ಟೆಲಿಕಾಂ ಕಂಪನಿಗಳು 28 ದಿನಗಳ ಬದಲಾಗಿ 30 ದಿನಗಳ ರೀಚಾರ್ಜ್ ಪ್ಲ್ಯಾನ್ ನೀಡಲು ಒಪ್ಪಿಕೊಂಡಿವೆ. ಜೊತೆಗೆ, ಬೇಸಿಕ್ ಫೋನ್ ಬಳಕೆದಾರರಿಗೆ ಡೇಟಾ ಇಲ್ಲದ ಕೇವಲ ಕರೆ ಮತ್ತು ಎಸ್‌ಎಂಎಸ್ ಪ್ಲ್ಯಾನ್‌ಗಳು ಶೀಘ್ರದಲ್ಲೇ ಪರಿಚಯವಾಗಲಿವೆ. ಸಂಸದ ರಾಘವ್ ಛಡ್ಡಾ ಅವರ ಮನವಿಯ ಮೇರೆಗೆ ಟ್ರಾಯ್ ಈ ನಿರ್ಧಾರ ಕೈಗೊಂಡಿದೆ.

ಒಂದು ತಿಂಗಳ ರೀಚಾರ್ಜ್​ ಪ್ಲ್ಯಾನ್​ ಎಂದು ಹೇಳುವ ಬಹುತೇಕ ಎಲ್ಲಾ ಕಂಪೆನಿಗಳು 28 ದಿನಗಳ ವ್ಯಾಲಿಡಿಟಿ ಮಾಡುತ್ತಿರುವ ಕಾರಣದಿಂದ ವರ್ಷಕ್ಕೆ 12 ಬಾರಿ ಬದಲು 13 ಬಾರಿ ರೀಚಾರ್ಜ್​ ಮಾಡಿಸುವ ಅನಿವಾರ್ಯತೆ ಎಲ್ಲರಿಗೂ ಇದ್ದೇ ಇದೆ. ಅದು ಜಿಯೋ, ಏರ್​ಟೆಲ್​ ಸೇರಿದಂತೆ ಎಲ್ಲಾ ಕಂಪೆನಿಗಳು ಇದನ್ನೇ ಮಾಡುತ್ತಿವೆ. ಇದೊಂದು ರೀತಿಯಲ್ಲಿ ಗ್ರಾಹಕರಿಗೆ ಟೋಪಿ ಹಾಕಿದಂತೆ. ಆದರೆ ಇನ್ಮುಂದೆ ಎಲ್ಲಾ ಕಂಪೆನಿಗಳು 30 ದಿನಗಳ ರೀಚಾರ್ಜ್​ ಪ್ಲ್ಯಾನ್​ ಮಾಡಲು ಒಪ್ಪಿಕೊಂಡಿವೆ.

ಇಷ್ಟೇ ಅಲ್ಲದೇ, ಸ್ಮಾರ್ಟ್​ಫೋನ್​ ಬಂದರೂ ಇಂದಿಗೂ ಹಲವು ಗ್ರಾಹಕರ ಬಳಿ ಬೇಸಿಕ್​ ಫೋನ್​ ಸೆಟ್​ ಇವೆ. ಅದರಲ್ಲಿಯೂ ಗ್ರಾಮೀಣ ಪ್ರದೇಶಗಳ ಹಿರಿಯರ ಬಳಿ ಇನ್ನೂ ಬೇಸಿಕ್​ ಸೆಟ್​ ಇವೆ. ಆದರೆ ಸಿಮ್​ ಯಾವುದೇ ಇದ್ದರೂ, ಅವರು ರೀಚಾರ್ಜ್​ ಮಾಡಿಸುವಾಗ ಕನಿಷ್ಠ 2 ಜಿಬಿಯ ಡೇಟಾ ಹಾಕಿಸುವ ಪರಿಸ್ಥಿತಿ ಇದೆ. ಇದರ ಅರ್ಥ, ಬರೀ ಕಾಲ್​ ಮತ್ತು SMS ಮಾಡುವ ಪ್ಲ್ಯಾನ್​ ಪರಿಚಯಿಸುತ್ತಿದೆ. ಬೇಸಿಕ್​ ಫೋನ್​ನಲ್ಲಿ ಹೆಚ್ಚು ಬೆಲೆ ತೆತ್ತು ಬೇಡದೇ ಹೋದರೂ ಪ್ರತಿ ತಿಂಗಳು ಕನಿಷ್ಠ 2 ಜಿಬಿ ಡಾಟಾ ಹಾಕಿಸಿಕೊಳ್ಳುತ್ತಿದ್ದ ಗ್ರಾಹಕರು ಇನ್ಮುಂದೆ ಖುಷಿಯಿಂದ ಇರಬಹುದು.

ಸಂಸದ ರಾಘವ್​ ಛಡ್ಡಾ ಮಾಹಿತಿ

ಈ ಕುರಿತು ಸಂಸದ ರಾಘವ್​ ಛಡ್ಡಾ ಅವರು ಮಾಹಿತಿ ನೀಡಿದ್ದಾರೆ. ಅವರು ಈ ಮಾಹಿತಿ ನೀಡಲು ಕಾರಣವೂ ಇದೆ. ಅದೇನೆಂದರೆ ಕಳೆದ ವರ್ಷ ಅವರು ಸಂಸತ್ತಿನ ಅಧಿವೇಶನದ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಮೊಬೈಲ್​ ಗ್ರಾಹಕರು ತಿಂಗಳ ಪ್ಲ್ಯಾನ್​ ಎಂದುಕೊಂಡು ವರ್ಷಕ್ಕೆ 13 ದಿನ ರೀಚಾರ್ಜ್​ ಮಾಡಿಸುವ ಪ್ರಮೇಯ ಬಂದಿದೆ ಎಂದಿದ್ದ ಅವರು, ಅದರ ಜೊತೆಗೆ, ಡೇಟಾ ಬೇಡದೇ ಇರುವ ಗ್ರಾಹಕರು ಅನಿವಾರ್ಯವಾಗಿ ಅದನ್ನು ಹಾಕಿಸಿಕೊಳ್ಳಲೇಬೇಕಾದ ಪ್ರಮೇಯವೂ ಇದೆ ಎಂದಿದ್ದರು.

ಟ್ರಾಯ್​ಗೆ ಧನ್ಯವಾದ

ಇದೀಗ ಅವರ ಮನವಿಯನ್ನು ಟ್ರಾಯ್​ ಒಪ್ಪಿಕೊಂಡಿದ್ದು, ಅದರ ಮಾಹಿತಿಯನ್ನು ಅವರು ಸೋಷಿಯಲ್​ ಮೀಡಿಯಾ ಮೂಲಕ ನೀಡಿದ್ದಾರೆ. ಗ್ರಾಹಕರ ಆಯ್ಕೆ ಮತ್ತು ಅನುಕೂಲತೆಯ ಹಿತದೃಷ್ಟಿಯಿಂದ ಈ ಕಳವಳಗಳನ್ನು ಪರಿಹರಿಸಿದ್ದಕ್ಕಾಗಿ ನಾನು ಭಾರತ ಸರ್ಕಾರ ಮತ್ತು TRAI ಗೆ ಕೃತಜ್ಞನಾಗಿದ್ದೇನೆ ಎಂದು ಛಡ್ಡಾ ಹೇಳಿಕೊಂಡಿದ್ದಾರೆ. ಬರುವ ಅಕ್ಟೋಬರ್​ ತಿಂಗಳಿನಾಂತ್ಯದಿಂದ ಇದು ಜಾರಿ ಬರುವ ನಿರೀಕ್ಷೆ ಇದೆ.