ಹೆಚ್ಚುತ್ತಿರುವ ತಾಪಮಾನದಿಂದಾಗಿ ಜನರು ದೈಹಿಕವಾಗಿ ನಿಷ್ಕ್ರಿಯರಾಗುತ್ತಿದ್ದಾರೆ. ಇದರಿಂದ 2050ರ ವೇಳೆಗೆ 7 ಲಕ್ಷದವರೆಗೆ ಅಕಾಲಿಕ ಮರಣಗಳು ಸಂಭವಿಸಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹವಾಮಾನ ಬದಲಾವಣೆ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ಅದು ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಇತ್ತೀಚಿನ ಅಧ್ಯಯನವೊಂದು ಗಂಭೀರ ಎಚ್ಚರಿಕೆ ನೀಡಿದೆ. ಅರ್ಜೆಂಟೀನಾದ ಕ್ಯಾಥೋಲಿಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು, ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ 2050ರ ವೇಳೆಗೆ ಪ್ರತಿ ವರ್ಷ ಲಕ್ಷಾಂತರ ಹೆಚ್ಚುವರಿ ಸಾವುಗಳು ಸಂಭವಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.

ಈ ಸಂಶೋಧಕರು 2000 ಮತ್ತು 2022ರ ನಡುವೆ 156 ದೇಶಗಳ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಬಿಸಿಲು ಜನರ ದೈಹಿಕ ಚಟುವಟಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ವಿಶ್ಲೇಷಣೆ ನಡೆಸಲಾಗಿದೆ. ಅವರ ಸಂಶೋಧನಾ ವರದಿಯನ್ನು 'ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್' ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ, ತಾಪಮಾನ ಹೆಚ್ಚಾದಂತೆ ವ್ಯಾಯಾಮ ಮಾಡುವುದು ಹೆಚ್ಚು ಕಷ್ಟಕರವಾಗುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ.

ಹವಾಮಾನ ಬದಲಾವಣೆಯಿಂದ ಪ್ರಾಣಕ್ಕೇ ಕುತ್ತು

ಅಧ್ಯಯನದ ಪ್ರಕಾರ, ಸರಾಸರಿ ತಾಪಮಾನವು 27.8°C ಗಿಂತ ಹೆಚ್ಚಾಗುವ ಪ್ರತಿ ತಿಂಗಳು, ಜಾಗತಿಕವಾಗಿ ದೈಹಿಕ ನಿಷ್ಕ್ರಿಯತೆಯನ್ನು ಸುಮಾರು 1.5% ರಷ್ಟು ಹೆಚ್ಚಿಸಬಹುದು. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಈ ಪರಿಣಾಮ ಇನ್ನೂ ಹೆಚ್ಚಾಗಿರಲಿದೆ. ಅಲ್ಲಿ ನಿಷ್ಕ್ರಿಯತೆಯು ಸುಮಾರು 1.85% ರಷ್ಟು ಹೆಚ್ಚಾಗಬಹುದು. ಮಧ್ಯ ಅಮೆರಿಕ, ಸಬ್-ಸಹಾರನ್ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಕೆಲವು ಅತಿ ಹೆಚ್ಚು ಬಿಸಿಯಿರುವ ಪ್ರದೇಶಗಳಲ್ಲಿ, ನಿಷ್ಕ್ರಿಯತೆಯ ಏರಿಕೆಯು 4% ತಲುಪಬಹುದು.

ದೈಹಿಕ ಚಟುವಟಿಕೆಯಲ್ಲಿನ ಈ ಇಳಿಕೆ ಕೇವಲ ವೈಯಕ್ತಿಕ ಜೀವನಶೈಲಿಯ ವಿಷಯವಲ್ಲ. ವಿಪರೀತ ಬಿಸಿಲು ದೇಹದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಇದರಿಂದಾಗಿ ಯಾವುದೇ ಚಲನವಲನ ಹೆಚ್ಚು ಆಯಾಸದಾಯಕ ಎನಿಸುತ್ತದೆ ಮತ್ತು ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ. ಇದರ ಪರಿಣಾಮವಾಗಿ, ಜನರು ವ್ಯಾಯಾಮ ಮಾಡಲು ಹಿಂದೇಟು ಹಾಕುತ್ತಾರೆ. ಇದು ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಬಹುದು.

ಈ ಹೆಚ್ಚುತ್ತಿರುವ ನಿಷ್ಕ್ರಿಯತೆಯಿಂದಾಗಿ, ಶತಮಾನದ ಮಧ್ಯಭಾಗದ ವೇಳೆಗೆ ಪ್ರತಿ ವರ್ಷ 4,70,000 ದಿಂದ 7,00,000 ಹೆಚ್ಚುವರಿ ಅಕಾಲಿಕ ಮರಣಗಳು ಸಂಭವಿಸಬಹುದು ಎಂದು ಅಧ್ಯಯನ ಅಂದಾಜಿಸಿದೆ. ಇದು ಉತ್ಪಾದಕತೆಯಲ್ಲಿ ಶತಕೋಟಿ ಡಾಲರ್‌ಗಳಷ್ಟು ನಷ್ಟಕ್ಕೂ ಕಾರಣವಾಗಬಹುದು.

ಈ ಸಂಶೋಧನೆಯಲ್ಲಿ ಭಾಗಿಯಾಗಿರುವ ತಜ್ಞರು ತಕ್ಷಣದ ಕ್ರಮದ ಅಗತ್ಯವನ್ನು ಒತ್ತಿಹೇಳಿದ್ದಾರೆ. ನಗರಗಳನ್ನು ಹೆಚ್ಚು ಶಾಖ-ನಿರೋಧಕವಾಗಿ ಮರುವಿನ್ಯಾಸಗೊಳಿಸುವುದು, ವ್ಯಾಯಾಮಕ್ಕಾಗಿ ಹವಾನಿಯಂತ್ರಿತ ಸ್ಥಳಗಳನ್ನು ರಚಿಸುವುದು ಮತ್ತು ಬಿಸಿಲಿನ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಅವರು ಶಿಫಾರಸು ಮಾಡಿದ್ದಾರೆ. ಬಿಸಿಯೇರುತ್ತಿರುವ ಈ ಜಗತ್ತಿನಲ್ಲಿ, ಆರೋಗ್ಯವಾಗಿರಲು ಸಕ್ರಿಯವಾಗಿರುವುದು ಹಿಂದೆಂದಿಗಿಂತಲೂ ಹೆಚ್ಚು ಮುಖ್ಯ ಎಂದು ಲೇಖಕರು ವಾದಿಸಿದ್ದಾರೆ.