ಮ್ಯೂಸಿಯಂನಲ್ಲಿ ಕಾಂಡೋಮ್ ಪ್ರದರ್ಶನ ನಡೆಯುತ್ತಿದೆ. ಆ ಕಾಂಡೋಮ್ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಇಂದು – ನಿನ್ನೆ ತಯಾರಿಸಿದ್ದಲ್ಲ.
ಹಳೆಯ, ಅಪರೂಪದ ವಸ್ತುಗಳ ಪ್ರದರ್ಶನ ನಡೆಯೋದು ಸಾಮಾನ್ಯ. ಆದ್ರೆ ನೆದರ್ಲ್ಯಾಂಡ್ ಮ್ಯೂಸಿಯಂನಲ್ಲಿ ಕಾಂಡೋಮ್ ಪ್ರದರ್ಶನಕ್ಕೆ ಇಡಲಾಗಿದೆ. ವಿಷ್ಯ ಕೇಳಿದೋರು ಅಚ್ಚರಿಗೊಳಗಾಗೋದು ಸಹಜ ಆದ್ರೂ ಈ ಪ್ರದರ್ಶನದ ಹಿಂದೆ ಮಹತ್ವದ ಕಾರಣ ಇದೆ. ಈ ಕಾಂಡೋಮ್ ಸಾಮಾನ್ಯದ್ದಲ್ಲ. 200 ವರ್ಷಗಳಷ್ಟು ಹಳೆಯದು. ಇದರ ಹಿಂದೆ ಆಸಕ್ತಿಕರ ಇತಿಹಾಸವಿದೆ.
ನೆದರ್ಲ್ಯಾಂಡ್ ನ ರಿಜ್ಕ್ಸ್ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ (Netherlands Rijks National Museum) 200 ವರ್ಷ ಹಳೆಯ ಕಾಂಡೋಮ್ (Condom) ಪ್ರದರ್ಶನಕ್ಕೆ ಇಡಲಾಗಿದೆ. ಕಲೆ ಹಾಗೂ ಲೈಂಗಿಕ ಸುರಕ್ಷತೆ ಎರಡರ ಜೊತೆ ಇದು ನಂಟು ಹೊಂದಿದೆ. ಈ ಕಾಂಡೋಮ್ ಆಮ್ಸ್ಟರ್ಡ್ಯಾಮ್ನ ರೆಡ್ ಲೈಟ್ ಜಿಲ್ಲೆಯ ಕಲೆಗೆ ಸಂಬಂಧಿಸಿದೆ. ಇದು ರೆಡ್ ಲೈಟ್ ಏರಿಯಾಕ್ಕೆ ಸಂಬಂಧಿಸಿದ ವರ್ಣಚಿತ್ರದ ಮಾದರಿಯಾಗಿದೆ. ಅದರ ಮೇಲೆ ವಿಶೇಷ ಚಿತ್ರವನ್ನು ಕೆತ್ತಲಾಗಿದೆ. ಇದು ಆ ಕಾಲದ ಸಂಸ್ಕೃತಿಗೆ ಸಂಬಂಧಿಸಿದ ಗಂಭೀರ ವಿಷಯವನ್ನು ಉಲ್ಲೇಖಿಸುತ್ತದೆ.
ರಿಜ್ಕ್ಸ್ಮ್ಯೂಸಿಯಂ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಇದು ರೋಗನಿರೋಧಕ ಕಾಂಡೋಮ್ . 1830 ರ ಸುಮಾರಿಗೆ ಇದನ್ನು ಬಳಸಲಾಗುತ್ತಿತ್ತು. ಕುರಿಗಳ ಅಪೆಂಡಿಕ್ಸ್ ನಿಂದ ಇದನ್ನು ತಯಾರಿಸಲಾಗ್ತಾ ಇತ್ತು. ಇದು ಲೈಂಗಿಕ ಆರೋಗ್ಯದ ಮಹತ್ವವನ್ನು ಹೇಳುತ್ತದೆ. ಈ ಕಾಂಡೋಮ್ ಅನ್ನು ಸುರಕ್ಷಿತ ಲೈಂಗಿಕತೆ ಎಂಬ ಪ್ರದರ್ಶನದಲ್ಲಿ ಸೇರಿಸಲಾಗಿದೆ . ಈ ಕಾಂಡೋಮ್ 19 ನೇ ಶತಮಾನದ ರೆಡ್ ಲೈಟ್ ಸಂಸ್ಕೃತಿಯಿಂದ ಸುರಕ್ಷಿತವಾಗಿರಲು ಮಾಡಿದ ಪ್ರಯತ್ನಗಳು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೋರಿಸುತ್ತದೆ. ಅಲ್ಲದೆ ಆಗಿನ ಕಾಲದಲ್ಲೂ ಜನರು ಲೈಂಗಿಕ ಖಾಯಿಲೆ ಬಗ್ಗೆ ಎಷ್ಟು ಗಂಭೀರವಾಗಿದ್ದರು ಎಂಬುದನ್ನು ತೋರಿಸುತ್ತದೆ.
200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ವೇಶ್ಯಾಗೃಹದಿಂದ ದೊರೆತ ಸ್ಮಾರಕ ವಸ್ತುವಾಗಿದೆ. ಇದರಲ್ಲಿ ಒಬ್ಬ ಸನ್ಯಾಸಿನಿ ಮತ್ತು ಮೂವರು ಪಾದ್ರಿಗಳ ಚಿತ್ರವಿದೆ. ಇದರ ಮೇಲೆ ಫ್ರೆಂಚ್ ಭಾಷೆಯಲ್ಲಿ ಇದು ನನ್ನ ಆಯ್ಕೆ ಎಂದು ಬರೆಯಲಾಗಿದೆ. ವಸ್ತುಸಂಗ್ರಹಾಲಯದ ಪ್ರಕಾರ, ಇದು ಪಿಯರೆ -ಆಗಸ್ಟೆ ರೆನೊಯಿರ್ ಅವರ ದಿ ಜಡ್ಜ್ಮೆಂಟ್ ಆಫ್ ಪ್ಯಾರಿಸ್ ಚಿತ್ರಕಲೆಯನ್ನು ಉಲ್ಲೇಖವಾಗಿದೆ.
ಅಸೋಸಿಯೇಟೆಡ್ ಪ್ರೆಸ್ ಮತ್ತು ದಿ ಗಾರ್ಡಿಯನ್ ಪ್ರಕಾರ, ಈ ಕಾಂಡೋಮ್ ಅನ್ನು ನವೆಂಬರ್ 2022 ರಲ್ಲಿ ಹಾರ್ಲೆಮ್ನಲ್ಲಿ ನಡೆದ ಹರಾಜಿನಲ್ಲಿ 1000 ಯುರೋಗಳಿಗೆ ಖರೀದಿ ಮಾಡಲಾಗಿತ್ತು. ಈ ಕಾಂಡೋಮ್ 20 ಸೆಂ.ಮೀ ಉದ್ದವಿದೆ. ಯುವಿ ಬೆಳಕಿನ ಮೂಲಕ ಪರೀಕ್ಷಿಸಿದಾಗ, ಅದನ್ನು ಬಳಸಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಿಜ್ಕ್ಸ್ಮ್ಯೂಸಿಯಂನಲ್ಲಿನಡೆಯುತ್ತಿರುವ ಪ್ರದರ್ಶನದಲ್ಲಿ ಡಚ್ ಮತ್ತು ಫ್ರೆಂಚ್ ಮುದ್ರಣಗಳು ಮತ್ತು 19 ನೇ ಶತಮಾನದ ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ವರ್ಣಚಿತ್ರಗಳು ಸೇರಿವೆ. ಈಗಿನ ಜನರಿಗೆ ಆಗಿನ ಕಾಲದ ಜನರ ಆಲೋಚನೆಗಳನ್ನು ತಿಳಿಸಲು ಪ್ರದರ್ಶನ ಏರ್ಪಡಿಸಲಾಗಿದೆ. ಮಂಗಳವಾರದಿಂದ ಪ್ರದರ್ಶನ ನಡೆಯುತ್ತಿದ್ದು, ನವೆಂಬರ್ ಅಂತ್ಯದವರೆಗೆ ಮುಂದುವರೆಯಲಿದೆ.
ಆಗಿನ ಕಾಲದಲ್ಲಿ ಕಾಂಡೋಮ್ ಬಳಕೆಯನ್ನು ತಪ್ಪೆಂದು ನಂಬಲಾಗಿತ್ತು. ಕಾಂಡೋಮ್ಗಳನ್ನು ಮುಖ್ಯವಾಗಿ ವೇಶ್ಯಾಗೃಹ ಅಥವಾ ಕ್ಷೌರಿಕರ ಅಂಗಡಿಗಳಲ್ಲಿ ಮಾತ್ರ ಮಾರಾಟ ಮಾಡಲಾಗ್ತಾ ಇತ್ತು. ಆಗ ಕಾಂಡೋಮ್ಗಳನ್ನು ಸಾಮಾನ್ಯವಾಗಿ ಪ್ರಾಣಿಗಳ ಪೊರೆಗಳು, ಆಮೆ ಚಿಪ್ಪು, ಲಿನಿನ್ ಗಳಿಂದ ಮಾಡಲಾಗುತ್ತಿತ್ತು. ಸಿಫಿಲಿಸ್ ನಂತಹ ಲೈಂಗಿಕವಾಗಿ ಹರಡುವ ರೋಗಗಳಿಂದ ಮನುಷ್ಯರನ್ನು ಸುರಕ್ಷಿತಗೊಳಿಸಲು ಈ ಕಾಮಡೋಮ್ ವಿಫಲವಾಗಿದ್ದವು. 1839 ರ ನಂತ್ರ ಎಲ್ಲ ಬದಲಾಗಿದೆ. ವಲ್ಕನೀಕರಿಸಿದ ರಬ್ಬರ್ ಆವಿಷ್ಕಾರದ ನಂತ್ರ ಕಾಂಡೋಮ್ ಹೆಚ್ಚು ಸುರಕ್ಷಿತವಾಗಿದೆ.
