ಬೆಂಗಳೂರಿನ ಕೋಣನಕುಂಟೆಯಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ 1.37 ಎಕರೆ ಸರ್ಕಾರಿ ಸ್ವತ್ತನ್ನು ಕಾನೂನುಬಾಹಿರವಾಗಿ ಏಳು ಖಾಸಗಿ ವ್ಯಕ್ತಿಗಳಿಗೆ ಖಾತಾ ಮಾಡಿಕೊಟ್ಟಿರುವ ಬಗ್ಗೆ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು (ಆ.15): ಬೆಂಗಳೂರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಸಂತಪುರ ವಾರ್ಡ್‌ನ ಉತ್ತರಹಳ್ಳಿ ಹೋಬಳಿ ಕೋಣನಕುಂಟೆ ಗ್ರಾಮದ ಸರ್ವೆ ನಂಬರ್ 10ರಲ್ಲಿ ಸುಮಾರು 100 ಕೋಟಿ ರು. ಅಧಿಕ ಮೌಲ್ಯದ 1.37 ಎಕರೆ ಸರ್ಕಾರಿ ಸ್ವತ್ತನ್ನು ಕಾನೂನು ಬಾಹಿರವಾಗಿ ಏಳು ಮಂದಿ ಖಾಸಗಿ ವ್ಯಕ್ತಿಗಳಿಗೆ ಖಾತಾ ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಈ ಆರೋಪ ಮಾಡಿದ್ದು, ದಾಖಲೆ ಸಹಿತ ಲೋಕಾಯುಕ್ತ ಮತ್ತು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ.
ಕೋಣನಕುಂಟೆ ಗ್ರಾಮದ ಗಣಪತಿಪುರ ಬಡಾವಣೆಗೆ ಹೊಂದಿಕೊಂಡಿರುವ ಈ ಸ್ವತ್ತಿನ ಬೆಲೆ ಪ್ರತೀ ಚ. ಅಡಿಗೆ ಕನಿಷ್ಠ 12 ಸಾವಿರ ರು.ಅಧಿಕವಿದೆ. ಹಲವು ಸರ್ಕಾರಿ ನೆಲಗಳ್ಳರ ಕೆಟ್ಟ ದೃಷ್ಟಿ ಈ ಅಮೂಲ್ಯ ಸರ್ಕಾರಿ ಸ್ವತ್ತಿನ ಮೇಲೆ ಬಿದ್ದಿದೆ. ಇದೇ ಸ್ವತ್ತಿನ ಸಂಬಂಧ 1996ರ ಸೆ.26ರಂದು ಬೆಂಗಳೂರು ದಕ್ಷಿಣ ಉಪ ವಿಭಾಗದ ಉಪವಿಭಾಗಾಧಿಕಾರಿ ಮುಕ್ತ ನ್ಯಾಯಾಲಯದಲ್ಲಿ ಇದು ಸರ್ಕಾರಿ ಸ್ವತ್ತಾಗಿರುವ ಹಿನ್ನೆಲೆಯಲ್ಲಿ ಪ್ರತಿವಾದಿಗಳಿಂದ ಈ ಸ್ವತ್ತಿನ ಒತ್ತುವರಿಯನ್ನು ಮುಕ್ತಗೊಳಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೂ ಉತ್ತರಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮತ್ತು ವಾರ್ಡ್ ಸಂಖ್ಯೆ 197ರ ಕಂದಾಯ ಪರಿವೀಕ್ಷಕ ಒಂದಾಗಿ ನಕಲಿ ಇ-ಪಿಐಡಿ ಸಂಖ್ಯೆಗಳನ್ನು ಸೃಷ್ಟಿಸಿ, ಎಂ.ಭಾಗ್ಯವತಿ, ಎ.ಲಕ್ಷ್ಮಿ, ಎಂ.ಮಲ್ಲಿಕಾ, ಎಂ.ಪಾರ್ವತಿ, ಜಿ.ಸರಸ್ವತಿ, ಶಾಂತಮ್ಮ ಮತ್ತು ವಿ.ಶ್ರೀನಿವಾಸ್ ಹೆಸರಿಗೆ 7 ಪ್ರತ್ಯೇಕ ನಿವೇಶನಗಳಿಗೆ ಖಾತೆ ಮಾಡಿಕೊಟ್ಟು ಸರ್ಕಾರಕ್ಕೆ ವಂಚಿಸಿದ್ದಾರೆ. ಈ ಏಳು ಮಂದಿಯಿಂದ ಉತ್ತರಹಳ್ಳಿ ವಿಭಾಗದ ಕಂದಾಯ ಇಲಾಖೆ ಅಧಿಕಾರಿಗಳು ಕಿಕ್ ಬ್ಯಾಕ್ ರೂಪದಲ್ಲಿ ಅಪಾರ ಪ್ರಮಾಣದ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ಸರ್ಕಾರಿ ಸ್ವತ್ತು ಕಬಳಿಸಿರುವ ಈ ಏಳು ಮಂದಿ ಹಾಗೂ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಖಾತಾಗಳನ್ನು ರದ್ದುಪಡಿಸಿ ಸರ್ಕಾರಿ ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆಯಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.


