾಗಿ ಹವಾಮಾನ ಬದಲಾವಣೆಯಾಗುತ್ತಿದೆ. ಜಗತ್ತಿನ ಜೀವವ್ಯವಸ್ಥೆ ಮೇಲೆ ಅದು ಅತಿಯಾದ ಪರಿಣಾಮ ಬೀರುತ್ತಿದೆ.

ಏರುತ್ತಿರುವ ತಾಪಮಾನದಿಂದ ಆರ್ಕ್‌ಟಿಕ್‌ನಲ್ಲಿ ಹಿಮ ಕರಗುತ್ತಿದ್ದು, ಸಮುದ್ರದ ನೀರಿನ ಮಟ್ಟ ಏರುತ್ತಿದೆ. ಇದು ಸಮುದ್ರದ ನೀರಿನಲ್ಲಿರುವ ಜೀವವೈವಿಧ್ಯತೆಗೆ ಧಕ್ಕೆ ತರುತ್ತಿದೆ. ಸಸ್ಯಸಂಕುಲ ಸ್ಥಳ ಬದಲಾಯಿಸುತ್ತಿದ್ದು, ಅದನ್ನೇ ನಂಬಿಕೊಂಡ ಜಲಚರಗಳು ಸಾಯುತ್ತಿವೆ. ಹಿಮಕರಡಿಗಳಿಂದ ಹಿಡಿದು ಸಮುದ್ರ ಆಮೆಗಳವರೆಗೆ ಬಹಳಷ್ಟು ಅಪರೂಪದ ಜೀವಿಗಳ ಬದುಕು ಅಲಿವಿನಂಚಿಗೆ ಸಾಗಿದೆ. ಈ ಆಮೆಗಳು ಮೊಟ್ಟೆಯಿಡಲು ಮರಳಿನ ಉಷ್ಣತೆ ಇಷ್ಟೇ ಇರಬೇಕೆಂದಿರುತ್ತದೆ. ಆದರೆ, ತಾಪಮಾನ ಏರಿಕೆಯಿಂದ ಆಮೆಗಳು ಪರದಾಡುತ್ತಿವೆ. 

ದೇಶದಲ್ಲೇ ಅತಿ ಉದ್ದದ ರೈಲುಗಳಿವು; ನೀವು ಪಯಾಣಿಸಿದ್ದೀರಾ? .

5. ಆಕ್ರಮಣಕಾರಿ ವರ್ಗ

ಈ ವನ್ಯಮೃಗಗಳು ಮನುಷ್ಯರೊಂದಿಗೆ ಸಂಪನ್ಮೂಲಕ್ಕಾಗಿ ಹೋರಾಟ ಮಾಡುವುದು ಸಾಲುವುದಿಲ್ಲವೆಂಬಂತೆ ಆಕ್ರಮಣಕಾರಿ ವರ್ಗದ ಪ್ರಾಣಿಗಳೊಂದಿಗೆ ಕೂಡಾ ಡೀಲ್ ಮಾಡಬೇಕಾದ ಅನಿವಾರ್ಯತೆ ಹಲವು ಪ್ರಾಣಿವರ್ಗಕ್ಕೆ ಎದುರಾಗಿದೆ. ಉದಾಹರಣೆಗೆ ಬೂದು ಜೀರುಂಡೆಯ ಸಂತತಿ ನಿಯಂತ್ರಿಸಲು ಹವಾಯಿಯಿಂದ ಆಸ್ಟ್ರೇಲಿಯಾಕ್ಕೆ ಒಂದು ಜಾತಿಯ ಕಪ್ಪೆಯನ್ನು ತಂದು ಬಿಡಲಾಯಿತು. ಈ ಕಪ್ಪೆಗಳಿಗೆ ಈ ಹೊಸ ಪ್ರದೇಶ ಹಾಗೂ ಇಲ್ಲಿನ ಸಸ್ಯಸಂಕುಲ ಇಷ್ಟವಾಗಿದ್ದೇ ಆಗಿದ್ದು, ಅವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆ ಪ್ರದೇಶವನ್ನು ಆವರಿಸಿಕೊಳ್ಳತೊಡಗಿದವು.

150 ಕಪ್ಪೆಯನ್ನು ಇಲ್ಲಿನ ಕಾಡಿನಲ್ಲಿ ಬಿಟ್ಟರೆ ಅವು 200 ದಶಲಕ್ಷಕ್ಕೂ ಹೆಚ್ಚಾಗಿ ಎಲ್ಲೆಡೆ ಹಬ್ಬತೊಡಗಿದವು. ಇದರಿಂದ ಸ್ಥಳೀಯ ಕೀಟ, ಪ್ರಾಣಿಗಳ ಬದುಕಿಗೆ ಕುತ್ತಾಗತೊಡಗಿತು. ನಾರ್ದನ್ ಕೋಲ್(ಇಲಿ ಜಾತಿಗೆ ಸೇರಿದ ಪ್ರಾಣಿ) ಎಂಬ ಪ್ರಾಣಿಗಳು ಈ ಕಪ್ಪೆಯನ್ನು ತಿಂದು ಅದರಲ್ಲಿದ್ದ ವಿಷದಿಂದಾಗಿ ಸಾಯತೊಡಗಿದವು. ಒಟ್ಟಿನಲ್ಲಿ ಇಂಥ ಆಕ್ರಮಣಕಾರಿ ಪ್ರಾಣಿಗಳು ಕೂಡಾ ಪ್ರಾಣಿಜಗತ್ತಿಗೆ ದೊಡ್ಡ ಸವಾಲಾಗಿವೆ. ಈ ಆಕ್ರಮಣಕಾರಿ ಪ್ರಾಣಿವರ್ಗವನ್ನು ಅವುಗಳಿರುವ ಸ್ಥಳದಿಂದ ಬೇರೆಡೆ ಬಿಡುವುದೇ ತಪ್ಪು. 

Latest Videos
Follow Us:
Download App:
  • android
  • ios