ಇನ್‌ಸ್ಟಾಗ್ರಾಮ್ ಇತ್ತೀಚೆಗೆ 'ಮ್ಯೂಸ್' ಎಂಬ ಅತ್ಯಾಧುನಿಕ ವೈಯಕ್ತಿಕ AI ಏಜೆಂಟ್ ಅನ್ನು ಪರಿಚಯಿಸಿದೆ. ಇದು ಬಳಕೆದಾರರ ದೈನಂದಿನ ಕೆಲಸಗಳಾದ ದಿನಸಿ ಪಟ್ಟಿ, ಪ್ರವಾಸದ ದಿನಚರಿ ಮತ್ತು ಕ್ಯಾಲೆಂಡರ್ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ಸದ್ಯ ಈ ಫೀಚರ್ ಭಾರತದಲ್ಲಿ ಲಭ್ಯವಿಲ್ಲದಿದ್ದರೂ, ಜಾಗತಿಕವಾಗಿ ಹಂತಹಂತವಾಗಿ ಬಿಡುಗಡೆಯಾಗುತ್ತಿದೆ.
ಭಾರತವೊಂದರಲ್ಲಿಯೇ ಪ್ರತಿನಿತ್ಯ 532 ಮಿಲಿಯನ್ ಜನರು ಇನ್‌ಸ್ಟಾಗ್ರಾಮ್ ಬಳಕೆ ಮಾಡುತ್ತಿದ್ದಾರೆ ಎಂದರೆ, ಇದರ ಪ್ರಭಾವ ಎಷ್ಟರಮಟ್ಟಿಗೆ ಇದೆ ನೋಡಿ. ಕೆಲವರು ಇನ್ಸ್ಟಾದಿಂದಲೇ ಜೀವನಕ್ಕೆ ದಾರಿ ಮಾಡಿಕೊಂಡಿದ್ದರೆ, ಮತ್ತೆ ಕೆಲವರು ಇದರಿಂದಲೇ ಬರ್ಬಾದ್ ಕೂಡ ಆಗಿದ್ದಾರೆ. ಕೆಲವರಿಗೆ ಇದು ತಮಗೆ ಬೇಕಾಗಿರುವ ವಿಷಯಗಳನ್ನು ಅಧ್ಯಯನ ಮಾಡಲು ಇರುವ ಅವಕಾಶವಾದರೆ, ಮತ್ತೆ ಹಲವರಿಗೆ ಇದು ಟೈಮ್ಪಾಸ್ ಮಾಡುವ ಮಾರ್ಗವಷ್ಟೇ. ಕಾರಣ ಏನೇ ಇದ್ದರೂ ಸೋಷಿಯಲ್ ಮೀಡಿಯಾ, ಅದರಲ್ಲಿಯೂ ಇನ್ಸ್ಟಾ ಬೇಕೇ ಬೇಕು. ಇದಕ್ಕಾಗಿಯೇ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸಲಾಗುತ್ತಿದೆ.
ಮ್ಯೂಸ್ ಫೀಚರ್
ಇದರ ಸಾಲಿಗೆ ಬಂದಿರೋದು MUSE. ಇನ್‌ಸ್ಟಾಗ್ರಾಮ್ ಇತ್ತೀಚೆಗೆ ಪರಿಚಯಿಸಿರುವ 'ಮ್ಯೂಸ್' (Muse) ಎನ್ನುವುದು ಮೆಟಾ (Meta) ಸಂಸ್ಥೆಯು ಅಭಿವೃದ್ಧಿಪಡಿಸಿರುವ ಒಂದು ಅತ್ಯಾಧುನಿಕ ವೈಯಕ್ತಿಕ AI ಏಜೆಂಟ್ ಆಗಿದೆ. ಸಾಮಾನ್ಯ ಚಾಟ್‌ಬಾಟ್‌ಗಳಿಗಿಂತ ಭಿನ್ನವಾಗಿ, ಇದು ಬಳಕೆದಾರರ ದೈನಂದಿನ ಕೆಲಸಗಳನ್ನು ಸುಲಭಗೊಳಿಸಲು ದಿನದ 24 ಗಂಟೆಯೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಇತ್ತೀಚಿನ ಅಪ್‌ಡೇಟ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ನ ಶೇರ್ ಮೆನುವಿನಲ್ಲಿ (Share Menu) ಈ 'Muse' ಐಕಾನ್ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಇದು ನಿಮ್ಮ ಎಲ್ಲಾ ಕೆಲಸಗಳನ್ನೂ ಮಾಡಲಿದೆ.
ಏನೇನು ಮಾಡತ್ತೆ ನೋಡಿ
ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದಾದರೂ ರೆಸಿಪಿ ರೀಲ್ಸ್ (Recipe Reel) ಸೇವ್ ಮಾಡಿದರೆ, ಮ್ಯೂಸ್ ಸ್ವಯಂಚಾಲಿತವಾಗಿ ಅದಕ್ಕೆ ಬೇಕಾಗುವ ದಿನಸಿ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಇದು ನಿಮ್ಮ ಇಮೇಲ್‌ಗಳನ್ನು ಪರಿಶೀಲಿಸಲು, ದಿನದ ಕೆಲಸಗಳ ಪಟ್ಟಿ ಮಾಡಲು ಮತ್ತು ಕ್ಯಾಲೆಂಡರ್ ನಿರ್ವಹಿಸಲು ನೆರವಾಗುತ್ತದೆ. ನೀವು ಟ್ರಾವೆಲ್ ರೀಲ್ಸ್‌ಗಳನ್ನು ಸೇವ್ ಮಾಡಿದಾಗ, ಅದು ನಿಮಗಾಗಿ ಸಂಪೂರ್ಣ ಪ್ರವಾಸದ ದಿನಚರಿ (Itinerary) ಮತ್ತು ಬುಕಿಂಗ್ ಮಾಡಲು ಸಹಾಯ ಮಾಡುತ್ತದೆ. ನಿಮಗಾಗಿ ಕಂಟೆಂಟ್ ಕ್ಯಾಲೆಂಡರ್ ರಚಿಸುವುದು, ಫೋಟೋಗಳನ್ನು ಎಡಿಟ್ ಮಾಡುವುದು ಅಥವಾ ನಿಮಗೊಪ್ಪುವ ಫಿಟ್‌ನೆಸ್ ಹಾಗೂ ಉತ್ಪಾದನಾ ಯೋಜನೆಗಳನ್ನು ರೂಪಿಸಿಕೊಡುವ ಕೆಲಸವನ್ನೂ ಇದು ಮಾಡುತ್ತದೆ.
ಆದರೆ ವೇಟ್ ವೇಟ್, ಇದೆಲ್ಲಿದೆ ಎಂದು ಹುಡುಕಲು ಈಗಲೇ ಹೋಗಬೇಡಿ. ಅದು ನಿಮಗೆ ಸಿಗಲ್ಲ. ಏಕೆಂದರೆ ಸದ್ಯ ಈ ಫೀಚರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿಲ್ಲ. ಈ ಫೀಚರ್ ಅನ್ನು ಹಂತಹಂತವಾಗಿ ಜಾಗತಿಕವಾಗಿ ಬಿಡುಗಡೆ ಮಾಡುತ್ತಿದೆ. ನಿಮ್ಮ ಇನ್‌ಸ್ಟಾಗ್ರಾಮ್ ಆ್ಯಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಶೇರ್ ಮೆನುವಿನಲ್ಲಿ ಈ ಐಕಾನ್ ಬಂದಿದೆಯೇ ಎಂದು ಪರಿಶೀಲಿಸಬಹುದು.


