ಸಿಡ್ನಿ(ಸೆ.08): ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ಕಳೆಗುಂದಿರುವ ಇಸ್ರೋಗೆ ವಿಶ್ವದ ಇತರ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ನೈತಿಕ ಬೆಂಬಲ ನೀಡುತ್ತಿವೆ. 

ಭಾರತದ ಚಂದ್ರಯಾನ-2 ಯೋಜನೆಯನ್ನು ಪ್ರಶಂಸಿರುವ ಅಮೆರಿಕದ ನಾಸಾ ಹಗೂ ರಷ್ಯಾದ ಬಾಹ್ಯಾಕಾಶ ಸಂಸ್ಥೆಗಳು, ಚಂದ್ರನ ದಕ್ಷಿಣ ಧೃವಕ್ಕೆ ತೆರಳುವ ಸಾಹಸಮಯ ಯೋಜನೆ ಕೈಗೆತ್ತಿಕೊಂಡ ಇಸ್ರೋ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೊಂಡಾಡಿವೆ.

ಅಮೆರಿಕ, ರಷ್ಯಾ ಬಳಿಕ ಇದೀಗ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಕೂಡ ಇಸ್ರೋ ಸಾಧನೆಯನ್ನು ಹೊಗಳಿದ್ದು, ಲ್ಯಾಂಡರ್ ಸಂಪರ್ಕ ಕಡಿದುಕೊಂಡ ಮಾತ್ರಕ್ಕೆ ಯೋಜನೆ ವಿಫಲವಾಗಿದೆ ಎಂದು ಅರ್ಥವಲ್ಲ ಎಂದು ಧೈರ್ಯ ತುಂಬುವ ಮಾತುಗಳನ್ನಾಡಿದೆ. 

ಚಂದ್ರನ ಮೇಲ್ಮೈವರೆಗೂ ರೋವರ್ ಮತ್ತು ಲ್ಯಾಂಡರ್ ಅನ್ನು ರವಾನೆ ಮಾಡುವುದು ಕಡಿಮೆ ಸಾಧನೆ ಏನಲ್ಲ. ಇಸ್ರೋ ವಿಜ್ಞಾನಿಗಳ  ಶ್ರಮಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಯುವ ವಿಜ್ಞಾನಿಗಳಿಗೆ ಸ್ಫೂರ್ತಿದಾಯಕ ಎಂದು ಟ್ವೀಟ್ ಆಸಿಸ್ ಬಾಹ್ಯಾಕಾಶ ಸಂಸ್ಥೆ ಟ್ವೀಟ್ ಮಾಡಿದೆ.

ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ನೈ ಮೇಲೆ ಇಳಿಯಲು ಕೇವಲ 2.1 ಕಿಮೀ ದೂರವಿದ್ದಾಗ ಅದರ ಸಂಪರ್ಕ ಕಡಿತವಾಗಿತ್ತು.