Asianet Suvarna News Asianet Suvarna News

ರೂಪಾಂತರಿ ವೈರಸ್‌ ಪತ್ತೆಗೆ ಹೊಸ ಮಾನದಂಡ

* ವಿದೇಶದಿಂದ ಬಂದವರು, ಹೆಚ್ಚು ಓಡಾಡುವವರ ಟೆಸ್ಟ್‌
* ಮಕ್ಕಳು, ಲಸಿಕೆ ಪಡೆದವರ ಪರೀಕ್ಷೆಗೂ ನಿರ್ದೇಶನ
* ನಿಮ್ಹಾನ್ಸ್‌ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೈರಾಣುವಿನ ರೂಪಾಂತರ ಪತ್ತೆ ಪರೀಕ್ಷೆ  
 

New Rule for Detection of Corona varient Virus in Karnataka grg
Author
Bengaluru, First Published Jul 9, 2021, 7:31 AM IST
  • Facebook
  • Twitter
  • Whatsapp

ಬೆಂಗಳೂರು(ಜು.09): ರೂಪಾಂತರಿ ಕೊರೋನಾ ವೈರಸ್‌ ಹಬ್ಬುವಿಕೆಯನ್ನು ತ್ವರಿತವಾಗಿ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಜಿಲ್ಲೆಗಳಿಗೆ ಹೊಸ ಮಾನದಂಡ ನೀಡಿದ್ದು, ವಿದೇಶದಿಂದ ಬಂದವರು, ಮಕ್ಕಳು ಹಾಗೂ ಲಸಿಕೆ ಪಡೆದರೂ ಸೋಂಕಿಗೆ ಒಳಗಾದವರ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುವಂತೆ ಸೂಚಿಸಿದೆ.

ಆದರೆ, ರೂಪಾಂತರಿ ವೈರಾಣುವಿನ ಶೀಘ್ರವಾಗಿ ಪತ್ತೆ ಹಚ್ಚಲು ಮತ್ತು ಸಮುದಾಯಕ್ಕೆ ಹರಡುವ ಅಪಾಯ ತಪ್ಪಿಸಲು ಜಿನೋಮ್‌ ಸಿಕ್ವೆನ್ಸಿಂಗ್‌ನ ಮಾದರಿ ಸಂಗ್ರಹದ ಮಾನದಂಡಗಳ ಇನ್ನಷ್ಟು ವಿಸ್ತರಿಸಬೇಕು ಎಂದು ಆರೋಗ್ಯ ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದರೆ ಅವರ ಮಾದರಿ ಸಂಗ್ರಹಿಸಿ ಕಳುಹಿಸಬೇಕು, ಹೆಚ್ಚು ಓಡಾಟ ನಡೆಸಿದವರಲ್ಲಿ ಸೋಂಕು ಕಂಡು ಬಂದಿದ್ದರೆ ಅವರ ಮಾದರಿ, ಸೋಂಕಿನ ತೀವ್ರತೆ ಹೆಚ್ಚಿರುವ ವ್ಯಕ್ತಿಗಳು, ಎರಡು ಡೋಸ್‌ ಲಸಿಕೆ ತೆಗೆದುಕೊಂಡೂ 15 ದಿನಗಳ ಬಳಿಕ ಸೋಂಕಿತರಾದವರು ಮತ್ತು ಕೋವಿಡ್‌ ಸೋಂಕಿಗೆ ಒಳಗಾದ ಮಕ್ಕಳ ಮಾದರಿಗಳನ್ನು ಸಂಗ್ರಹಿಸಿ ರೂಪಾಂತರಿ ಪತ್ತೆ ಪರೀಕ್ಷೆಗೆ ಕಳುಹಿಸಿಕೊಡುವಂತೆ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಜುಲೈ 8ರ ಅಂಕಿ-ಸಂಖ್ಯೆ

ಅಂತಾರಾಷ್ಟ್ರೀಯ ಪ್ರಯಾಣಿಕರಂತೆಯೇ ಬೇರೆ ರಾಜ್ಯಗಳಿಂದ ಬಂದು ಸೋಂಕಿತರಾಗುವವರ ಮಾದರಿ ಸಂಗ್ರಹ ಕೂಡ ನಡೆಸಬೇಕು ಎಂದು ರಾಜ್ಯದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ಪಡುತ್ತಾರೆ. ಕೇರಳದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರ ಮತ್ತು ತಮಿಳುನಾಡು, ಈಶಾನ್ಯ ರಾಜಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಅಂತಾರಾಜ್ಯ ಪ್ರಯಾಣಿಕರ ಕೋವಿಡ್‌ ಪರೀಕ್ಷೆ ಮತ್ತು ಸ್ಯಾಂಪಲ್‌ ಸಂಗ್ರಹ ಹೆಚ್ಚಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಈ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿದ್ದರೂ ಹೊಸ ರೂಪಾಂತರಿ ಇನ್ನೂಪತ್ತೆಯಾಗದಿರಬಹುದು. ಆದರೆ, ಆದರೆ ಜಿನೋಮ್‌ ಸಿಕ್ವೇನ್ಸಿಂಗ್‌ ನಡೆಸಿ ವರದಿ ಕೈಸೇರುವಾಗ ತಿಂಗಳೇ ಉರುಳುತ್ತದೆ.ಹೀಗಾಗಿ ರೂಪಾಂತರಿ ವೈರಾಣವಿನ ಪತ್ತೆ ವಿಳಂಬವಾಗುತ್ತದೆ. ಅಷ್ಟುಹೊತ್ತಿಗೆ ಸೋಂಕು ಸಮುದಾಯಕ್ಕೆ ಹರಡಿರುತ್ತದೆ. ಹೀಗಾಗಿ ಈ ವಿಚಾರದಲ್ಲಿ ನಿಧಾನ ದ್ರೋಹ ಮಾಡಬಾರದು ಎಂದು ಅವರು ಹೇಳುತ್ತಾರೆ.

ಮರಣ ಹೊಂದಿದವರ ಸ್ಯಾಂಪಲ್‌ ಪರೀಕ್ಷಿಸಿ:

ಸೋಂಕಿನ ತೀವ್ರತೆ ಹೆಚ್ಚಿರುವ ವ್ಯಕ್ತಿಗಳ ಮಾದರಿಯನ್ನು ಜಿನೋಮ್‌ ಸಿಕ್ವೇನ್ಸಿಂಗ್‌ಗೆ ಕಳುಹಿಸಿ ಕೊಡುವಂತೆ ಸೂಚಿಸಿರುವುದು ಉತ್ತಮ ಬೆಳವಣಿಗೆ. ಎರಡನೇ ಅಲೆ ಏರಿಕೆ ಕಾಣುತ್ತಿದ್ದ ಸಂದರ್ಭದಲ್ಲೇ ಈ ಸೂಚನೆ ನೀಡುತ್ತಿದ್ದರೆ ಸೋಂಕು ತೀವ್ರ ಸ್ವರೂಪ ಪಡೆಯುವಲ್ಲಿ ರೂಪಾಂತರಿ ವೈರಾಣುವಿನ ಪಾತ್ರ ಸ್ಪಷ್ಟವಾಗುತ್ತಿತ್ತು. ಇದರಿಂದ ಚಿಕಿತ್ಸೆಯ ಸ್ವರೂಪ ನಿರ್ಧರಿಸಲು ಅನುಕೂಲವಾಗುತ್ತಿತ್ತು. ಜತೆಗೆ, ಕೋವಿಡ್‌ ವಿರುದ್ಧದ ದೀರ್ಘಕಾಲೀನ ಹೋರಾಟಕ್ಕೆ ಉಪಯುಕ್ತ ಮಾಹಿತಿ ಸಿಗಲಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ನಿಮ್ಹಾನ್ಸ್‌ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಾತ್ರ ವೈರಾಣುವಿನ ರೂಪಾಂತರ ಪತ್ತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ವೈರಾಣುವಿನ ರೂಪಾಂತರ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲು ಕನಿಷ್ಠ 15 ದಿನ ಆಗುತ್ತಿದೆ. ಸರ್ಕಾರವೇ ಶೇ. 5 ಸೋಂಕಿತರ ಮಾದರಿಗಳನ್ನು ಸಂಗ್ರಹಿಸಿ ಜಿನೋಮಿಕ್‌ ಸಿಕ್ವೇನ್ಸಿಂಗ್‌ ನಡೆಸಬೇಕು ಎಂಬ ಗುರಿ ಇಟ್ಟುಕೊಂಡಿದ್ದರೂ ಪ್ರಸ್ತುತ ಶೇ.1ರಷ್ಟುಜಿನೋಮಿಕ್‌ ಸಿಕ್ವೇನ್ಸಿಂಗ್‌ ಆಗುತ್ತಿಲ್ಲ. ಹೀಗಾಗಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ವಿಜಯಪುರದಲ್ಲಿ ಜಿನೋಮಿಕ್‌ ಸಿಕ್ವೇನ್ಸಿಂಗ್‌ ಪ್ರಯೋಗಾಲಯಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಕನಿಷ್ಠ ಪಕ್ಷ ವಾರದೊಳಗೆ ಜಿನೋಮಿಕ್‌ ಸಿಕ್ವೇನ್ಸಿಂಗ್‌ನ ವರದಿ ಕೈಸೇರಿದರೆ ಸಂಪರ್ಕ ಪತ್ತೆ ಸುಲಭವಾಗಲಿದ್ದು, ರೂಪಾಂತರಿ ವೈರಾಣುವಿನ ಹರಡುವಿಕೆಗೆ ಲಗಾಮು ಹಾಕಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಡುತ್ತಾರೆ.
 

Follow Us:
Download App:
  • android
  • ios