ಪ್ರಾಣಿಗಳಲ್ಲಿ ಅತೀ ಹೆಚ್ಚಿನ ಬುದ್ಧವಂತಿಕೆ, ಆಲೋಚನಾ ಶಕ್ತಿ ಎಲ್ಲವೂ ಇರುವುದು ಮನುಷ್ಯನಿಗೆ. ಆದರೆ ಪಕ್ಷಿಗಳಲ್ಲಿ? ಕಾಗೆ ಅಥವಾ ಮನುಷ್ಯ ಇಬ್ಬರಲ್ಲಿ ಯಾರಿಗೆ ವೇಗವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ? ಅಧ್ಯಯನ ಅಂಶಗಳು ಅಚ್ಚರಿಗೊಳಿಸುತ್ತದೆ.

ಭಾರತೀಯ ಸಂಪ್ರದಾಯಗಳಲ್ಲಿ ಕಾಗೆಗೆ ಭಾರಿ ಮಹತ್ವವಿದೆ. ಪೂರ್ವಜರ ಜ್ಞಾನ ಸಂಪತ್ತು, ಪ್ರಕೃತಿ ಹಾಗೂ ಪ್ರತಿಯೊಂದು ಜೀವಿಗಳಲ್ಲಿನ ಶಕ್ತಿ ಸಾಮರ್ಥ್ಯವನ್ನು ಅರಿತುಕೊಂಡಿದ್ದರು ಅನ್ನೋದು ಇತ್ತೀಚಿನ ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಇದೀಗ ಕಾಗೆ ಕುರಿತು ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲದ ತಜ್ಞರು ನಡೆಸಿದ ಅಧ್ಯಯನ ವರದಿಯಲ್ಲಿ ಹಲವು ಅಚ್ಚರಿ ಅಂಶಗಳು ಬಯಲಾಗಿದೆ.ಈ ವರದಿ ಪ್ರಕಾರ ಮನುಷ್ಯರಿಗಿಂತ ಎರಡರಷ್ಟು ವೇಗವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಾಗೆಗಿದೆ ಎಂದಿದೆ.

ಕಾಗೆಗಳ ನರಕೋಶ ಅಧ್ಯಯನ

ಟ್ಯೂಬಿಂಗನ್ ವಿಶ್ವವಿದ್ಯಾಲಯದ ನರವಿಜ್ಞಾನಿ ಆ್ಯಂಡ್ರಿಯಾಸ್ ನೀಡರ್ ಹಾಗೂ ಫಿಲಿಪ್ ಶಿಮ್ಮಿಡ್‌ಬೌರ್ ಇಬ್ಬರು ಸತತ ಸಂಶೋಧನೆ ಹಾಗೂ ಅಧ್ಯಯನ ಮೂಲಕ ಮಹತ್ವದ ವರದಿ ನೀಡಿದ್ದಾರೆ. ಈ ಅಧ್ಯಯನ ವರದಿ ಅಂತಾರಾಷ್ಟ್ರೀಯ ಜರ್ನಲ್ ಸೈನ್ಸ್‌ನಲ್ಲಿ ಪ್ರಕಟಗೊಂಡಿದೆ. ಇಬ್ಬರು ನರವಿಜ್ಞಾನಿಗಳು ಕಾಗೆಗಳ ದೃಶ್ಯಗಳ ಶೋಧನೆ ಹಾಗೂ ನರಕೋಶಗಳ ಅಧ್ಯಯನ ನಡೆಸಿತ್ತು. ಕಳೆದ ಹಲವು ವರ್ಷಗಳಿಂದ ಕಾಗೆಗಳ ಮೇಲೆ ಅಧ್ಯಯನ ನಡೆಸಿದ ವಿಜ್ಞಾನಿಗಳು ಅಚ್ಚರಿ ಅಂಶಗಳನ್ನು ಬಹಿರಂಗ ಮಾಡಿದ್ದಾರೆ.

ಕಾಗೆಗಳ ಚುರುಕು ಬುದ್ದಿ

ಅಧ್ಯಯನ ಭಾಗದಲ್ಲಿ ಕಾಗೆಗಳ ಮುಂದೆ ಕಂಪ್ಯೂಟರ್ ಸ್ಕ್ರೀನ್ ಮೂಲಕ ವಿವಿಧ ದಿಕ್ಕುಗಳಲ್ಲಿ ಚಲಿಸುವ ಚುಕ್ಕಗಳ ಮಾದರಿ ಪ್ರದರ್ಶಿಸಲಾಗಿತ್ತು. ಕಾಗೆಗಳು ತಮ್ಮ ಕಣ್ಣಿನ ದೃಷ್ಟಿ ಸಂಕೇತಗಳಿಂದ ದಿಕ್ಕನ್ನು ಸರಿಯಾಗಿ ಗುರುತಿಸಿ ಸ್ಪಂದಿಸುವಂತೆ ಮಾಡಲಾಗಿತ್ತು. ಈ ವೇಳೆ ಕಾಗೆಗಳು ಸರಿಯಾದ ದಿಕ್ಕಿನ ಸ್ಕ್ರೀನ್ ಚುಕ್ಕೆಗೆ ಕಾಗೆಗಳು ಕೊಕ್ಕಿನಿಂದ ಕುಕ್ಕಿದಾಗ ಅವುಗಳಿಗೆ ಆಹಾರ ನೀಡುವ ಪ್ರಯೋಗದ ಮೂಲಕ ಹಂತ ಹಂತವಾಗಿ ಅಧ್ಯಯನ ನಡೆಸಲಾಗಿತ್ತು.

ಕಾಗೆ ನಿರ್ಧಾರ ತೆಗೆದುಕೊಳ್ಳುವ ಸಮಯ

ಕಾಗೆಗಳು,ಮನುಷ್ಯರು, ಕೋತಿಗಳು ಸೇರಿದಂತೆ ಕೆಲ ಪ್ರಾಣಿ ಪಕ್ಷಿಗಳ ಮೇಲೂ ಅಧ್ಯಯನ ನಡೆಸಲಾಗಿದೆ. ಹಲವು ಹಂತದ ಪರೀಕ್ಷೆಯಲ್ಲಿ ಮನುಷ್ಯರು ಹಾಗೂ ಕೋತಿಗಳು ನಿರ್ಧಾರ ತೆಗೆದುಕೊಳ್ಳಲು 400 ರಿಂದ 500 ಮಿಲಿ ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತವೆ. ಇದೇ ನಿರ್ಧಾರವನ್ನು ಕಾಗೆಗಳು ಕೇವಲ 235 ಮಿಲಿ ಸೆಕೆಂಡ್‌ಗಳಲ್ಲಿ ತೆಗೆದುಕೊಳ್ಳುತ್ತದೆ. ವಿಶೇಷ ಅಂದರೆ ಕಾಗೆಗಳು ನಿರ್ಧಾರ ತಗೆದುಕೊಳ್ಳುವುದು ಮಾತ್ರವಲ್ಲ, ಸರಿಯಾದ ಹಾಗೂ ನಿಖರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.

ಕಂಪ್ಯೂಟರ್ ಸ್ಕ್ರೀನ್ ಮೇಲಿನ ಚುಕ್ಕೆಗಳಲ್ಲಿ ಶೇಕಡಾ 3ರಷ್ಟು ಚುಕ್ಕೆಗಳು ಒಂದೇ ದಿಕ್ಕಿಗೆ ಚಲಿಸುತ್ತಿತ್ತು. ಹಲವು ಚುಕ್ಕೆಗಳಲ್ಲಿ ಯಾವ ಚುಕ್ಕೆ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದು ನಿರ್ಧರಿಸುವುದು ಗೊಂದಲಕಾರಿಯಾಗಿತ್ತು. ಆದರೆ ಕಾಗೆಗಳು ಅತ್ಯಂತ ಚುರುಕುತನದಿಂದ ಪ್ರತಿ ಬಾರಿ ನಿಖರ ನಿರ್ಧಾರ ತೆಗೆದುಕೊಳ್ಳುತ್ತಿತ್ತು ಎಂದು ಫಿಲಿಪ್ ಹೇಳಿದ್ದಾರೆ.

ವೇಗವಾಗಿ ಗ್ರಹಿಸುವ ಸಾಮರ್ಥ್ಯ

ಅಧ್ಯಯನ ಮತ್ತೊಂದು ಅಚ್ಚರಿ ಅಂಶವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಕಾಗೆಗಳು ಹಾರಾಡುತ್ತಾ ಆಹಾರ ಹುಡುಕುತ್ತವೆ. ಇದೇ ವೇಳೆ ಇತರ ಪಕ್ಷಿಗಳು , ಪ್ರಾಣಿಗಳ ದಾಳಿಗಳಿಂದಲೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಈ ವಿಕಸನದಲ್ಲಿ ಕಾಗೆಗಳ ಮೆದಳು ಅತ್ಯಂತ ವೇಗವಾಗಿ ವಿಕಸನಗೊಂಡಿವೆ. ಕಾಗೆಗಳು ಬುದ್ದಿವಂತಿಕೆ ಪ್ರದರ್ಶಿಸುತ್ತದೆ. ಅಪಾಯವನ್ನು ತಕ್ಷಣವೇ ಅರಿತುಕೊಳ್ಳುತ್ತದೆ, ಸೂಚನೆಗಳು, ಸಂಜ್ಞೆಗಳನ್ನು ಕಾಗೆಗಳು ವೇಗವಾಗಿ ಗ್ರಹಿಸುತ್ತದೆ ಎಂದು ಈ ಅಧ್ಯಯನ ಹೇಳುತ್ತಿದೆ.