ಮುಂಬೈ(ಸೆ.10): ಇಸ್ರೋಚಂದ್ರಯಾನ-2 ಯೋಜನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದು ಅಸಾಧ್ಯ ಎಂಧು ಅಭಿಪ್ರಾಯಪಟ್ಟಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ವಾತಾವರಣ ಸಂಕೀರ್ಣತೆಯಿಂದ ಕೂಡಿದ್ದು,  ನೌಕೆಯ ವಿಕಿರಣಗಳು ಚಂದ್ರನ ಮೇಲಿನ ಧೂಳನ್ನು ತುರ್ತಾಗಿ ಸಂಪರ್ಕಿಸುವುದರಿಂದ, ನೌಕೆ ಇಳಿಯುವ ವೇಳೆ ಅವಘಡ ಸಂಭವಿಸುವುದು ಸಾಮಾನ್ಯ ಎಂದು ESA ತಿಳಿಸಿದೆ.

ಚಂದ್ರನಲ್ಲಿನ ಧೂಳು ಉಪಕರಣಗಳ ಮೇಲೆ ಅಂಟಿಕೊಂಡು ಯಂತ್ರೋಪಕರಣಗಳಿಗೆ ಹಾನಿಯಾಗಲಿದೆ. ಸೌರ ಫಲಕ ಹಾಗೂ ಇನ್ನಿತರ ಮೇಲ್ಮೈಗಳ  ದಕ್ಷತೆ ಕ್ಷೀಣಿಸಲಿದೆ. ಬಾಹ್ಯಾಕಾಶ ನೌಕೆ ಇಳಿಯುವಾಗ  ಸೌರ ಶಕ್ತಿ ಉತ್ಪಾದನೆ ನಿಲ್ಲದಂತೆ  ಹದ್ದಿನ ಕಣ್ಣಿಡಬೇಕಾಗುತ್ತದೆ ಎಂದು ESA ಹೇಳಿದೆ.  

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ರೀತಿಯ ಮಾನವ ರಹಿತ ಮಿಷನ್ ಯೋಜನೆಯನ್ನು ಕಳೆದ ವರ್ಷವೇ ಹಮ್ಮಿಕೊಂಡಿತ್ತು. ಆದರೆ ಅಗತ್ಯ ಪ್ರಮಾಣದ ಹಣಕಾಸು ನೆರವು ದೊರೆಯದ ಹಿನ್ನೆಲೆಯಲ್ಲಿ ಯೋಜನೆಯನ್ನು ರದ್ದುಗೊಳಿಸಿತ್ತು.